ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷ ಮನೆಗಳ ನಿರ್ಮಾಣ ಯೋಜನೆಗೆ ಚಾಲನೆ

* ನಗರ ಪ್ರದೇಶದ ವ್ಯಾಪ್ತಿಯಲ್ಲಿ ತಲೆ ಎತ್ತಲಿವೆ ಬಹುಮಹಡಿ ವಸತಿಗಳು * ಅರ್ಜಿ ಸಲ್ಲಿಸಲು ಮೇವರೆಗೆ ಅವಕಾಶ
Last Updated 8 ಮಾರ್ಚ್ 2019, 19:47 IST
ಅಕ್ಷರ ಗಾತ್ರ

ಬೆಂಗಳೂರು: ಸೂರಿಲ್ಲದ ಜನರಿಗೆ ಬೆಚ್ಚನೆಯ ಗೂಡೊಂದನ್ನು ಕಟ್ಟಿಕೊಡುವ ‘ಬೆಂಗಳೂರು ನಗರ ಬಹುಮಹಡಿ ವಿನ್ಯಾಸದ 1 ಲಕ್ಷ ಮನೆಗಳ ನಿರ್ಮಾಣ’ ವಸತಿ ಯೋಜನೆಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಕುದುರೆಗೆರೆ ಗ್ರಾಮದಲ್ಲಿ ಭೂಮಿಪೂಜೆ ನೆರವೇರಿಸಿದರು.

ಈ ಯೋಜನೆಯ ಫಲಾನುಭವಿಯಾಗಲು ಅರ್ಜಿ ಸಲ್ಲಿಸುವ 2ನೇ ಹಂತದ ಪ್ರಕ್ರಿಯೆಗೆ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಅವರು ಇದೇ ವೇಳೆ ಚಾಲನೆ ನೀಡಿದರು.

‘ಪ್ರತಿಯೊಬ್ಬರು ಮನೆ ಹೊಂದಬೇಕೆಂಬ ಸದುದ್ದೇಶದಿಂದ ಯೋಜನೆ ರೂಪಿಸಿದ್ದೇವೆ. ಇದರಲ್ಲಿ ಕಳಪೆ ಕಾಮಗಾರಿಗೆ ಆಸ್ಪದ ಕೊಡುವುದಿಲ್ಲ. ಗುಣಮಟ್ಟದಲ್ಲಿ ಖಾಸಗಿಯವರಿಗೆ ಸರಿಸಮವಾಗಿ ಮನೆಗಳನ್ನು ಕಟ್ಟುತ್ತೇವೆ’ ಎಂದು ಕುಮಾರಸ್ವಾಮಿ ಹೇಳಿದರು.

‘ಬೆಂಗಳೂರು ನಗರ ಜಿಲ್ಲೆಯಲ್ಲಿನ ಜನರೂ ಸಹ ಅರ್ಜಿಗಳನ್ನು ಸಲ್ಲಿಸಲು ಅವಕಾಶ ನೀಡಲಾಗುವುದು’ ಎಂದು ಅವರು ತಿಳಿಸಿದರು.

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಸಚಿವ ಕೃಷ್ಣ ಬೈರೇಗೌಡ, ‘ಜನರಿಗೆ ಕೈಗೆಟಕುವ ದರದಲ್ಲಿ ಮನೆಗಳನ್ನು ನಿರ್ಮಾಣ ಮಾಡಲು 3 ವರ್ಷಗಳಿಂದ ತಯಾರಿ ನಡೆಸಿ, ಯೋಜನೆ ರೂಪಿಸಿದ್ದೇವೆ. ಈ ಯೋಜನೆಯನ್ನು ಜಂಟಿ ಸಹಭಾಗಿತ್ವದಲ್ಲಿ, ಇನ್ನಷ್ಟು ಸಹಾಯಧನ ನೀಡಿ ಅನುಷ್ಠಾನಗೊಳಿಸಲು ಯೋಚಿಸುತ್ತಿದ್ದೇವೆ’ ಎಂದರು.

ಬಡಾವಣೆಗಳು ನಿರ್ಮಾಣಗೊಳ್ಳುವ ಪ್ರದೇಶಗಳು

ಹೊರಮಾವು, ಮಂಡೂರು, ಬಿದರಹಳ್ಳಿ, ಕ್ಯಾಲಸನಹಳ್ಳಿ, ನಿಂಬೆಕಾಯಿಪುರ, ಗೂಳಿಮಂಗಲ, ಅಳಿಬೊಮ್ಮಸಂದ್ರ, ಹಳೇಹಳ್ಳಿ, ಹೆಗ್ಗೊಂಡನಹಳ್ಳಿ, ಕೂಗೂರು, ಚಿಕ್ಕನಹಳ್ಳಿ–ಕಾಮನಹಳ್ಳಿ, ದೊಡ್ಡನಾಗಮಂಗಲ, ನ್ಯಾನಪ್ಪನಹಳ್ಳಿ, ಕಾಡ ಅಗ್ರಹಾರ, ಎಸ್‌.ಬಿಂಗೀಪುರ, ಸೊಪ್ಪಹಳ್ಳಿ, ಹಾಲದೇನಹಳ್ಳಿ, ಕೊಪ್ಪ, ಲಿಂಗಾಪುರ, ಗಾಣೀಗಾರನಹಳ್ಳಿ, ಪಿಲ್ಲಹಳ್ಳಿ, ಆಲೂರು, ತೋಟಗೆರೆ, ಅಗ್ರಹಾರ ಪಾಳ್ಯ, ಲಕ್ಷ್ಮೀಪುರ, ಗೋವಿಂದಪುರ, ಕುದುರೆಗೆರೆ, ಚಿಕ್ಕಜಾಲ, ಶ್ರೀರಾಮನಹಳ್ಳಿ, ಅದ್ದಿಗಾನಹಳ್ಳಿ, ಲಿಂಗರಾಜಸಾಗರ, ಬೋಯಿಲಹಳ್ಳಿ, ಸಾದೇನಹಳ್ಳಿ, ಮಾರೇನಹಳ್ಳಿ, ಮಹದೇವ ಕೊಡಿಗೆಹಳ್ಳಿ, ಬೈನಹಳ್ಳಿ, ನವರತ್ನ ಅಗ್ರಹಾರ, ಕುಕ್ಕನಹಳ್ಳಿ, ಬೆತ್ತನಗೆರೆ, ನೆಲಗುಳಿ, ಕೆಂಚನಪುರ, ಭೀಮನಕುಪ್ಪೆ, ದೇವಗೆರೆ, ಮುದ್ದಯ್ಯನಪಾಳ್ಯ, ಚಿಕ್ಕೆಲ್ಲೂರು ರಾಂಪುರ, ಪುನಗಮಾರಹಳ್ಳಿ.

***

ಸಹಾಯಧನ ಸಂಯೋಜನೆ ಮೂಲಗಳು

* ಡಾ.ಬಿ.ಆರ್‌.ಅಂಬೇಡ್ಕರ್‌ ವಸತಿ ಯೋಜನೆ

* ವಾಜಪೇಯಿ ನಗರ ವಸತಿ ಯೋಜನೆ

* ಪ್ರಧಾನ ಮಂತ್ರಿ ಆವಾಸ್‌ ಯೋಜನೆ(ನಗರ)

ಮನೆಗಳ ಹಂಚಿಕೆ ಮೀಸಲಾತಿ

* ಪರಿಶಿಷ್ಟ ಜಾತಿಗೆ ಶೇ 30

* ಪರಿಶಿಷ್ಟ ಪಂಗಡಕ್ಕೆ ಶೇ 10

* ಅಲ್ಪಸಂಖ್ಯಾತರಿಗೆ ಶೇ 10

* ಸಾಮಾನ್ಯ ವರ್ಗಕ್ಕೆ ಶೇ 50

ಫಲಾನುಭವಿಯಾಗಲು ಮಾನದಂಡ

* ರಾಜ್ಯದಲ್ಲಿ ಎಲ್ಲಿಯೂ ಸ್ವಂತ ಮನೆ ಹೊಂದಿರಬಾರದು

* ಕುಟುಂಬದ ವಾರ್ಷಿಕ ಆದಾಯ ₹ 3 ಲಕ್ಷ ಮೀರಿರಬಾರದು

* ಕನಿಷ್ಠ 5 ವರ್ಷಗಳಿಗಿಂತ ಮೇಲ್ಪಟ್ಟು ಬೆಂಗಳೂರು ವಾಸಿಯಾಗಿರಬೇಕು(ಬಿಡಿಎ ವ್ಯಾಪ್ತಿ)

ಯೋಜನೆಯ ಬಡಾವಣೆಯಲ್ಲಿನ ಸೌಲಭ್ಯಗಳು

* ಮಳೆನೀರು ಸಂಗ್ರಹ

* ತ್ಯಾಜ್ಯನೀರು ಸಂಸ್ಕರಣಾ ಘಟಕ

* ಪ್ರತಿ ಬ್ಲಾಕ್‌ನಲ್ಲಿ ನೀರು ಸಂಗ್ರಹಣಾ ಸಂಪ್‌ಗಳು

* ನೀರು ಪೂರೈಕೆಗೆ ಪಂಪ್‌ಹೌಸ್‌ಗಳು

* ಸೋಲಾರ್‌ ಬೀದಿ ದೀಪಗಳು

* ಕನಿಷ್ಠ 3 ಅಂತಸ್ತುಗಳಿಂದ ಗರಿಷ್ಠ 14 ಅಂತಸ್ತುಗಳ ಕಟ್ಟಡಗಳು

ಅರ್ಜಿ ಶುಲ್ಕ : ₹ 100

ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನ: ಮೇ 31

ಮಾಹಿತಿಗೆ:https://ashraya.karnataka.gov.in/

***

30–40 ವರ್ಷಗಳವರೆಗೂ ಸಮಸ್ಯೆಗಳೇ ಕಾಣಿಸಿಕೊಳ್ಳದ ಗುಣಮಟ್ಟದ ಮನೆಗಳನ್ನು ಬಡವರಿಗೆ ಕಟ್ಟಿಕೊಡುತ್ತೇವೆ.

–ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT