ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಟಿ20 ವಿಶ್ವಕಪ್ | ವಿಂಡೀಸ್‌ಗೆ ಕ್ರಿಕೆಟ್ ಅಂಗಳದ ‘ಪಾಪು’ ಸವಾಲು

ಗಯಾನಾದಲ್ಲಿ ಬಲಾಢ್ಯ ಕೆರಿಬಿಯನ್ನರು ಕಣಕ್ಕಿಳಿಯಲಿರುವ ಪಾಪುವಾ ನ್ಯೂಗಿನಿ
Published 1 ಜೂನ್ 2024, 23:30 IST
Last Updated 1 ಜೂನ್ 2024, 23:30 IST
ಅಕ್ಷರ ಗಾತ್ರ

ಜಾರ್ಜ್‌ಟೌನ್, ಗಯಾನ: ಚುಟುಕು ಮಾದರಿಯಲ್ಲಿ ಎರಡು ಬಾರಿ ವಿಶ್ವಕಪ್ ಗೆದ್ದಿರುವ ವೆಸ್ಟ್ ಇಂಡೀಸ್ ತಂಡವು ಭಾನುವಾರ ಪಾಪುವಾ ನ್ಯೂಗಿನಿ ಎದುರು ಕಣಕ್ಕಿಳಿಯಲಿದೆ. 

2012 ಮತ್ತು 2016ರಲ್ಲಿ ವಿಂಡೀಸ್ ವಿಶ್ವಕಪ್ ಗೆದ್ದಿತ್ತು.  ಎಂಟು ವರ್ಷಗಳ ಹಿಂದೆ ಕೋಲ್ಕತ್ತದ ಈಡನ್ ಗಾರ್ಡನ್‌ನಲ್ಲಿ ನಡೆದಿದ್ದ ವಿಶ್ವಕಪ್ ಫೈನಲ್‌ನಲ್ಲಿ ಕೊನೆಯ ಓವರ್‌ನಲ್ಲಿ ಕಾರ್ಲೋಸ್ ಬ್ರಾಥ್‌ವೇಟ್ ನಾಲ್ಕು ಸಿಕ್ಸರ್‌ ಹೊಡೆದು ತಂಡಕ್ಕೆ ಗೆಲುವಿನ ಕಾಣಿಕೆ ನೀಡಿದ್ದರು. 

ಆ  ಸಂಭ್ರಮದ ನಂತರ ವಿಂಡೀಸ್ ತಂಡವು ಮತ್ತೆ ಪ್ರಶಸ್ತಿ ಜಯಿಸಿಲ್ಲ. ಆಗ ತಂಡದ ನಾಯಕರಾಗಿದ್ದ ಡರೆನ್ ಸ್ಯಾಮಿ ಈಗ ಕೋಚ್ ಆಗಿದ್ದಾರೆ. ರೋವ್ಮನ್ ಪೊವೆಲ್ ನಾಯಕತ್ವ ವಹಿಸಿದ್ದಾರೆ. ಐಪಿಎಲ್‌ನಲ್ಲಿ ಮಿಂಚಿ ಬಂದಿರುವ ನಿಕೊಲಸ್ ಪೂರನ್, ಆ್ಯಂಡ್ರೆ ರಸೆಲ್, ಶಿಮ್ರಾನ್ ಹೆಟ್ಮೆಯರ್ ಹಾಗೂ ರೊಮೆರಿಯೊ ಶೆಫರ್ಡ್ ಅವರು ತಮ್ಮ ದೇಶಕ್ಕೆ ಮತ್ತೆ ಟಿ20 ಕಿರೀಟ ತೊಡಿಸುವ ಉತ್ಸಾಹದಲ್ಲಿದ್ದಾರೆ. 

ಆದರೆ, ತಂಡವು ಕಳೆದ ಎರಡು ಟೂರ್ನಿಗಳಲ್ಲಿ ಮಾಡಿದ್ದ ಲೊಪಗಳನ್ನೂ ತಿದ್ದಿಕೊಳ್ಳಬೇಕಿದೆ. 2021ರ ಟೂರ್ನಿಯಲ್ಲಿ ಸೂಪರ್ 12 ಹಂತದಲ್ಲಿ ಪರಾಭವಗೊಂಡಿತ್ತು. 2022ರಲ್ಲಿ ಮುಖ್ಯಸುತ್ತಿಗೆ ಕ್ವಾಲಿಫೈ ಆಗಲಿಲ್ಲ. ಕ್ರಿಕೆಟ್ ಲೋಕದ ಉದಯೋನ್ಮುಖ ತಂಡಗಳಾದ ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ತಂಡಗಳ ಎದುರು ಆಘಾತ ಎದುರಿಸಿತ್ತು.

ವಿಂಡೀಸ್ ಸಾಮರ್ಥ್ಯಕ್ಕೆ ಹೋಲಿಸಿದರೆ ಪಾಪುವಾ ನ್ಯೂಗಿನಿ ಏನೇನೂ ಅಲ್ಲ. ಅನುಭವವೂ ಕಡಿಮೆ.  ಈ ತಂಡಕ್ಕೆ ಇದು ಎರಡನೇ ವಿಶ್ವಕಪ್ ಟೂರ್ನಿಯಾಗಿದೆ. 2021ರಲ್ಲಿ ಆಡಿತ್ತು. ಆಗ ತಂಡದಲ್ಲಿದ್ದ ಅಸಾದುಲ್ಲಾ ವಾಲಾ ಈಗ ನಾಯಕರಾಗಿದ್ಧಾರೆ. 

15 ಆಟಗಾರರ ತಂಡದಲ್ಲಿ ಲೆಗ್‌ಸ್ಪಿನ್ ಆಲ್‌ರೌಂಡರ್ ಸಿ.ಜೆ. ಅಮಿನಿ, ಎಡಗೈ ಬೌಲರ್ ಸೆಮಾ ಕಾಮಿಯಾ, ಕಬುವಾ ವಾಗಿ ಮೊರಿಯಾ ಇದ್ದಾರೆ. ಸೆಮಾ ಮತ್ತು ಮೊರಿಯಾ ಅವರಿಬ್ಬರೂ ಕ್ವಾಲಿಫೈಯರ್ ಪಂದ್ಯದಲ್ಲಿ ಫಿಲಿಪಿನ್ಸ್‌ ವಿರುದ್ಧ ಹ್ಯಾಟ್ರಿಕ್ ಸಾಧನೆ ಮಾಡಿದ್ದರು. 

ತಂಡಗಳು: 

ವೆಸ್ಟ್‌ ಇಂಡೀಸ್: ರೋವ್ಮನ್ ಪೊವೆಲ್ (ನಾಯಕ), ಅಲ್ಝರಿ ಜೋಸೆಫ್ (ಉಪನಾಯಕ), ಜಾನ್ಸನ್ ಚಾರ್ಲ್ಸ್, ರಾಸ್ಟನ್ ಚೇಸ್, ಶಿಮ್ರಾನ್ ಹೆಟ್ಮೆಯರ್, ಶಾಯ್ ಹೋಪ್, ಅಕೀಲ್ ಹುಸೇನ್, ಶಾಮರ್ ಜೋಸೆಫ್, ಬ್ರೆಂಡನ್ ಕಿಂಗ್, ಒಬೆದ್ ಮೆಕಾಯ್, ಗುಡಕೇಶ್ ಮೋತಿ, ನಿಕೊಲಸ್ ಪೂರನ್, ಆ್ಯಂಡ್ರೆ ರಸೆಲ್, ಶೆರ್ಫೆನ್ ರುದರ್‌ಫೋರ್ಡ್, ರೊಮೆರಿಯೊ ಜೋಸೆಫ್. 

ಪಾಪುವಾ ನ್ಯೂಗಿನಿ: ಅಸಾದುಲ್ಲಾ ವಾಲಾ (ನಾಯಕ), ಅಲೀ ನಾವೊ, ಚಾದ್ ಸೋಫರ್, ಸಿಜೆ ಅಮಿನಿ, ಹಿಲಾ ವೇರ್, ಹಿರಿ ಹಿರಿ, ಜ್ಯಾಕ್ ಗಾರ್ಡನರ್, ಜಾನ್ ಕಾರಿಕೊ, ಕಬುವಾ ವಾಗಿ ಮೊರಿಯೆ, ಕಿಪ್ಲಿಂಗ್ ಡೊರಿಗಾ, ಲೆಗಾ ಸಿಯಾಕಾ, ನಾರ್ಮನ್ ವೆನುವಾ, ಸೆಮಾ ಕೆಮಿಯಾ, ಸೆಸೆ ಬಾವು. ಟೋನಿ ಉರಾ. 

ಪಂದ್ಯ ಆರಂಭ: ರಾತ್ರಿ 8 (ಭಾರತೀಯ ಕಾಲಮಾನ)

ನೇರಪ್ರಸಾರ

ವೆಸ್ಟ್ ಇಂಡೀಸ್ ನಾಯಕ ರೋವ್ಮನ್ ಪೊವೆಲ್ 
ವೆಸ್ಟ್ ಇಂಡೀಸ್ ನಾಯಕ ರೋವ್ಮನ್ ಪೊವೆಲ್ 

ಅಚ್ಚರಿ ಮೂಡಿಸಿದ 10 ಫಲಿತಾಂಶಗಳು....

ಚುಟುಕು ವಿಶ್ವಕಪ್ ಇದುವರೆಗೆ ಅನೇಕ ಅಚ್ಚರಿಯ ಫಲಿತಾಂಶಗಳಿಗೆ ಸಾಕ್ಷಿಯಾಗಿದೆ. ನೆಚ್ಚಿನ ತಂಡಗಳು ಮೊದಲ ಬಾರಿ ಆಡಿದ ತಂಡಗಳಿಗೆ ತಲೆಬಾಗಿದ ನಿದರ್ಶನಗಳು ಇವೆ. ಯಾವುದೇ ತಂಡವನ್ನು ಲಘುವಾಗಿ ತೆಗೆದುಕೊಳ್ಳುವಂತಿಲ್ಲ ಎಂಬ ಸಂದೇಶ ಸಾರಿವೆ. ಇಲ್ಲಿ ಅಂಥ ಹತ್ತು ಫಲಿತಾಂಶಗಳನ್ನು ನೀಡಲಾಗಿದೆ

2007 (ಜೊಹಾನೆಸ್‌ಬರ್ಗ್): ಮೊದಲ ವಿಶ್ವಕಪ್‌ನ ಗುಂಪು ಹಂತದ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬೇರೂರುವ ಹಂತದಲ್ಲಿದ್ದ ಬಾಂಗ್ಲಾದೇಶ ತಂಡಕ್ಕೆ 2 ಓವರುಗಳಿರುವಂತೆ ಆರು ವಿಕೆಟ್‌ಗಳಿಂದ ಸೋತಿತ್ತು. ಕ್ರಿಸ್‌ ಗೇಲ್‌, ಚಂದ್ರಪಾಲ್, ಮರ್ಲಾನ್ ಸ್ಯಾಮುಯೆಲ್ಸ್‌, ಡ್ವೇನ್‌ ಬ್ರೇವೊ ಅವರಿದ್ದ ವಿಂಡೀಸ್‌ ಪ್ರಬಲವಾಗಿತ್ತು.

2007: ಕೇಪ್‌ಟೌನ್‌ನಲ್ಲಿ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ಜಿಂಬಾಬ್ವೆ ಐದು ವಿಕೆಟ್‌ಗಳಿಂದ ಏಕದಿನ ಚಾಂಪಿಯನ್‌ ಆಗಿದ್ದ ಆಸ್ಟ್ರೇಲಿಯಾವನ್ನು ಬಗ್ಗುಬಡಿದಿತ್ತು. ಎಲ್ಟನ್ ಚಿಗುಂಬರ (20ಕ್ಕೆ3) ಮತ್ತು ಬ್ರೆಂಡನ್‌ ಟೇಲರ್ (ಅಜೇಯ 60) ಅವರ ಆಟ ಇದಕ್ಕೆ ಕಾರಣವಾಯಿತು.

2009: ನೆದರ್ಲೆಂಡ್ಸ್‌ ತಂಡ ಲಾರ್ಡ್ಸ್‌ನಲ್ಲಿ ಉದ್ಘಾಟನಾ ಪಂದ್ಯದಲ್ಲೇ ಆತಿಥೇಯ ಇಂಗ್ಲೆಂಡ್‌ ತಂಡಕ್ಕೆ ನಾಲ್ಕು ವಿಕೆಟ್‌ಗಳಿಂದ ಸೋಲಿನ ಆಘಾತ ನೀಡಿತು. ರೋಚಕವಾಗಿದ್ದ ಈ ಪಂದ್ಯದಲ್ಲಿ ಇಂಗ್ಲೆಂಡ್‌ 20 ಓವರುಗಳಲ್ಲಿ 5 ವಿಕೆಟ್‌ಗೆ 162 ರನ್ ಹೊಡೆಯಿತು. ನೆದರ್ಲೆಂಡ್ಸ್‌ ಯಾರೂ ನಿರೀಕ್ಷಿಸಿರದ ರೀತಿ ಕೊನೆಯ ಎಸೆತದಲ್ಲಿ ವಿಜಯದ ರನ್‌ ಗಳಿಸಿತು. (20 ಓವರುಗಳಲ್ಲಿ 6 ವಿಕೆಟ್‌ಗೆ 163)

2009: ಐರ್ಲೆಂಡ್‌ ತಂಡ ನಾಟಿಂಗಮ್‌ನಲ್ಲಿ ನಡೆದ ಗುಂಪು ಹಂತದ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು 10 ಎಸೆತಗಳಿರುವಂತೆ 6 ವಿಕೆಟ್‌ಗಳಿಂದ ಸೋಲಿಸಿತ್ತು.

2014: ಎರಡನೇ ಬಾರಿ ಚುಟುಕು ವಿಶ್ವಕಪ್‌ನಲ್ಲಿ ನೆದರ್ಲೆಂಡ್ಸ್ ತಂಡ, ಇಂಗ್ಲೆಂಡ್ ತಂಡವನ್ನು (ಈ ಸಲ 45 ರನ್‌ಗಳಿಂದ) ಸೋಲಿಸಿತು. ಪಾಕಿಸ್ತಾನ ಮೂಲದ ಡಚ್‌ ಆಟಗಾರ ಮುದಾಸಿರ್ ಬುಖಾರಿ (12ಕ್ಕೆ3) ಪಂದ್ಯದ ಆಟಗಾರನಾದರು.

2014: ಸಹಸದಸ್ಯ ರಾಷ್ಟ್ರವಾಗಿದ್ದ ಹಾಂಗ್‌ಕಾಂಗ್‌ ಚಿತ್ತಗಾಂಗ್‌ನಲ್ಲಿ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ ಆತಿಥೇಯ ಬಾಂಗ್ಲಾದೇಶ ತಂಡವನ್ನು ಎರಡು ವಿಕೆಟ್‌ಗಳಿಂದ ಮಣಿಸಿ ದೊಡ್ಡ ಅಚ್ಚರಿ ಮೂಡಿಸಿತ್ತು.

2016: ನಾಗ್ಪುರದಲ್ಲಿ ನಡೆದ ಸೂಪರ್‌ ಟೆನ್‌ ಹಂತದ ಪಂದ್ಯದಲ್ಲಿ ಅಫ್ಗಾನಿಸ್ತಾನ ತಂಡ ಆರು ರನ್‌ಗಳಿಂದ ವೆಸ್ಟ್‌ ಇಂಡೀಸ್ ತಂಡವನ್ನು ಮಣಿಸಿತು. ಪಂದ್ಯದ ಆಟಗಾರ ನಜೀಬುಲ್ಲಾ ಜದ್ರಾನ್‌ 48 ರನ್ ಗಳಿಸಿದರೆ, ಬೌಲಿಂಗ್‌ನಲ್ಲಿ ಮೊಹಮ್ಮದ್ ನಬಿ ಮತ್ತು ರಶೀದ್‌ ಖಾನ್ ತಲಾ ಎರಡು ವಿಕೆಟ್‌ ಪಡೆದರು. ಆದರೆ ಈ ವಿಶ್ವಕಪ್‌ನಲ್ಲಿ ಚಾಂಪಿಯನ್ ಆಗಿದ್ದು ಕೊನೆಗೆ ಇದೇ ವೆಸ್ಟ್‌ ಇಂಡೀಸ್‌ ತಂಡ!

2016: ಧರ್ಮಶಾಲಾದಲ್ಲಿ ನಡೆದ ಗುಂಪು ಹಂತದ ಪಂದ್ಯದಲ್ಲಿ ಮೊದಲ ಬಾರಿ ಆಡಿದ ಒಮಾನ್ ತನಗಿಂತ ಅನುಭವಿ ಐರ್ಲೆಂಡ್ ತಂಡವನ್ನು ಎರಡು ಎಸೆತಗಳಿರುವಂತೆ ಎರಡು ವಿಕೆಟ್‌ಗಳಿಂದ ಸೋಲಿಸಿತ್ತು.

2021: ದುಬೈನಲ್ಲಿ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ಸ್ಕಾಟ್ಲೆಂಡ್‌ ಯಾರೂ ನಿರೀಕ್ಷಿಸಿರದ ರೀತಿ ಆರು ರನ್‌ಗಳಿಂದ ಪ್ರಬಲ ಬಾಂಗ್ಲಾದೇಶ ತಂಡವನ್ನು ಸೋಲಿಸಿತು.

2022: ಆಸ್ಟ್ರೇಲಿಯಾದ ಗಿಲಾಂಗ್‌ನಲ್ಲಿ ನಡೆದ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ನಮೀಬಿಯಾ ತಂಡ 55 ರನ್‌ಗಳ ದೊಡ್ಡ ಅಂತರದಿಂದ ಶ್ರೀಲಂಕಾ ತಂಡವನ್ನು ಸೋಲಿಸಿದ್ದು ಕ್ರಿಕೆಟ್‌ ಪ್ರಿಯರ ಗಮನ ಸೆಳೆದಿತ್ತು. ಗೆಲುವಿಗೆ 164 ರನ್ ಗಳಿಸಬೇಕಾಗಿದ್ದ ಲಂಕಾ 108 ರನ್ನಿಗೆ ಕುಸಿಯಿತು. ನಮೀಬಿಯಾ ಬೌಲರ್‌ಗಳ ಸಾಂಘಿಕ ಪ್ರಯತ್ನ ಇದಕ್ಕೆ ಕಾರಣವಾಯಿತು.

(ಮಾಹಿತಿ: ಕ್ರಿಕೆಟ್‌ ವೆಬ್‌ಸೈಟ್‌ಗಳಿಂದ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT