ರೇಕ್ಜಾವಿಕ್: ಭಾರತದ ಗ್ರ್ಯಾಂಡ್ ಮಾಸ್ಟರ್ ಹರಿಕಾ ದ್ರೋಣವಳ್ಳಿ ಅವರು ಇಲ್ಲಿ ನಡೆಯುತ್ತಿರುವ ರೇಕ್ಜಾವಿಕ್ ಓಪನ್ ಚೆಸ್ ಟೂರ್ನಿಯ ಆರನೇ ಸುತ್ತಿನ ಪಂದ್ಯದಲ್ಲಿ ಗೆಲುವು ಗಳಿಸಿದ್ದಾರೆ. ಭಾನುವಾರ ನಡೆದ ಪಂದ್ಯದಲ್ಲಿ ಹರಿಕಾ ಅವರು ವಿಗ್ನಿರ್ ವತನಾರ್ ಅವರ ಸವಾಲು ಮೀರಿ ನಿಂತರು.
ಐದನೇ ಸುತ್ತಿನ ಹಣಾಹಣಿಯಲ್ಲಿ ನಿರಾಸೆ ಕಂಡಿದ್ದ ಭಾರತದ ಆಟಗಾರ್ತಿ ವಿಗ್ನಿರ್ ವಿರುದ್ಧದ ಹೋರಾಟದಲ್ಲಿ ಅಮೋಘ ಸಾಮರ್ಥ್ಯ ತೋರಿದರು. ಆರಂಭದಿಂದಲೇ ಚುರುಕಾಗಿ ಕಾಯಿಗಳನ್ನು ಮುನ್ನಡೆಸಿದ ಹರಿಕಾ ಅವರು ಎದುರಾಳಿಯ ಮೇಲೆ ಒತ್ತಡ ಹೇರಿ 38ನೇ ನಡೆಯಲ್ಲಿ ಗೆಲುವು ಒಲಿಸಿಕೊಂಡರು. ಇನ್ನೂ ನಾಲ್ಕು ಸುತ್ತುಗಳ ಆಟ ಬಾಕಿ ಉಳಿದಿದ್ದು ಹರಿಕಾ ಅವರು ಪಾಯಿಂಟ್ಸ್ ಪಟ್ಟಿಯಲ್ಲಿ 28ನೇ ಸ್ಥಾನ ಹೊಂದಿದ್ದಾರೆ.