ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಲ್ಟಿಮೇಟ್ ಟೇಬಲ್ ಟೆನಿಸ್‌ | ಎರಡು ತಂಡಗಳ ಹೊಸ ಸೇರ್ಪಡೆ

ಆಗಸ್ಟ್ 22ರಿಂದ ಅಲ್ಟಿಮೇಟ್ ಟೇಬಲ್ ಟೆನಿಸ್‌
Published 29 ಮೇ 2024, 16:20 IST
Last Updated 29 ಮೇ 2024, 16:20 IST
ಅಕ್ಷರ ಗಾತ್ರ

ಚೆನ್ನೈ: ಭಾರತದ ಪ್ರಮುಖ ಟೇಬಲ್ ಟೆನಿಸ್ ಲೀಗ್ ‘ಅಲ್ಟಿಮೇಟ್ ಟೇಬಲ್ ಟೆನಿಸ್‌’ನ (ಯುಟಿಟಿ) ಐದನೇ ಆವೃತ್ತಿ ಆ.22ರಿಂದ ಸೆ.7 ರವರೆಗೆ ಚೆನ್ನೈನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಬಾರಿ ಎರಡು ಹೊಸ ತಂಡಗಳು ಲೀಗ್‌ನಲ್ಲಿ ಸ್ಪರ್ಧಿಸುತ್ತಿವೆ.

ಟೇಬಲ್ ಟೆನಿಸ್ ಫೆಡರೇಷನ್ ಆಫ್ ಇಂಡಿಯಾ (ಟಿಟಿಎಫ್ಐ) ಆಶ್ರಯದಲ್ಲಿ ನೀರಜ್ ಬಜಾಜ್ ಮತ್ತು ವಿಟಾ ದಾನಿ ಅವರ ಮುತುವರ್ಜಿಯಿಂದ ಫ್ರಾಂಚೈಸಿ ಆಧಾರಿತ ಲೀಗ್ 2017ರಲ್ಲಿ ಆರಂಭವಾಯಿತು. ಈತನಕ ನಡೆದ ನಾಲ್ಕು ಆವೃತ್ತಿಗಳಲ್ಲಿ ಆರು ತಂಡಗಳು ಸೆಣಸಾಟ ನಡೆಸಿದ್ದವು. ಜೈಪುರ ಪೇಟ್ರಿಯಾಟ್ಸ್ ಮತ್ತು ಅಹಮದಾಬಾದ್ ಎಸ್‌ಜಿ ಪೈಪರ್ಸ್‌ ತಂಡಗಳು ಈ ಆವೃತ್ತಿಯಲ್ಲಿ ಕಣಕ್ಕೆ ಇಳಿಯಲಿವೆ.

ಹಾಲಿ ಚಾಂಪಿಯನ್‌ ಗೋವಾ ಚಾಲೆಂಜರ್ಸ್‌, ಚೆನ್ನೈ ಲಯನ್ಸ್‌, ದಬಾಂಗ್ ಡೆಲ್ಲಿ ಟಿಟಿಸಿ, ಯು ಮುಂಬಾ ಟಿಟಿ, ಪುಣೇರಿ ಪಲ್ಟನ್, ಬೆಂಗಳೂರು ಸ್ಮಾಷರ್ಸ್ ತಂಡಗಳು ಈ ಹಿಂದಿನಂತೆ ಸ್ಪರ್ಧೆಯಲ್ಲಿ ಇರಲಿವೆ. ಪ್ರತಿ ತಂಡವು ಇಬ್ಬರು ವಿದೇಶಿ ಆಟಗಾರರು ಸೇರಿದಂತೆ ಆರು ಮಂದಿಯನ್ನು ಒಳಗೊಂಡಿರಲಿದೆ. ಶರತ್‌ ಕಮಲ್‌, ಜಿ. ಸತ್ಯನ್‌, ಹರ್ಮೀತ್‌ ದೇಸಾಯಿ, ಮಾನವ್‌ ಟಕ್ಕರ್‌, ಮಣಿಕಾ ಬಾತ್ರ, ಸುತೀರ್ಥ ಮುಖರ್ಜಿ, ಅರ್ಚನಾ ಕಾಮತ್‌ ಸೇರಿದಂತೆ ದೇಶದ ಪ್ರಮುಖ ಆಟಗಾರರು ಸ್ಪರ್ಧಿಸುವರು.

ಪ್ಯಾರಿಸ್‌ ಒಲಿಂಪಿಕ್ಸ್‌ ಬೆನ್ನಲ್ಲೆ ನಡೆಯಲಿರುವ ಈ ಟೂರ್ನಿಯು ವಿಶ್ವದ ಪ್ರಮುಖ ಟೇಬಲ್‌ ಟೆನಿಸ್‌ ಆಟಗಾರರೊಂದಿಗೆ ಸ್ಥಳೀಯ ಯುವ ಆಟಗಾರರಿಗೆ ವೇದಿಕೆಯನ್ನು ಒದಗಿಸುತ್ತದೆ. ಈ ಬಾರಿ ಎಂಟು ತಂಡಗಳು ಇರುವುದರಿಂದ ಡ್ರಾ ಸ್ವರೂಪ ಕೊಂಚ ಬದಲಾವಣೆಯಾಗಲಿದೆ. ತಲಾ ನಾಲ್ಕು ತಂಡಗಳ ಎರಡು ಗುಂಪುಗಳನ್ನು ರಚಿಸಲಾಗುತ್ತದೆ. ಲೀಗ್‌ ಹಂತದಲ್ಲಿ ಪ್ರತಿ ತಂಡಗಳು ಐದು ಪಂದ್ಯಗಳನ್ನು ಆಡಲಿವೆ ಎಂದು ಸಂಘಟಕರು ಮಾಹಿತಿ ನೀಡಿದರು.

ಚೆನ್ನೈನಲ್ಲಿ ಲೀಗ್ ಆಯೋಜಿಸುವ ನಿರ್ಧಾರವು ಇಲ್ಲಿನ ಕ್ರೀಡಾ ಪರಂಪರೆಗೆ ಸಿಕ್ಕ ಗೌರವವಾಗಿದೆ. ಹಲವಾರು ಖ್ಯಾತನಾಮ ಆಟಗಾರರನ್ನು ಕೊಡುಗೆಯಾಗಿ ನೀಡಿರುವ ಚೆನ್ನೈನಲ್ಲಿ ಟೇಬಲ್‌ ಟೆನಿಸ್‌ ಹಬ್ಬಕ್ಕೆ ಭರದ ಸಿದ್ಧತೆ ನಡೆಯುತ್ತಿದೆ ಎಂದು ಯುಟಿಟಿಯ ಸಹ-ಪ್ರವರ್ತಕ ನೀರಜ್ ಬಜಾಜ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT