ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‌ಫ್ರೆಂಚ್ ಓ‍ಪನ್ ಟೆನಿಸ್ ಟೂರ್ನಿ: ಎಲಿನಾ, ಸೋಫಿಯಾಗೆ ಗೆಲುವು

ಅಮೆರಿಕದ ಆ್ಯನ್ ಲೀ, ಹೇಲಿ ಬ್ಯಾಪ್ಟಿಸ್ಟ್‌ಗೆ ನಿರಾಸೆ
Last Updated 3 ಜೂನ್ 2021, 15:32 IST
ಅಕ್ಷರ ಗಾತ್ರ

ಪ್ಯಾರಿಸ್‌: ವಿಶ್ವ ಕ್ರಮಾಂಕದಲ್ಲಿ ಆರನೇ ಸ್ಥಾನದಲ್ಲಿರುವ, ಉಕ್ರೇನ್ ಆಟಗಾರ್ತಿ ಎಲಿನಾ ಸ್ವಿಟೋಲಿನಾ ಅಮೋಘ ಆಟದ ಮೂಲಕ ಎದುರಾಳಿಯನ್ನು ಮಣಿಸಿ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ವಿಭಾಗದ ಮೂರನೇ ಸುತ್ತು ಪ್ರವೇಶಿಸಿದರು. ಕಳೆದ ಬಾರಿಯ ರನ್ನರ್ ಅಪ್ ಸೋಫಿಯಾ ಕೆನಿನ್ ಕೂಡ ಮೂರನೇ ಸುತ್ತಿಗೆ ಲಗ್ಗೆ ಇರಿಸಿದರು.

ಗುರುವಾರ ನಡೆದ ಪಂದ್ಯದಲ್ಲಿ ಅವರು ಅಮೆರಿಕದ ಆ್ಯನ್ ಲೀ ವಿರುದ್ಧ 6–0, 6–4ರಲ್ಲಿ ಜಯ ಗಳಿಸಿದರು. ಲೀ ಅವರ ಸರ್ವ್‌ನಲ್ಲಿ ಲೋಪಗಳನ್ನು ಕಂಡುಕೊಂಡ ಸ್ವಿಟೋಲಿನಾ ಮೊದಲ ಗೇಮ್‌ನಲ್ಲೇ ಗಮನ ಸೆಳೆದರು. ಅದೇ ಲಯದಲ್ಲಿ ಆಟವನ್ನು ಮುಂದುವರಿಸಿದ ಅವರು ಮೊದಲ ಸೆಟ್‌ನಲ್ಲಿ ಒಂದು ಗೇಮ್‌ ಕೂಡ ಬಿಟ್ಟುಕೊಡದೆ ಜಯ ಗಳಿಸಿದರು. ಒಟ್ಟು 14ರಲ್ಲಿ 12 ಮೊದಲ ಸರ್ವ್ ಪಾಯಿಂಟ್‌ಗಳನ್ನು ಅವರು ತಮ್ಮದಾಗಿಸಿಕೊಂಡರು. 29 ನಿಮಿಷಗಳಲ್ಲಿ ಈ ಸೆಟ್ ಮುಗಿದಿತ್ತು.

ಎರಡನೇ ಸೆಟ್‌ನ ಆರಂಭದಲ್ಲಿ ಫೋರ್‌ಹ್ಯಾಂಡ್ ಹೊಡೆತಗಳ ಮೂಲಕ ಮಿಂಚಿ 3–0ಯಿಂದ ಮುನ್ನಡೆದ ಲೀ ಭರವಸೆ ಮೂಡಿಸಿದರು. ಆದರೆ ಸ್ವಿಟೋಲಿನಾ ಪಟ್ಟು ಬಿಡಲಿಲ್ಲ. ಸತತ ಐದು ಗೇಮ್‌ಗಳನ್ನು ಗೆಲ್ಲುವ ಮೂಲಕ ಜಯದತ್ತ ಸಾಗಿದರು.

ರಷ್ಯಾದ ಎಕತೇರಿನಾ ಅಲೆಕ್ಸಾಂಡ್ರೊವಾ ಅವರನ್ನು 6-2, 6-3ರಲ್ಲಿ ಸೋಲಿಸಿದ ಜೆಕ್ ಗಣರಾಜ್ಯದ ಬಾರ್ಬೊರಾ ಕ್ರೆಸಿಕೋವಾ ಅವರನ್ನು ಸ್ವಿಟೋಲಿನಾ ಮುಂದಿನ ಸುತ್ತಿನಲ್ಲಿ ಎದುರಿಸುವರು.

ಅಮೆರಿಕದ ಹೇಲಿ ಬ್ಯಾಪ್ಟಿಸ್ಟ್ ವಿರುದ್ಧ 7-5, 6-3ರಲ್ಲಿ ಸೋಫಿಯಾ ಕೆನಿನ್ ಜಯ ಸಾಧಿಸಿದರು. ಈ ವರ್ಷದ ಟೂರ್ನಿಗಳಲ್ಲಿ ನೀರಸ ಪ್ರದರ್ಶನ ನೀಡಿರುವ ಸೋಫಿಯಾ ಮೊದಲ ಸೆಟ್‌ನಲ್ಲಿ ಪ್ರಯಾಸದ ಜಯ ಗಳಿಸಿದರು. ಆದರೆ ಎರಡನೇ ಸೆಟ್‌ನಲ್ಲಿ ಚೇತರಿಕೆಯ ಆಟವಾಡಿ ಎದುರಾಳಿಯನ್ನು ಕಂಗೆಡಿಸಿದರು.

ಆ್ಯಶ್ಲಿ ಬಾರ್ಟಿ ನಿವೃತ್ತಿ; ಮಹಿಳಾ ವಿಭಾಗದಲ್ಲಿ ಕುತೂಹಲ

ವಿಶ್ವ ಕ್ರಮಾಂಕದಲ್ಲಿ ಒಂದನೇ ಸ್ಥಾನದಲ್ಲಿರುವ ಆ್ಯಶ್ಲಿ ಬಾರ್ಟಿ ಪಂದ್ಯದ ನಡುವೆ ಗಾಯಗೊಂಡು ಗುರುವಾರ ಟೂರ್ನಿಯಿಂದ ನಿವೃತ್ತರಾದರು. 2019ರ ಫ್ರೆಂಚ್‌ ಓಪನ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದ ಆಸ್ಟ್ರೇಲಿಯಾ ಆಟಗಾರ್ತಿ ಬಾರ್ಟಿ ಪೋಲೆಂಡ್‌ನ ಮಗ್ದಾ ಲಿನೆಟಿ ಎದುರಿನ ಪಂದ್ಯದ (6–1, 2–2) ಎರಡನೇ ಸೆಟ್‌ನಲ್ಲಿ ನಿವೃತ್ತರಾದರು.

ಪತ್ರಿಕಾಗೋಷ್ಠಿ ಬಹಿಷ್ಕರಿಸಲು ನಿರ್ಧರಿಸಿದ್ದಕ್ಕೆ ದಂಡ ವಿಧಿಸಿದ್ದರಿಂದ ಬೇಸರಗೊಂಡು ನವೊಮಿ ಒಸಾಕ ಮೊದಲ ಸುತ್ತಿನ ನಂತರ ಟೂರ್ನಿಯನ್ನು ಬಹಿಷ್ಕರಿಸಿದ್ದರು. ಅವರು ವಿಶ್ವ ಕ್ರಮಾಂಕದದಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಇವರಿಬ್ಬರು ಹೊರನಡೆದ ಕಾರಣ ಮಹಿಳಾ ವಿಭಾಗದಲ್ಲಿ ಕುತೂಹಲ ಕೆರಳಿದೆ.

ಪ್ರಿ ಕ್ವಾರ್ಟರ್‌ಫೈನಲ್‌ಗೆ ಬೋಪಣ್ಣ–ಸುಗೊರ್‌

ಭಾರತದ ರೋಹನ್ ಬೋಪಣ್ಣ ಮತ್ತು ಕ್ರೊವೇಷಿಯಾದ ಫ್ರಾಂಕೊ ಸುಗೊರ್ ಜೋಡಿ ಪುರುಷರ ಡಬಲ್ಸ್‌ ವಿಭಾಗದ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಅಮೆರಿಕದ ಫ್ರಾನ್ಸಿಸ್ ಟಿಯಾಫೊ ಮತ್ತು ನಿಕೋಲಸ್ ಮೊನ್ರೆ ಜೋಡಿಯನ್ನು ಅವರು ಗುರುವಾರ 6-4, 7-5ರಲ್ಲಿ ಮಣಿಸಿದರು. ಪಂದ್ಯ ಒಂದು ತಾಸು 20 ನಿಮಿಷಗಳಲ್ಲಿ ಮುಗಿಯಿತು.

ಇತರ ಪಂದ್ಯಗಳ ಫಲಿತಾಂಶಗಳು

ಪುರುಷರ ವಿಭಾಗ: ಇಟಲಿಯ ಲೊರೆನ್ಜೊ ಮಸೆಟ್ಟಿಗೆ ಜಪಾನ್‌ನ ಯೋಶಿಹಿಟೊ ಎದುರು 7-5, 6-3, 6-2ರಲ್ಲಿ ಜಯ; ಇಟಲಿಯ ಮಟಿಯೊ ಬೆರೆಟಿನಿಗೆ ಅರ್ಜೆಂಟೀನಾದ ಫೆಡರಿಕೊ ಕೋರಿಯಾ ವಿರುದ್ಧ 6-3, 6-3, 6-2ರಲ್ಲಿ, ಕೊರಿಯಾದ ಸೂನ್‌ವೂ ಕ್ವೋನ್‌ಗೆ ಇಟಲಿಯ ಆ್ಯಂಡ್ರೆಸ್‌ ಸೆಪ್ಪಿ ವಿರುದ್ಧ 6-4, 7-5, 7-5ರಲ್ಲಿ, ಸ್ವಿಟ್ಜರ್ಲೆಂಡ್‌ನ ಮಿಕಾಯೆಲ್ ಎಮರ್‌ಗೆ ಫ್ರಾನ್ಸ್‌ನ ಗಯೆಲ್‌ ಮೊಂಫಿಲ್ಸ್‌ಗೆ ವಿರುದ್ಧ 6-0, 2-6, 6-4, 6-3ರಲ್ಲಿ, ಅರ್ಜೇಂಟೀನಾದ ಡೀಗೊ ಸ್ವಾರ್ಟ್ಸ್‌ಮನ್‌ಗೆ ಸ್ಲೊವೇಕಿಯಾದ ಅಜಾಸ್‌ ಬೆಡೆನಿ ವಿರುದ್ 6-4, 6-2, 6-4ರಲ್ಲಿ ಗೆಲುವು.

ಮಹಿಳಾ ವಿಭಾಗ: ಅಮೆರಿಕದ ಸ್ಲಾನೆ ಸ್ಟೀಫನ್ಸ್‌ಗೆ ಜೆಕ್ ಗಣರಾಜ್ಯದ ಕರೊಲಿನಾ ಪ್ಲಿಸ್ಕೋವಾ ಎದುರು 7-5, 6-1ರಲ್ಲಿ ಗೆಲುವು. ಜೆಕ್ ಗಣರಾಜ್ಯದ ಕರೊಲಿನಾ ಮುಚೋವಾಗೆ ಅಮೆರಿಕದ ವರ್ವರಾ ಲೊಪ್ಚೆಂಕೊ ವಿರುದ್ಧ 6-3, 6-4ರಲ್ಲಿ ಜಯ. ಜೆಕ್ ಗಣರಾಜ್ಯದ ಬಾರ್ಬೊರಾ ಕ್ರಜಿಸಿಕೋವಾಗೆ ರಷ್ಯಾದ ಎಕತೇರಿನಾ ಅಲೆಕ್ಸಾಂಡ್ರೊವಾ ವಿರುದ್ಧ 6-2, 6-3ರಲ್ಲಿ, ಗ್ರೀಸ್‌ನ ಮರಿಯಾ ಸಕ್ಕಾರಿಗೆ ಇಟಲಿಯ ಜಾಸ್ಮಿನ್ ಪೌಲೊನಿ ವಿರುದ್ಧ 6-2, 6-3ರಲ್ಲಿ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT