ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿಷೇಕ್‌, ದೀಪಪಾಲಾಗೆ ಚಿನ್ನ

ಫೆಡರೇಷನ್‌ ಕಪ್‌ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌
Last Updated 2 ಮೇ 2015, 19:30 IST
ಅಕ್ಷರ ಗಾತ್ರ

ಮಂಗಳೂರು:  ಗಮನಾರ್ಹ ಸಾಮರ್ಥ್ಯ ನೀಡಿದ ಕರ್ನಾಟಕದ ಅಭಿಷೇಕ್‌ ಶೆಟ್ಟಿ ಮತ್ತು ದೀಪಮಾಲಾ ದೇವಿ  19ನೇ ರಾಷ್ಟ್ರೀಯ ಫೆಡರೇಷನ್‌ ಕಪ್‌ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನ ಎರಡನೇ ದಿನ ಬಂಗಾರದ ಸಾಧನೆ ತೋರಿದರು. ಎರಡನೇ ದಿನವಾದ ಶನಿವಾರ ಕರ್ನಾಟಕ ಎರಡು ಚಿನ್ನ ಸೇರಿದಂತೆ ಒಟ್ಟು ನಾಲ್ಕು ಪದಕಗಳನ್ನು ಜಯಿಸಿತು.

ಮಂಗಳಾ ಕ್ರೀಡಾಂಗಣದಲ್ಲಿ ನಡೆದ ಡೆಕಾಥ್ಲಾನ್‌ ಸ್ಪರ್ಧೆಯಲ್ಲಿ ಕರ್ನಾಟಕದ ಅಭಿಷೇಕ್‌ ಶೆಟ್ಟಿ ಚಿನ್ನದ ಪದಕ ಗೆದ್ದರೆ, ನಗರದ ಹೊರವಲಯದ ತಣ್ಣೀರುಬಾವಿ ಪ್ರದೇಶದಲ್ಲಿ ಬೆಳಿಗ್ಗೆ ನಡೆದ 20 ಕಿ.ಮೀ. ನಡಿಗೆ ಸ್ಪರ್ಧೆಯಲ್ಲಿ ಕರ್ನಾಟಕದ ದೀಪಮಾಲಾ  ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಮಹಿಳೆಯರ 400 ಮೀ ಹರ್ಡಲ್ಸ್‌ ನಲ್ಲಿ ಅರ್ಪಿತಾ ಎಂ. ಬೆಳ್ಳಿ ಪದಕ, ಮಹಿಳೆಯರ 100 ಮೀ ಓಟದಲ್ಲಿ ಎಂ.ಜಿ.ಪದ್ಮಿನಿ ಕಂಚಿನ ಪದಕ ತಮ್ಮದಾಗಿಸಿಕೊಂಡರು.

ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆದ್ದ ದಕ್ಷಿಣ ಕನ್ನಡ ಜಿಲ್ಲೆಯ ಅಭಿಷೇಕ್‌ ಶೆಟ್ಟಿ ಅವರು ಡೆಕಾಥ್ಲಾನ್‌ ಸ್ಪರ್ಧೆಯಲ್ಲಿ 6,630 ಅಂಕ ಗಳಿಸಿ ಈ ಸಾಧನೆ ಮಾಡಿದರು. 20 ಕಿ.ಮೀ. ನಡಿಗೆ ಸ್ಪರ್ಧೆಯಲ್ಲಿ ದೀಪಮಾಲಾ 1.44.29.00 ನಿಮಿಷದಲ್ಲಿ  ಗುರಿ ತಲುಪಿದರು. ಮಹಿಳೆಯರ 400 ಮೀ ಹರ್ಡಲ್ಸ್‌ನಲ್ಲಿ ಕರ್ನಾಟಕದ ಅರ್ಪಿತಾ ಎಂ. ಸ್ವಲ್ಪದರಲ್ಲಿ ಚಿನ್ನ ಕಳೆದುಕೊಂಡರು. ಕೇರಳ ರಾಜ್ಯದ ಅನು ಆರ್‌ ಜತೆ ತೀವ್ರ ಪೈಪೋಟಿ ನಡೆಸಿದ ಅರ್ಪಿತಾ (1:00.79ಸೆ.) ಗುರಿ ತಲುಪಿ ಬೆಳ್ಳಿ ಪದಕ ಗೆದ್ದರು.

ಕುತೂಹಲಕ್ಕೆ ಕಾರಣವಾಗಿದ್ದ ಮಹಿಳೆಯ 100 ಮೀಟರ್‌ ಓಟದಲ್ಲಿ ಕೊಡಗಿನ ಪದ್ಮನಿ ಎಂ.ಜಿ. ಅವರು (11.89ಸೆ)ನಲ್ಲಿ ಪೂರ್ಣಗೊಳಿಸಿ ಒಡಿಶಾ ಓಟಗಾರ್ತಿಯರಿಗೆ ತೀವ್ರ ಪೈಪೋಟಿ ನೀಡಿದರು. ಕೊನೆ ಕ್ಷಣದಲ್ಲಿ ಇಬ್ಬರು ಒಡಿಶಾ  ಓಟಗಾರ್ತಿಯರು ಮೇಲುಗೈ ಸಾಧಿಸಿ ಚಿನ್ನ, ಬೆಳ್ಳಿ ಪದಕ ಗೆದ್ದರೆ, ಪದ್ಮಿನಿ ಕಂಚು ಪದಕಕ್ಕೆ ತೃಪ್ತಿಪಟ್ಟುಕೊಂಡರು.

ಎರಡು ಕೂಟ ದಾಖಲೆ: ಹೆಚ್ಚಿನ ತೇವಾಂಶ ಇರುವುದರಿಂದ ಟ್ರ್ಯಾಕ್‌ ಸ್ಪರ್ಧೆಗಳಲ್ಲಿ ಯಾವುದೇ ದಾಖಲೆಗಳು ಮೂಡಿ ಬರಲು ಸಾಧ್ಯವಾಗಲಿಲ್ಲ. ಆದರೆ, ಮೈದಾನದಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಎರಡು ಕೂಟ ದಾಖಲೆಗಳು ದಾಖಲಾದವು.  ಪುರುಷರ ಶಾಟ್‌ಪಟ್‌ನಲ್ಲಿ ಹರಿಯಾಣದ ಇಂದ್ರಜಿತ್‌ಸಿಂಗ್‌ ಅವರು 20.65 ಮೀ ಎಸೆದು ಹೊಸ ಕೂಟ ದಾಖಲೆ ಸ್ಥಾಪಿಸಿದರು.

ಇವರು ತಮ್ಮ ಹೆಸರಿನಲ್ಲಿಯೇ ಇದ್ದ 19.89ಮೀ ಕೂಟ ದಾಖಲೆಯನ್ನು ಅಳಿಸಿ ಹಾಕಿದರು. ಪುರುಷರ ಜಾವೆಲಿನ್‌ ಎಸೆತ ಸ್ಪರ್ಧೆಯಲ್ಲಿ ಆರ್ಮಿಯ ದೇವೇಂದ್ರಸಿಂಗ್‌ ಅವರು 79.65 ಮೀ ಎಸೆದು ಹೊಸ ಕೂಟ ದಾಖಲೆ ಮಾಡಿದರು. ಹರಿಯಾಣದ ಎಂ.ಆರ್‌.ರಾಜೇಂದ್ರ ಸಿಂಗ್‌ ಅವರು 2014 ಫೆಡರೇಷನ್ ಕಪ್‌ನಲ್ಲಿ ಮಾಡಿದ್ದ ದಾಖಲೆಯನ್ನು ದೇವೇಂದ್ರ ಸಿಂಗ್‌ ಮುರಿದರು.

ಕರ್ನಾಟಕಕ್ಕೆ ನಿರಾಸೆ: ಮಹಿಳೆಯರ ಶಾಟ್‌ಪಟ್‌ ಸ್ಪರ್ಧೆಯಲ್ಲಿ ಕರ್ನಾಟಕದ ಉಮಾ ಪಿ.ಎಸ್‌. 13.04 ಮೀ ಎಸೆದು ಪ್ರಥಮ ಸ್ಥಾನಗಳಿಸಿದರು. ಇಬ್ಬರೇ ಸ್ಪರ್ಧಿಗಳು ಇದ್ದಿದ್ದರಿಂದ ಕೇವಲ ಏಷ್ಯನ್‌ ಅರ್ಹತೆಗಾಗಿ ಸ್ಪರ್ಧೆ ನಡೆಸಲಾಯಿತು. ಪುರುಷರ ಉದ್ದ ಜಿಗಿತದಲ್ಲಿ ಕರ್ನಾಟಕದ ಶಮ್‌ಶೀರ್‌ ಎಸ್‌.ಇ. ಅವರು 7.35ಮೀ ಜಿಗಿದು ಐದನೇ ಸ್ಥಾನ ಪಡೆದರು.

ಪುರುಷರ 400 ಮೀ ಹರ್ಡಲ್ಸ್‌ ಸ್ಪರ್ಧಿಯಲ್ಲಿ ಕರ್ನಾಟಕದ ಜಗದೀಶ ಚಂದ್ರ ಅವರು ಓಟ ಆರಂಭವಾದ ಕೆಲವೇ ಸೆಕೆಂಡ್‌ಗಳಲ್ಲಿ ಸ್ನಾಯು ಸೆಳೆತಕ್ಕೆ ಒಳಗಾಗಿ ಸ್ಪರ್ಧೆಯಿಂದ ಹಿಂದೆ ಸರಿದರು. ಪುರುಷರ ಜಾವೆಲಿನ್‌ ಎಸೆತದಲ್ಲಿ ಕರ್ನಾಟಕದ ಕಾಶಿನಾಥ್‌ ನಾಯ್ಕ್ ಅವರು 67.24 ಮೀಟರ್‌ ಎಸೆದು ಆರನೇ ಸ್ಥಾನ ಪಡೆದರು. ಮಹಿಳೆಯರ 100 ಮೀ ಓಟ ಸ್ಪರ್ಧೆಯಲ್ಲಿ ಫೈನಲ್‌ ತಲುಪಿದ್ದ ಇನ್ನೊಬ್ಬ ಸ್ಪರ್ಧಿ ಪ್ರಿಯಂಕಾ ಕಾಲಾ ಅವರು 12.30ಸೆಕೆಂಡ್‌ನಲ್ಲಿ ಓಡಿ ಏಳನೇ ಸ್ಥಾನ ಪಡೆದರು.

ಕೇರಳ,ಓಡಿಶಾಗೆ ಎರಡು ಚಿನ್ನ:   ಮಹಿಳೆಯರ 400 ಮೀ ಹರ್ಡಲ್ಸ್‌ನಲ್ಲಿ ಕೇರಳದ ಅನು ಆರ್‌. 59.13 ಸೆ. ಪೂರ್ಣಗೊಳಿಸಿ ಚಿನ್ನದ ಪದಕ ಪಡೆದರೆ, ಮಹಿಳೆಯರ 800ಮೀಟರ್ ಓಟದಲ್ಲಿ ಪಿ.ಟಿ.ಉಷಾ ಅಥ್ಲೆಟಿಕ್‌ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿರುವ ಟಿಂಟು ಲುಕಾ 2.4 ನಿಮಿಷದಲ್ಲಿ ಪೂರ್ಣಗೊಳಿಸಿ ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಪುರುಷ ಹಾಗೂ ಮಹಿಳೆಯರ 100 ಮೀಟರ್‌ ಓಟದಲ್ಲಿ ಓಡಿಶಾ ಚಿನ್ನದ ಪದಕ ಗಳಿಸಿತು.

ಪುರುಷ ವಿಭಾಗದಲ್ಲಿ ಓಡಿಶಾದ ಅಮಿಯಾ ಕುಮಾರ್‌ 10.56 ಸೆ.ಓಡಿ ಚಿನ್ನದ ಪದಕ ಗಳಿಸಿದರೆ, ಮಹಿಳೆಯರ ವಿಭಾಗದಲ್ಲಿ ಶ್ರಬಾನಿ ನಂದಾ 11.59 ಸೆ. ಓಡಿ ಚಿನ್ನಕ್ಕೆ ಕೊರಳೊಡ್ಡಿದರು. ಯೂತ್‌ ಓಲಿಂಪಿಕ್‌ನಲ್ಲಿ ಬೆಳ್ಳಿ ಪದಕ ವಿಜೇತ ಸೇನಾ ತಂಡದ ದುರ್ಗೇಶ್‌ ಕುಮಾರ್‌ ಅವರು ಪುರುಷರ 400 ಮೀ ಹರ್ಡಲ್ಸ್‌ನಲ್ಲಿ 50.20 ಸೆ. ಓಡಿ ಚಿನ್ನದ ಪದಕ ಪಡೆದರು.

ಎರಡನೇ ದಿನದ ಫಲಿತಾಂಶ: ಪುರುಷ 100 ಮೀ ಓಟ:  ಅಮಿಯಾ ಕುಮಾರ (10.56ಸೆ. ಒಡಿಶಾ )–1, ಜ್ಯೋತಿ ಶಂಕರ್ (10.56ಸೆ. ಸೇನಾ ತಂಡ)–2, ಕೃಷ್ಣ ಪುಮಾರ್‌ (10.58ಸೆ. ಮಹಾರಾಷ್ಟ್ರ)–3, ಮಹಿಳೆಯರ 100 ಮೀ ಓಟ ಶ್ರಬಾನಿ ನಂದಾ (11.59ಸೆ. ಒಡಿಶಾ )–1, ದ್ಯುತಿ ಚಾಂದ್‌( 11.86ಸೆ. ಒಡಿಶಾ), ಎಂ.ಜಿ.ಪದ್ಮನಿ (11.89ಸೆ. ಕರ್ನಾಟಕ)–3, ಪುರುಷರ 400 ಮೀ ಹರ್ಡಲ್ಸ್‌: ದುರ್ಗೇಶ್ ಕುಮಾರ (50.29 ಸೆ. ಸೇನಾ ತಂಡ)–1, ರಾಮ ಚಂದ್ರನ್‌ (50.35ಸೆ. ಸೇನಾತಂಡ)–2, ಎ.ಧರುನ್‌ (51.14 ಸೆ– ತಮಿಳುನಾಡು)–3, 

ಮಹಿಳೆಯರ 400 ಮೀ ಹರ್ಡಲ್ಸ್‌: ಅನು ಆರ್‌. (59.13 ಸೆ. ಕೇರಳ)–1, ಅರ್ಪಿತಾ (1:00.79 ನಿ. ಕರ್ನಾಟಕ)–2, ಎಂ.ಲೋಗನಾಯಕಿ (1:2.99 ನಿ. ತಮಿಳುನಾಡು)–3,

ಮಹಿಳೆಯರ 20 ಕಿ.ಮೀ. ನಡಿಗೆ : ದೀಪಮಾಲಾ ದೇವಿ (1:44.29.00 ಗಂ. ಕರ್ನಾಟಕ)–1, ಸಂದೀಪ ಕೌರ್‌ (1.48.03.00 ಗಂ. ಪಂಜಾಬ್‌)–2, ಪ್ರಿಯಾಂಕಾ (1.52.27.00 ಉತ್ತರ ಪ್ರದೇಶ)–3, ಪುರುಷರ ಡೆಕಾಥ್ಲಾನ್‌: ಅಭಿಷೇಕ್‌ ಶೆಟ್ಟಿ (6,630 ಅಂಕ ಕರ್ನಾಟಕ)–1, ರಾಣೀಶ್‌ ವಿ.ವಿ. (6,391 ಅಂಕ ಗುಜರಾತ್‌)–2, ಸುರೇನ್‌ ಆರ್‌. (6,264 ಅಂಕ, ಇಂಡಿಯನ್‌ ಬ್ಯಾಂಕ್‌)–3, ಪುರುಷರ ಲಾಂಗ್‌ಜಂಪ್‌: ಅಂಕಿತ್‌ ಶರ್ಮಾ (7.99ಮೀ. ಹರಿಯಾಣ)–1, ಯುಗಾಂತ ಶೇಖರ್‌ (7.53 ಮೀ ಉತ್ತರ ಪ್ರದೇಶ)–2, ಎಂ. ಅರ್ಶದ್‌ (7.38 ವಾಯುಸೇನೆ)–3, ಪುರುಷರ ಜಾವೆಲಿನ್‌ ಎಸೆತ: ದೇವೇಂದ್ರ ಸಿಂಗ್‌ (79.65ಮೀ. ಸೇನಾತಂಡ)–1, ನೀರಜ್ ಚೋಪ್ರಾ( 73.96 ಮೀ ಹರಿಯಾಣ)–2, ರೋಹಿತ್‌ ಕುಮಾರ್‌ (72.72 ಮೀ. ದೆಹಲಿ)–3., ಪುರುಷರ ಶಾಟ್‌ಪಟ್‌: ಇಂದ್ರಜಿತ್‌ ಸಿಂಗ್‌ (20.65 ಮೀ ಹರಿಯಾಣ)–1, ತೇಜಿಂದರ್‌ ಸಿಂಗ್‌ (18.08 ಮೀ ಪಂಜಾಬ್‌)–2, ಓಂ ಪ್ರಕಾಶ್‌ ಸಿಂಗ್‌ (18.08 ಮೀ. ಓಎನ್‌ಜಿಸಿ)–3.
*
ಭಾನುವಾರದ ಫೈನಲ್‌ಗಳು
ಬೆಳಿಗ್ಗೆ 6: ಪುರುಷರ 20 ಕಿ.ಮೀ.ನಡಿಗೆ
ಸಂಜೆ 3.30:ಪುರುಷರ ಹ್ಯಾಮರ್‌ ಎಸೆತ
ಸಂಜೆ 4: ಪುರುಷರ ಪೋಲ್‌ವಾಲ್ಟ್‌
ಸಂಜೆ 4.30: ಪುರುಷರ ಹೈಜಂಪ್‌
ಸಂಜೆ 5: ಮಹಿಳೆಯರ ಟ್ರಿಪಲ್‌ ಜಂಪ್
ಸಂಜೆ 5: ಮಹಿಳೆರ ಹ್ಯಾಮರ್‌ ಎಸೆತ
ಸಂಜೆ 6.10:  ಮಹಿಳೆಯರ 3000 ಮೀ.
ಸಂಜೆ 6.30: ಪುರುಷರ 3000 ಮೀ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT