ಕುಟುಂಬ ರಾಜಕಾರಣ; ಬೇಸತ್ತ ಒಕ್ಕಲಿಗರು: ಶಾಸಕ ಮಸಾಲಾ ಜಯರಾಮ್ ಟಾಂಗ್‌

ಬುಧವಾರ, ಏಪ್ರಿಲ್ 24, 2019
31 °C

ಕುಟುಂಬ ರಾಜಕಾರಣ; ಬೇಸತ್ತ ಒಕ್ಕಲಿಗರು: ಶಾಸಕ ಮಸಾಲಾ ಜಯರಾಮ್ ಟಾಂಗ್‌

Published:
Updated:
Prajavani

ತುರುವೇಕೆರೆ: ಎಚ್‍.ಡಿ.ದೇವೇಗೌಡರ ಕುಟುಂಬ ರಾಜಕಾರಣದಿಂದ ರಾಜ್ಯದ ಒಕ್ಕಲಿಗ ಮುಖಂಡರು ಬೇಸತ್ತು ಜೆಡಿಎಸ್‍ ತೊರೆಯುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಜೆಡಿಎಸ್‍ಗೆ ಬಾರಿ ಸೋಲು ಉಂಟಾಗಲಿದೆ ಎಂದು ಶಾಸಕ ಮಸಾಲಾ ಜಯರಾಮ್ ಹೇಳಿದರು.

ತಾಲ್ಲೂಕಿನ ಲೋಕಮ್ಮನಹಳ್ಳಿ ಗ್ರಾಮದಲ್ಲಿ ಬಿಜೆಪಿ ಲೋಕಸಭಾ ಅಭ್ಯರ್ಥಿ ಜಿ.ಎಸ್.ಬಸವರಾಜು ಪರ ಮತಯಾಚಿಸಿ ಮಾತನಾಡಿದರು.

ಜೆಡಿಎಸ್‌ಗಾಗಿ ದುಡಿದ ಹಲವಾರು ಒಕ್ಕಲಿಗ ಮುಖಂಡರ ರಾಜಕೀಯ ಭವಿಷ್ಯ ದೇವೇಗೌಡರ ಕುಟುಂಬ ರಾಜಕಾರಣದಿಂದ ಅಂತ್ಯವಾಗಿದೆ. ತುಮಕೂರು ಜಿಲ್ಲೆಗೆ ದೇವೇಗೌಡರ ಕೊಡುಗೆ ಏನು ಎಂದು ಖಾರವಾಗಿ ಪ್ರಶ್ನಿಸಿದರು.

ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‍ಗೆ ಹಾಸನ, ಮಂಡ್ಯ, ತುಮಕೂರುಗಳಲ್ಲಿ ಸೋಲು ಕಟ್ಟಿಟ್ಟ ಬುತ್ತಿ. ನನಗೆ ತುರುವೇಕೆರೆ ಕ್ಷೇತ್ರದಲ್ಲಿ ಒಕ್ಕಲಿಗರು ಸೇರಿದಂತೆ ಜಾತ್ಯತೀತವಾಗಿ 62 ಸಾವಿರ ಮತಗಳನ್ನು ನೀಡಿ ಕ್ಷೇತ್ರದ ಶಾಸಕನನ್ನಾಗಿ ಮಾಡಿದ್ದೀರಿ. ನನಗಿಂತ ಹದಿನೈದು ಸಾವಿರ ಹೆಚ್ಚಿನ ಮತಗಳನ್ನು ನಮ್ಮ ಪಕ್ಷದ ಅಭ್ಯರ್ಥಿಗೆ ನೀಡುತ್ತೀರೆಂಬ ಆತ್ಮವಿಶ್ವಾಸವಿದೆ ಎಂದರು.

ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಮಾತನಾಡಿ, ಈ ಬಾರಿ ದೇವೇಗೌಡರಿಗೆ ಮತ ಹಾಕಿದರೆ ನೀವು ನಿಮ್ಮ ಮಕ್ಕಳಿಗೆ ವಿಷವುಣಿಸಿದಂತಾಗುತ್ತದೆ. ಕಾರಣ ಹಾಸನದಲ್ಲಿ ಹೇಮಾವತಿ ನೀರನ್ನು ನೆಚ್ಚಿಕೊಂಡು 175 ಕಡೆ ಏತನೀರಾವರಿ ಯೋಜನೆ ಮೂಲಕ 450 ಕೆರೆಗಳಿಗೆ ನೀರು ತುಂಬಿಸುವ ಕೆಲಸಕ್ಕೆ ರೇವಣ್ಣ ನೇತೃತ್ವದಲ್ಲಿ ಭೂಮಿಪೂಜೆ ಮಾಡಿದ್ದಾರೆ. ಇದರಿಂದ ತುಮಕೂರು ಜಿಲ್ಲೆಗೆ ಹರಿಯುವ ನೀರು ಕಡಿತಗೊಳ್ಳಲಿದೆ. ಈಗಾಗಲೇ ಹಾಸನದಿಂದ ಗುದ್ದಲಿ ಮಂಕರಿ ಸಮೇತ ಕಂಟ್ರಾಕ್ಟರ್‌ಗಳು ಜಿಲ್ಲೆಗೆ ಲಗ್ಗೆಯಿಟ್ಟಿದ್ದು, ಒಂದು ವೇಳೆ ದೇವೇಗೌಡರು ಗೆದ್ದರೆ ಸ್ಥಳೀಯ ಗುತ್ತಿಗೆದಾರರಿಗೆ ಕೆಲಸ ಸಿಗದಂತಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮುಖಂಡರಾದ ಡಾ.ಹುಲಿನಾಯ್ಕರ್, ವೈ.ಎಚ್.ಹುಚ್ಚಯ್ಯ, ಅಧ್ಯಕ್ಷ ದುಂಡರೇಣುಕಪ್ಪ, ಚಿದಾನಂದ್, ಕೊಂಡಜ್ಜಿವಿಶ್ವನಾಥ್, ವಿ.ಟಿ.ವೆಂಕಟರಾಮ್, ಎಡಗೀಹಳ್ಳಿ ವಿಶ್ವನಾಥ್, ಅನಿತಾ ನಂಜುಂಡಯ್ಯ, ದೊಂಬರನಹಳ್ಳಿ ಬಸವರಾಜು ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !