ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಗಿತದಲ್ಲಿ ಕರ್ನಾಟಕಕ್ಕೆ ಒಂದು ಚಿನ್ನ, ಮೂರು ಬೆಳ್ಳಿ

ಫೆಡರೇಷನ್‌ ಕಪ್‌ ಅಥ್ಲೆಟಿಕ್ಸ್‌ : ಹೈಜಂಪ್‌ನಲ್ಲಿ ರಾಜ್ಯದ ಪಾರಮ್ಯ
Last Updated 3 ಮೇ 2015, 19:30 IST
ಅಕ್ಷರ ಗಾತ್ರ

ಮಂಗಳೂರು: ಕರ್ನಾಟಕದ ಸ್ಪರ್ಧಿಗಳು ಇಲ್ಲಿ ನಡೆಯುತ್ತಿರುವ   ಫೆಡರೇಷನ್‌ ಕಪ್‌ ಅಥ್ಲೆಟಿಕ್ಸ್‌ನ  ಮೂರನೇ ದಿನ ಜಿಗಿತದ ಮೂರು ಸ್ಪರ್ಧೆಗಳಲ್ಲಿ ಒಂದು ಚಿನ್ನ, ಮೂರು ಬೆಳ್ಳಿ ಪದಕಗಳನ್ನು ಗೆದ್ದಿದ್ದಾರೆ. ಕರ್ನಾಟಕದ  ಹರ್ಷಿತ್‌ ಎಸ್‌ ಹಾಗೂ ಸುಪ್ರೀತ್‌ ಆರ್‌.ಎ.  ಪುರುಷರ ಹೈಜಂಪ್‌ ಸ್ಪರ್ಧೆಯಲ್ಲಿ ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಪದಕ ಗೆದ್ದರು.

ಚಿಕ್ಕಬಳ್ಳಾಪುರದ ಹರ್ಷಿತ್‌ 2.13 ಮೀಟರ್‌ ಎತ್ತರ ಜಿಗಿದರೆ, ದಕ್ಷಿಣ ಕನ್ನಡ ಜಿಲ್ಲೆಯ ಕೂಳೂರು ಸಮೀಪದ ಪಂಜಿಮೊಗರಿನ ಸುಪ್ರೀತ್‌  2.09 ಮೀಟರ್‌ ಎತ್ತರ ಜಿಗಿದು ಎರಡನೇ ಸ್ಥಾನ ಗಳಿಸಿದರು.ಪುರುಷರ ಪೋಲ್‌ವಾಲ್ಟ್‌ ಸ್ಪರ್ಧೆಯಲ್ಲಿ ಕರ್ನಾಟಕದ ಪಿ.ಬಾಲಕೃಷ್ಣ 4.80 ಮೀಟರ್‌ ಎತ್ತರ ಜಿಗಿದು ಬೆಳ್ಳಿ ಪದಕ ಪಡೆದರೆ,  ಮಹಿಳೆಯರ ಟ್ರಿಪಲ್‌ ಜಂಪ್‌ನಲ್ಲಿ ಮೂಡುಬಿದಿರೆಯ ಆಳ್ವಾಸ್‌ ಶಿಕ್ಷಣ ಸಂಸ್ಥೆಯ ಎಂ.ಜಾಯ್ಸನ್‌ 12.62 ಮೀಟರ್‌ ಜಿಗಿದು ಬೆಳ್ಳಿ ಪದಕ ಗೆದ್ದರು.

ಭಾನುವಾರ ಎಂಟು ಫೈನಲ್‌ ಸ್ಪರ್ಧೆಗಳು ನಡೆದಿದ್ದು, ಕರ್ನಾಟಕದ ಸ್ಪರ್ಧಿಗಳು ನಾಲ್ಕು ಸ್ಪರ್ಧೆಗಳಲ್ಲಿ ಮಾತ್ರ ಸ್ಪರ್ಧಿಸಿದ್ದರು.  ಆ ಎಲ್ಲ ಸ್ಪರ್ಧೆಗಳಲ್ಲಿ ಪದಕ ಗಳಿಸಿರುವುದು ವಿಶೇಷ.ನೋವಿನಲ್ಲಿಯೂ ಚಿನ್ನ: 2014ರಲ್ಲಿ ಕೇರಳದ ತಿರುವನಂತಪುರದಲ್ಲಿ ರಾಷ್ಟ್ರೀಯ ಕ್ರೀಡಾಕೂಟದಲ್ಲಿ 2.17 ಮೀಟರ್‌ ಎತ್ತರ ಜಿಗಿದು ಪದಕ ಪಡೆದಿದ್ದ ಹರ್ಷಿತ್‌, ಪ್ರಸ್ತುತ ಕ್ರೀಡಾಕೂಟದಲ್ಲಿ ಕಾಲು ನೋವಿನಿಂದ ಸ್ಪರ್ಧೆಯಲ್ಲಿ ಭಾಗ ವಹಿಸುವುದೇ ಅನುಮಾನವಾಗಿತ್ತು. ನೋವನ್ನು ಲೆಕ್ಕಿಸದೇ ಮೈದಾನಕ್ಕೆ ಇಳಿದ ಹರ್ಷಿತ್‌ ಚಿನ್ನದ ಪದಕ ಗೆದ್ದು ಸಂಭ್ರಮಿಸಿದರು.

ಮಂಗಳೂರಿನ ಅಲೋಶಿಯಸ್‌ ಕಾಲೇಜಿನಲ್ಲಿ ಪಿಯುಸಿ ಓದುತ್ತಿರುವ ಸುಪ್ರೀತ್‌, ಅಖಿಲ ಭಾರತ ವಿ.ವಿ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ 2.13 ಮೀಟರ್‌ ಎತ್ತರ ಜಿಗಿದು ಸಾಧನೆ ಮಾಡಿದ್ದರು. ರಾಷ್ಟ್ರೀಯ ಸೀನಿಯರ್‌ ಕ್ರೀಡಾಕೂಟದಲ್ಲಿ ಪ್ರಥಮ ಬಾರಿಗೆ ಭಾಗವಹಿಸಿ ಬೆಳ್ಳಿ ಪದಕ ಗೆದ್ದಿದ್ದರು.

ಫೈನಲ್‌ಗೆ ಪ್ರವೇಶ: ಪುರುಷರ 110 ಮೀ. ಹರ್ಡಲ್ಸ್‌ನಲ್ಲಿ ಕರ್ನಾಟಕ ಸಮರ್ಥ ಸದಾಶಿವ, ಮಹಿಳೆಯರ 200 ಮೀ ಓಟದಲ್ಲಿ  ಎಂ.ಜಿ.ಪದ್ಮಿನಿ,ಮಹಿಳೆಯರ 100ಮೀ ಹರ್ಡಲ್ಸ್‌ನಲ್ಲಿ ಮೇಘನಾ ಶೆಟ್ಟಿ, ಮಹಿಳೆಯರ 400 ಮೀ. ಓಟದಲ್ಲಿ ಅರ್ಪಿತಾ ಎಂ. ಓಎನ್‌ಜಿಸಿಯ ಪೂವಮ್ಮ, ಕೇರಳದ ಟಿಂಟು ಲುಕಾ ಫೈನಲ್‌ ಪ್ರವೇಶಿಸಿದ್ದರೆ, ಪುರುಷರ 4x400 ರಿಲೆಯಲ್ಲಿ ಕರ್ನಾಟಕ ತಂಡ ಫೈನಲ್‌ ಪ್ರವೇಶ ಪಡೆದಿದೆ. ಪುರುಷರ 200 ಮೀ ಓಟದಲ್ಲಿ ಕರ್ನಾಟಕದ ಮಣೀಶ್‌ ಎನ್‌., ಗಣೇಶ್‌ ಎಸ್‌, ರುಶಾಬ್‌ ಶಹಾ ಸೆಮಿಫೈನಲ್‌ ಪ್ರವೇಶಿಸಿದ್ದಾರೆ.

ಶಾಟ್‌ಪಟ್‌ನಲ್ಲಿ ಮತ್ತು ಜಾವಲಿನ್‌ ಎಸೆತದಲ್ಲಿ ಕೂಟ ದಾಖಲೆ ಮಾಡಿರುವ ಕ್ರಮವಾಗಿ ಇಂದ್ರಜಿತ್‌ ಸಿಂಗ್‌ ಮತ್ತು ದೇವೇಂದ್ರ ಸಿಂಗ್‌ ಅವರಿಗೆ ತಲಾ 25 ಸಾವಿರ ನಗದು ಬಹುಮಾನ ನೀಡುವುದಾಗಿ ಕೂಟದ ಸಂಘಟಕರು ಪ್ರಕಟಿಸಿದ್ದಾರೆ.

ಭಾನುವಾರದ ಫಲಿತಾಂಶ: ಪುರುಷರ ವಿಭಾಗ: 3000ಮೀ. ಓಟ: ಜೈವೀರ ಸಿಂಗ್‌ (8.48.56 ನಿ. ಸೇನೆ)–1, ನವೀನ್‌ ಕುಮಾರ್‌ (8:49.38 ನಿ. ಸೇನೆ)–2, ಎಸ್‌.ಬಾಜಿ ರಾವ್‌ (8:58.13 ನಿ. ಮಹಾರಾಷ್ಟ್ರ)–3.

20 ಕಿ.ಮೀ. ನಡಿಗೆ: ಮಣಿರಾಮ್‌ ಪಟೇಲ್ (1ಗಂಟೆ 29:51.00 ನಿ. ಗುಜರಾತ್‌)–1,ಕುಲದೀಪ (1ಗಂಟೆ 31:04.00 ಟಾಟಾ ಮೋಟರ್ಸ್‌) –2, ಅಂಕಿತ ಕುಮಾರ್ (1ಗಂಟೆ 31:13.00 ಭಾರತೀಯ ವಾಯುಪಡೆ)–3

ಹ್ಯಾಮರ್‌ ಥ್ರೋ: ನೀರಜ್‌ ಕುಮಾರ್ (64.53 ಮೀ.ಇಂಡಿಯನ್‌ ನೆವಿ)–1, ಎನ್‌.ಶಂಕರ್‌ (56.83ಮೀ. ತಮಿಳುನಾಡು)–2, ಅಭಿಷೇಕ್‌ (49.81 (ಉತ್ತರಾಖಂಡ)–3.

ಪೋಲ್‌ವಾಲ್ಟ್‌: ಜೆ.ಪ್ರೀತ್‌ (4.90ಮೀ ತಮಿಳುನಾಡು)–1, ಪಿ.ಬಾಲಕೃಷ್ಣ (4.80 ಕರ್ನಾಟಕ)–2, ಕೃಷ್ಣಪ್ರಸಾದ್‌ (4.80 ಮೀ ಟಾಟಾ)–3.

ಹೈಜಂಪ್‌: ಹರ್ಷಿತ್‌ ಎಸ್‌. (2.13ಮೀ ಕರ್ನಾಟಕ)–1, ಸುಪ್ರೀತ್‌ ಆರ್‌.ಎ. (2.09 ಮೀ ಕರ್ನಾಟಕ)–2, ಶ್ರೀನೀಶ್‌ ಸಿ. (2.09 ಮೀ ಸೇನೆ)–2.ಮಹಿಳೆಯರ ಟ್ರಿಪಲ್‌ ಜಂಪ್‌: ಶೀನಾ ಎನ್‌.ವಿ. (12.92 ಮೀ. ಕೇರಳ)–1, ಜೋಯ್ಲೈನ್‌ (12.62 ಮೀ. ಕರ್ನಾಟಕ)–2, ಶಿಲ್ಪಾ ಸಿ. (12.45ಮೀ. ಕೇರಳ)–3

ಮಹಿಳಾ ವಿಭಾಗ: ಹ್ಯಾಮರ್‌ ಥ್ರೋ: ರೀತು ದಿಮಾನ್‌ (58.30 ಮೀ. ಉತ್ತರ ಪ್ರದೇಶ)–1, ಸರಬಜೀತ್‌ ಕೆ. (55.10ಮೀ. ಪಂಜಾಬ)–2, ಸರಿತಾ ಸಿಂಗ್‌ (54.97ಮೀ. ಓಡಿಶಾ)–3

3000 ಮೀ. ಓಟ: ಪರಿತಿ ಲಂಬಾ (10:48.86 ನಿ. ಹರಿಯಾಣ)–1, ನಂದಿನಿ ಗುಪ್ತ (10:58.76 ನಿ. ಉತ್ತರ ಪ್ರದೇಶ)–2, ಎಸ್‌.ಪದ್ಮಾವತಿ (11:30.50 ನಿ. ತಮಿಳುನಾಡು)–3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT