ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್‌: ಹೊಸ ಪ್ರತಿಭೆಗಳು ಬರಲಿ -ಸ್ವೀಡನ್‌ನ ದಿಗ್ಗಜ ಆಟಗಾರ ಬ್ಯೋನ್ ಬೋರ್ಗ್‌

Last Updated 21 ಫೆಬ್ರುವರಿ 2023, 21:45 IST
ಅಕ್ಷರ ಗಾತ್ರ

ಬೆಂಗಳೂರು: ಸೋಲಲೊಪ್ಪದ ಮನೋಭಾವವೇ ‘ಬಿಗ್‌ ತ್ರಿ’ ಆಟಗಾರರು ಒಂದೂವರೆ ದಶಕದ ಕಾಲ ಟೆನಿಸ್‌ ಕ್ರೀಡೆಯಲ್ಲಿ ಪಾರಮ್ಯ ಮೆರೆಯಲು ಕಾರಣ ಎಂದು ಟೆನಿಸ್‌ ದಿಗ್ಗಜ ಸ್ವೀಡನ್‌ನ ಬ್ಯೋನ್ ಬೋರ್ಗ್ ಅಭಿಪ್ರಾಯಪಟ್ಟಿದ್ದಾರೆ.

ನಗರದಲ್ಲಿ ಮಂಗಳವಾರ ನಡೆದ ಮಾಧ್ಯಮ ಸಂವಾದದಲ್ಲಿ ಭಾಗವಹಿಸಿದ್ದ ಅವರು, ಸ್ವಿಟ್ಜರ್ಲೆಂಡ್‌ನ ರೋಜರ್ ಫೆಡರರ್‌, ಸ್ಪೇನ್‌ನ ರಫೆಲ್ ನಡಾಲ್‌ ಮತ್ತು ಸರ್ಬಿಯಾ ನೊವಾಕ್ ಜೊಕೊವಿಚ್ ಕುರಿತು ಈ ಮಾತುಗಳನ್ನಾಡಿದರು.

‘ಈ ಮೂವರು ಆಟಗಾರರು ಯುವ ಪೀಳಿಗೆಗೆ ಸ್ಫೂರ್ತಿಯಾಗಿದ್ದಾರೆ. ಫೆಡರರ್‌ ಸದ್ಯ ನಿವೃತ್ತರಾಗಿದ್ದಾರೆ. ನಡಾಲ್ ಇನ್ನೆಷ್ಟು ವರ್ಷ ಆಡುತ್ತಾರೊ ಗೊತ್ತಿಲ್ಲ. ಜೊಕೊವಿಚ್‌ ಒಂದೆರಡು ಗ್ರ್ಯಾನ್‌ಸ್ಲಾಮ್ ಗೆಲ್ಲಬಹುದು. ಟೆನಿಸ್‌ಗಿಂತ ಯಾರೂ ದೊಡ್ಡವರಲ್ಲ. ಹೊಸ ಪೀಳಿಗೆಯ ಆಟಗಾರರನ್ನು ಬೆಳೆಸುವ ಕೆಲಸವನ್ನು ಮಾಧ್ಯಮಗಳು ಮಾಡಬೇಕು‘ ಎಂದು ಬೋರ್ಗ್‌ ನುಡಿದರು.

‘ಫೆಡರರ್‌, ನಡಾಲ್‌ ಮತ್ತು ಜೊಕೊವಿಚ್‌ 15ಕ್ಕೂ ಹೆಚ್ಚು ವರ್ಷಗಳ ಕಾಲ ತಮ್ಮ ಆಟದ ಸೊಬಗು ಉಣಬಡಿಸಿದ್ದಾರೆ. ಪ್ರತಿ ಹಂತದಲ್ಲೂ ಅವರಿಗೆ ಇನ್ನುಳಿದ ಆಟಗಾರರಿಂದ ಪೈಪೋಟಿ ಎದುರಾಗಿದೆ. ಹೊಸ ಆಟಗಾರರು ತಮ್ಮ ಸಾಮರ್ಥ್ಯವನ್ನು ಇನ್ನಷ್ಟು ಸುಧಾರಿಸಿಕೊಳ್ಳಬೇಕು‘ ಎಂದು ಸಂವಾದದಲ್ಲಿ ಹಾಜರಿದ್ದ ಭಾರತದ ಮಾಜಿ ಆಟಗಾರ ವಿಜಯ್ ಅಮೃತರಾಜ್ ನುಡಿದರು.

‘ಆನ್‌ಫೀಲ್ಡ್‌ ಮತ್ತು ಆಫ್‌ಫೀಲ್ಡ್‌ನಲ್ಲಿಯೂ ವಿಜಯ್ ನನ್ನ ಅತ್ಯುತ್ತಮ ಗೆಳೆಯ. ನಮ್ಮ ಸ್ನೇಹ ಐವತ್ತು ವರ್ಷ ಹಳೆಯದು. ಆತನ ಎದುರು ಆಡುವ ಅವಕಾಶ ಸಿಕ್ಕಿದ್ದು ಅದೃಷ್ಟ ಮತ್ತು ಹೆಮ್ಮೆಯ ವಿಷಯ‘ ಎಂದು ಬೋರ್ಗ್ ಹೇಳಿದರು. ವಿಜಯ್‌ ಅವರೂ ಈ ಮಾತುಗಳಿಗೆ ದನಿಗೂಡಿಸಿದರು. ತಾವು ಪರಸ್ಪರ ಎದುರಾಗಿದ್ದ ಪಂದ್ಯಗಳ ಮೆಲುಕು ಹಾಕಿದರು.

ವಿಜಯ್‌ ಅಮೃತರಾಜ್‌ 1974ರ ಅಮೆರಿಕ ಓಪನ್ ಟೂರ್ನಿಯ ಎರಡನೇ ಸುತ್ತಿನ ಪಂದ್ಯದಲ್ಲಿ ಬೋರ್ಗ್ ಅವರನ್ನು ಸೋಲಿಸಿದ್ದರು. ಬಳಿಕ ಕ್ವಾರ್ಟರ್‌ಫೈನಲ್‌ನಲ್ಲಿ ಆಸ್ಟ್ರೇಲಿಯಾದ ಕೆನ್ ರೋಸ್‌ವಾಲ್ ಎದುರು ಸೋತಿದ್ದರು. ಬೋರ್ಗ್‌ 1979ರ ವಿಂಬಲ್ಡನ್‌ ಟೂರ್ನಿಯ ಎರಡನೇ ಸುತ್ತಿನಲ್ಲಿ ವಿಜಯ್‌ ಎದುರು ಗೆಲುವು ಸಾಧಿಸಿದ್ದರು.

ವಿಜಯ್ ಅವರು ವಿಂಬಲ್ಡನ್ (1973, 1981) ಹಾಗೂ ಅಮೆರಿಕ ಓಪನ್ (1973 1974) ಟೂರ್ನಿಗಳ ಸಿಂಗಲ್ಸ್‌ನಲ್ಲಿ ತಲಾ ಎರಡು ಬಾರಿ ಕ್ವಾರ್ಟರ್‌ಫೈನಲ್‌ ತಲುಪಿದ ಸಾಧನೆ ಮಾಡಿದ್ದರು. ಬೋರ್ಗ್‌ 11 ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ವಿಶ್ವ ರ‍್ಯಾಂಕಿಂಗ್‌ನಲ್ಲೂ ಅಗ್ರಸ್ಥಾನದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT