ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs PAK | ಹೀರೋಗಳಾಗಲು ಸುವರ್ಣಾವಕಾಶ: ಪಾಕ್ ತಂಡಕ್ಕೆ ಸ್ಫೂರ್ತಿ ತುಂಬಿದ ನಾಯಕ

Published 13 ಅಕ್ಟೋಬರ್ 2023, 14:54 IST
Last Updated 13 ಅಕ್ಟೋಬರ್ 2023, 14:54 IST
ಅಕ್ಷರ ಗಾತ್ರ

ಅಹಮದಾಬಾದ್‌: ಭಾರತ ಕ್ರಿಕೆಟ್‌ ತಂಡದ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಹೀರೋಗಳಾಗುವ ಸುವರ್ಣಾವಕಾಶ ಒದಗಿಬಂದಿದೆ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್‌ ಅಜಂ ಹೇಳಿದ್ದಾರೆ.

ಭಾರತ ಹಾಗೂ ಪಾಕಿಸ್ತಾನ ತಂಡಗಳು ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ನಾಳೆ (ಅಕ್ಟೋಬರ್‌ 14ರಂದು) ಮುಖಾಮುಖಿಯಾಗಲಿವೆ. 1.32 ಲಕ್ಷ ಆಸನ ಸಾಮರ್ಥ್ಯ ಹೊಂದಿರುವ ಮೊಟೆರಾದ ನರೇಂದ್ರ ಮೋದಿ ಕ್ರೀಡಾಂಗಣ ಈ ಹೈವೋಲ್ಟೇಜ್‌ ಕದನಕ್ಕೆ ಸಾಕ್ಷಿಯಾಗಲಿದೆ. 

ಪಂದ್ಯದ ಮುನ್ನಾದಿನ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿರುವ ಬಾಬರ್‌ ಅಜಂ, 'ಪ್ರಾಮಾಣಿಕವಾಗಿ ಹೇಳುವುದಾದರೆ, ಹೌದು ಭಾರತ–ಪಾಕಿಸ್ತಾನ ಮುಖಾಮುಖಿಯು ಬಹುದೊಡ್ಡ ಪಂದ್ಯ. ಅತ್ಯಂತ ತೀವ್ರತೆಯಿಂದ ಕೂಡಿರಲಿದೆ. ಸಾಧ್ಯವಾದಷ್ಟು ಉತ್ತಮ ಪ್ರದರ್ಶನ ನೀಡಬೇಕಿದೆ. ಒಂದು ತಂಡವಾಗಿ ನಾವು ನಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸಲಿದ್ದೇವೆ' ಎಂದಿದ್ದಾರೆ.

'ಯೋಜನೆಗಳನ್ನು ಕಾರ್ಯಗತಗೊಳಿಸುವುದು ಮತ್ತು ನಮ್ಮ ಮೇಲೆ ನಂಬಿಕೆ ಇರಿಸುವುದು ಪ್ರಮುಖವಾಗುತ್ತದೆ. ಅಹಮದಾಬಾದ್‌ ಅತ್ಯಂತ ದೊಡ್ಡ ಕ್ರೀಡಾಂಗಣವಾಗಿದ್ದು, ಸಾಕಷ್ಟು ಅಭಿಮಾನಿಗಳು ಆಗಮಿಸಲಿದ್ದಾರೆ. ಹಾಗಾಗಿ, ಅತ್ಯುತ್ತಮ ಪ್ರದರ್ಶನ ನೀಡಿ, ಅಭಿಮಾನಿಗಳ ಎದುರು ಹೀರೋಗಳಾಗಲು ಇದು ಸುವರ್ಣಾವಕಾಶವೇ ಸರಿ' ಎಂದು ಅಭಿಪ್ರಾಯಪಟ್ಟಿದ್ದಾರೆ. ಆ ಮೂಲಕ ತಮ್ಮ ತಂಡದ ಆಟಗಾರರನ್ನು ಉತ್ತೇಜಿಸಿದ್ದಾರೆ.

ಬಲಾಬಲ
ಉಭಯ ತಂಡಗಳು ಏಕದಿನ ಕ್ರಿಕೆಟ್‌ನಲ್ಲಿ 134 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಪಾಕ್‌ ತಂಡ 73–56 ಅಂತರದಿಂದ ಮುಂದಿದೆ. ಆದರೆ, ವಿಶ್ವಕಪ್‌ ಟೂರ್ನಿಗಳಲ್ಲಿನ ಅಂಕಿ–ಅಂಶ ಅದಕ್ಕೆ ಭಿನ್ನವಾಗಿದೆ. ವಿಶ್ವಕಪ್‌ ಟೂರ್ನಿಗಳಲ್ಲಿ 1992ರಿಂದ ಈವರೆಗೆ ಮುಖಾಮುಖಿಯಾದ 7 ಬಾರಿಯೂ ಭಾರತವೇ ಗೆದ್ದಿದೆ.

ಇದನ್ನು ಗಮನದಲ್ಲಿಟ್ಟುಕೊಂಡಿರುವ ಬಾಬರ್‌, ವಿಶ್ವಕಪ್‌ ಟೂರ್ನಿಗಳಲ್ಲಿನ ಸತತ ಸೋಲಿನ ಸರಪಳಿ ಕಳಚುವ ಸಲುವಾಗಿ ತಂಡದ ಸಾಮರ್ಥ್ಯದ ಬಗ್ಗೆ ವಿಶ್ವಾಸದ ಮಾತುಗಳನ್ನು ಆಡಿದ್ದಾರೆ. 

'ಹಿಂದೆ ಏನಾಗಿದೆ ಎಂಬುದರ ಬಗ್ಗೆ ಗಮನಹರಿಸುವುದಿಲ್ಲ. ಮುಂದೆ ಏನಾಗಬೇಕು ಎಂಬುದರತ್ತ ನೋಡುತ್ತೇನೆ. ದಾಖಲೆಗಳನ್ನು ಮುರಿಯಲು, ನಾಳೆ ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇವೆ. ಪಂದ್ಯದ ದಿನ ಹೇಗೆ ಆಡುತ್ತೇವೆ ಎಂಬುದರ ಮೇಲೆ ಎಲ್ಲವೂ ನಿಂತಿದೆ' ಎಂದು ಅಭಿಪ್ರಾಯಪಟ್ಟಿದ್ದಾರೆ.

'ಮೊದಲೆರಡು ಪಂದ್ಯಗಳಲ್ಲಿ ನಮ್ಮ ತಂಡ ಉತ್ತಮ ಪ್ರದರ್ಶನ ನೀಡಿದೆ. ಮುಂದಿನ ಪಂದ್ಯಗಳಲ್ಲೂ ಅದನ್ನು ಮುಂದುವರಿಸುತ್ತೇವೆ. ಅದನ್ನು ಸಾಧಿಸುತ್ತೇವೆ ಎಂಬ ನಂಬಿಕೆ ಇದೆ. ಸಂಪೂರ್ಣ ವಿಶ್ವಾಸದೊಂದಿಗೆ ಕಣಕ್ಕಿಳಿಯುತ್ತೇವೆ. ನಾಳೆ ಏನಾಗಲಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಆದರೆ, ನಮ್ಮಿಂದ ಎಲ್ಲವೂ ಸಾಧ್ಯ ಎಂದು ನಂಬಿದ್ದೇವೆ. ನಮ್ಮಿಂದ ಆದಷ್ಟು ಉತ್ತಮ ಪ್ರದರ್ಶನ ನೀಡಲಿದ್ದೇವೆ' ಹೇಳಿಕೊಂಡಿದ್ದಾರೆ.

ಟಾಸ್‌ ಗೆಲ್ಲುವುದು ಮುಖ್ಯ
ಭಾರತ ವಿರುದ್ಧದ ಹಣಾಹಣಿಯಲ್ಲಿ ಟಾಸ್‌ ಗೆಲ್ಲುವುದು ಹಾಗೂ ಪಂದ್ಯದ ವೇಳೆ ಬೀಳುವ ಇಬ್ಬನಿ ಪ್ರಮುಖ ಪಾತ್ರವಹಿಸಲಿವೆ. ರಾತ್ರಿ ವೇಳೆ ಆಡುವಾಗ ಹವಾಮಾನವೂ ಮಹತ್ವದ ಪಾತ್ರವಹಿಸುತ್ತದೆ ಎಂದು ಬಾಬರ್‌ ಹೇಳಿದ್ದಾರೆ.

'ಒತ್ತಡವನ್ನು ಮೀರಿ ಆಡುವುದನ್ನು ಅನುಭವದಿಂದ ಕಲಿತಿದ್ದೇವೆ. ಅಂತಹ ಪರಿಸ್ಥಿತಿಯಲ್ಲಿ ಹೆಚ್ಚೆಚ್ಚು ಆಡಿದಷ್ಟು, ಅದನ್ನು ನಿಭಾಯಿಸುವುದನ್ನೂ ಕಲಿಯುತ್ತೇವೆ' ಎಂದು ಪ್ರತಿಪಾದಿಸಿರುವ ಬಾಬಾರ್‌, ಶಾಂತಚಿತ್ತರಾಗಿರಬೇಕು. ಫೀಲ್ಡೀಂಗ್‌ ಮಾಡುವಾಗಲೇ ಆಗಲಿ ಅಥವಾ ಬ್ಯಾಟಿಂಗ್‌ ಮಾಡುವಾಗ ಆಗಲಿ ಚೆಂಡಿನ ಮೇಲೆ ಗಮನಕೇಂದ್ರೀಕರಿಸಬೇಕು ಅಷ್ಟೇ. ಹೆಚ್ಚು ಯೋಚಿಸುವುದು ಬೇಡ ಎಂಬ ಸಲಹೆಗಳನ್ನು ಯುವ ಆಟಗಾರರಿಗೆ ನೀಡುತ್ತೇವೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT