ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಸುರಕ್ಷೆ: ಬೇಜವಾಬ್ದಾರಿ ಸಲ್ಲದು– ಜಿಲ್ಲಾಧಿಕಾರಿ ಆರ್.ರಾಮಚಂದ್ರನ್

’ಕಾನೂನು ಗಾಳಿಗೆ ತೂರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ’
Last Updated 13 ಮೇ 2019, 14:57 IST
ಅಕ್ಷರ ಗಾತ್ರ

ಬಾಗಲಕೋಟೆ: ‘ಶಾಲಾ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಸರ್ಕಾರದ ಆದೇಶ ಪಾಲನೆಯಲ್ಲಿ ಬೇಜವಾಬ್ದಾರಿ ಸಲ್ಲದು’ ಎಂದು ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಶಿಕ್ಷಣ ಸಂಸ್ಥೆಗಳಿಗೆ ಸೂಚಿಸಿದರು.

ಇಲ್ಲಿನ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ನಡೆದಖಾಸಗಿ ಅನುದಾನಿತ ಹಾಗೂ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಮಕ್ಕಳ ಸುರಕ್ಷತೆಗೆ ಸುಪ್ರೀಂ ಕೋರ್ಟ್‌ ವಿಶೇಷ ಆದೇಶ ಹೊರಡಿಸಿದ್ದು, ಕಾನೂನು ಪಾಲನೆಗೆ ಎಲ್ಲರೂ ಕೈಜೋಡಿಸಬೇಕು. ಶಾಲಾ ಸಂಸ್ಥೆಯ ಮುಖ್ಯಸ್ಥರು ಎಷ್ಟೇ ಜಾಗರೂಕರಾಗಿದ್ದರೂ ಸಿಬ್ಬಂದಿ ತಪ್ಪಿನಿಂದ ತೊಂದರೆಗಳಾಗುತ್ತಿವೆ’ ಎಂದರು.

‘ಶಾಲೆಯಲ್ಲಿ ಪಾಲಕರಿಗೆ ಕಾಣುವಂತೆ ಸರ್ಕಾರದ ಆದೇಶದ ಮಾಹಿತಿ ಫಲಕಗಳನ್ನು ಅಳವಡಿಸಬೇಕು.ಪ್ರತಿ ಮಗುವಿನ ಪಾಲಕರಿಗೆ ಆದೇಶದ ನಕಲು ಪ್ರತಿ ನೀಡಬೇಕು. ಕಳೆದ ವರ್ಷ ನಗರದಲ್ಲಿ ಖಾಸಗಿ ಶಾಲೆಗೆ ಸೇರಿದ ಮಕ್ಕಳ ವಾಹನ ಅಪಘಾತಕ್ಕೆ ಒಳಗಾಗಿ ಕೆಲವು ಮಕ್ಕಳು ಅಂಗವೈಕಲ್ಯ ಉಂಟಾಗಿ ಕೆಲವರು ಮೃತಪಟ್ಟಿದ್ದಾರೆ. ಹೀಗಾಗಿ ಇದು ಗಂಭೀರ ವಿಚಾರ‍. ನಿರ್ಲಕ್ಷ್ಯ ತೋರಿದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ’ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ ಖರೆ ಮಾತನಾಡಿ, ‘ಪ್ರತಿಯೊಂದು ಖಾಸಗಿ ಶಿಕ್ಷಣ ಸಂಸ್ಥೆಯ ಮಕ್ಕಳ ಸಾಗಾಣಿಕಾ ವಾಹನದ ಚಾಲಕನ ಬಗ್ಗೆ ಸಮಗ್ರ ಮಾಹಿತಿ ಪಡೆದಿರಬೇಕು. ಅವನ ಹವ್ಯಾಸಗಳ ಬಗ್ಗೆ ಗಮನದಲ್ಲಿಟ್ಟುಕೊಂಡು ನೇಮಿಸಿಕೊಳ್ಳಬೇಕು. ಈ ಹಿಂದೆ ಕೆಲವೊಂದು ವಿದ್ಯಾ ಸಂಸ್ಥೆಗಳ ಚಾಲಕರೇ ಮಕ್ಕಳ ಮೇಲೆ ದೌರ್ಜನ್ಯ ಎಸಗಿದ ಪ್ರಕರಣಗಳು ಕಂಡುಬರುತ್ತಿವೆ’ ಎಂದರು.

ಪ್ರಾದೇಶಿಕ ಸಾರಿಗೆ ಅಧಿಕಾರಿ ನಾಲತ್ವಾಡಮಠ ಮಾತನಾಡಿ, ‘ಸ್ಕೂಲ್‌ ಕ್ಯಾಬ್ ವ್ಯವಸ್ಥೆ ಬಗ್ಗೆ ಪಾಲಕರಿಗೆ ಮಾಹಿತಿ ನೀಡಬೇಕು. ವಾಹನದ ಗುಣಮಟ್ಟ ಪರೀಕ್ಷಿಸಿರಬೇಕು. ಕಾಲಕಾಲಕ್ಕೆ ವಾಹನ ಹಾಗೂ ಚಾಲಕನ ದಾಖಲೆಗಳು ನವೀಕರಣಗೊಂಡಿರಬೇಕು’ ಎಂದರು.

‘ಕೆಲವೊಂದು ಶಿಕ್ಷಣ ಸಂಸ್ಥೆಗಳು ಅಭಿವೃದ್ಧಿ ಶುಲ್ಕವೆಂದು ಹೆಚ್ಚಿನ ಹಣ ಪಡೆಯುತ್ತಿರುವುದು ಕಂಡು ಬಂದಿದೆ. ಸರ್ಕಾರದ ಆದೇಶದನ್ವಯ ಶಾಲಾ ಶುಲ್ಕದ ಮಾಹಿತಿಯನ್ನು ನೋಟಿಸ್ ಬೋರ್ಡ್‌ನಲ್ಲಿ ಪ್ರದರ್ಶಿಸಬೇಕು’ ಎಂದರು.

ಶಿಕ್ಷಣಾಧಿಕಾರಿ ಎ.ಕೆ.ಬಸಣ್ಣವರ ಮಾತನಾಡಿ, ‘ವಂತಿಗೆ ಪಡೆಯುವ ಶಾಲೆಗಳ ವಿರುದ್ಧ ದೂರುಗಳು ಬಂದಲ್ಲಿ ಪರಿಶೀಲಿಸಲು ಜಿಲ್ಲಾ ಶಿಕ್ಷಣ ರೆಗ್ಯುಲೇಟಿಂಗ್ ಪ್ರಾಧಿಕಾರಕ್ಕೆ ಅಧಿಕಾರವಿರುತ್ತದೆ. ಡೊನೇಷನ್‌ ಹಾವಳಿಯನ್ನು ನಿಯಂತ್ರಿಸುವ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯ್ತಿ ಸಿಇಒ, ಕಾರ್ಯನಿರ್ವಾಹಕ ಎಂಜಿನಿಯರ್‌ರನ್ನು ಒಳಗೊಂಡ ಪ್ರಾಧಿಕಾರ ರಚಿಸಲಾಗಿದೆ’ ಎಂದರು.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕಪೂಜಾರಿ ಸೇರಿದಂತೆ ಆಯಾ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಜಿಲ್ಲೆಯ ಖಾಸಗಿ ಅನುದಾನಿತ ಹಾಗೂ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಪಾಲ್ಗೊಂಡಿದ್ದರು.

ಅಗತ್ಯ ವಸ್ತುಗಳಿರಲಿ

ಶಾಲಾ ವಾಹನಗಳ ಹಿಂದೆ ಹಾಗೂ ಮುಂದೆ ಶಾಲಾ ವಾಹನ ಎಂದು ಸ್ಪಷ್ಟವಾಗಿ ನಮೂದಿಸಬೇಕು. ವಾಹನದಲ್ಲಿ ಪ್ರಥಮ ಚಿಕಿತ್ಸೆ ಬಾಕ್ಸ್‌, ಕಿಟಕಿಗಳಲ್ಲಿ ಗ್ರಿಲ್, ಬೆಂಕಿ ನಂದಿಸುವ ಸಾಧನ ಹಾಗೂ ವಾಹನದ ಮೇಲೆ ಶಾಲೆಯ ಹೆಸರು, ದೂರವಾಣಿ ಸಂಖ್ಯೆ ಬರೆದಿರಬೇಕು ಎಂದುಶಿಕ್ಷಣಾಧಿಕಾರಿ ಎ.ಕೆ.ಬಸಣ್ಣವರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT