ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2011 ವಿಶ್ವಕಪ್ : ಗೌತಿ 'ಮಹಿ'ಮೆಗೆ ತಲೆಬಾಗಿದ 'ವಿಶ್ವ'

Last Updated 26 ಮೇ 2019, 19:32 IST
ಅಕ್ಷರ ಗಾತ್ರ

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಆ ದಿನ (2011ರ ಏಪ್ರಿಲ್ 2) ಕಿವಿಗಡಚಿಕ್ಕುವ ಸದ್ದು ನಿರಂತರವಾಗಿತ್ತು. ಅದಕ್ಕೆ ಕಾರಣ ಅಲ್ಲಿ ಆಯೋಜನೆಯಾಗಿದ್ದ ಭಾರತ ಮತ್ತು ಶ್ರೀಲಂಕಾ ನಡುವಣ ವಿಶ್ವಕಪ್ ಫೈನಲ್ ಪಂದ್ಯ. ಆ ವರ್ಷ ಆತಿಥ್ಯ ವಹಿಸಿದ್ದ ಎರಡೂ ತಂಡಗಳು ಮುಖಾಮುಖಿ ಆಗಿದ್ದವು. ಅದರಲ್ಲೂ ತಮ್ಮ ವೃತ್ತಿಜೀವನದಲ್ಲಿ ಕೊನೆಯ ಬಾರಿಗೆ ವಿಶ್ವಕಪ್ ಟೂರ್ನಿಯಲ್ಲಿ ಆಡುತ್ತಿದ್ದ ಸಚಿನ್ ತೆಂಡೂಲ್ಕರ್ ತವರಿನಂಗಳ ಭರ್ತಿ ಯಾಗಿತ್ತು. ಆ ದಿನ ಸಚಿನ್ ಅರ್ಧಶತಕವನ್ನೂ ದಾಖಲಿಸಲಿಲ್ಲ. ಆದರೆ ಗೌತಮ್ ಗಂಭೀರ್ ಮತ್ತು ಮಹೇಂದ್ರಸಿಂಗ್ ಧೋನಿ ತಮ್ಮ ಆಟದ ಮೂಲಕ ಸಚಿನ್‌ಗೆ ವಿಶ್ವಕಪ್ ಕಾಣಿಕೆ ಕೊಟ್ಟರು.

*ರೆಫರಿ ಜೆಫ್ ಕ್ರೋವ್ ಟಾಸ್ ಪ್ರಕ್ರಿಯೆ ನೆರವೇರಿಸುವಾಗ ಪ್ರೇಕ್ಷಕರ ಅಬ್ಬರ ಮುಗಿಲು ಮುಟ್ಟಿತ್ತು. ಧೋನಿ ನಾಣ್ಯವನ್ನು ಮೇಲೆ ಚಿಮ್ಮಿಸಿದರು. ಆಗ ಲಂಕಾ ತಂಡದ ನಾಯಕ ಕುಮಾರ ಸಂಗಕ್ಕಾರ ಅವರ ಮನವಿ ರೆಫರಿಗೆ ಸರಿ ಕೇಳಿರಲಿಲ್ಲ. ಅದರಿಂದಾಗಿ ಮತ್ತೊಮ್ಮೆ ಟಾಸ್ ಮಾಡಲಾಯಿತು. ಲಂಕಾ ತಂಡ‌ ಗೆದ್ದು ಬ್ಯಾಟಿಂಗ್ ಮಾಡಿತು.

* ಮಹೇಲಾ ಜಯವರ್ಧನೆ (103; 88 ಎಸೆತ, 13 ಬೌಂಡರಿ) ಮತ್ತು ಸಂಗಕ್ಕಾರ (48 ರನ್) ಅವರ ಅಮೋಘ ಆಟದ ಬಲದಿಂದ ಶ್ರೀಲಂಕಾ ಹೋರಾಟದ ಮೊತ್ತ ಕಲೆ ಹಾಕಿತು. ಭಾರತದ ಜಹೀರ್ ಖಾನ್ ಮತ್ತು ಯುವರಾಜ್ ಸಿಂಗ್ ತಲಾ ಎರಡು ವಿಕೆಟ್ ಗಳಿಸಿದರು.

* ಭಾರತ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಇನಿಂಗ್ಸ್‌ನ ಎರಡನೇ ಎಸೆತದಲ್ಲಿ ವೀರೇಂದ್ರ ಸೆಹ್ವಾಗ್ ವಿಕೆಟ್ ಉರುಳಿತು. ಏಳನೇ ಓವರ್‌ನಲ್ಲಿ ಸಚಿನ್ ಔಟ್ ಆದರು. ಇಬ್ಬರು ದಿಗ್ಗಜರ ವಿಕೆಟ್ ಕಿತ್ತ ಲಸಿತ್ ಮಾಲಿಂಗ ಸಂಭ್ರಮಿಸಿದರು.

* ಆಗ ಕ್ರೀಸ್‌ನಲ್ಲಿದ್ದ ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ ಸೇರಿ ಮೂರನೇ ವಿಕೆಟ್ ಜೊತೆಯಾಟದಲ್ಲಿ 83 ರನ್ ಸೇರಿಸಿದರು.

* 22ನೇ ಓವರ್‌ನಲ್ಲಿ ತಿಲಕರತ್ನೆ ದಿಲ್ಶಾನ್ ಅವರು ವಿರಾಟ್ ವಿಕೆಟ್ ಕಬಳಿಸಿ ಜೊತೆಯಾಟ ಮುರಿದರು.

* ಅಚ್ಚರಿಯ ಸಂಗತಿಯೊಂದು ಆಗ ನಡೆಯಿತು. ಏಳನೇ ಕ್ರಮಾಂಕದಲ್ಲಿ ಆಡುವ ಧೋನಿ ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದರು. ಕೋಚ್ ಗ್ಯಾರಿ ಕರ್ಸ್ಟನ್ ಮತ್ತು ಧೋನಿ ಹೊರತುಪಡಿಸಿ ಉಳಿದೆಲ್ಲರಿಗೂ ಇದು ಅನಿರೀಕ್ಷಿತವಾಗಿತ್ತು.

* ಗಂಭೀರ್ ಮತ್ತು ಧೋನಿ ಜೊತೆಯಾಟದಲ್ಲಿ 114 ರನ್ ಸೇರಿದವು. 97 ರನ್ ಗಳಿಸಿದ್ದ ಗಂಭೀರ್ 42ನೆ ಓವರ್‌ನಲ್ಲಿ ಔಟಾದರು.

* ಧೋನಿ ಮತ್ತು ಯು‌ವಿ ತಂಡವನ್ನು ಗೆಲುವಿನ ದಡ ಸೇರಿಸಿದರು. 49ನೆ ಓವರ್‌ನ ಎರಡನೇ ಎಸೆತವನ್ನು ಸಿಕ್ಸರ್‌ಗೆ ಎತ್ತಿದ ಧೋನಿ ಮುಗುಳ್ನಕ್ಕರು. ಸಂಭ್ರಮ ಗರಿಗೆದರಿತು.

ಸ್ಕೋರ್
ಶ್ರೀಲಂಕಾ: 50 ಓವರ್‌ಗಳಲ್ಲಿ 6ಕ್ಕೆ 274
ಭಾರತ: 48.2 ಓವರ್ ಗಳಲ್ಲಿ 4ಕ್ಕೆ 277

ಫಲಿತಾಂಶ: ಭಾರತಕ್ಕೆ 6 ವಿಕೆಟ್‌ಗಳ ಜಯ
ಪಂದ್ಯ ಶ್ರೇಷ್ಠ: ಮಹೇಂದ್ರ ಸಿಂಗ್ ಧೋನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT