ಬಿಸಿಲ ನಾಡಿನ ‘ಬಾಪು’ ಭೇಟಿಗೆ ನೂರರ ಸಂಭ್ರಮ..!

7
ಐವತ್ತನೇ ವಯಸ್ಸಿನಲ್ಲಿ ವಿಜಯಪುರಕ್ಕೆ ಭೇಟಿ ನೀಡಿದ್ದ ಮಹಾತ್ಮ; ಸಭೆಯಲ್ಲೇ ಸಿಟ್ಟಿಗೆದ್ದಿದ್ದ ಸಹನಾಮೂರ್ತಿ..!

ಬಿಸಿಲ ನಾಡಿನ ‘ಬಾಪು’ ಭೇಟಿಗೆ ನೂರರ ಸಂಭ್ರಮ..!

Published:
Updated:
Deccan Herald

ವಿಜಯಪುರ: ‘ಸಭೆಯಲ್ಲಿ ಅಸ್ಪೃಶ್ಯರಿದ್ದಾರೆಯೇ..?’

1918ರ ಮೇ 5ರಂದು ಅವಿಭಜಿತ ವಿಜಯಪುರ ಜಿಲ್ಲೆಗೆ ಮೊದಲ ಭೇಟಿ ನೀಡಿದ್ದ ಸಂದರ್ಭ, ವಿಜಯಪುರದಲ್ಲಿ ಆಯೋಜಿಸಿದ್ದ ಅಸ್ಪೃಶ್ಯತಾ ನಿವಾರಣಾ ಸಭೆಯ ಆರಂಭದಲ್ಲೇ ಮಹಾತ್ಮ ಗಾಂಧೀಜಿ ಸಂಘಟಕರನ್ನು ಕೇಳಿದ ಪ್ರಶ್ನೆಯಿದು.

ಸಂಘಟಕರು ಯಾರೂ ಇಲ್ಲ ಎನ್ನುತ್ತಿದ್ದಂತೆ; ಸಿಟ್ಟಿಗೆದ್ದ ಸಹನಾಮೂರ್ತಿ ‘ಹಾಗಿದ್ದರೆ ಸಭೆ ನಡೆಸಿ ಉಪಯೋಗವಿಲ್ಲ’ ಎಂದು ಸಭೆಯಿಂದ ಹೊರ ನಡೆದರು. ಈ ಘಟನೆ ಬಳಿಕ ಸಮ್ಮೇಳನದ ವಕ್ತಾರರು ಅಂತ್ಯಜರನ್ನು ಸಭೆಗೆ ಕರೆ ತಂದು ಮಧ್ಯಾಹ್ನ ಮತ್ತೊಮ್ಮೆ ಸಭೆ ಕೂಡಿಸಿದ ಬಳಿಕವೇ ಗಾಂಧೀಜಿ, ಸಭಿಕರನ್ನುದ್ದೇಶಿಸಿ ಮಾತನಾಡಿದ್ದು...

ಮುಂಬೈ ಪ್ರಾಂತೀಯ ರಾಜಕೀಯ ಪರಿಷತ್ತಿನ 17ನೇ ಸಭೆಗಾಗಿ 1918ರ ಮೇ 5ರಂದು ಮಹಾತ್ಮ ಗಾಂಧಿ ಪತ್ನಿ ಕಸ್ತೂರಬಾ, ಗಾನಕೋಗಿಲೆ ಸರೋಜಿನಿ ನಾಯ್ಡು ಜತೆ ವಿಜಯಪುರಕ್ಕೆ ಬಂದಿದ್ದರು. ಕೌಜಲಗಿ ಶ್ರೀನಿವಾಸರಾಯರು ಸಭೆಯ ಸ್ವಾಗತಾಧ್ಯಕ್ಷರಾಗಿದ್ದರು. ಸರ್ದಾರ್‌ ವಲ್ಲಭಭಾಯಿ ಪಟೇಲರ ಸಹೋದರ ವಿಠಲಭಾಯಿ ಪಟೇಲರು ಅಧ್ಯಕ್ಷರಿದ್ದರು.

ರಾಜಕೀಯ ಪರಿಷತ್ತಿನ ಸಭೆ ಬಳಿಕ, ಅಸ್ಪೃಶ್ಯತಾ ನಿವಾರಣಾ ಸಭೆ ನಡೆಸಿದ ಮಹಾತ್ಮ, ನಂತರ ಸರೋಜಿನಿ ನಾಯ್ಡು, ವಿಠಲಭಾಯಿ ಪಟೇಲರು ಸೇರಿದಂತೆ ಇನ್ನಿತರ ಪ್ರಮುಖರ ಜತೆ ಸ್ಥಳೀಯರಾದ ದಿನಕರ ಸಖಾರು ಡಂಬಳ ಜತೆ ಗೋಳಗುಮ್ಮಟ ವೀಕ್ಷಿಸಿದ್ದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.

ಅವಿಭಜಿತ ವಿಜಯಪುರ ಜಿಲ್ಲೆಗೆ ಮಹಾತ್ಮ ನೀಡಿದ ಮೊದಲ ಭೇಟಿಯಿದು. ಅದು ತಮ್ಮ 50ನೇ ವಯಸ್ಸಿನಲ್ಲಿ. ಇದೀಗ ಈ ಭೇಟಿಗೆ ಶತಮಾನೋತ್ಸವದ ಸಂಭ್ರಮ.

 

ವಿಜಯಪುರದಲ್ಲಿ ನಡೆದ ರಾಜಕೀಯ ಪರಿಷತ್ತಿನ ಸಭೆಯಲ್ಲಿ ‘ಭಾರತೀಯ ಸೈನಿಕರ ತರಬೇತಿಗಾಗಿ ಪ್ರತ್ಯೇಕ ಸೈನಿಕ ಶಾಲೆಯ ಆರಂಭಕ್ಕೆ ಹಾಗೂ ಉನ್ನತ ಅಧಿಕಾರ ಸ್ಥಾನಗಳನ್ನು ತುಂಬುವಾಗ ವರ್ಣಭೇದವಿಲ್ಲದೆ ಭಾರತೀಯರಿಗೂ ಸಮಾನ ಅವಕಾಶವನ್ನು ಬ್ರಿಟಿಷ್‌ ಸರ್ಕಾರ ನೀಡಬೇಕೆಂಬ’ ನಿರ್ಣಯವನ್ನು ಅಂಗೀಕರಿಸಲಾಗಿತ್ತು ಎಂಬ ಉಲ್ಲೇಖವಿದೆ.

ಮೇ 6ರಂದು ವಿಜಯಪುರದಲ್ಲಿ ಗಾಂಧೀಜಿ ವಿವಾದಕ್ಕೆಡೆಗೊಡದೆ ಭಾಷಣ ಮಾಡಿದರು. ಸಭೆಯಲ್ಲಿ ಯುವಕನೊಬ್ಬನ ಕೈಯಲ್ಲಿದ್ದ ಕಾಗದದ ನಿಶಾನೆಯನ್ನು ನೋಡಿ ಸ್ವರಾಜ್ಯ ಕಾಗದದಲ್ಲೇ ಉಳಿಯಬೇಕೆ ? ಎಂದಿದ್ದರು. ವಿಜಯಪುರದಿಂದ ಹೊರಟ ಮಹಾತ್ಮನನ್ನು ಕಣ್ತುಂಬಿಕೊಳ್ಳಲು ಹಾದಿಯುದ್ದಕ್ಕೂ ಜನರು ಕಾತರದಿಂದ ಕಾದು ನಿಂತಿದ್ದರು ಎಂದು ಸ್ವಾತಂತ್ರ್ಯ ಹೋರಾಟಗಾರ, ಆ ಸಂದರ್ಭ ಗಾಂಧಿ ಜತೆಯಲ್ಲಿದ್ದ ಗಂಗಾಧರರಾವ್‌ ದೇಶಪಾಂಡೆ ತಮ್ಮ ಆತ್ಮಚರಿತ್ರೆಯಲ್ಲಿ ಈ ಎಲ್ಲಾ ಅಂಶಗಳನ್ನು ದಾಖಲಿಸಿದ್ದಾರೆ.

ಕೊಲ್ಹಾರಕ್ಕೆ ಗಾಂಧೀಜಿ ಭೇಟಿ ನೀಡಿದಾಗ ಪುಣೆಯ ಗುತ್ತಿಗೆದಾರರಾದ ರಾನಡೆ, ಅವರಿಗೆ ನೂಲಿನ ಹಾರ ಹಾಕಿ ಸ್ವಾಗತಿಸಿದರು. ಜತೆಯಲ್ಲಿ ಕಸ್ತೂರಬಾ ಇದ್ದರು. ನೆರೆದಿದ್ದ ಜನರನ್ನು ಉದ್ದೇಶಿಸಿ ಗಾಂಧಿ ಮಾತನಾಡಿದರು ಎಂಬುದನ್ನು ಕೊಲ್ಹಾರದ ಶಂಕರರಾವ್‌ ದೇಶಪಾಂಡೆ ಉಲ್ಲೇಖಿಸಿದ್ದಾರೆ.

ಟೀಕೆಯನ್ನು ಸಹಿಸಿದರು; ಉತ್ತರಿಸಿದರು..!

‘ಒಂದೇ ವರ್ಷದಲ್ಲಿ ಸ್ವರಾಜ್ಯ’ ಎಂಬ ಘೋಷಣೆಯೊಂದಿಗೆ ತಿಲಕರ ಸ್ವರಾಜ್ಯ ನಿಧಿಗೆ ₹ 1 ಕೋಟಿ ಸಂಗ್ರಹಿಸುವ ಹುಮ್ಮಸ್ಸಿನೊಂದಿಗೆ, ಅಸಹಕಾರ ಚಳವಳಿಯ ಬಗ್ಗೆ ಜನಾಭಿಪ್ರಾಯ ಮೂಡಿಸುವ ಸಲುವಾಗಿ ಗಾಂಧೀಜಿ ಹಿಂದೆ ಅರ್ಧಕ್ಕೆ ನಿಂತಿದ್ದ ತಮ್ಮ ಕರ್ನಾಟಕದ ಪ್ರವಾಸವನ್ನು ಪುನರಾರಂಭಿಸಿದರು.

1921ರ ಮೇ 28ರಂದು ಎರಡನೇ ಬಾರಿಗೆ ಗಾಂಧಿ ಅವಿಭಜಿತ ಜಿಲ್ಲೆಗೆ ಭೇಟಿ ನೀಡಿದರು. ಈ ಸಂದರ್ಭ ಬಾಗಲಕೋಟೆ, ವಿಜಯಪುರದಲ್ಲಿ ಮಾತನಾಡಿದರು. ಬಾಗಲಕೋಟೆಯಲ್ಲಿ ಗಾಂಧಿ ಭಾಷಣ ಆಲಿಸಲು 11000 ಜನರು ನೆರೆದಿದ್ದರು. ಇಲ್ಲಿ ಸ್ವರಾಜ್ಯ ನಿಧಿಗೆ ₹ 1000 ದೇಣಿಗೆ ಸಂಗ್ರಹಗೊಂಡಿತು.

ಬಾಗಲಕೋಟೆಯಿಂದ ವಿಜಯಪುರಕ್ಕೆ ಗಾಂಧೀಜಿ ಮೋಟಾರಿನಲ್ಲಿ ಪ್ರವಾಸ ಮಾಡಿದರು. ನಡುವಿನ ಹಾದಿಯುದ್ದಕ್ಕೂ ಅಪಾರ ಸಂಖ್ಯೆಯ ಜನಸ್ತೋಮ ಸ್ವಾಗತಕ್ಕೆ ಕಾದು ನಿಂತಿತ್ತು. ಇದರ ನಡುವೆಯೇ ಕಡು ಬೇಸಿಗೆಯ ಬಿಸಿಲಲ್ಲೂ ಕೆಂಡದಂಥ ಬಿಸಿಲನ್ನು ಲೆಕ್ಕಿಸದೆ, ದಾರಿಯುದ್ದಕ್ಕೂ ಖಡಿ ಒಡೆಯುತ್ತಿದ್ದ ಬಡ ಮಹಿಳೆಯರನ್ನು ಕಂಡ ಗಾಂಧೀಜಿ ವ್ಯಥೆ ಪಟ್ಟರು.

ವಿಜಯಪುರಕ್ಕೆ ಬಂದಾಗ ಸಂಜೆಯಾಗಿತ್ತು. ಆರಂಭದಲ್ಲೇ ಮಹಿಳೆಯರ ಸಭೆಯೊಂದರಲ್ಲಿ ಮಾತನಾಡಿದರು. ನಂತರ ತಾಜ್‌ಬಾವಡಿ ಆವರಣದಲ್ಲಿ ನೆರೆದಿದ್ದ 12000 ಜನರನ್ನುದ್ದೇಶಿಸಿ ಗಾಂಧೀಜಿ ಅಸಹಕಾರದ ಬಗ್ಗೆ ಮಾತನಾಡಿದರು.

ಸಭೆಯಲ್ಲಿ ಬ್ರಾಹ್ಮಣೇತರ ಮುಖಂಡರಾದ ಶಾಬಾದಿ ಗುಂಡಪ್ಪ ಎಂಬುವವರಿಗೂ ಮಾತನಾಡಲು ಅವಕಾಶ ನೀಡಲಾಗಿತ್ತು. ಗುಂಡಪ್ಪ ಗಾಂಧಿಯನ್ನು ‘ಬ್ರಾಹ್ಮಣರ ಕೈಗೊಂಬೆ’ ಎಂದು ಜರಿದು ಟೀಕಿಸಿದರು. ಇದನ್ನು ಆಲಿಸಿದ ಮಹಾತ್ಮ, ಗುಂಡಪ್ಪ ಅವರಿಗೆ ಅವರ ಮನದಲ್ಲಿದ್ದ ಎಲ್ಲಾ ಅನುಮಾನ ಪರಿಹರಿಸುವ ಕೆಲಸ ನಡೆಸಿ, ಸ್ವಾತಂತ್ರ್ಯಕ್ಕಾಗಿ ಒಗ್ಗಟ್ಟಿನಿಂದ ಹೋರಾಡಬೇಕು ಎಂದು ಹುರಿದುಂಬಿಸಿದ್ದು ಸ್ಮರಣಾರ್ಹ.

ಈ ಸಭೆಯಲ್ಲೇ ಬಾಗಲಕೋಟೆಯ ಸೇಠ್‌ ರಾಮದಾಸ್‌ ಬ್ರಿಟಿಷ್‌ ಸರ್ಕಾರ ತಮಗೆ ನೀಡಿದ್ದ ರಾವ್‌ ಸಾಹೇಬ್‌ ಬಿರುದನ್ನು ಹಿಂತಿರುಗಿಸುವುದಾಗಿ ಘೋಷಿಸಿದ್ದು ವಿಶೇಷ ಎಂಬುದನ್ನು ಗಂಗಾಧರರಾವ್‌ ದೇಶಪಾಂಡೆ ತಮ್ಮ ಆತ್ಮಚರಿತ್ರೆಯಲ್ಲಿ ಉಲ್ಲೇಖಿಸಿದ್ದಾರೆ.

‘ರಾಟೆ ಬರಗಾಲಕ್ಕೆ ವಿಮೆಯಿದ್ದಂತೆ’

ವಿಜಯಪುರದಲ್ಲಿ ಸ್ವರಾಜ್ಯ ನಿಧಿ ಸಂಗ್ರಹಿಸಿದ ಬಳಿಕ ಮಾತನಾಡಿದ ಗಾಂಧೀಜಿ, ಜಿಲ್ಲೆಯಲ್ಲಿ ಎಷ್ಟು ರಾಟೆಗಳಿವೆ ಎಂದು ಕೇಳುತ್ತಾರೆ. ಸಂಘಟಕರು 1400 ರಾಟೆಗಳು ಎನ್ನುತ್ತಿದ್ದಂತೆ ಗಾಂಧಿ ವಿಷಾದ ವ್ಯಕ್ತಪಡಿಸುತ್ತಾರೆ.

‘ರಾಟೆ ಬರಗಾಲಕ್ಕೆ ವಿಮೆಯಿದ್ದಂತೆ. ಮನೆ ಮನೆಯಲ್ಲಿ ರಾಟೆ ತಿರುಗಿದಾಗ ಸ್ವದೇಶಿ ಬೆಳೆಯುತ್ತದೆ. ವಿದೇಶಿ ವಸ್ತ್ರದ ಬಹಿಷ್ಕಾರವೂ ಆಗುತ್ತದೆ. ಸ್ವರಾಜ್ಯ ನಮ್ಮ ಜನ್ಮ ಸಿದ್ಧ ಹಕ್ಕು ಎಂಬ ತಿಲಕರ ಮಂತ್ರವನ್ನು ಜಪಿಸಿ, ರಾಟೆ ನಮಗೆ ಸ್ವರಾಜ್ಯವನ್ನು ಕೊಡಲಿದೆ’ ಎಂದು ಗಾಂಧಿ ತಮ್ಮ ಭಾಷಣದಲ್ಲಿ ಹೇಳಿದರು. ಅಂದೇ ವಿಜಯಪುರದಿಂದ ಸೊಲ್ಲಾಪುರಕ್ಕೆ ಪ್ರಯಾಣ ಬೆಳೆಸಿದರು ಎಂಬುದು ಚರಿತ್ರೆಯ ಪುಟಗಳಲ್ಲಿ ದಾಖಲಾಗಿದೆ.

1934ರಲ್ಲಿ ಹರಿಜನ ಪ್ರವಾಸ ಹಮ್ಮಿಕೊಂಡಿದ್ದ ಗಾಂಧೀಜಿ ಆ ಸಂದರ್ಭವೂ ವಿಜಯಪುರ, ಹೊನವಾಡಗಳಿಗೂ ಭೇಟಿ ನೀಡಿದ್ದರು ಎಂಬುದು ಇತಿಹಾಸದಲ್ಲಿ ಉಲ್ಲೇಖವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !