ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

CWC 2023: ನೆದರ್ಲೆಂಡ್ಸ್ ವಿರುದ್ಧ ಗೆದ್ದ ಅಫ್ಗನ್, ಸೆಮಿ ಫೈನಲ್‌ ಆಸೆ ಜೀವಂತ

Published 3 ನವೆಂಬರ್ 2023, 14:50 IST
Last Updated 3 ನವೆಂಬರ್ 2023, 14:50 IST
ಅಕ್ಷರ ಗಾತ್ರ

ಲಖನೌ: ಆಫ್‌ಸ್ಪಿನ್ನರ್ ಮೊಹಮ್ಮದ್ ನಬಿ ಅವರ ನಿಖರ ದಾಳಿಯ ಬಲದಿಂದ ಅಫ್ಗಾನಿಸ್ತಾನ ತಂಡವು ಶುಕ್ರವಾರ ನಡೆದ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ  ಜಯಿಸಿತು.

ಇದರೊಂದಿಗೆ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸುವ ಅಫ್ಗನ್ ಕನಸು ಜೀವಂತವಾಗುಳಿಯಿತು. 7 ವಿಕೆಟ್‌ಗಳಿಂದ ಜಯಿಸಿದ ಹಷ್ಮತ್‌ವುಲ್ಲಾ ಶಹೀದಿ ಬಳಗವು ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿತು.

ಏಕನಾ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನೆದರ್ಲೆಂಡ್ಸ್ ತಂಡವು 46.3 ಓವರ್‌ಗಳಲ್ಲಿ 179 ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿತು. ಸೈಬ್ರ್ಯಾಂಡ್ ಇಂಗೆಲ್‌ಬ್ರ್ಯಾಚೆಟ್ (58; 86ಎ, 4X6) ಮತ್ತು ಮ್ಯಾಕ್ಸ್‌ ಡಿವುಡ್ (42; 40ಎ) ಅವರಿಬ್ಬರ ಆಟದಿಂದಾಗಿ ತಂಡವು ಈ ಮೊತ್ತ ತಲುಪಲು ಸಾಧ್ಯವಾಯಿತು.

ಗುರಿ ಬೆನ್ನಟ್ಟಿದ ಅಫ್ಗನ್ ತಂಡವು ರೆಹಮತ್ ಶಾ (52; 54ಎ, 4X8) ಮತ್ತು ಶಹೀದಿ (ಅಜೇಯ 56; 64ಎ, 4X6) ಅವರಿಬ್ಬರ ಅರ್ಧಶತಕಗಳ ನೆರವಿನಿಂದ 31.3 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 181 ರನ್‌ ಗಳಿಸಿ ಗೆದ್ದಿತು.

ನಬಿ ಮಿಂಚು; ರನೌಟ್ ಸಾಲು: ಟೂರ್ನಿಯಲ್ಲಿ ಬಲಿಷ್ಠ ತಂಡವಾಗಿರುವ ದಕ್ಷಿಣ ಆಫ್ರಿಕಾ ಎದುರಿನ ಪಂದ್ಯದಲ್ಲಿ ಜಯಿಸಿದ್ದ ನೆದರ್ಲೆಂಡ್ಸ್ ತಂಡವನ್ನು ಯೋಜನಾಬದ್ಧವಾಗಿ ಕಟ್ಟಿಹಾಕುವಲ್ಲಿ ಶಹೀದಿ ಬಳಗ ಯಶಸ್ವಿಯಾಯಿತು. ಅದರಿಂದಾಗಿಯೇ ಡಚ್ ಬಳಗವು 100 ರನ್‌ಗಳ ಗಡಿ ಮುಟ್ಟುವ ಮುನ್ನವೇ ಐದು ವಿಕೆಟ್ ಕಳೆದುಕೊಂಡಿತ್ತು.

ಮೊಹಮ್ಮದ್ ನಬಿ (28ಕ್ಕೆ3) ಮತ್ತು ನೂರ್ ಅಹಮದ್ (31ಕ್ಕೆ2) ಅವರ ಪರಿಣಾಮಕಾರಿ ಬೌಲಿಂಗ್‌ ದಾಳಿ ಇದಕ್ಕೆ ಕಾರಣವಾಗಿತ್ತು. ಅಲ್ಲದೇ ಅಫ್ಗನ್ ಫೀಲ್ಡಿಂಗ್ ಕೂಡ ಉತ್ಕೃಷ್ಠ ದರ್ಜೆಯದಾಗಿತ್ತು. ಮ್ಯಾಕ್ಸ್ ಒಡೌಡ್, ಏಕರ್ಮನ್, ಸೈಬ್ರ್ಯಾಂಡ್ ಮತ್ತು ಸ್ಕಾಟ್ ಎಡ್ವರ್ಡ್ಸ್ ಅವರನ್ನು ರನೌಟ್ ಮಾಡುವಲ್ಲಿ ಫೀಲ್ಡರ್‌ಗಳು ಚುರುಕುತನ ತೋರಿದರು. 

ಆದರೆ ಅಫ್ಗನ್ ತಂಡದ ಅನುಭವಿ ಸ್ಪಿನ್ನರ್ ರಶೀದ್ ಖಾನ್ ಅವರಿಗೆ ಒಂದೂ ವಿಕೆಟ್ ಲಭಿಸಲಿಲ್ಲ.

ಅಫ್ಗನ್ ತಂಡದ ಆರಂಭವೂ ಚೆನ್ನಾಗಿರಲಿಲ್ಲ. ನೆದರ್ಲೆಂಡ್ ತಂಡದ ಆರಂಭಿಕ ಬ್ಯಾಟರ್ ರೆಹಮಾನುಲ್ಲಾ ಗುರ್ಬಾಜ್ ಮತ್ತು ಇಬ್ರಾಹಿಂ ಜದ್ರಾನ್ ಅವರು 55 ರನ್‌ಗಳಾಗುವಷ್ಟರಲ್ಲಿ ಪೆವಿಲಿಯನ್ ಸೇರಿದರು.  ಈ ಹಂತದಲ್ಲಿ ಜೊತೆಗೂಡಿದ ರೆಹಮತ್ ಮತ್ತು ಶಹೀದಿ ಅವರು ಅರ್ಧಶತಕಗಳನ್ನು ಗಳಿಸಿದರು. ತಂಡದ ಜಯದ ಹಾದಿಯನ್ನು ಸುಗಮಗೊಳಿಸಿದರು.

ಇಡೀ ಪಂದ್ಯದಲ್ಲಿ ಒಂದೂ ಸಿಕ್ಸರ್ ಸಿಡಿಯಲಿಲ್ಲ. ಒಟ್ಟು 40 ಬೌಂಡರಿಗಳು ದಾಖಲಾದವು.

ಸಂಕ್ಷಿಪ್ತ ಸ್ಕೋರು

ನೆದರ್ಲೆಂಡ್ಸ್: 46.3 ಓವರ್‌ಗಳಲ್ಲಿ 179 (ಮ್ಯಾಕ್ಸ್‌ ಒಡೌಡ್ 42, ಎಕರ್ಮನ್ 29, ಸೈಬ್ರ್ಯಾಂಡ್ ಇಂಗ್ಲೆಬ್ರಾಚ್ಟ್ 58, ಮೊಹಮ್ಮದ್ ನಬಿ 28ಕ್ಕೆ3, ನೂರ್ ಅಹಮದ್ 31ಕ್ಕೆ2)

ಅಫ್ಗಾನಿಸ್ತಾನ: 31.3 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 181 (ಇಬ್ರಾಹಿಂ ಜದ್ರಾನ್ 20, ರೆಹಮತ್ ಶಾ 52, ಹಷ್ಮತ್‌ವುಲ್ಲಾ ಶಹೀದಿ ಔಟಾಗದೆ 56, ಅಜ್ಮತ್‌ವುಲ್ಲಾ ಒಮರ್‌ಝೈ ಔಟಾಗದೆ 31, ಲೋಗನ್ ವ್ಯಾನ್ ಬೀಕ್ 35ಕ್ಕೆ1)

ಫಲಿತಾಂಶ: ಅಫ್ಗಾನಿಸ್ತಾನ ತಂಡಕ್ಕೆ 7 ವಿಕೆಟ್‌ಗಳ ಜಯ. 

ಪಂದ್ಯಶ್ರೇಷ್ಠ: ಮೊಹಮ್ಮದ್ ನಬಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT