ಶನಿವಾರ, ಮೇ 15, 2021
24 °C

ಬಿಲಿ ಜೀನ್ ಕಿಂಗ್ ಕಪ್‌: ಭಾರತಕ್ಕೆ ಲಾಟ್ವಿಯಾ ಸವಾಲು

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ಜುರ್ಮಾಲ, ಲಾಟ್ವಿಯಾ: ಭಾರತದ ಟೆನಿಸ್ ಪಟುಗಳು ಶುಕ್ರವಾರ ಇಲ್ಲಿ ಆರಂಭವಾಗಲಿರುವ ಬಿಲಿ ಜೀನ್ ಕಿಂಗ್ ಕಪ್ ವಿಶ್ವ ಗುಂಪಿನ ಪ್ಲೇ ಆಫ್‌ನಲ್ಲಿ ಲಾಟ್ವಿಯಾದ ಕಠಿಣ ಸವಾಲು ಎದುರಿಸಲಿದ್ದಾರೆ. ‌ಖ್ಯಾತ ಆಟಗಾರ್ತಿ ಜೆಲೆನಾ ಒಸ್ತಪೆಂಕೊ ಸೇರಿದಂತೆ ಪ್ರಮುಖರು ಲಾಟ್ವಿಯಾ ತಂಡದಲ್ಲಿದ್ದಾರೆ.

ಈ ಹಿಂದೆ ಫೆಡ್ ಕಪ್ ಕರೆಯಲಾಗುತ್ತಿದ್ದ ಟೂರ್ನಿಯ ಹೆಸರನ್ನು ಈಗ ಬಿಲಿ ಜೀನ್ ಕಿಂಗ್ ಕಪ್ ಎಂದು ಬದಲಿಸಲಾಗಿದೆ. ಭಾರತದ ಪ್ರಮುಖರಲ್ಲಿ ಅಂಕಿತಾ ರೈನಾ ಒಳಗೊಂಡಿದ್ದು ವಿಶ್ವ ರ‍್ಯಾಂಕಿಂಗ್‌ನಲ್ಲಿ 174ನೇ ಸ್ಥಾನದಲ್ಲಿರುವ ಅವರು ಮೊದಲ ಪಂದ್ಯದಲ್ಲಿ ಜೆಲೆನಾ ವಿರುದ್ಧ ಸೆಣಸಲಿದ್ದಾರೆ. 621ನೇ ರ‍್ಯಾಂಕ್ ಹೊಂದಿರುವ  ಕರ್ಮನ್ ಕೌರ್ ಥಾಂಡಿ 47ನೇ ಸ್ಥಾನದಲ್ಲಿರುವ ಅನಸ್ತೇಸಿಜಾ ಸೆವಸ್ತೋವಾ ಅವರನ್ನು ಎದುರಿಸುವರು. ಪಂದ್ಯಗಳು ಒಳಾಂಗಣ ಹಾರ್ಡ್ ಕೋರ್ಟ್‌ನಲ್ಲಿ ನಡೆಯಲಿವೆ.

ಅಂಕಿತಾ ಕೊನೆಯದಾಗಿ 2015ರ ಐಟಿಎಫ್‌ ಫೈನಲ್‌ನಲ್ಲಿ ಸೆವಸ್ತೋವಾ ಎದುರು ಸೆಣಸಿದ್ದರು. ಆ ‍ಪಂದ್ಯದಲ್ಲಿ ಅಂಕಿತಾ ಸೋತಿದ್ದರು. ಆ ನಂತರ ಸೆವಸ್ತೋವಾ ಸಾಧನೆಯ ಹಾದಿಯಲ್ಲಿ ಮುನ್ನಡೆದು ರ‍್ಯಾಂಕಿಂಗ್‌ನಲ್ಲಿ 50ರ ಒಳಗೆ ಸ್ಥಾನ ಗಳಿಸಿದ್ದರು. ಕಳೆದ ವರ್ಷದ ಫೆಡ್‌ ಕಪ್‌ನಲ್ಲಿ ಅವರು ಸೆರೆನಾ ವಿಲಿಯಮ್ಸ್ ವಿರುದ್ಧ ಜಯ ಗಳಿಸಿ ಗಮನ ಸೆಳೆದಿದ್ದರು.

ಮೊದಲ ದಿನ ಅಂಕಿತಾ ಮತ್ತು ಕರ್ಮನ್ ಕೌರ್ ಅವರ ಪಂದ್ಯಗಳು ಮಾತ್ರವಿದ್ದು ಶನಿವಾರ ಸಾನಿಯಾ ಮಿರ್ಜಾ ಮತ್ತು ಅಂಕಿತಾ ಜೋಡಿ ಡಯಾನಾ ಮರ್ಸಿಂಕೆವಿಚಾ ಮತ್ತು ಡ್ಯಾನಿಯೆಲಾ ವಿಸ್ಮನೆ ಜೋಡಿಯನ್ನು ಎದುರಿಸುವರು. ಶುಕ್ರವಾರದ ಪಂದ್ಯಗಳು ರಾತ್ರಿ 8.30ಕ್ಕೆ ಆರಂಭವಾಗಲಿದ್ದು ಶನಿವಾರ 4.30ಕ್ಕೆ ಪಂದ್ಯಗಳು ನಡೆಯಲಿವೆ. ಯೂರೊಸ್ಪೋರ್ಟ್ಸ್‌ನಲ್ಲಿ ನೇರ ಪ್ರಸಾರವಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು