ಗುರುವಾರ , ಮಾರ್ಚ್ 4, 2021
29 °C
ಜೊಕೊವಿಚ್‌, ಫೆಡರರ್‌ ಕ್ವಾರ್ಟರ್‌ ಫೈನಲ್‌ಗೆ

ವಿಂಬಲ್ಡನ್‌ ಟೆನಿಸ್‌ ಟೂರ್ನಿ: ಸೆಮಿಗೆ ಸೆರೆನಾ, ಹಲೆಪ್‌

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಲಂಡನ್‌: ರೊಮೇನಿಯಾದ ಸಿಮೊನಾ ಹಲೆಪ್‌ ಅವರು ವಿಂಬಲ್ಡನ್‌ ಟೂರ್ನಿಯಲ್ಲಿ ಎರಡನೇ ಬಾರಿ ಸೆಮಿಫೈನಲ್‌ ತಲುಪಿದ ಸಾಧನೆ ಮಾಡಿದರು. ಮಂಗಳವಾರ ನಡೆದ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಚೀನಾದ ಜಾಂಗ್‌ ಶುಯಿ ಅವರನ್ನು 7–6, 6–1 ಸೆಟ್‌ಗಳಿಂದ ಅವರು ಸೋಲಿಸಿದರು. 

ವಿಂಬಲ್ಡನ್‌ ಟೂರ್ನಿಯ ಸೆಮಿಫೈನಲ್‌ ತಲುಪಿದ ಚೀನಾದ ಎರಡನೇ ಮಹಿಳಾ ಆಟಗಾರ್ತಿ ಎನಿಸಿಕೊಳ್ಳುವ ಜಾಂಗ್‌ ಆಸೆ ಕೈಗೂಡಲಿಲ್ಲ.

ಮಹಿಳಾ ಸಿಂಗಲ್ಸ್‌ನ ತೀವ್ರ ಹೋರಾಟ ಕಂಡುಬಂದ ಪಂದ್ಯದಲ್ಲಿ ಅಮೆರಿಕಾದ ಸೆರೆನಾ ವಿಲಿಯಮ್ಸ್ ಅವರು ಸ್ವದೇಶದ ಆಟಗಾರ್ತಿ ಆಲಿಸನ್‌ ರಿಸ್ಕೆ ಅವರ ಸವಾಲನ್ನು ಮೀರಿದರು. 6–4, 4–6, 6–3 ಸೆಟ್‌ಗಳಿಂದ ಜಯದ ಮಹಲು ಕಟ್ಟಿದ ಅವರು, 12ನೇ ಬಾರಿ ವಿಂಬಲ್ಡನ್‌ ಟೂರ್ನಿಯ ಸೆಮಿಫೈನಲ್‌ಗೆ ಕಾಲಿಟ್ಟರು. 

37 ವರ್ಷದ ಸೆರೆನಾ ಅವರು ಮಾರ್ಗರೇಟ್‌ ಕೋರ್ಟ್‌ ಅವರ 24 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ವಿಜಯದ ದಾಖಲೆಯನ್ನು ಸರಿಗಟ್ಟಲು ಕೇವಲ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಬೇಕಿದೆ. ಎಂಟರ ಘಟ್ಟದ ಇನ್ನೊಂದು ಪಂದ್ಯದಲ್ಲಿ ಎಲಿನಾ ಸ್ವಿಟೋಲಿನಾ 7–5, 6–4ರಿಂದ ಕರೋಲಿನಾ ಮುಚೊವಾ ಎದುರು ಗೆದ್ದರು.

ಸೋಮವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್ ಪ್ರಿಕ್ವಾರ್ಟರ್‌ಫೈನಲ್‌ ಪಂದ್ಯಗಳಲ್ಲಿ ವಿಶ್ವ ಕ್ರಮಾಂಕದಲ್ಲಿ ಮೊದಲ ಸ್ಥಾನದಲ್ಲಿರುವ, ಅಗ್ರಶ್ರೇಯಾಂಕದ ಆಟಗಾರ ನೊವಾಕ್‌ ಜೊಕೊವಿಚ್‌ ಹಾಗೂ ಎರಡನೇ ಶ್ರೇಯಾಂಕದ ರೋಜರ್‌ ಫೆಡರರ್‌ ಸುಲಭದ ಜಯ ದಾಖಲಿಸಿ ಎಂಟರಘಟ್ಟಕ್ಕೆ ಲಗ್ಗೆಯಿಟ್ಟಿದ್ದರು.

ಫೆಡರರ್‌ ಅವರು ಇಟಲಿಯ ಮ್ಯಾಟ್ಟಿಯೊ ಬೆರೆಟ್ಟಿನಿ ಅವರನ್ನು 6–1, 6–2, 6–2 ಸೆಟ್‌ಗಳಿಂದ ಮಣಿಸುವ ಮೂಲಕ 28 ವರ್ಷಗಳಲ್ಲಿ ಗ್ರ್ಯಾನ್‌ಸ್ಲಾಮ್‌ ಟೂರ್ನಿಯೊಂದರ ಕ್ವಾರ್ಟರ್‌ಫೈನಲ್‌ ತಲುಪಿದ ಹಿರಿಯ ಆಟಗಾರ ಎನಿಸಿಕೊಂಡರು.

ಗ್ರ್ಯಾನ್‌ಸ್ಲಾಮ್‌ ಟೂರ್ನಿಗಳಲ್ಲಿ 55ನೇ ಬಾರಿ ಕ್ವಾರ್ಟರ್‌ಫೈನಲ್‌ ತಲುಪಿದ ಸಾಧನೆಯನ್ನೂ ಅವರು ಮಾಡಿದರು.

ಇನ್ನೊಂದೆಡೆ ಹಾಲಿ ಚಾಂಪಿಯನ್‌ ಜೊಕೊವಿಚ್‌ ಫ್ರಾನ್ಸ್ ಆಟಗಾರ ಯುಗೊ ಹಂಬರ್ಟ್‌ ವಿರುದ್ಧ 6–3, 6–2, 6–3 ಸೆಟ್‌ಗಳಿಂದ ಅವರು ಗೆಲುವು ಕಂಡರು.

ಸೋಮವಾರ ನಡೆದ ಪ್ರಿಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಜಪಾನ್‌ನ ಕಿ ನಿಶಿಕೋರಿ ಅವರು ಕಜಕಸ್ತಾನದ ಮಿಖಾಯಿಲ್‌ ಕುಕುಶ್ಕಿನ್‌ ಅವರನ್ನು 6–3, 3–6, 6–3, 6–4ರಿಂದ ಸೋಲಿಸಿದರು.

ಗಫ್‌ ಗೆಲುವಿನ ಓಟಕ್ಕೆ ತಡೆ: ಏಳನೇ ಶ್ರೇಯಾಂಕದ ಆಟಗಾರ್ತಿ ಸಿಮೊನಾ ಹಲೆಪ್‌ ಅವರು ಸೋಮವಾರ ಅಮೆರಿಕಾದ ಯುವ ಆಟಗಾರ್ತಿ ಕೋಕೊ ಗಫ್‌ ಅವರ ಗೆಲುವಿನ ಓಟಕ್ಕೆ ತಡೆಯೊಡ್ಡಿದರು. ಪ್ರಿಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ 6–3, 6–3 ಸೆಟ್‌ಗಳಿಂದ ಗಫ್‌ ಅವರಿಗೆ ಹಲೆಪ್‌ ಸೋಲಿನ ರುಚಿ ತೋರಿಸಿದರು. ಪ್ರಿಕ್ವಾರ್ಟರ್‌ ತಲುಪುವ ಹಾದಿಯಲ್ಲಿ ಗಫ್‌ ಅವರು ವೀನಸ್‌ ವಿಲಿಯಮ್ಸ್ ಹಾಗೂ ಪೊಲೊನಾ ಹರ್ಕಗ್‌ ಅವರನ್ನು ಸೋಲಿಸಿ ಸಂಚಲನ ಸೃಷ್ಟಿಸಿದ್ದರು.

ಸೆರೆನಾಗೆ ದಂಡ: ಆಲ್‌ ಇಂಗ್ಲೆಂಡ್‌ ಕ್ಲಬ್‌ ಅಂಗಳವೊಂದಕ್ಕೆ ರಾಕೆಟ್‌ನಿಂದ ಹಾನಿಗೈದ ಅಮೆರಿಕಾದ ಸೆರೆನಾ ವಿಲಿಯಮ್ಸ್ ಅವರಿಗೆ ಸುಮಾರು ₹ 6,80,000 (10,000 ಡಾಲರ್‌) ದಂಡ ವಿಧಿಸಲಾಗಿದೆ ಎಂದು ಮಂಗಳವಾರ ಅಧಿಕಾರಿಗಳು ತಿಳಿಸಿದ್ದಾರೆ.  

ಸೆರೆನಾ ಅವರು ಟೂರ್ನಿ ಆರಂಭವಾಗುವುದಕ್ಕೂ ಮುನ್ನ ನಡೆಸಿದ ಅಭ್ಯಾಸದ ವೇಳೆ ಅಂಗಳಕ್ಕೆ ಹಾನಿ ಮಾಡಿದ್ದರು. ಅಶಿಸ್ತಿನ ವರ್ತನೆಗಾಗಿ ಅವರಿಗೆ ಈ ಶಿಕ್ಷೆ ವಿಧಿಸಲಾಗಿದೆ ಎಂದು ಟೂರ್ನಿಯ ವಕ್ತಾರರೊಬ್ಬರು ಹೇಳಿದ್ದಾರೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು