ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನಾ ತಂಡಕ್ಕೆ ಸಮಗ್ರ ಪ್ರಶಸ್ತಿ

ಅಥ್ಲೆಟಿಕ್ಸ್‌ : ಮಹಿಳಾ ವಿಭಾಗದಲ್ಲಿ ಕರ್ನಾಟಕ ರನ್ನರ್‌ಅಪ್‌
Last Updated 4 ಮೇ 2015, 19:30 IST
ಅಕ್ಷರ ಗಾತ್ರ

ಮಂಗಳೂರು: ಭಾರತ ಸೇನಾ ತಂಡದವರು ಸೋಮವಾರ ಮುಕ್ತಾಯಗೊಂಡ ಹತ್ತೊಂಬತ್ತನೇ ರಾಷ್ಟ್ರೀಯ ಫೆಡರೇಷನ್‌ ಕಪ್‌ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನಲ್ಲಿ ಸಮಗ್ರ ಪ್ರಶಸ್ತಿ ಗೆದ್ದುಕೊಂಡರು. ತಮಿಳುನಾಡು ತಂಡ ರನ್ನರ್‌ ಅಪ್‌ ಸ್ಥಾನ ಪಡೆಯಿತು.

ಮಂಗಳಾ ಕ್ರೀಡಾಂಗಣದಲ್ಲಿ ನಡೆದ ನಾಲ್ಕು ದಿನಗಳ ಕಾಲ ನಡೆದ ಈ ಕೂಟದಲ್ಲಿ  ಸೇನಾ ತಂಡ ಒಟ್ಟು 123.5 ಅಂಕ ಪಡೆದರೆ,  ಕಳೆದ ವರ್ಷ 125 ಅಂಕ ಪಡೆದು ಸಮಗ್ರ ಪ್ರಶಸ್ತಿ ಗೆದ್ದಿದ್ದ ತಮಿಳುನಾಡು ತಂಡ ಈ ಬಾರಿ 114 ಅಂಕ ಗಳಿಸಿ ರನ್ನರ್ಅಪ್‌ಗೆ ತೃಪ್ತಿಪಟ್ಟುಕೊಂಡಿತು.

ಸೇನಾ ತಂಡವು ಅದೇ 123.5 ಅಂಕಗಳೊಂದಿಗೆ ಪುರುಷರ ವಿಭಾಗದ ತಂಡ ಪ್ರಶಸ್ತಿ ಗೆದ್ದಿತು. ಆದರೆ, ಕಳೆದ ಫೆಡರೇಷನ್‌್ ಕಪ್‌ನಲ್ಲಿ 84 ಅಂಕ ಗಳಿಸಿ ಈ ವಿಭಾಗದಲ್ಲಿ ಚಾಂಪಿಯನ್‌ಶಿಪ್‌ ಪಡೆದಿದ್ದ ತಮಿಳುನಾಡು ತಂಡ ಈ ಬಾರಿ ಕೇವಲ 48 ಅಂಕ ಪಡೆದು ಎರಡನೇ ಸ್ಥಾನಕ್ಕಿಳಿಯಿತು.

ಕೇರಳ ತಂಡ 86 ಅಂಕಗಳೊಂದಿಗೆ ಮಹಿಳಾ ವಿಭಾಗದಲ್ಲಿ ತಂಡ ಪ್ರಶಸ್ತಿ ಯನ್ನು ತನ್ನಲ್ಲಿಯೇ ಉಳಿಸಿಕೊಂಡಿತು.  68 ಅಂಕ ಗಳಿಸಿದ ಕರ್ನಾಟಕ ತಂಡ ಮಹಿಳಾ ವಿಭಾಗದ ರನ್ನರ್‌ಅಪ್‌ ಪ್ರಶಸ್ತಿಗೆ ಭಾಜನವಾಯಿತು.

ಶಾಟ್‌ಪಟ್‌ ಸ್ಪರ್ಧೆಯಲ್ಲಿ 20.65 ಮೀಟರ್‌ ಎಸೆದು ರಿಯೋ ಒಲಿಂಪಿಕ್‌ಗೆ ಅರ್ಹತೆ ಪಡೆದ ಹರಿಯಾಣದ ಇಂದ್ರಜಿತ್‌ ಸಿಂಗ್‌ 1,160 ಅಂಕ ಪಡೆದು 2015ರ ಅಥ್ಲೆಟಿಕ್‌ ಚಾಂಪಿಯನ್‌ಶಿಪ್‌ನ ಪುರುಷರ ವಿಭಾಗದ ಉತ್ತಮ ಅಥ್ಲೀಟ್‌ ಗೌರವ ಪಡೆದುಕೊಂಡರು. 100 ಮೀ. ಮಹಿಳೆಯರ ಓಟದ ಸ್ಪರ್ಧೆಯನ್ನು 11.59 ಸೆಕೆಂಡುಗಳಲ್ಲಿ ಓಡಿದ ಒಡಿಶಾದ ಸ್ರಬಾನಿ ನಂದಾ 1086 ಅಂಕ ಗಳಿಸಿ ಮಹಿಳೆಯರ ವಿಭಾಗದ ಉತ್ತಮ ಅಥ್ಲೀಟ್‌ ಗೌರವಕ್ಕೆ ಪಾತ್ರರಾದರು.

ಕಳೆದ ಸಾಲಿನ ಫೆಡರೇಷನ್‌ ಕಪ್‌ನಲ್ಲಿ ಕರ್ನಾಟಕದವರೇ ಆದ ಓಎನ್‌ಜಿಸಿ ಪ್ರತಿನಿಧಿಸುತ್ತಿರುವ ಸಿದ್ಧಾರ್ಥ ತಿಂಗಳಾಯ ಹಾಗೂ ಎಂ.ಆರ್‌.ಪೂವಮ್ಮ ಉತ್ತಮ ಅಥ್ಲೀಟ್‌ಗಳಾಗಿದ್ದರು.

ಒಂದು ಚಿನ್ನ, ಮೂರು ಕಂಚು:
ಕೂಟದ ಕೊನೆಯ ದಿನ ಕರ್ನಾಟಕ ಒಂದು ಚಿನ್ನ, ಮೂರು ಕಂಚಿನ ಪದಕ ಪಡೆದುಕೊಂಡಿತು. ಮಹಿಳೆಯರ 4x100 ಮೀ. ರಿಲೆಯಲ್ಲಿ ಮೇಘನಾ ಶೆಟ್ಟಿ, ಎಸ್‌.ಕೆ.ಪ್ರಿಯಂಕಾ, ಆರ್‌.ವರ್ಷಾ ಹಾಗೂ ಎಂ.ಜಿ.ಪದ್ಮಿನಿ ಅವರ ತಂಡ 47.20 ಸೆಕೆಂಡುಗಳಲ್ಲಿ ಓಟ ಪೂರ್ಣಗೊಳಿಸಿ ಚಿನ್ನದ ಪದಕವನ್ನು ಕೊರಳಿಗೆ ಹಾಕಿಕೊಂಡಿತು.

ಪುರುಷರ 4x100 ಮೀ. ರಿಲೆಯಲ್ಲಿ ಕರ್ನಾಟಕದ ಕುಮಾರ್‌ ಎಂ.ವಿಜಯ್, ತ್ಯಾಗರಾಜನ್‌, ಮುತ್ತು ಕುಮಾರ್‌ ಮತ್ತು ಎಂ. ಆರ್ಮುಗಂ ಅವರ ತಂಡ (41.40 ಸೆ.), ಮಹಿಳೆಯರ 100 ಮೀ. ಹರ್ಡಲ್ಸ್‌ನಲ್ಲಿ ಕರ್ನಾಟಕದ ಮೇಘನಾ ಶೆಟ್ಟಿ (13.88 ಸೆ.) ಹಾಗೂ ಮಹಿಳೆಯರ 200 ಮೀ. ಓಟದ ಸ್ಪರ್ಧೆಯಲ್ಲಿ ಕರ್ನಾಟಕದ ಎಂ.ಜಿ.ಪದ್ಮಿನಿ (24.69 ಸೆ.) ಕಂಚಿನ ಪದಕ ಪಡೆದರು.

ಮಂಕಾದ ಪ್ರದರ್ಶನ
ಚಾಂಪಿಯನ್‌ಶಿಪ್‌ನ ಮೊದಲು ಮೂರು ದಿನಗಳ ಕಾಲ ಕರ್ನಾಟಕ ತಂಡ ಉತ್ತಮ ಪ್ರದರ್ಶನ ನೀಡಿ 84.500 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿತ್ತು. ಕ್ರೀಡಾಕೂಟದ ಕೊನೆಯ ದಿನವಾದ ಶನಿವಾರದ ಪ್ರದರ್ಶನ ಮಂಕಾಗಿತ್ತು. ಕೊನೆಯ ದಿನ ನಡೆದ 17 ಫೈನಲ್‌ ಸ್ಪರ್ಧೆಗಳಲ್ಲಿ 8 ಸ್ಪರ್ಧೆಗಳಲ್ಲಿ ಕರ್ನಾಟಕದ ಸ್ಪರ್ಧಿಗಳು ಭಾಗವಹಿಸಿದ್ದರು. ನಾಲ್ಕು ಸ್ಪರ್ಧೆಗಳಲ್ಲಿ ಒಂದು ಚಿನ್ನ, ಮೂರು ಕಂಚು ಬಿಟ್ಟರೆ, ಉಳಿದ ಐದು ಸ್ಪರ್ಧೆಗಳಲ್ಲಿ ಕರ್ನಾಟಕದ ಅಥ್ಲೀಟ್‌ಗಳು ಹೆಚ್ಚಿನ ಸಾಧನೆ ತೋರುವಲ್ಲಿ ವಿಫಲರಾದರು.

ಪುರುಷರ 110 ಮೀ. ಹರ್ಡಲ್ಸ್‌ನಲ್ಲಿ ಕರ್ನಾಟಕದ ಸಮರ್ಥ್ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡರೆ, ಪುರುಷರ 200 ಮೀ. ಓಟದಲ್ಲಿ ರಾಜ್ಯದ ಮಣಿಶ್‌ ಹಾಗೂ ಗಣೇಶ ಕ್ರಮವಾಗಿ 5 ಮತ್ತು 6ನೇ ಸ್ಥಾನ ಗಳಿಸಿದರು. ಮಹಿಳೆಯರ 400 ಮೀ. ಓಟದಲ್ಲಿ ಕರ್ನಾಟಕದ ಅರ್ಪಿತಾ ಎಂ. ಏಳನೇ ಸ್ಥಾನ ಪಡೆದರು. ಮಹಿಳೆಯರ ಹೆಪಥ್ಲಾನ್‌ ಸ್ಪರ್ಧೆಯಲ್ಲಿ ಪಾಯಿಂಟ್ಸ್‌ ಗಳಿಕೆಯಲ್ಲಿ ಹಿಂದೆ ಬಿದ್ದ ಕರ್ನಾಟಕದ ಸಹನಾ ಕುಮಾರಿ ಪದಕ ಗಳಿಸುವುದು ಸಾಧ್ಯವಿಲ್ಲ ಎಂಬುದನ್ನು ಅರಿತು ಕೊನೆಯ ಸ್ಪರ್ಧೆಯಲ್ಲಿ ಭಾಗವಹಿಸಲಿಲ್ಲ. ಹೀಗಾಗಿ 4123 ಅಂಕಗಳೊಂದಿಗೆ ಐದನೇ ಸ್ಥಾನ ಪಡೆದರು.

ಏಷ್ಯನ್‌ ಕ್ರೀಡಾಕೂಟಕ್ಕೆ ಅರ್ಹತೆ:
ಫೆಡರೇಷನ್‌ ಕಪ್‌ನ ಕೊನೆಯ ದಿನ ಏಳು ಸ್ಪರ್ಧಿಗಳು ಜೂನ್‌ನಲ್ಲಿ ಚೀನಾದ ವುಹಾನ್‌ನಲ್ಲಿ ನಡೆಯುವ ಏಷ್ಯನ್‌ ಕ್ರೀಡಾಕೂಟಕ್ಕೆ ಅರ್ಹತೆ ಪಡೆದರು.

ಮಹಿಳೆಯರ 100 ಮೀ. ಹರ್ಡಲ್ಸ್‌ನಲ್ಲಿ ಚಿನ್ನದ ಪದಕ ಪಡೆದ ತಮಿಳುನಾಡಿನ ಗಾಯತ್ರಿ, ಮಹಿಳೆಯರ 200 ಮೀಟರ್‌ ಓಟದ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಒಡಿಶಾದ ಸ್ರಬಾನಿ ನಂದಾ, ಹೆಪ್ಟಥ್ಲಾನ್‌ನಲ್ಲಿ 5462 ಅಂಕಗಳೊಂದಿಗೆ ಮೊದಲ ಸ್ಥಾನ ಗಳಿಸಿದ ಒಡಿಶಾದ ಪೂರ್ಣಿಮಾ ಹೆಂಬರಾಮ್‌, ಮಹಿಳೆಯರ 400 ಮೀ. ಓಟದಲ್ಲಿ ಚಿನ್ನದ ಪದಕ ಗೆದ್ದ ಓಎನ್‌ಜಿಸಿಯ ಎಂ.ಆರ್‌.ಪೂವಮ್ಮ, ಪುರುಷರ 200 ಮೀ. ಓಟದಲ್ಲಿ ಚಿನ್ನದ ಪದಕ ಪಡೆದ ಹರಿಯಾಣದ ಧರ್ಮವೀರ್‌, ಪುರುಷರ 400 ಮೀ. ಓಟದಲ್ಲಿ ಚಿನ್ನದ ಸಾಧನೆ ಮಾಡಿದ ಸೇನಾ ತಂಡದ ಆರೋಕ್ಯ ರಾಜೀವ, ಪುರುಷರ 110 ಮೀ. ಹರ್ಡಲ್ಸ್‌ನಲ್ಲಿ ಚಿನ್ನ ಗೆದ್ದ ಓಎನ್‌ಜಿಸಿಯ ಸಿದ್ಧಾರ್ಥ ತಿಂಗಳಾಯ ಅರ್ಹತೆ ಪಡೆದ ಸ್ಪರ್ಧಿಗಳು.

ಅಂತಿಮ ದಿನದ ಫಲಿತಾಂಶ
ಪುರುಷರ ವಿಭಾಗ: 200 ಮೀ. ಓಟ:ಧರ್ಮಬೀರ್‌ (20.87 ಸೆ. ಹರಿಯಾಣ)–1, ಎಂ.ಮಣಿಕಂದಾರ (21.20 ಸೆ. ತಮಿಳುನಾಡು)–2, ಪ್ರವೀಣಕುಮಾರ್ (21.59 ಸೆ.ಹರಿಯಾಣ)–3. 400 ಮೀ ಓಟ: ಆರೋಕ್ಯ ರಾಜೀವ (46.24 ಸೆ. ಸೇನೆ)–1, ವಿ.ಸಾಜಿನ್‌ (46.94 ಸೆ. ವಾಯು ಸೇನೆ)–2, ಎ.ಧರುನ್‌ (47.25 ಸೆ. ತಮಿಳುನಾಡು)–3.

1500ಮೀ ಓಟ: ಜಿನ್ಸನ್‌ ಜಾನ್‌ (3ನಿ.46.98 ಸೆ. ಸೇನೆ)–1, ಸಂದೀಪ ಕುಮಾರ (3ನಿ.47.71 ಸೆ. ಸೇನೆ)–2, ಸಿ.ಮಣಿಕಂದ (3 ನಿ.48.86 ಸೆ. ಬಿಎಸ್‌ಎಫ್‌)–3. 10000 ಮೀ. ಓಟ: ಜಿ.ಲಕ್ಷ್ಮಣನ್ (29 ನಿಮಿಷ 49.91 ಸೆ. ಸೇನೆ)–1, ಗೋಪಿ ಟಿ. (29ನಿ. 52.26 ಸೇನೆ)–2. ಖೇತಾ ರಾಮ್‌ (29ನಿಮಿಷ 53.87 ಸೆ. ಸೇನೆ)–3.

ಪುರುಷರ 110 ಮೀ. ಹರ್ಡಲ್ಸ್‌: ಸಿದ್ದಾಂತ ಥಿಂಗಲಿಯಾ ( 13.92 ಸೆ. ಓಎನ್‌ಜಿಸಿ),–1, ಸುರೇಂಧರ್‌ (14.17 ಸೆ. ತಮಿಳುನಾಡು)–2, ಕೆ.ಪ್ರೇಮಕುಮಾರ್‌ (14.26 ಸೆ. ಟಿಇಜಿ)–3. ಟ್ರಿಪಲ್‌ ಜಂಪ್‌: ಅರ್ಪಿಂದರ್‌ ಸಿಂಗ್‌ (16.13 ಮೀ ಓಎನ್‌ಜಿಸಿ)–1, ಎಸ್‌.ಎನ್‌.ಮೊಹಮ್ಮದ್‌ ಸಲಾಹುದ್ದೀನ್‌ (15.86 ಮೀ. ಟಾಟಾ)–2, ಯು.ಕಾರ್ತೀಕ್‌ (15.82 ಮೀ. ವಾಯುಸೇನೆ)–3.

ಡಿಸ್ಕಸ್‌ ಥ್ರೋ: ಅರ್ಜುನ್‌ಸಿಂಗ್‌ (58.51 ಮೀ. ಟಾಟಾ)–1, ಧರ್ಮರಾಜ್ (58.41 ಮೀ. ಸೇನೆ)–2, ಕಿರಣ ಸಿಂಗ್‌(53.54 ಮೀ. ಓಎನ್‌ಜಿಸಿ)–3.

4 100 ಮೀ.ರಿಲೆ:  ಭಾರತ ಸೇನಾ ತಂಡ: (41.08 ಸೆ. )–1,  ತಮಿಳುನಾಡು: (41.18 ಸೆ. )–2,  ಕರ್ನಾಟಕ: (41.40 ಸೆ.)–3.

ಮಹಿಳಾ ವಿಭಾಗ: 200 ಮೀ ಓಟ: ಶ್ರಬಾನಿ ನಂದಾ ( 23.67 ಸೆ. ಓಡಿಶಾ)–1, ದ್ಯುತಿ ಚಾಂದ್‌  (24.52 ಸೆ. ಓಡಿಶಾ)–2, ಎಂ.ಜಿ.ಪದ್ಮಿನಿ (24.69 ಸೆ.ಕರ್ನಾಟಕ)–3.

400ಮೀ. ಓಟ:  ಎಂ.ಆರ್.ಪೂವಮ್ಮ (53.41 ಸೆ. ಓಎನ್‌ಜಿಸಿ)–1, ಅನು ಆರ್‌. (54.27 ಸೆ. ಕೇರಳ)–2, ಟಿಂಟು ಲುಕಾ (54.31 ಸೆ. ಕೇರಳ)–3. 1500 ಮೀ ಓಟ: ಸುಷ್ಮಾದೇವಿ (4 ನಿ.27.50 ಸೆ. ಹರಿಯಾಣ)–1, ಚಿತ್ರ ಪಿ.ಯು. (4ನಿ.27.94 ಸೆ. ಕೇರಳ)–2,ಸ್ಪಿರಾ ಸರ್ಕಾರ್ (4 ನಿ,28.62 ಸೆ. ಪಶ್ಚಿಮ ಬಂಗಾಳ)–3.

10000 ಮೀ. ಓಟ: ಎಲ್‌.ಸೂರ್ಯಾ (34ನಿ.42.05 ಸೆ. ತಮಿಳುನಾಡು)–1, ಸಂಜೀವಿನಿ ಬಿ. (34 ನಿ.52.91 ಸೆ. ಮಹಾರಾಷ್ಟ್ರ)–2, ಸ್ವಾತಿ (35ನಿ.53.70 ಸೆ. ಮಹಾರಾಷ್ಟ್ರ)–3.

100 ಮೀ ಹರ್ಡಲ್ಸ್‌: ಗಾಯತ್ರಿ (13.67 ಸೆ. ತಮಿಳುನಾಡು)–1, ದೀಪಿಕಾ (13.76 ಸೆ. ತಮಿಳುನಾಡು)–2, ಮೇಘನಾ ಶೆಟ್ಟಿ (13.88 ಸೆ.ಕರ್ನಾಟಕ)–3.

ಹೆಪ್ಟಥ್ಲಾನ್‌: ಪೂರ್ಣಿಮಾ ಹೆಂಬಾರಾಮ್ (5,462 ಅಂಕ ಓಡಿಶಾ)–1, ಲಿಕ್ಸಿ ಜೋಷೆಫ್‌ (5,458,  ಕೇರಳ)–2, ನಿಕ್ಸಿ ಜೋಷೆಫ್‌ (5,290, ಕೇರಳ)–3

4x100 ಮೀ ರಿಲೆ: ಕರ್ನಾಟಕ: (44.43 ಸೆ. )–1, ತಮಿಳುನಾಡು: (47.65 ಸೆ.)–2,  ಮಹಾರಾಷ್ಟ್ರ: (47.74 ಸೆ. )–3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT