ಸೋಮವಾರ, ಸೆಪ್ಟೆಂಬರ್ 16, 2019
22 °C
ರೋಗ ಹತೋಟಿಗೆ ಕ್ರಮ ಕೈಗೊಂಡಿಲ್ಲ: ಜಿಲ್ಲಾಧಿಕಾರಿ ಮಂಜುನಾಥ್‌ ಅಸಮಾಧಾನ

ಡೆಂಗಿ ಪ್ರಕರಣ ಪತ್ತೆ: ಅಧಿಕಾರಿಗಳಿಗೆ ತರಾಟೆ

Published:
Updated:
Prajavani

ಕೋಲಾರ: ‘ಜಿಲ್ಲೆಯಲ್ಲಿ 4 ತಿಂಗಳಲ್ಲಿ 13 ಡೆಂಗಿ ಪ್ರಕರಣಗಳು ವರದಿಯಾಗಿದ್ದರೂ ರೋಗ ಹತೋಟಿಗೆ ಏಕೆ ಕ್ರಮ ಕೈಗೊಂಡಿಲ್ಲ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಆರೋಗ್ಯ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಡೆಂಗಿ ಮತ್ತು ಚಿಕುನ್‌ ಗುನ್ಯ ಕಾಯಿಲೆ ಹತೋಟಿಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಇಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಮಾತನಾಡಿ, ‘ಕಾಯಿಲೆಗಳನ್ನು ನಿಯಂತ್ರಿಸುವುದೇ ಆರೋಗ್ಯ ಇಲಾಖೆ ಅಧಿಕಾರಿಗಳ ಕೆಲಸ. ಡೆಂಗಿ ಮತ್ತು ಚಿಕುನ್‌ ಗುನ್ಯ ಬಗ್ಗೆ ಜಾಗೃತಿ ಮೂಡಿಸಲು ಇಲಾಖೆಗೆ ₹ 11 ಲಕ್ಷ ಮಂಜೂರು ಮಾಡಲಾಗಿದೆ. ನೆಪಕ್ಕೆ ರಸ್ತೆಯಲ್ಲಿ ಜಾಥಾ ಮಾಡಿದರೆ ರೋಗ ನಿಯಂತ್ರಣಕ್ಕೆ ಬರುವುದಿಲ್ಲ’ ಎಂದು ಕೆಂಡಾಮಂಡಲರಾದರು.

‘ಇಲಾಖೆಯಲ್ಲಿ ಆಶಾ ಕಾರ್ಯಕರ್ತರ ದೊಡ್ಡ ತಂಡವೇ ಇದೆ. ಆದರೂ ಸಾರ್ವಜನಿಕರಿಗೆ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸುವಲ್ಲಿ ವಿಫಲರಾಗಿದ್ದೀರಿ. ಮಳೆಗಾಲಕ್ಕೆ ಮುನ್ನವೇ ಕಾಯಿಲೆ ಕಾಣಿಸಿಕೊಂಡಿರುವುದು ಅಧಿಕಾರಿಗಳ ಬೇಜಬ್ದಾರಿಗೆ ನಿದರ್ಶನ. ವೈದ್ಯರು ಹಾಗೂ ಅಧಿಕಾರಿಗಳಿಗೆ ಕೆಲಸ ಮಾಡುವ ಇಚ್ಛಾಶಕ್ತಿ ಇಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಜಿಲ್ಲೆಯಲ್ಲಿ ಕೆರೆ, ಕುಂಟೆ, ಜಾನುವಾರು ತೊಟ್ಟಿಗಳು ಎಷ್ಟಿವೆ ಎಂಬ ಮಾಹಿತಿ ಕಲೆ ಹಾಕಿ 15 ದಿನಕ್ಕೊಮ್ಮೆ ಸಭೆ ನಡೆಸಿ ಸಿಬ್ಬಂದಿಯ ಕೆಲಸದ ಬಗ್ಗೆ ಪರಿಶೀಲಿಸಬೇಕು. ರೋಗ ನಿಯಂತ್ರಣ ಕ್ರಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಆಶಾ ಕಾರ್ಯಕರ್ತರಿಂದ ಮನೆ ಮನೆಗೆ ಭೇಟಿ ನೀಡಿ ಅರಿವು ಮೂಡಿಸಬೇಕು’ ಎಂದು ಸೂಚಿಸಿದರು.

ಬೇಜವಾಬ್ದಾರಿಯ ಪರಮಾವಧಿ: ‘ಕೋಲಾರ ತಾಲ್ಲೂಕಿನಲ್ಲಿ 17, ಮಾಲೂರು 1, ಬಂಗಾರಪೇಟೆ 9, ಮುಳಬಾಗಿಲು 7, ಕೆಜಿಎಫ್ 2 ಪ್ರಕರಣ ಸೇರಿದಂತೆ ದಾಖಲಾದ ಒಟ್ಟಾರೆ ಸಂಶಯಾಸ್ಪದ ಪ್ರಕರಣಗಳ ಸಂಖ್ಯೆ 36 ಇದೆ. ಈ ಪೈಕಿ 13 ಪ್ರಕರಣಗಳು ದೃಢಪಟ್ಟಿವೆ. 13 ಡೆಂಗಿ ಮತ್ತು 10 ಚಿಕುನ್‌ ಗುನ್ಯ ಪ್ರಕರಣಗಳಿವೆ. ಹಿಂದಿನ ವರ್ಷ ಮಲೇರಿಯಾ 8, ಡೆಂಗಿ 15, ಚಿಕುನ್‌ ಗುನ್ಯ 30 ಪ್ರಕರಣ ವರದಿಯಾಗಿದ್ದವು. ಈ ವರ್ಷ ಕೇವಲ 4 ತಿಂಗಳಲ್ಲೇ 13 ಡೆಂಗಿ ಪ್ರಕರಣ ಪತ್ತೆಯಾಗಿರುವುದು ಅಧಿಕಾರಿಗಳ ಬೇಜವಾಬ್ದಾರಿಯ ಪರಮಾವಧಿ’ ಎಂದು ಕಿಡಿಕಾರಿದರು.

‘ನಗರದ ಪ್ರದೇಶದಲ್ಲಿ ಜನ ತಮ್ಮ ಮನೆ ಮುಂದೆ 10 ನಿಮಿಷ ಕುಳಿತುಕೊಳ್ಳಲು ಸಾಧ್ಯವಿಲ್ಲ. ಅಷ್ಟೊಂದು ಸೊಳ್ಳೆಗಳಿವೆ. ಗ್ರಾಮೀಣ ಭಾಗದ ಜನರು ಹಾಗೂ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಆರೋಗ್ಯದ ಬಗ್ಗೆ ಗಮನ ಹರಿಸಬೇಕು. ಸಿಬ್ಬಂದಿ ಹಾಗೂ ಸಲಕರಣೆ ಕೊರತೆ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುವುದು ಅಧಿಕಾರಿಗಳ ಜವಾಬ್ದಾರಿ’ ಎಂದು ಹೇಳಿದರು.

ಜಿಲ್ಲಾ ಮಟ್ಟದಲ್ಲಿ ಮೇ 16ರಂದು ಡೆಂಗಿ ವಿರೋಧಿ ದಿನ ಆಚರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಜಗದೀಶ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎನ್.ವಿಜಯ್‌ಕುಮಾರ್, ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳಾದ ಡಾ.ಸರಸ್ವತಿ, ಡಾ.ಜಗದೀಶ್, ಸಹಾಯಕ ಅಧಿಕಾರಿ ವೇಣುಗೋಪಾಲ್ ಪಾಲ್ಗೊಂಡಿದ್ದರು.

Post Comments (+)