ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಂಬಲ್ಡನ್: ಸ್ವಿಟೋಲಿನಾಗೆ ಸೋಲು

ನಾಲ್ಕೇ ದಿನಗಳಲ್ಲಿ ಅಗ್ರ 11 ಟೆನಿಸ್ ಪಟುಗಳ ಪೈಕಿ ಹೊರ ನಡೆದ ಎಂಟು ಮಂದಿ
Last Updated 1 ಜುಲೈ 2021, 15:23 IST
ಅಕ್ಷರ ಗಾತ್ರ

ಲಂಡನ್: ಉಕ್ರೇನ್ ಆಟಗಾರ್ತಿ ಮೂರನೇ ಶ್ರೇಯಾಂಕದ ಎಲಿನಾ ಸ್ವಿಟೋಲಿನಾ ಅವರು ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಗುರುವಾರ ಆಘಾತ ಕಂಡರು. ಮಹಿಳಾ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಅವರು ಪೋಲೆಂಡ್‌ನ ಮಗ್ದ ಲಿನೆಟಿಗೆ 3–6, 4–6ರಲ್ಲಿ ಮಣಿದರು. ವೃತ್ತಿಜೀವನದಲ್ಲಿ ಮಗ್ದಾ ಅವರ ಅತಿದೊಡ್ಡ ಜಯ ಇದಾಗಿದೆ.

ಟೂರ್ನಿ ಆರಂಭವಾಗಿ ಕೇವಲ ನಾಲ್ಕು ದಿನಗಳಾಗಿವೆ. ಇಷ್ಟರಲ್ಲಿ ಅಗ್ರ 11 ಟೆನಿಸ್ ಪಟುಗಳ ಪೈಕಿ ಎಂಟು ಮಂದಿ ಹೊರ ಹೋಗಿದ್ದಾರೆ. ಕೆಲವರು ಸೋತು ಹೊರಬಿದ್ದಿದ್ದರೆ ಇನ್ನು ಕೆಲವರ ಗಾಯಗೊಂಡು ಅಥವಾ ಹಿಂದೆ ಸರಿದು ವಾಪಸಾಗಿದ್ದಾರೆ.

ಎರಡು ವರ್ಷಗಳ ಹಿಂದೆ ವಿಂಬಲ್ಡನ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದ ಎಲಿನಾ ಸ್ವಿಟೋಲಿನಾ ಅವರನ್ನು ವಿಶ್ವ ಕ್ರಮಾಂಕದಲ್ಲಿ 44ನೇ ಸ್ಥಾನದಲ್ಲಿರುವ ಲಿನೆಟಿ ಆರಂಭದಿಂದಲೇ ಕಂಗೆಡಿಸಿದರು. ಹೀಗಾಗಿ ಸುಲಭವಾಗಿ ಪಂದ್ಯ ಗೆಲ್ಲಲು ಅವರಿಗೆ ಸಾಧ್ಯವಾಯಿತು.

ಫ್ರೆಂಚ್ ಓಪನ್ ಟೂರ್ನಿಯ ಚಾಂಪಿಯನ್, ಜೆಕ್ ಗಣರಾಜ್ಯದ ಬಾರ್ಬೊರಾ ಕ್ರೆಸಿಕೋವಾ 7-5, 6-4ರಲ್ಲಿ ಜರ್ಮನಿಯ ಆ್ಯಂಡ್ರಿ ಪೆಟ್ಕೊವಿಚ್‌ ವಿರುದ್ಧ ಜಯ ಗಳಿಸಿ ಸತತ 14 ಪಂದ್ಯಗಗಳಲ್ಲಿ ಗೆದ್ದ ಸಾಧನೆ ಮಾಡಿದರು.

ಅಮೆರಿಕದ ಶೆಲ್ಬಿ ರೋಜರ್ಸ್ ವಿಂಬಲ್ಡನ್‌ನಲ್ಲಿ ಇದೇ ಮೊದಲ ಬಾರಿ ಮೂರನೇ ಸುತ್ತು ಪ್ರವೇಶಿಸಿದರು. ವಿಶ್ವ ಕ್ರಮಾಂಕದಲ್ಲಿ 15ನೇ ಸ್ಥಾನದಲ್ಲಿರುವ ಮರಿಯಾ ಸಕ್ರಿ ವಿರುದ್ಧ ಅವರು 7–5, 6–4ರಲ್ಲಿ ಜಯ ಗಳಿಸಿದರು. ಅನಸ್ತೇಸಿಯಾ ಪೌಲಿಚೆಂಕೋವಾ 6–3, 6–3ರಲ್ಲಿ ಕ್ರಿಸ್ಟಿನಾ ಪ್ಲಿಸ್ಕೋವ ವಿರುದ್ಧ ಗೆಲುವು ಸಾಧಿಸಿದರು.

ಪುರುಷರ ವಿಭಾಗದಲ್ಲಿ ನಾಲ್ಕನೇ ಶ್ರೇಯಾಂಕದ ಜರ್ಮನಿ ಆಟಗಾರ ಅಲೆಕ್ಸಾಂಡರ್ ಜ್ವೆರೆವ್ ಮೂರನೇ ಸುತ್ತು ಪ್ರವೇಶಿಸಿದರು. 13 ಏಸ್‌ಗಳನ್ನು ಸಿಡಿಸಿದ ಅವರು ಟೆನೀಸ್ ಸ್ಯಾಂಡ್‌ಗ್ರೆನ್ ಎದುರು 7-5, 6-2, 6-3ರಲ್ಲಿ ಗೆಲುವು ಸಾಧಿಸಿದರು.

ಸಾನಿಯಾ–ಮಟೆಕ್ ಜೋಡಿ ಜಯಭೇರಿ
ಭಾರತದ ಸಾನಿಯಾ ಮಿರ್ಜಾ ಮತ್ತು ಅಮೆರಿಕದ ಬೆಥಾನಿ ಮಟೆಕ್ ಸ್ಯಾಂಡ್ಸ್ ಜೋಡಿ ಮಹಿಳೆಯರ ಡಬಲ್ಸ್‌ನಲ್ಲಿ ಆರನೇ ಶ್ರೇಯಾಂಕದ ಡೆಸಿರೆ ಕ್ರೌಸಿಕ್ (ಅಮೆರಿಕ) ಮತ್ತು ಅಲೆಕ್ಸಾ ಗೌರಚಿ (ಚಿಲಿ) ವಿರುದ್ಧ 7–5, 6–3ರಲ್ಲಿ ಗೆಲುವು ಸಾಧಿಸಿದರು. ಪಂದ್ಯ 27 ನಿಮಿಷಗಳಲ್ಲಿ ಮುಕ್ತಾಯ ಕಂಡಿತು.

ಪುರುಷರ ಡಬಲ್ಸ್‌ ವಿಭಾಗದಲ್ಲಿ ರೋಹನ್ ಬೋಪಣ್ಣ ಮತ್ತು ದಿವಿಜ್ ಶರಣ್ ಜೋಡಿ ಮೊದಲ ಸುತ್ತಿನಲ್ಲೇ ಹೊರಬಿದ್ದರು. ಎಡೋರ್ಡ್ ರೋಜರ್ ವಸೆಲಿನ್ ಮತ್ತು ಹೆನ್ರಿ ಕಾಂಟಿನೆನ್ ವಿರುದ್ಧ ಭಾರತದ ಆಟಗಾರರು6-7 (6) 4-6ರಲ್ಲಿ ಸೋತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT