ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಪರ್ ಕಿಂಗ್ಸ್ ಮೇಲೆ 'ಅನರ್ಹತೆ' ತೂಗುಗತ್ತಿ

ಸುಪ್ರೀಂ ಕೋರ್ಟಿನಲ್ಲಿ ಶ್ರೀನಿವಾಸನ್‌ಗೆ ಮುಖಭಂಗ
Last Updated 27 ನವೆಂಬರ್ 2014, 20:34 IST
ಅಕ್ಷರ ಗಾತ್ರ

ನವದೆಹಲಿ: ‘ಮುದ್ಗಲ್‌ ಸಮಿತಿ ನೀಡಿರುವ ತನಿಖಾ ವರದಿಯಲ್ಲಿ ಹೆಸರಿರುವವರು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸು­ವಂತಿಲ್ಲ’ ಎಂದು ಸುಪ್ರೀಂ ಕೋರ್ಟ್‌ ಗುರುವಾರ ಸ್ಪಷ್ಟವಾಗಿ ಹೇಳಿರುವುದ­ರಿಂದ  ಮತ್ತೆ ಬಿಸಿಸಿಐ ಅಧ್ಯಕ್ಷ­ರಾಗುವ ಆಸೆ ಹೊಂದಿದ್ದ ಶ್ರೀನಿವಾಸನ್ ಅವರಿಗೆ ಭಾರಿ ಮುಖಭಂಗವಾಗಿದೆ.

ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಮುದ್ಗಲ್‌ ನೇತೃತ್ವದ ಸಮಿತಿ ಐಪಿಎಲ್‌ ಆರನೇ ಆವೃತ್ತಿಯ ಬೆಟ್ಟಿಂಗ್‌ ಮತ್ತು ಸ್ಪಾಟ್‌ ಫಿಕ್ಸಿಂಗ್‌ ಹಗರಣ ಕುರಿತು ತನಿಖೆ ನಡೆಸಿ ನವೆಂಬರ್‌ ಮೊದಲ ವಾರದಲ್ಲಿ ಸುಪ್ರೀಂ ಕೋರ್ಟ್‌ಗೆ ವರದಿ ನೀಡಿತ್ತು. ಇದರಲ್ಲಿ ಶ್ರೀನಿವಾಸನ್‌ ಹೆಸರಿತ್ತು.

‘ಈ ಹಗರಣದಲ್ಲಿ ಶ್ರೀನಿವಾಸನ್‌ ಪಾತ್ರ ನೇರವಾಗಿ ಪ್ರಸ್ತಾಪವಾಗಿಲ್ಲ­ವಾ­ದರೂ, ಅವರಿಗೆ ನಿಕಟವಾದವರು ಹಗರ­ಣದಲ್ಲಿ

ನಿಜವಾದ ಮಾಲೀಕರು ಯಾರು?
‘ಗುರುನಾಥ್‌ ಮೇಯಪ್ಪನ್‌ ಸೂಪರ್‌ ಕಿಂಗ್ಸ್‌ ಅಧಿ­ಕಾರಿ ಎಂದು ಮುದ್ಗಲ್‌ ವರದಿ ತಿಳಿಸಿದೆ. ಯಾವ ತನಿಖೆಯನ್ನೂ ನಡೆಸದೇ ತಂಡವನ್ನು ಏಕೆ ಅನರ್ಹ­ಗೊಳಿ­ಸ­ಬಾರದು. ಅಷ್ಟಕ್ಕೂ ಸೂಪರ್‌ ಕಿಂಗ್ಸ್‌ ತಂಡ­ವನ್ನು ನಿಯಂತ್ರಿ­ಸು­ತ್ತಿರುವವರು ಯಾರು, ತಂಡದ ನಿಜ­ವಾದ ಮಾಲೀಕರು ಯಾರು. ಈ ಬಗ್ಗೆ ವರದಿ ನೀಡಿ ಎಂದು ಶ್ರೀನಿವಾಸನ್‌ ಅವರನ್ನು ‘ಸುಪ್ರೀಂ’ಕೇಳಿದೆ

ಭಾಗಿಯಾಗಿದ್ದಾರೆ’ ಎಂದೂ ಮದ್ಗಲ್‌ ಸಮಿತಿ ವರದಿಯಲ್ಲಿ ತಿಳಿಸಿತ್ತು. ಆದ್ದರಿಂದ ಬಿಸಿಸಿಐ ‘ಸೂತ್ರಧಾರ’ ಮತ್ತೆ ಅಧ್ಯಕ್ಷರಾಗುವುದು ಸದ್ಯಕ್ಕಂತೂ ದೂರದ ಮಾತು.

ಚುನಾವಣೆ ನಡೆಸಿ: ‘ಬಿಸಿಸಿಐ ಚುನಾವಣೆ ನಡೆಸಿ. ಆದರೆ, ಮುದ್ಗಲ್‌ ಸಮಿತಿಯಲ್ಲಿ ಹೆಸರು ಇರುವವರು ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. ಚುನಾವಣೆಯ ಬಳಿಕ ಹೊಸದಾಗಿ ಅಸ್ತಿತ್ವಕ್ಕೆ ಬರುವ ಪದಾಧಿ­ಕಾರಿಗಳೇ ಬೆಟ್ಟಿಂಗ್‌ ಮತ್ತು ಸ್ಪಾಟ್‌ ಫಿಕ್ಸಿಂಗ್‌ ಹಗರಣದ ತಪ್ಪಿತಸ್ಥರ ವಿರುದ್ಧ ಏನು ಕ್ರಮ ಕೈಗೊಳ್ಳಬೇಕು ಎಂಬುದನ್ನು ತೀರ್ಮಾನಿಸಲಿ’ ಎಂದೂ ಕೋರ್ಟ್‌ ಹೇಳಿದೆ.

ತೂಗುಗತ್ತಿ: ‘ಶ್ರೀನಿವಾಸನ್‌ ಅಳಿಯ ಗುರುನಾಥ್‌  ಮೇಯಪ್ಪನ್‌ ಚೆನ್ನೈ ಸೂಪರ್‌ ಕಿಂಗ್ಸ್ ತಂಡದ ಅಧಿಕಾರಿಯಾಗಿದ್ದರು. ಅವರು ಬೆಟ್ಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ ಎಂದು ಮುದ್ಗಲ್‌ ವರದಿ ಹೇಳಿದೆ. ಆದ್ದರಿಂದ ಐಪಿಎಲ್‌ ಫ್ರಾಂಚೈಸ್‌ ಸೂಪರ್‌ ಕಿಂಗ್ಸ್ ತಂಡವನ್ನು ಏಕೆ ಅನರ್ಹ­ಗೊಳಿಸಬಾರದು’ ಎಂದೂ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ­ಗಳಾದ ಟಿ.ಎಸ್‌. ಠಾಕೂರ್‌ ಹಾಗೂ ಎಫ್‌.ಎಂ. ಕಲೀಫುಲ್ಲಾ ಅವರ ಪೀಠ ಪ್ರಶ್ನಿಸಿತು.

ಆದ್ದರಿಂದ ಇಂಡಿಯಾ ಸಿಮೆಂಟ್ಸ್‌ ಲಿಮಿಟೆಡ್‌ ಒಡೆತನದ ಸೂಪರ್‌ ಕಿಂಗ್ಸ್‌ ತಂಡದ ಮೇಲೆ ಈಗ ‘ಅನರ್ಹತೆ’ಯ ತೂಗುಗತ್ತಿ ನೇತಾಡುತ್ತಿದೆ. ಶ್ರೀನಿವಾಸನ್‌ ಇಂಡಿಯಾ ಸಿಮೆಂಟ್ಸ್‌ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.

‘ಬಿಸಿಸಿಐ ಅಧ್ಯಕ್ಷರಾಗಿ ಮತ್ತು ಐಪಿಎಲ್‌ ಫ್ರಾಂಚೈಸ್‌ ಆಗಿ ಹೇಗೆ ನಿಷ್ಪಕ್ಷ­ಪಾತವಾಗಿ ನಡೆದುಕೊಳ್ಳುತ್ತೀರಿ. ಯಾವುದರ ಹಿತ ಕಾಪಾಡುತ್ತೀರಿ’ ಎಂದು ಮೂರು ದಿನಗಳ ಹಿಂದೆ ಶ್ರೀನಿವಾಸನ್ ಅವರನ್ನು ಕೋರ್ಟ್‌ ತರಾಟೆಗೆ ತೆಗೆದುಕೊಂಡಿತ್ತು. ಆದ್ದರಿಂದ ಅವರು ಹಿತಾಸಕ್ತಿ ಸಂಘರ್ಷಕ್ಕೆ ಸಿಲುಕಿದ್ದಾರೆ. ಗುರುವಾರ ಸುಮಾರು ಮೂರು ಗಂಟೆ ವಿಚಾರಣೆ ನಡೆಯಿತು. ಸೋಮವಾರ (ಡಿ. 1) ಮುಂದಿನ ವಿಚಾರಣೆ ನಡೆಯಲಿದೆ.

ಶ್ರೀನಿವಾಸನ್‌ ಮೌನ, ಆಜಾದ್ ಟೀಕೆ: ಮುದ್ಗಲ್‌ ಸಮಿತಿ ನೀಡಿರುವ ವರದಿಗೆ ಸಂಬಂಧಿಸಿದಂತೆ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿದ್ದರೂ ಮೌನಕ್ಕೆ ಶರಣಾಗಿರುವ ಶ್ರೀನಿವಾಸನ್‌ ವಿರುದ್ಧ ಮಾಜಿ ಕ್ರಿಕೆಟಿಗ ಕೀರ್ತಿ ಆಜಾದ್‌ ಕಿಡಿಕಾರಿದ್ದಾರೆ.

‘ಶ್ರೀನಿವಾಸನ್‌ ಈಗಿನ ಬೆಳವಣಿಗೆಗಳ ಬಗ್ಗೆ ಚಕಾರ ಎತ್ತುತ್ತಿಲ್ಲ. ಬಿಸಿಸಿಐ ಹಾಗೂ ಐಪಿಎಲ್‌ ಆಡಳಿತ ಮಂಡಳಿ ದೇಶದ ಕಾನೂನಿಗೆ ತಕ್ಕಂತೆ ನಡೆದು­ಕೊಳ್ಳುತ್ತಿಲ್ಲ’ ಎಂದು ಬಿಜೆಪಿ ಸಂಸದರೂ ಆಗಿರುವ ಆಜಾದ್‌ ಟೀಕಿಸಿದ್ದಾರೆ.

ಬಿಸಿಸಿಐಗೆ ತರಾಟೆ: ಬೆಟ್ಟಿಂಗ್ ಹಾಗೂ ಸ್ಪಾಟ್‌ ಫಿಕ್ಸಿಂಗ್‌­ನಲ್ಲಿ ಸೂಪರ್‌ ಕಿಂಗ್ಸ್‌ ಮತ್ತು ರಾಜ­ಸ್ತಾನ ರಾಯಲ್ಸ್‌ ತಂಡಕ್ಕೆ ಸಂಬಂಧ­ಪಟ್ಟವರು ಭಾಗಿಯಾಗಿದ್ದಾರೆ ಎಂದು ವರದಿ ಹೇಳಿದೆ. ರಾಯಲ್ಸ್‌ ತಂಡದ ಸಹ ಮಾಲೀಕ ರಾಜ್‌ ಕುಂದ್ರಾ ಬೆಟ್ಟಿಂಗ್‌­ನಲ್ಲಿ ಭಾಗಿಯಾಗಿರುವ ವಿಷಯವೂ ಬಹಿರಂಗವಾಗಿದೆ. ಆದರೂ ನೀವು (ಬಿಸಿಸಿಐ) ಏಕೆ ಕ್ರಮ ಕೈಗೊಂಡಿಲ್ಲ. ಅದರ ಬದಲು ಶ್ರೀನಿವಾಸನ್‌ ಪರ ವಕಾಲತ್ತು ವಹಿಸುತ್ತಿದ್ದೀರಾ? ನಮ್ಮನ್ನು (ನ್ಯಾಯಮೂರ್ತಿಗಳು) ಬ್ಯಾಟ್ಸ್‌­ಮನ್‌ಗಳು ಎಂದುಕೊಂಡಿದ್ದೀರಾ? ನಮ್ಮ ಬಳಿ ಗೂಗ್ಲಿ ಹಾಗೂ ಬೌನ್ಸರ್‌ಗಳನ್ನು ಎಸೆಯು­ತ್ತಿದ್ದೀರಾ? ಎಂದು ಸುಪ್ರೀಂ  ಕೋರ್ಟ್‌ ಬಿಸಿಸಿಐಯನ್ನು ತರಾಟೆಗೆ ತೆಗೆದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT