ಸೋಮವಾರ, ಏಪ್ರಿಲ್ 19, 2021
32 °C
ಇಡೀ ದಿನ ಕೇಂದ್ರ ಬಿಂದುವಾದ ಸಭಾಧ್ಯಕ್ಷರ ಕೊಠಡಿ

‘ಸುಪ್ರೀಂ’ ಆದೇಶ ಹಿನ್ನೆಲೆ: ಸ್ಪೀಕರ್ ಕಚೇರಿಗೆ ಓಡೋಡಿ ಬಂದ ಶಾಸಕರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ವಿಧಾನಸೌಧದ ಪಶ್ಚಿಮ ದ್ವಾರದಲ್ಲಿ ಕಾರಿನಿಂದ ಇಳಿಯುತ್ತಿದ್ದಂತೆ ಮೆಟ್ಟಿಲೇರಿ ಮೊದಲ ಮಹಡಿಯಲ್ಲಿದ್ದ ವಿಧಾನಸಭಾ ಅಧ್ಯಕ್ಷರ ಕಚೇರಿಗೆ ಶಾಸಕರು ಓಡೋಡಿ ಬಂದರು. ಮೊದಲಿಗೆ ಕೆ.ಆರ್.ಪುರಂ ಶಾಸಕ ಬೈರತಿ ಬಸವರಾಜ್ ಓಡುತ್ತಲೇ ಬಂದರೆ, ಇತರ ಶಾಸಕರು ಅವರನ್ನು ಹಿಂಬಾಲಿದರು.

ಗುರುವಾರ ಸಂಜೆ ವಿಧಾನಸೌಧದಲ್ಲಿ ಶಾಸಕರು ಓಡೋಡಿ ಬರುತ್ತಿರುವುದನ್ನು ಕಂಡ ಭದ್ರತಾ ಸಿಬ್ಬಂದಿ ಸಹ ಕೆಲಕಾಲ ಏನೂ ತೋಚದಂತೆ ನೋಡುತ್ತಾ ನಿಂತರು. ಒಂದು ರೀತಿಯಲ್ಲಿ ಸಿನಿಮಾ ಚಿತ್ರೀಕರಣದಂತೆ ಭಾಸವಾಯಿತು.

ಸಂಜೆ 6 ಗಂಟೆ ಒಳಗೆ ವಿಧಾನಸಭಾಧ್ಯಕ್ಷರ ಮುಂದೆ ಹಾಜರಾಗುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದ ಹಿನ್ನೆಲೆಯಲ್ಲಿ ಮುಂಬೈನಲ್ಲಿ ತಂಗಿದ್ದ ಶಾಸಕರು ಆತುರಾತುರವಾಗಿ ಅಲ್ಲಿಂದ ವಿಶೇಷ ವಿಮಾನ ಹತ್ತಿದ್ದರು. ಅಲ್ಲಿಂದ ಬೆಂಗಳೂರು ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಬರುವ ವೇಳೆಗೆ ಸಮಯ ಸಮೀಪಿಸುವುದು ಕಂಡು ಆತಂಕಕ್ಕೆ ಒಳಗಾದರು. ವಿಶೇಷ ವಿಮಾನದಲ್ಲಿ ಬಂದ ಶಾಸಕರನ್ನು ಕರೆತರುವ ವ್ಯವಸ್ಥೆಯನ್ನು ಪೊಲೀಸರು ಮಾಡಿದ್ದರು. ವಿಧಾನಸೌಧದ ಬಳಿ ಕಾರಿನಿಂದ ಇಳಿಯುತ್ತಿದ್ದಂತೆ ಸಭಾಕ್ಷರ ಕೊಠಡಿಗೆ ಓಡೋಡಿ ಬಂದರು. 6 ಗಂಟೆ 4 ನಿಮಿಷಕ್ಕೆ ಕಚೇರಿ ತಲುಪಿದರು.

ಸುಮಾರು ಒಂದು ಗಂಟೆ ಕಾಲ ಕಚೇರಿಯಲ್ಲಿ ಇದ್ದರು. ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಪ್ರತ್ಯೇಕವಾಗಿ ಎಲ್ಲರೂ ರಾಜೀನಾಮೆ ಪತ್ರ ಸಲ್ಲಿಸಿದ್ದು, ಪ್ರತಿಯೊಬ್ಬರಿಂದಲೂ ವಿವರ ಪಡೆದುಕೊಂಡರು. ವಕೀಲರೂ ಸೇರಿದಂತೆ ಯಾರೊಬ್ಬರನ್ನೂ ಒಳಗೆ ಬಿಟ್ಟುಕೊಳ್ಳಲಿಲ್ಲ. ನಂತರ ರಮೇಶ್ ಕುಮಾರ್ ತಮ್ಮ ಕಚೇರಿಯಿಂದ ಹೊರ ನಡೆದರು. ಅವರು ತೆರಳಿದ ಕೆಲ ಸಮಯದ ನಂತರ ಎಲ್ಲರೂ ಒಟ್ಟಾಗಿ ಹೊರನಡೆದರು.

ಕೇಂದ್ರ ಬಿಂದು: ರಾಜೀನಾಮೆ ಸಲ್ಲಿಸಿದ್ದ 11 ಶಾಸಕರು ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಗುರುವಾರ ಮತ್ತೊಮ್ಮೆ ರಾಜೀನಾಮೆ ಸಲ್ಲಿಸಲು ಆಗಮಿಸಿದ ಹಿನ್ನೆಲೆಯಲ್ಲಿ ಇಡೀ ದಿನ ವಿಧಾನ ಸಭಾಧ್ಯಕ್ಷರ ಕಚೇರಿ ‘ರಾಜಕೀಯ’ ಚಟುವಟಿಕೆಗಳ ತಾಣವಾಗಿತ್ತು. ತಾವು ಸಲ್ಲಿಸಿದ್ದ ರಾಜೀನಾಮೆಯನ್ನು ಸಭಾಧ್ಯಕ್ಷರು ಅಂಗೀಕರಿಸುತ್ತಿಲ್ಲ ಎಂದು ದೂರಿ ಜಾರಕಿಹೊಳಿ ನೇತೃತ್ವದಲ್ಲಿ 11 ಶಾಸಕರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ನ್ಯಾಯಾಲಯ ಯಾವ ಆದೇಶ ನೀಡಲಿದೆ, ಮುಂದೆ ಏನಾಗಬಹುದು ಎಂಬ ವಾತಾವರಣ ಮನೆ ಮಾಡಿತ್ತು. ಹಾಗಾಗಿ ಸಭಾಧ್ಯಕ್ಷ ರಮೇಶ್ ಕುಮಾರ್ ಸಹ ಬೆಳಿಗ್ಗೆ 10 ಗಂಟೆಗೆ ಕಚೇರಿಗೆ ಬಂದು ಕುಳಿತಿದ್ದರು. ನಂತರ ರಾಜಕೀಯ ಮುಖಂಡರು ಒಬ್ಬೊಬ್ಬರಾಗಿ ಬಂದು ಚರ್ಚಿಸತೊಡಗಿದರು. ಇಡೀ ದಿನ ಸಭಾಧ್ಯಕ್ಷರ ಕಚೇರಿಯೇ ಕೇಂದ್ರ ಬಿಂದುವಾಗಿತ್ತು.

ಕಾಂಗ್ರೆಸ್ ಮನವಿ: ಬೆಳಿಗ್ಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ವಕೀಲರ ಜತೆಗೆ ಸಭಾಧ್ಯಕ್ಷರ ಕಚೇರಿ ಪ್ರವೇಶಿಸಿದರು. ಜತೆಯಲ್ಲಿ ಬಂದ ಕಾಂಗ್ರೆಸ್ ಮುಖಂಡ, ವಕೀಲ ವಿ.ಎಸ್.ಉಗ್ರಪ್ಪ ಪಕ್ಷದ ಪರವಾಗಿ ವಾದ ಮಂಡಿಸಿದರು. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಕೈಗೊಂಡ ನಿರ್ಧಾರದಂತೆ ಶಾಸಕರ ಸದಸ್ಯತ್ವ ಅನರ್ಹಗೊಳಿಸುವಂತೆ ಮನವಿ ಮಾಡಿದ್ದು, ಈ ಹಿನ್ನೆಲೆಯಲ್ಲಿ ಸಭಾಧ್ಯಕ್ಷರು ವಿಚಾರಣೆಗೆ ಸಮಯ ನೀಡಿದ್ದರು.

ಪಕ್ಷದ ಚಿಹ್ನೆ ಮೇಲೆ ಆಯ್ಕೆ ಆಗಿರುವ ಶಾಸಕರು ರಾಜೀನಾಮೆ ನೀಡುತ್ತಿದ್ದು, ಅಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಪಕ್ಷಾಂತರ ನಿಷೇಧ ಕಾಯಿದೆ ಅನ್ವಯ ಕ್ರಮ ಕೈಗೊಳ್ಳಬೇಕು. ಶಾಸಕರ ಸದಸ್ಯತ್ವ ಅನರ್ಹಗೊಳಿಸಬೇಕು ಎಂದು ಮನವಿ ಮಾಡಿದರು. ಸುಮಾರು ಮೂರು ಗಂಟೆಗಳ ಕಾಲ ಮುಖಂಡರು ವಿವರಣೆ ನೀಡಿದರು.

ಕಾಂಗ್ರೆಸ್ ಮುಖಂಡರು ಕಚೇರಿಯಿಂದ ಹೊರ ಹೋಗುತ್ತಿದ್ದಂತೆ ಬಿಜೆಪಿ ಶಾಸಕರು ಕಚೇರಿ ಪ್ರವೇಶಿಸಿದರು. ಶಾಸಕರಾದ ಸಿ.ಟಿ.ರವಿ, ವೈ.ಎ.ನಾರಾಯಣಸ್ವಾಮಿ ಕೆಲ ಸಮಯ ಸಭಾಧ್ಯಕ್ಷರ ಜತೆ ಚರ್ಚಿಸಿ ಹೊರನಡೆದರು. ತಡಮಾಡದೆ ಶಾಸಕರ ರಾಜೀನಾಮೆ ಅಂಗೀಕರಿಸಬೇಕು, ಸಂವಿಧಾನಾತ್ಮಕವಾಗಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು ಎನ್ನಲಾಗಿದೆ.

ಜೆಡಿಎಸ್ ಮನವಿ: ರಾಜೀನಾಮೆ ನೀಡಿರುವ ಮೂವರು ಶಾಸಕರ ವಿರುದ್ಧ ಪಕ್ಷಾಂತರ ನಿಷೇಧ ಕಾಯಿದೆ ಅನ್ವಯ ಕ್ರಮ ಕೈಗೊಳ್ಳುವಂತೆ ಜೆಡಿಎಸ್ ಸಹ ಮನವಿ ಮಾಡಿದೆ. ಬುಧವಾರ ಮನವಿ ಸಲ್ಲಿಸಿದ್ದು, ಗುರುವಾರ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಜೆಡಿಎಸ್ ಪರ ವಕೀಲರು ಸಲ್ಲಿಸಿದರು.

ಮತ್ತೊಮ್ಮೆ ರಾಜೀನಾಮೆ ಸಲ್ಲಿಸಿದವರು
ಕಾಂಗ್ರೆಸ್: ರಮೇಶ್ ಜಾರಕಿಹೊಳಿ, ಮಹೇಶ್ ಕಮಠಳ್ಳಿ, ಪ್ರತಾಪ್‌ಗೌಡ ಪಾಟೀಲ್, ಬಿ.ಸಿ.ಪಾಟೀಲ್, ಶಿವರಾಮ ಹೆಬ್ಬಾರ್, ಎಸ್.ಟಿ.ಸೋಮಶೇಖರ್, ಬೈರತಿ ಬಸವರಾಜ್, ಮುನಿರತ್ನ.

ಜೆಡಿಎಸ್: ಎಚ್.ವಿಶ್ವನಾಥ್, ನಾರಾಯಣಗೌಡ, ಗೋಪಾಲಯ್ಯ.

ಹೈಕೋರ್ಟ್‌ಗೆ ಪಿಐಎಲ್‌
‘ಶಾಸಕರ ರಾಜೀನಾಮೆ ಅಂಗೀಕರಿಸಲು ವಿಧಾನಸಭೆ ಸ್ಪೀಕರ್‌ಗೆ ನಿರ್ದೇಶಿಸಬೇಕು’ ಎಂದು ಕೋರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಸಲ್ಲಿಸಲಾಗಿದೆ.

ವಕೀಲ ನಟರಾಜ್ ಶರ್ಮಾ ಸಲ್ಲಿಸಿರುವ ಈ ಅರ್ಜಿಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ವಿಧಾನಭೆ ಕಾರ್ಯದರ್ಶಿ ಹಾಗೂ ವಿಧಾನಸಭಾಧ್ಯಕ್ಷರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ಇದಿನ್ನೂ ವಿಚಾರಣೆಗೆ ಬರಬೇಕಿದೆ.

‘ಶಾಸಕರ ರಾಜೀನಾಮೆ ಅಂಗೀಕರಿಸಲು ವಿಳಂಬ ಮಾಡುತ್ತಿರುವುದರಿಂದ ರಾಜ್ಯದಲ್ಲಿ ಆಡಳಿತ ಯಂತ್ರ ಕುಸಿದಿದೆ. ಆದ್ದರಿಂದ ರಾಜೀನಾಮೆ ಅಂಗೀಕರಿಸುವ ದಿಸೆಯಲ್ಲಿ ಕಾನೂನು ಪ್ರಕಾರ ಮುಂದಾಗುವಂತೆ ವಿಧಾನಸಭಾಧ್ಯಕ್ಷರಿಗೆ ನಿರ್ದೇಶಿಸಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ.

*
ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮತ್ತೊಮ್ಮೆ ರಾಜೀನಾಮೆ ಸಲ್ಲಿಸಿದ್ದೇವೆ
-ಬಿ.ಸಿ.ಪಾಟೀಲ್, ಶಾಸಕ 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು