‘60 ಸಾವಿರ ಮನೆಗಳ ನಿರ್ಮಾಣಕ್ಕೆ12ರಂದು ಸಿ.ಎಂ. ಶಂಕುಸ್ಥಾಪನೆ’

7
ಉತ್ತರ ಕರ್ನಾಟಕ ಭಾಗದಲ್ಲಿ 22 ಸಾವಿರ ಮನೆ ನಿರ್ಮಾಣ– ಸಚಿವ ಯು.ಟಿ. ಖಾದರ್‌

‘60 ಸಾವಿರ ಮನೆಗಳ ನಿರ್ಮಾಣಕ್ಕೆ12ರಂದು ಸಿ.ಎಂ. ಶಂಕುಸ್ಥಾಪನೆ’

Published:
Updated:

ಬೆಂಗಳೂರು: ‘ಮುಖ್ಯಮಂತ್ರಿ ವಸತಿ ಯೋಜನೆ’ಯಡಿ 60 ಸಾವಿರ ಮನೆಗಳ ನಿರ್ಮಾಣಕ್ಕೆ ಇದೇ 12ರಂದು ಹುಬ್ಬಳ್ಳಿಯಲ್ಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ’ ಎಂದು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್‌ ತಿಳಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ಈ ಪೈಕಿ 22 ಸಾವಿರ ಮನೆಗಳು ಉತ್ತರ ಕರ್ನಾಟಕ ಭಾಗದಲ್ಲಿ ನಿರ್ಮಾಣವಾಗಲಿದೆ. ಈಗಾಗಲೇ ಟೆಂಡರ್‌ ಪ್ರಕ್ರಿಯೆ ಮುಗಿದಿದೆ. ಎಂಟು ತಿಂಗಳಲ್ಲಿ ಯೋಜನೆ ಪೂರ್ಣಗೊಳ್ಳಲಿದೆ’ ಎಂದರು.

ಒಂದು‌ ಮನೆ ನಿರ್ಮಿಸಲು ₹ 4.50 ಲಕ್ಷ ಖರ್ಚು ಅಂದಾಜಿಸಲಾಗಿದೆ. ಒಟ್ಟು ವೆಚ್ಚದಲ್ಲಿ ಕೇಂದ್ರ ಸರ್ಕಾರ ಶೇ 30, ರಾಜ್ಯ ಸರ್ಕಾರ ಶೇ 40, ಬ್ಯಾಂಕ್ ನೆರವು ಶೇ 20 ಸಿಗಲಿದೆ. ಉಳಿದ ಶೇ 10 ಅನ್ನು ಫಲಾನುಭವಿಗಳು ಭರಿಸಬೇಕು.

ಈ ಯೋಜನೆಯಡಿ ಫಲಾನುಭವಿಗಳಿಗೆ ಶೇ 50ರಷ್ಟು ಸಹಾಯಧನ ಸಿಗಲಿದೆ. ಪರಿಶಿಷ್ಟರಿಗೆ ಕೇಂದ್ರ ₹ 1.50 ಲಕ್ಷ, ರಾಜ್ಯ  ₹ 2 ಲಕ್ಷ ಸಹಾಯಧನ ನೀಡಲಿದೆ. ಸಾಮಾನ್ಯ ವರ್ಗದವರಿಗೆ ಕೇಂದ್ರ ₹ 1.50 ಲಕ್ಷ, ರಾಜ್ಯ ಸರ್ಕಾರ 1.20 ಲಕ್ಷ ಸಬ್ಸಿಡಿ ನೀಡಲಿದೆ ಎಂದು ಅವರು ವಿವರಿಸಿದರು.

ಶೀಘ್ರದಲ್ಲೇ ಟೆಂಡರ್‌: ‘ಇದೇ ಯೋಜನೆಯಡಿ ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ 1 ಲಕ್ಷ ಮನೆ ನಿರ್ಮಿಸುವ ಗುರಿ ಹೊಂದಲಾಗಿದ್ದು, ಈಗಾಗಲೇ 55 ಸಾವಿರ ನಿರ್ಮಾಣ ಆಗಿದೆ. ಉಳಿದ 45 ಸಾವಿರ ಮನೆಗಳ ನಿರ್ಮಾಣಕ್ಕೆ ಶೀಘ್ರದಲ್ಲೇ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು’ ಎಂದು ಖಾದರ್‌ ಹೇಳಿದರು.

‘ಈ ಯೋಜನೆಯಡಿ ಒಂದು ಮತ್ತು ಎರಡು ಬೆಡ್‌ ರೂಂಗಳ ಮನೆಗಳನ್ನು ನಿರ್ಮಿಸಲಾಗುವುದು. ಒಂದು ಬೆಡ್‌ ರೂಂನ ಮನೆಗಳಿಗೆ ಮಾತ್ರ ಸಹಾಯಧನ ಸಿಗಲಿದೆ. ಫಲಾನುಭವಿಗಳಿಗೆ ಬ್ಯಾಂಕ್‌ ಸಾಲ ಸೌಲಭ್ಯ ನೀಡಲಾಗುವುದು’ ಎಂದೂ ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !