ಶ್ರೀಲಂಕಾ ಬಿಕ್ಕಟ್ಟು: ಗಡುವು ನೀಡಿದ ಪದಚ್ಯುತ ಪ್ರಧಾನಿ

ಕೊಲಂಬೊ: ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ತಮ್ಮನ್ನು ಮತ್ತೆ ಪ್ರಧಾನಿ ಹುದ್ದೆಗೆ ನೇಮಕ ಮಾಡದೇ ಇದ್ದರೆ, ಮುಂದಿನ ವಾರ ರಾಜಧಾನಿಯಲ್ಲಿ ಸಾವಿರಾರು ಜನರನ್ನು ಸೇರಿಸಿ ಭಾರಿ ಪ್ರತಿಭಟನೆ ನಡೆಸುವುದಾಗಿ ಪದಚ್ಯುತ ಪ್ರಧಾನಿ ರನಿಲ್ ವಿಕ್ರಮಸಿಂಘೆ ಹೇಳಿದ್ದಾರೆ.
‘ಸಂಸತ್ತಿನಲ್ಲಿ ನನಗಿನ್ನೂ ಬೆಂಬಲ ಇದೆ. ಅದನ್ನು ಗುರುತಿಸಲು ಅಧ್ಯಕ್ಷರಿಗೆ ಶುಕ್ರವಾರದವರೆಗೆ ಸಮಯವಿದೆ’ ಎಂದು ಹೇಳಿದ್ದಾರೆ.
ರನಿಲ್ ಅವರನ್ನು ಅಕ್ಟೋಬರ್ನಲ್ಲಿ ಪದಚ್ಯುತಗೊಳಿಸಿ ಮಹಿಂದಾ ರಾಜಪಕ್ಸೆ ಅವರನ್ನು ಪ್ರಧಾನಿಯಾಗಿ ಸಿರಿಸೇನಾ ಅವರು ನೇಮಕ ಮಾಡಿದ ನಂತರ ದ್ವೀಪರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಆರಂಭವಾಗಿದೆ. ರಾಜಪಕ್ಸೆ ವಿರುದ್ಧ ಸಂಸತ್ತಿನಲ್ಲಿ ಎರಡು ಬಾರಿ ಮತ ಚಲಾವಣೆ ಆಗಿದೆ. ಆದರೂ ರನಿಲ್ ಅವರನ್ನು ಮತ್ತೆ ಪ್ರಧಾನಿಯಾಗಿ ನೇಮಿಸಲು ಸಿರಿಸೇನಾ ನಿರಾಕರಿಸಿದ್ದಾರೆ.
ಸಂಸತ್ತನ್ನು ವಿಸರ್ಜಿಸಿದ ಸಿರಿಸೇನಾ ಅವರ ಕ್ರಮ ಅಸಾಂವಿಧಾನಿಕವೇ ಅಲ್ಲವೇ ಎಂಬ ಬಗ್ಗೆ ದೇಶದ ಸುಪ್ರೀಂ ಕೋರ್ಟ್ ಈ ವಾರ ತೀರ್ಪು ನೀಡಲಿದೆ.
ಕೋರ್ಟ್ ತೀರ್ಪಿನ ಬಗ್ಗೆ ಭರವಸೆ ಹೊಂದಿರುವ ರನಿಲ್, ತೀರ್ಪು ಹೊರಬಿದ್ದ ಬಳಿಕ ಬಿಕ್ಕಟ್ಟು ಕೊನೆಗಾಣಿಸುವಂತೆ ಅಧ್ಯಕ್ಷರ ಮೇಲೆ ಒತ್ತಡ ಹೇರಲು ಜನಶಕ್ತಿ ಆಂದೋಲನ ಆಯೋಜಿಸುವುದಾಗಿ ಹೇಳಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.