ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ರೆಂಚ್ ಓಪನ್‌ ಟೆನಿಸ್ ಟೂರ್ನಿ: ಅಜರೆಂಕಾಗೆ ಗೆಲುವು; ಸಬಲೆಂಕಾಗೆ ನಿರಾಸೆ

ಹೆನ್ರಿ ಲಾಕ್ಸೊನೆನ್ ನಿವೃತ್ತಿ; ನಿಶಿಕೋರಿ ಪ್ರಿ ಕ್ವಾರ್ಟರ್ ಫೈನಲ್‌ಗೆ
Last Updated 4 ಜೂನ್ 2021, 15:13 IST
ಅಕ್ಷರ ಗಾತ್ರ

ಪ್ಯಾರಿಸ್‌: ಎಂಟು ವರ್ಷಗಳ ನಂತರ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ನಾಲ್ಕನೇ ಸುತ್ತು ಪ್ರವೇಶಿಸಿದ ಬೆಲಾರಸ್‌ನ ವಿಕ್ಟೋರಿಯಾ ಅಜರೆಂಕಾ ಶುಕ್ರವಾರ ಗೆಲುವಿನ ಸಂಭ್ರಮದಲ್ಲಿ ಮಿಂದೆದ್ದರು. ವಿಶ್ವದ ಮಾಜಿ ಒಂದನೇ ಕ್ರಮಾಂಕದ ಆಟಗಾರ್ತಿ ಅಜರೆಂಕಾ 6–2, 6–2ರಲ್ಲಿ ಅಮೆರಿಕಾದ ಮ್ಯಾಡಿಸನ್ ಕೀಸ್ ವಿರುದ್ಧ ಜಯ ಗಳಿಸಿದರು.

ಮೂರನೇ ಶ್ರೇಯಾಂಕಿತೆ, ಬೆಲಾರಸ್‌ನ ಅರಿನಾ ಸಬಲೆಂಕಾ ರಷ್ಯಾದ ಅನಸ್ತೇಸಿಯಾ ಪೌಲಿಚೆಂಕೋವ ವಿರುದ್ಧ ಸೋತು ಹೊರಬಿದ್ದರು. ಗುರುವಾರ ತಡರಾತ್ರಿ ನಡೆದ ಪಂದ್ಯದಲ್ಲಿ ರಿಚರ್ಡ್ ಗಾಸ್ಕೆಟ್‌ ಅವರನ್ನು ಸ್ಪೇನ್‌ನ ರಫೆಲ್ ನಡಾಲ್ ಸುಲಭವಾಗಿ ಮಣಿಸಿದರು.

2013ರಲ್ಲಿ ರೊಲ್ಯಾಂಡ್ ಗ್ಯಾರೋಸ್‌ನಲ್ಲಿ ಅಜರೆಂಕಾ ಸೆಮಿಫೈನಲ್ ಪ್ರವೇಶಿಸುವುದರೊಂದಿಗೆ ಜೀವನಶ್ರೇಷ್ಠ ಸಾಧನೆ ಮಾಡಿದ್ದರು. ಬೆನ್ನುನೋವಿನಿಂದಾಗಿ ಕಳೆದ ತಿಂಗಳು ಮ್ಯಾಡ್ರಿಡ್ ಓಪನ್‌ ಟೂರ್ನಿಯಿಂದ ಅವರು ಹಿಂದೆ ಸರಿದಿದ್ದರು. ಹೀಗಾಗಿ ಫ್ರೆಂಚ್ ಓಪನ್‌ನಲ್ಲಿ ಆಡುವುದು ಸಂದೇಹವಾಗಿತ್ತು. ಆದರೆ ಚೇತರಿಸಿಕೊಂಡು ಬಂದು ಆರಂಭದಿಂದಲೇ ಉತ್ತಮ ಸಾಮರ್ಥ್ಯ ತೋರಿದ್ದರು.

ಬ್ಯಾಕ್‌ಹ್ಯಾಂಡ್ ಹೊಡೆತಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದ ಅಜರೆಂಕಾ ಮೊದಲ ಸೆಟ್‌ನಲ್ಲಿ ಸುಲಭ ಜಯ ಸಾಧಿಸಿದರು. ಎರಡನೇ ಸೆಟ್‌ನಲ್ಲೂ ಅವರು ಪಾರಮ್ಯ ಮೆರೆದರು. ಎರಡು ಬಾರಿ ಮ್ಯಾಡಿಸನ್ ಅವರ ಸರ್ವ್ ಮುರಿದು ಸುಲಭ ಗೆಲುವಿನತ್ತ ಸಾಗಿದರು.

31ನೇ ಶ್ರೇಯಾಂಕಿತೆ ಪೌಲಿಚೆಂಕೋವ ಎದುರು4-6, 6-2, 0-6ರಲ್ಲಿ ಸಬಲೆಂಕಾ ಸೋತರು. ನವೊಮಿ ಒಸಾಕ ಮತ್ತು ಆ್ಯಶ್ ಬಾರ್ಟಿ ಹೊರಹೋದ ನಂತರ ಟೂರ್ನಿಯಿಂದ ಹೊರಬಿದ್ದಿರುವ ಗರಿಷ್ಠ ಶ್ರೇಯಾಂಕದ ಆಟಗಾರ್ತಿಯಾಗಿದ್ದಾರೆ ಸಬಲೆಂಕಾ.

ಆರಂಭದಲ್ಲಿ 3–0ಯಿಂದ ಮುನ್ನಡೆದಿದ್ದ ಸಬಲೆಂಕಾ ನಂತರ ಸ್ವಯಂಕೃತ ಪ್ರಮಾದಗಳಿಂದಾಗಿ ಪಾಯಿಂಟ್‌ಗಳನ್ನು ಕಳೆದುಕೊಂಡರು. ಮೊದಲ ಸೆಟ್‌ನಲ್ಲಿ ಹಿನ್ನಡೆ ಅನುಭವಿಸಿದರೂ ಎರಡನೇ ಸೆಟ್‌ನಲ್ಲಿ ಸತತ ನಾಲ್ಕು ಗೇಮ್‌ಗಳನ್ನು ಗೆದ್ದು ಎದುರಾಳಿಯನ್ನು ಕಂಗೆಡಿಸಿದರು. ಮೂರನೇ ಸೆಟ್‌ನಲ್ಲಿ ಪೌಲಿಚೆಂಕೊ ಮತ್ತೆ ಮೇಲುಗೈ ಸಾಧಿಸಿದರು.

ಹೆನ್ರಿ ಲಾಕ್ಸೊನೆನ್ ನಿವೃತ್ತಿ
ಸ್ವಿಟ್ಜರ್ಲೆಂಡ್‌ನ ಹೆನ್ರಿ ಲಾಕ್ಸೊನೆನ್ ನಿವೃತ್ತಿಯಾದ ಕಾರಣ ಜಪಾನ್‌ನ ಕೀ ನಿಶಿಕೋರಿ ಪ್ರಿ ಕ್ವಾರ್ಟರ್ ಫೈನಲ್‌ ಪ್ರವೇಶಿಸಿದರು. ಮೊದಲ ಸೆಟ್‌ನಲ್ಲಿ ನಿಶಿಕೋರಿ 7–5ರಲ್ಲಿ ಮುನ್ನಡೆದಿದ್ದರು. ಅಷ್ಟರಲ್ಲಿ ಎದುರಾಳಿ ಹೊರನಡೆಯಲು ನಿರ್ಧರಿಸಿದರು. ಲಾಕ್ಸೊನೆನ್ ಅರ್ಹತಾ ಸುತ್ತಿನ ಮೂಲಕ ಮುಖ್ಯ ಸುತ್ತು ಪ್ರವೇಶಿಸಿದ್ದರು.

ನಡಾಲ್‌ಗೆ ಗೆಲುವು
ಆವೆಮಣ್ಣಿನಂಕಣದ ರಾಜ ರಫೆಲ್ ನಡಾಲ್ ಗುರುವಾರ 35ನೇ ಜನ್ಮದಿನ ಆಚರಿಸಿದ್ದರು. ರಾತ್ರಿ ನಡೆದ ಪಂದ್ಯದಲ್ಲಿ ಸ್ಥಳೀಯ ಆಟಗಾರ ರಿಚರ್ಡ್ ಗಾಸ್ಕೆಟ್‌ ಅವರನ್ನು 6-0, 7-5, 6-2ರಲ್ಲಿ ಮಣಿಸಿದರು.

1999ರಲ್ಲಿ ನಡೆದಿದ್ದ 14 ವರ್ಷದೊಳಗಿನವರ ಟೂರ್ನಿಯೊಂದರ ಸೆಮಿಫೈನಲ್‌ನಲ್ಲಿ ನಡಾಲ್ ಅವರನ್ನು ಗಾಸ್ಕೆಟ್‌ ಮಣಿಸಿದ್ದರು. ಆದರೆ ನಂತರ ನಡೆದ ಎಲ್ಲ ಪಂದ್ಯಗಳಲ್ಲೂ ನಡಾಲ್ ಗೆಲುವು ತಮ್ಮದಾಗಿಸಿಕೊಂಡಿದ್ದರು.

ಮೂರನೇ ಸುತ್ತಿನ ಇತರ ಫಲಿತಾಂಶಗಳು
ಪುರುಷರ ವಿಭಾಗ:
ಅರ್ಜೆಂಟೀನಾದ ಫೆಡರಿಕೊ ಡೆಲ್ಬೊನಿಸ್‌ಗೆ ಇಟಲಿಯ ಫ್ಯಾಬಿಯೊ ಫಾಗ್ನಿನಿ ಎದುರು 6-4, 6-1, 6-3ರಲ್ಲಿ ಜಯ. ಕಜಕಸ್ತಾನದ ಎಲಿನಾ ರಿಬಕಿನಾಗೆ ರಷ್ಯಾದ ಎಲಿನಾ ವೆಸ್ನಿನಾ ಎದುರು 6-1, 6-4ರಲ್ಲಿ ಜಯ; ಸ್ಲೊವಾಕಿಯಾದ ತಮಾರ ಜಿದಾನ್ಸೆಕ್‌ಗೆ ಜೆಕ್ ಗಣರಾಜ್ಯದ ಕ್ಯಾಥರಿನಾ ಸಿನಿಕೋವ ಎದುರು 0-6, 7-6 (7/5), 6-2ರಲ್ಲಿ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT