ಸೋಮವಾರ, ಆಗಸ್ಟ್ 15, 2022
23 °C
ರಷ್ಯಾದ ಡ್ಯಾನಿಲ್ ಮೆಡ್ವೆಡೆವ್, ಸ್ಪೇನ್‌ನ ಪ್ಯಾಬ್ಲೊ ಕರೆನೊ ಬೂಸ್ಟಾಗೆ ನಿರಾಸೆ

ಅಮೆರಿಕಾ ಓಪನ್ ಟೆನಿಸ್ ಟೂರ್ನಿ: ಪ್ರಶಸ್ತಿಗೆ ಥೀಮ್–ಜ್ವೆರೆವ್ ಪೈಪೋಟಿ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ನ್ಯೂಯಾರ್ಕ್‌: ಅಮೆರಿಕ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಪ್ರಶಸ್ತಿಗಾಗಿ ಆಸ್ಟ್ರಿಯಾದ ಡೊಮಿನಿಕ್ ಥೀಮ್ ಮತ್ತು ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಭಾನುವಾರ ತಡರಾತ್ರಿ (ಭಾರತೀಯ ಕಾಲಮಾನ) ಸೆಣಸುವರು. ಅಂತಿಮ ಹಣಾಹಣಿಯಲ್ಲಿ ಯಾರು ಗೆದ್ದರೂ ಮೊದಲ ಗ್ರ್ಯಾನ್‌ಸ್ಲಾಂ ಪ್ರಶಸ್ತಿಯ ಖುಷಿ ಅನುಭವಿಸಲಿದ್ದಾರೆ.

ಭಾರತೀಯ ಕಾಲಮಾನ ಶನಿವಾರ ಮುಂಜಾನೆ ಆರ್ಥರ್ ಆ್ಯಶ್ ಕ್ರೀಡಾಂಗಣದಲ್ಲಿ ನಡೆದ ಸೆಮಿಫೈನಲ್‌ ಪಂದ್ಯಗಳಲ್ಲಿ ಎರಡನೇ ಶ್ರೇಯಾಂಕಿತ ಡೊಮಿಮಿಕ್ ಥೀಮ್ ಮೂರನೇ ಶ್ರೇಯಾಂಕಿತ, ರಷ್ಯಾದ ಡ್ಯಾನಿಲ್ ಮೆಡ್ವೆಡೆವ್ ವಿರುದ್ಧ 6-2, 7-6 (9/7) 7-6 (7/5)ರಲ್ಲಿ ಗೆಲುವು ಸಾಧಿಸಿದರು. ಕಳೆದ ಬಾರಿಯ ರನ್ನರ್ ಅಪ್ ಮೆಡ್ವೆಡೆವ್ ಮೊದಲ ಸೆಟ್‌ನಲ್ಲಿ ಸುಲಭವಾಗಿ ಮಣಿದರೂ ನಂತರ ಪ್ರಬಲ ಪ್ರತಿರೋಧ ಒಡ್ಡಿದರು. ಟೈಬ್ರೇಕರ್‌ನಲ್ಲಿ ಕೊನೆಗೊಂಡ ಮುಂದಿನ ಎರಡು ಸೆಟ್‌ಗಳಲ್ಲಿ ಥೀಮ್ ಪಟ್ಟುಬಿಡದೆ ಕಾದಾಡಿ ನಾಲ್ಕನೇ ಬಾರಿ ಗ್ರ್ಯಾನ್‌ಸ್ಲಾಂ ಫೈನಲ್ ಪ್ರವೇಶಿಸಿದರು. ಇದು, ಎರಡು ತಾಸು 56 ನಿಮಿಷಗಳ ಸೆಣಸಾಟವಾಗಿತ್ತು.

ಮೊದಲ ಸೆಮಿಫೈನಲ್‌ನಲ್ಲಿ ಸ್ಪೇನ್‌ನ ಪ್ಯಾಬ್ಲೊ ಕರೆನೊ ಬೂಸ್ಟಾ ಎದುರು ಮೊದಲ ಎರಡು ಸೆಟ್‌ಗಳನ್ನು ಕಳೆದುಕೊಂಡರೂ ಪುಟಿದೆದ್ದ ಜ್ವೆರೆವ್ 3–6, 2-6, 6-3, 6-4, 6-3ರಲ್ಲಿ ಜಯ ಗಳಿಸಿ ಮೊದಲ ಬಾರಿ ಪ್ರಮುಖ ಟೂರ್ನಿಯೊಂದರ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದರು.

ಇದನ್ನೂ ಓದಿ: 

ಆರ್ಥರ್ ಆ್ಯಶ್ ಅಂಗಣದಲ್ಲಿ ಮೂರು ತಾಸು 23 ನಿಮಿಷ ನಡೆದ ಸೆಣಸಾಟದಲ್ಲಿ 20ನೇ ಶ್ರೇಯಾಂಕದ ಕರೆನೊ ಬೂಸ್ಟಾ ಎದುರು ಜ್ವೆರೆವ್ ಮೊದಲ ಎರಡು ಸೆಟ್‌ಗಳಲ್ಲೇ 36 ಅನ್‌ಫೋರ್ಸ್‌ಡ್ ಎರರ್‌ಗಳನ್ನು ಎಸಗಿದ್ದರು. ಎದುರಾಳಿ ಕೇವಲ 12 ಅನ್‌ಫೋರ್ಸ್‌ಡ್ ಎರರ್‌ ಮಾಡಿದ್ದರು. ಈ ಹಂತದಲ್ಲಿ ಬೂಸ್ಟಾ ಪಂದ್ಯವನ್ನು ಸುಲಭವಾಗಿ ಗೆಲ್ಲುತ್ತಾರೆ ಎಂದೇ ತೋಚಿತ್ತು. ಆದರೆ ಮೂರನೇ ಸೆಟ್‌ನಲ್ಲಿ ತಪ್ಪುಗಳನ್ನು ತಿದ್ದಿಕೊಂಡ ಜ್ವೆರೆವ್ ಛಲದಿಂದ, ನಿಖರ ಗುರಿಯೊಂದಿಗೆ ಆಡಿದರು. 17 ವರ್ಷಗಳಲ್ಲಿ  ಪ್ರಮುಖ ಟೂರ್ನಿಯೊಂದರ ಫೈನಲ್ ಪ್ರವೇಶಿಸಿದ ಜರ್ಮನಿಯ ಮೊದಲ ಆಟಗಾರ ಜ್ವೆರೆವ್. 2003ರಲ್ಲಿ ರೇನರ್ ಶಟ್ಲರ್ ಅವರು ಆಸ್ಟ್ರೇಲಿಯಾ ಓಪನ್‌ನ ಪ್ರಶಸ್ತಿ ಸುತ್ತು ಪ್ರವೇಶಿಸಿದ್ದರು. 

ಸ್ವಿಟ್ಜರ್ಲೆಂಡ್‌ನ ರೋಜರ್‌ ಫೆಡರರ್ ಮತ್ತು ಸ್ಪೇನ್‌ನ ರಫೆಲ್ ನಡಾಲ್ ಅವರ ಅನುಪಸ್ಥಿತಿಯಿಂದಾಗಿ ಈ ಬಾರಿ ಸರ್ಬಿಯಾದ ನೊವಾಕ್ ಜೊಕೊವಿಚ್ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರ ಎನಿಸಿದ್ದರು. ಆದರೆ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಲೈನ್ ಅಂಪೈರ್‌ ಮೇಲೆ ಚೆಂಡು ಬಾರಿಸಿ ಜೊಕೊವಿಚ್ ಅನರ್ಹಗೊಂಡಿದ್ದರು. 

ಹೀಗಾಗಿ ಆರು ವರ್ಷಗಳ ನಂತರ ಮೊದಲ ಬಾರಿ ಹೊಸ ಗ್ರ್ಯಾನ್‌ಸ್ಲಾಂ ಚಾಂಪಿಯನ್‌ ಉದಯಕ್ಕೆ ಅಮೆರಿಕ ಓಪನ್ ಟೂರ್ನಿ ವೇದಿಕೆಯಾಯಿತು. 2014ರಲ್ಲಿ ಕ್ರೊವೇಷ್ಯಾದ ಮರಿನ್ ಸಿಲಿಕ್ ಅಮೆರಿಕ ಓಪನ್‌ನಲ್ಲಿ ಹೊಸ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. ಜೊಕೊವಿಚ್, ನಡಾಲ್ ಮತ್ತು ಫೆಡರರ್ ಅವರನ್ನು ಹೊರತುಪಡಿಸಿ ನಾಲ್ಕನೇ ಆಟಗಾರನೊಬ್ಬ ಗ್ರ್ಯಾನ್‌ಸ್ಲಾಂ ಪ್ರಶಸ್ತಿಗೆ ಒಡೆಯನಾಗುವುದು ನಾಲ್ಕು ವರ್ಷಗಳಲ್ಲಿ ಇದೇ ಮೊದಲು. 2016ರ ಅಮೆರಿಕ ಓಪನ್‌ನಲ್ಲಿ ಸ್ವಿಟ್ಜರ್ಲೆಂಡ್‌ನ ಸ್ಟಾನ್‌ ವಾವ್ರಿಂಕಾ ಚಾಂಪಿಯನ್ ಆಗಿದ್ದರು. 

ವಿಶ್ವ ಕ್ರಮಾಂಕದಲ್ಲಿ ಮೂರನೇ ಸ್ಥಾನದಲ್ಲಿರುವ ಥೀಮ್ ಅವರಿಗೆ ಇದು ಸತತ ಎರಡನೇ ಗ್ರ್ಯಾನ್‌ಸ್ಲಾ ಫೈನಲ್. ಈ ಬಾರಿಯ ಆಸ್ಟ್ರೇಲಿಯನ್ ಓಪನ್‌ನಲ್ಲೂ ಅವರು ಫೈನಲ್ ಪ್ರವೇಶಿಸಿದ್ದರು. 2018 ಮತ್ತು 2019ರ ಫ್ರೆಂಚ್ ಓಪನ್‌ನಲ್ಲೂ ಅವರು ಫೈನಲ್ ಪ್ರವೇಶಿಸಿದ್ದರು.  

*****

ಉತ್ತಮ ಗೆಳೆಯರಾಗಿರುವ ನಾನು ಮತ್ತು ಜ್ವೆರೆವ್ ಟೆನಿಸ್ ಕಣದಲ್ಲಿ ಅಪ್ಪಟ ವೈರಿಗಳು. ಗ್ರ್ಯಾನ್‌ಸ್ಲಾಂ ಫೈನಲ್ ಒಂದರಲ್ಲಿ ಮೊದಲ ಬಾರಿ ಮುಖಾಮುಖಿ ಆಗುತ್ತಿದ್ದೇವೆ ಎಂಬುದು ವಿಶೇಷ.

– ಡೊಮಿನಿಕ್ ಥೀಮ್, ಫೈನಲ್‌ನಲ್ಲಿ ಆಡಲಿರುವ ಆಸ್ಟ್ರಿಯಾ ಆಟಗಾರ

ಸೆಮಿಫೈನಲ್‌ನಲ್ಲಿ ಆಡುತ್ತಿದ್ದೇನೆ ಎಂಬುದೇ ಮರೆತಂತೆ ಮೊದಲ ಎರಡು ಸೆಟ್‌ಗಳನ್ನು ಕಳೆದುಕೊಂಡೆ. ಆದರೆ ಬೇಗನೇ ಚೇತರಿಸಿಕೊಳ್ಳಲು ಸಾಧ್ಯವಾಯಿತು.

– ಅಲೆಕ್ಸಾಂಡರ್ ಜ್ವೆರೆವ್, ಫೈನಲ್ ಪ್ರವೇಶಿಸಿದ ಜರ್ಮನಿ ಆಟಗಾರ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು