ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊರ ವರ್ತುಲ ರಸ್ತೆಗಳಲ್ಲಿ ಮರಣ ಮೃದಂಗ

ವೇಗದ ಚಾಲನೆ, ಸಂಚಾರ ನಿಯಮ ಉಲ್ಲಂಘನೆಯೇ ಅಪಘಾತಕ್ಕೆ ಕಾರಣ: ಸಾವಿಗೀಡಾದವರಲ್ಲಿ ಪಾದಚಾರಿಗಳೇ ಹೆಚ್ಚು
Last Updated 17 ಅಕ್ಟೋಬರ್ 2018, 19:37 IST
ಅಕ್ಷರ ಗಾತ್ರ

ಬೆಂಗಳೂರು: ನಗರದೊಳಗಿನ ಸಂಚಾರ ದಟ್ಟಣೆ ನಿಯಂತ್ರಣ ಉದ್ದೇಶದಿಂದ ನಿರ್ಮಿಸಿರುವ ಹೊರವರ್ತುಲ ರಸ್ತೆಗಳು, ದಿನ ಕಳೆದಂತೆ ಸಾವಿನ ಮಾರ್ಗಗಳಾಗಿ ಮಾರ್ಪಡುತ್ತಿವೆ. ಈ ರಸ್ತೆಗಳಲ್ಲಿ ಸಂಭವಿಸುತ್ತಿರುವ ಅಪಘಾತಗಳ ಸಂಖ್ಯೆ ಗಣನೀಯವಾಗಿ ಏರುತ್ತಿದ್ದು, ಸಾವಿನ ಸಂಖ್ಯೆಯಲ್ಲೂ ಹೆಚ್ಚಳವಾಗುತ್ತಿದೆ.

ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಬರುವ ವಾಹನಗಳು, ಈ ರಸ್ತೆಗಳಲ್ಲೇ ಹೆಚ್ಚಾಗಿ ಸಂಚರಿಸುತ್ತಿವೆ. ನಗರದ ಹೊರವಲಯದಲ್ಲಿ ನೂರಾರು ಕಂಪನಿಗಳು ತಲೆ ಎತ್ತಿದ್ದು, ಅಲ್ಲಿ ಕೆಲಸಕ್ಕೆ ಹೋಗುವ ಉದ್ಯೋಗಿಗಳು ಸಹ ಹೊರ ವರ್ತುಲ ರಸ್ತೆಗಳನ್ನೇ ಅವಲಂಬಿಸಿದ್ದಾರೆ. ಇಂಥ ರಸ್ತೆಗಳಲ್ಲಿ ನಿತ್ಯವೂ ಲಕ್ಷಾಂತರ ಸಂಖ್ಯೆಯಲ್ಲಿ ವಾಹನಗಳು ಓಡಾಡುತ್ತಿವೆ.

ವಾಹನಗಳ ವೇಗದ ಚಾಲನೆ ಹಾಗೂ ಸಂಚಾರ ನಿಯಮ ಉಲ್ಲಂಘನೆಯಿಂದಾಗಿ ಈ ರಸ್ತೆಗಳಲ್ಲಿಅವಘಡಗಳು ಹೆಚ್ಚಾಗುತ್ತಿವೆ. ಹಲವು ಚಾಲಕರು, ಪಾದಚಾರಿಗಳು ಹಾಗೂ ಪ್ರಯಾಣಿಕರು, ಅಪಘಾತಕ್ಕೆ ತುತ್ತಾಗಿ ಜೀವ ಕಳೆದುಕೊಳ್ಳುತ್ತಿದ್ದಾರೆ.

ಯಲಹಂಕ,ಕೆ.ಆರ್‌.‍ಪುರ,ಚಿಕ್ಕಜಾಲ,ಹುಳಿಮಾವು,ದೇವನಹಳ್ಳಿ, ಹೆಬ್ಬಾಳ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಹಾದು ಹೋಗಿರುವ ಹೊರವರ್ತುಲ ರಸ್ತೆಗಳಲ್ಲಿ ಪ್ರಸಕ್ತ ವರ್ಷ ಅತೀ ಹೆಚ್ಚು ಅಪಘಾತಗಳು ಸಂಭವಿಸಿವೆ.

ಬಾಣಸವಾಡಿ, ಮಡಿವಾಳ, ಎಲೆಕ್ಟ್ರಾನಿಕ್ ಸಿಟಿ, ಹುಳಿಮಾವು, ಕೆಂಗೇರಿ, ಪೀಣ್ಯ ಠಾಣೆ ವ್ಯಾಪ್ತಿಯ ರಸ್ತೆಯಲ್ಲೂ ವರ್ಷದಿಂದ ವರ್ಷಕ್ಕೆ ಅಪಘಾತ ಹಾಗೂ ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ಪೊಲೀಸ್‌ ಇಲಾಖೆಯ ಅಂಕಿ– ಅಂಶಗಳು ಹೇಳುತ್ತಿವೆ.

‘ಹೊರ ವರ್ತುಲ ರಸ್ತೆಗಳಲ್ಲಿ ರಸ್ತೆಯುಬ್ಬುಗಳು (ಹಂಪ್ಸ್‌) ತೀರಾ ಕಡಿಮೆ. ಅದೇ ಕಾರಣಕ್ಕೆ ಚಾಲಕರು, ಗರಿಷ್ಠ ವೇಗದಲ್ಲಿ ವಾಹನ ಓಡಿಸುತ್ತಿದ್ದಾರೆ. ಅದುವೇ ಅಪಘಾತಕ್ಕೆ ಆಹ್ವಾನ ನೀಡುತ್ತಿದೆ’ ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್‌ ಆರ್‌.ಹಿತೇಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹೊರ ವರ್ತುಲ ರಸ್ತೆಗಳಲ್ಲಿ ವಾಹನಗಳ ಸಂಚಾರ ಆರಂಭವಾದಾಗಿನಿಂದಲೂ ಅಪಘಾತಗಳು ಸಂಭವಿಸುತ್ತಿವೆ. ನಗರದೊಳಗೆ ಸಂಭವಿಸುವ ಅಪಘಾತಗಳಿಗಿಂತ ದುಪ್ಪಟ್ಟು ಅಪಘಾತಗಳು, ಈ ರಸ್ತೆಗಳಲ್ಲಿ ಘಟಿಸುತ್ತಿವೆ. ರಸ್ತೆಯುದ್ದಕ್ಕೂ ಸೂಚನಾ ಫಲಕ ಹಾಗೂ ವೇಗ ಮಿತಿ ನಿಗದಿಪಡಿಸಿದರೂ ಚಾಲಕರು ಅದನ್ನು ಪಾಲಿಸುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಯಲಹಂಕ, ಕೆ.ಆರ್‌.ಪುರ ಠಾಣೆ ವ್ಯಾಪ್ತಿಯಲ್ಲಿ ಹೆಚ್ಚು: ಯಲಹಂಕ ಹಾಗೂ ಕೆ.ಆರ್.ಪುರ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಹಾದುಹೋಗುವ ಹೊರವರ್ತುಲ ರಸ್ತೆಗಳಲ್ಲಿ ಪ್ರಸಕ್ತ ವರ್ಷ 359 ಅಪಘಾತಗಳು ಸಂಭವಿಸಿದ್ದು, ಅದರಲ್ಲಿ 68 ಮಂದಿ ಮೃತಪಟ್ಟಿದ್ದಾರೆ.

‘ಯಲಹಂಕ ಹಾಗೂ ಕೆ.ಆರ್‌.ಪುರ ಮೂಲಕ ನಿತ್ಯವೂ 15 ಲಕ್ಷ ವಾಹನಗಳು ಸಂಚರಿಸುತ್ತವೆ. ಅಷ್ಟೇ ಪ್ರಮಾಣದ ವಾಹನಗಳು ನಗರಕ್ಕೆ ಬರುತ್ತಿವೆ. ಇದೇ ರಸ್ತೆಯು ಅಪಘಾತಗಳ ವಲಯವಾಗಿ ಮಾರ್ಪಟ್ಟಿದೆ. ಎಷ್ಟೇ ಜಾಗೃತಿ ಮೂಡಿಸಿದರೂ ಚಾಲಕರು ಹಾಗೂ ಪಾದಚಾರಿಗಳು, ನಿಯಮ ಪಾಲಿಸುತ್ತಿಲ್ಲ’ ಎಂದು ಹಿತೇಂದ್ರ ತಿಳಿಸಿದರು.

‘ಕೆ.ಆರ್‌. ಪುರ ಹಾಗೂ ಯಲಹಂಕ ವ್ಯಾಪ್ತಿಯ ಹಲವೆಡೆ ಸ್ಕೈವಾಕ್‌‘ಗಳನ್ನು ನಿರ್ಮಿಸಲಾಗಿದೆ. ಪಾದಚಾರಿಗಳು ಅವುಗಳನ್ನು ಬಳಸಿದರೆ ಅಪಘಾತಗಳು ಅರ್ಧದಷ್ಟು ಕಡಿಮೆಯಾಗುತ್ತವೆ. ಸ್ಕೈವಾಕ್ ಬಳಸದೇ ಸಾರ್ವಜನಿಕರು, ರಸ್ತೆ ದಾಟಿ ಹೋಗಲು ಯತ್ನಿಸಿ ಜೀವಕ್ಕೆ ಅಪಾಯ ತಂದುಕೊಳ್ಳುತ್ತಿದ್ದಾರೆ’ ಎಂದು ಹೇಳಿದರು.

ಸುರಕ್ಷತಾ ಕ್ರಮವಿಲ್ಲ: ‘ಹೊರ ವರ್ತುಲ ರಸ್ತೆಗಳ ಅಕ್ಕ–ಪಕ್ಕದಲ್ಲಿ ಜನವಸತಿ ಪ್ರದೇಶಗಳಿವೆ. ಅಲ್ಲಿಯ ಜನ, ನಿತ್ಯವೂ ಹೊರ ವರ್ತುಲ ರಸ್ತೆ ದಾಟಿಕೊಂಡೇ ಕೆಲಸಕ್ಕೆ ಹೋಗುತ್ತಾರೆ. ಅವರ ಸುರಕ್ಷತೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಅದೇ ಕಾರಣಕ್ಕೆ ಅಪಘಾತಗಳು ಸಂಭವಿಸುತ್ತಿವೆ’ ಎಂದು ಯಲಹಂಕದ ನಿವಾಸಿ ರಾಮಾಂಜನೇಯಪ್ಪ ಹೇಳುತ್ತಾರೆ.

‘ರಸ್ತೆಯಎಡ ಹಾಗೂ ಬಲ ಭಾಗದಲ್ಲಿ ತಂಗುದಾಣಗಳನ್ನು ನಿರ್ಮಿಸಲಾಗಿದೆ. ಆದರೆ, ಒಂದು ತಂಗುದಾಣದಿಂದ ಮತ್ತೊಂದು ತಂಗುದಾಣಕ್ಕೆ ಹೋಗಲು ಸೂಕ್ತ ವ್ಯವಸ್ಥೆ ಇಲ್ಲ. ರಸ್ತೆ ದಾಟಿಕೊಂಡೇ ಹೋಗಬೇಕಾದ ಸ್ಥಿತಿ ಇದೆ. ಆ ರೀತಿ ರಸ್ತೆ ದಾಟುವ ವೇಳೆಯಲ್ಲೇ ವಾಹನಗಳು ಡಿಕ್ಕಿ ಹೊಡೆದು ಮೃತಪಟ್ಟವರ ಸಂಖ್ಯೆ ಹೆಚ್ಚಾಗಿದೆ’ ಎಂದು ತಿಳಿಸುತ್ತಾರೆ.

ಖಾಸಗಿ ಕಂಪನಿ ಉದ್ಯೋಗಿ ಧನಂಜಯ್, ‘ಬಳ್ಳಾರಿ ರಸ್ತೆಗೆ ಹೊಂದಿಕೊಂಡು ಕೊಲಂಬಿಯಾ ಏಷಿಯಾ, ಪ್ರೊಲೈಫ್, ಎನ್‌ಡಿಆರ್‌ ಮಲ್ಪಿ ಸ್ಪೆಷಾಲಿಟಿ ಆಸ್ಪತ್ರೆಗಳಿವೆ. ಅಲ್ಲಿ ನಿತ್ಯವೂ ಅಪಘಾತದಲ್ಲಿ ಗಾಯಗೊಂಡ ಒಬ್ಬರಾದರೂ ದಾಖಲಾಗುತ್ತಾರೆ’ ಎಂದರು.

ಟಿನ್‌ ಫ್ಯಾಕ್ಟರಿ ಬಳಿಯ ನಿವಾಸಿ ಷಣ್ಮುಗಂ, ‘ಹಲವು ಚಾಲಕರು, ಮದ್ಯ ಕುಡಿದು ವಾಹನ ಓಡಿಸುತ್ತಿದ್ದಾರೆ. ಅದರ ಅಮಲಿನಲ್ಲಿ ವೇಗವಾಗಿ ವಾಹನ ಚಲಾಯಿಸಿ, ಇತರೆ ವಾಹನಗಳಿಗೆ ಡಿಕ್ಕಿ ಹೊಡೆಯುತ್ತಿದ್ದಾರೆ. ಪಾದಚಾರಿಗಳಿಗೆ ವಾಹನ ಗುದ್ದಿಸಿ, ಅವರ ಸಾವಿಗೆ ಕಾರಣರಾಗುತ್ತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT