ಭಾನುವಾರ, ಸೆಪ್ಟೆಂಬರ್ 26, 2021
21 °C
ಕಿದ್ವಾಯಿ ಸಂಸ್ಥೆಯಲ್ಲಿ ಬೋನ್‌ಮ್ಯಾರೊ ಟ್ರಾನ್ಸ್‌ಪ್ಲಾಂಟ್‌ ಕೇಂದ್ರ

ರಕ್ತ ಕ್ಯಾನ್ಸರ್‌ ಮುಕ್ತಿಗೆ ಹೊಸ ಘಟಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರೋಗಿಗಳ ದೇಹವನ್ನು ರಕ್ತದ ಕ್ಯಾನ್ಸರ್‌ನಿಂದ ಮುಕ್ತ ಮಾಡುವ ಬೋನ್‌ಮ್ಯಾರೊ(ಅಸ್ಥಿಮಜ್ಜೆ) ಟ್ರಾನ್ಸ್‌ಪ್ಲಾಂಟ್‌ ಘಟಕ ನಿರ್ಮಾಣಕ್ಕೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಆವರಣದಲ್ಲಿ ಶುಕ್ರವಾರ ಶಿಲಾನ್ಯಾಸ ನೆರವೇರಿಸಿದರು.

ಈ ಘಟಕವು ಜಿಂದಾಲ್‌ ಬ್ಲಾಕ್‌ನ ಮೂರನೇ ಅಂತಸ್ತಿನ ಮೇಲಿನ ಸ್ಥಳದಲ್ಲಿ ನಿರ್ಮಾಣಗೊಳ್ಳಲಿದೆ. ಘಟಕಕ್ಕೆ ತೆರಳಲು ಬ್ಲಾಕ್‌ನ ಹಿಂಭಾಗದಲ್ಲಿ ಪ್ರತ್ಯೇಕ ಮೆಟ್ಟಿಲುಗಳು ಮತ್ತು ಲಿಫ್ಟ್‌ ಸೌಲಭ್ಯವನ್ನು ಕಲ್ಪಿಸಲಾಗುತ್ತದೆ.

ಈ ಘಟಕದಲ್ಲಿ ಏಕಕಾಲಕ್ಕೆ 20 ರೋಗಿಗಳಿಗೆ ಟ್ರಾನ್ಸ್‌ಪ್ಲಾಂಟ್‌ ಚಿಕಿತ್ಸೆ ನೀಡುವಂತ ಸಕಲ ವೈದ್ಯಕೀಯ ಸೌಲಭ್ಯಗಳು ಇರಲಿವೆ. ವ್ಯಕ್ತಿಯ ದೇಹದ ಒಂದು ಅಂಗದಿಂದ ಅಸ್ಥಿಮಜ್ಜೆಯನ್ನು ತೆಗೆದು, ಅದೇ ವ್ಯಕ್ತಿದೇಹದ ಮತ್ತೊಂದು ಭಾಗಕ್ಕೆ ಮಜ್ಜೆಯನ್ನು ಭರ್ತಿ ಮಾಡುವ ಅಟಲಾಗೋಸ್‌ ಚಿಕಿತ್ಸಾ ವಿಧಾನ ಇಲ್ಲಿ ಲಭ್ಯವಾಗಲಿದೆ. ಸಂಬಂಧಿಕರು ಅಥವಾ ದಾನಿಗಳಿಂದ ಮಜ್ಜೆಯನ್ನು ಪಡೆದು, ರೋಗಿಯ ದೇಹಕ್ಕೆ ಸೇರಿಸುವ ಅಲೋಜೆನಿಕ್‌ ವಿಧಾನದ ಚಿಕಿತ್ಸೆಗೂ ವೈದ್ಯಕೀಯ ಯಂತ್ರಗಳನ್ನು ಖರೀದಿಸಲಾಗುತ್ತಿದೆ.

‘ಸೋಂಕು ಹರಡದಂತಹ ಆಧುನಿಕ ತಂತ್ರಜ್ಞಾನದ ಅನುಸಾರ ಘಟಕ ನಿರ್ಮಿಸುತ್ತಿದ್ದೇವೆ. ಇಲ್ಲಿ ಕಾರ್ಯನಿರ್ವಹಿಸಲು ವೈದ್ಯರೊಬ್ಬರು ತರಬೇತಿ ಪಡೆದು ಬಂದಿದ್ದಾರೆ. ಕಾಮಗಾರಿ ಪೂರ್ಣಗೊಳ್ಳುವ ಹೊತ್ತಿಗೆ ಅಗತ್ಯವಿರುವ ಇನ್ನು ನಾಲ್ಕಾರು ಸಿಬ್ಬಂದಿಗೆ ತರಬೇತಿ ಕೊಡಿಸುತ್ತೇವೆ’ ಎಂದು ಸಂಸ್ಥೆಯ ನಿರ್ದೇಶಕ ಸಿ.ರಾಮಚಂದ್ರ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಅಟಲಾಗೋಸ್‌ ಚಿಕಿತ್ಸೆಯನ್ನು ಖಾಸಗಿ ಆಸ್ಪತ್ರೆಯಲ್ಲಿ ಪಡೆದರೆ ₹6 ಲಕ್ಷದಿಂದ ₹ 8 ಲಕ್ಷದ ವರೆಗೆ ಖರ್ಚಾಗುತ್ತದೆ. ಅಲೋಜೆನಿಕ್‌ಗೆ ₹ 10 ಲಕ್ಷದ ವರೆಗೆ ವೆಚ್ಚವಾಗುತ್ತದೆ. ಇಂತಹ ದುಬಾರಿ ಚಿಕಿತ್ಸೆಗಳು ಬಡವರಿಗೂ ಉಚಿತವಾಗಿ ದೊರಕಬೇಕೆಂದು ಘಟಕ ಸ್ಥಾಪಿಸುತ್ತಿದ್ದೇವೆ. ಈ ಚಿಕಿತ್ಸೆಗಳಿಂದ ಶೇ 80ರಷ್ಟು ರೋಗಿಗಳನ್ನು ಖಚಿತವಾಗಿ ಗುಣಪಡಿಸಬಹುದಾಗಿದೆ. ತಲಸ್ಸೇಮಿಯಾ ಕಾಯಿಲೆ ತಗುಲಿದ ಮಕ್ಕಳಿಗೂ ಇಲ್ಲಿ ಚಿಕಿತ್ಸೆ ನೀಡಬಹುದಾಗಿದೆ’ ಎಂದು ಅವರು ತಿಳಿಸಿದರು.

* ಜಯದೇವ ಹೃದ್ರೋಗ ಸಂಸ್ಥೆಯ ಪ್ರಾದೇಶಿಕ ಘಟಕವನ್ನು ಉತ್ತರ ಕರ್ನಾಟಕದಲ್ಲಿ ಸ್ಥಾಪಿಸಬೇಕು ಎಂಬ ಒತ್ತಾಯವಿದೆ. ಬೇಡಿಕೆ ಈಡೇರಿಸಲು ಪ್ರಯತ್ನಿಸುತ್ತೇನೆ

-ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು