ಶುಕ್ರವಾರ, ಡಿಸೆಂಬರ್ 6, 2019
21 °C

ರೆಡ್ಡಿಯ ಮನೆಯಲ್ಲಿ ಪೊಲೀಸ್ ಮಹಜರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಆ್ಯಂಬಿಡೆಂಟ್’ ಕಂಪನಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ₹ 20 ಕೋಟಿಯ ಡೀಲ್ ನಡೆದಿದೆ ಎನ್ನಲಾದ ಸ್ಥಳಗಳಲ್ಲಿ ಸಿಸಿಬಿ ಪೊಲೀಸರು ಶುಕ್ರವಾರ ಮಹಜರು ಪ್ರಕ್ರಿಯೆ ನಡೆಸಿದರು.

ಎಸಿಪಿ ವೆಂಕಟೇಶ್‌ ಪ್ರಸನ್ನ ನೇತೃತ್ವದ ತಂಡ ರೇಸ್‌ಕೋರ್ಸ್ ರಸ್ತೆಯಲ್ಲಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ‘ಪಾರಿಜಾತ’ ನಿವಾಸದಲ್ಲಿ ಮೊದಲು ಪಂಚನಾಮೆ ಮಾಡಿತು. ಬಳಿಕ ರೆಡ್ಡಿ ಮನೆಯಲ್ಲಿ ಕೆಲಸ ಮಾಡುವ ಜಯರಾಮ್ ಅವರನ್ನು ಚಾಲುಕ್ಯ ವೃತ್ತ ಸಮೀಪದ ಓಣಿ ಮುನೇಶ್ವರ ದೇವಸ್ಥಾನದ ರಸ್ತೆಗೆ ಕರೆದೊಯ್ದು ಮಹಜರು ಪೂರ್ಣಗೊಳಿಸಿತು.

₹ 2 ಕೋಟಿ ಹಸ್ತಾಂತರ: ಬಳ್ಳಾರಿಯ ‘ರಾಜ್‌ಮಹಲ್ ಜ್ಯುವೆಲರ್ಸ್’ ಮಾಲೀಕ ರಮೇಶ್, ಆ್ಯಂಬಿಡೆಂಟ್ ಮಾಲೀಕ ಫರೀದ್‌ ಸೂಚನೆಯಂತೆ ₹ 18 ಕೋಟಿ ಮೊತ್ತದ 57 ಕೆ.ಜಿ ಚಿನ್ನದ ಗಟ್ಟಿಗಳನ್ನು ರೆಡ್ಡಿ ಅವರ ಆಪ್ತ ಸಹಾಯಕ ಆಲಿಖಾನ್‌ಗೆ ಕೊಟ್ಟಿದ್ದರು. ಇನ್ನುಳಿದ ₹ 2 ಕೋಟಿಯನ್ನು ಕೊಡಲು ತಮ್ಮ ಅಣ್ಣ ಜನಾರ್ದನ್ ಅವರನ್ನು ಬಳಸಿಕೊಂಡಿದ್ದರು ಎಂದು ಸಿಸಿಬಿ ಅಧಿಕಾರಿಗಳು ಹೇಳಿದ್ದಾರೆ.

ಜನಾರ್ದನ್ ಆ ₹ 2 ಕೋಟಿ ತೆಗೆದುಕೊಂಡು ಚಾಲುಕ್ಯ ವೃತ್ತಕ್ಕೆ ಬಂದಿದ್ದರು. ಈ ಕಡೆಯಿಂದ ಜಯರಾಂ ಸ್ಥಳಕ್ಕೆ ಹೋಗಿ ಅವರಿಂದ ಹಣದ ಬ್ಯಾಗ್ ಪಡೆದುಕೊಂಡಿದ್ದರು. ಬಳಿಕ ಬ್ಯಾಗನ್ನು ‘ಪಾರಿಜಾತ’ ನಿವಾಸಕ್ಕೆ ತೆಗೆದುಕೊಂಡು ಹೋಗಿ ರೆಡ್ಡಿ, ಆಲಿಖಾನ್ ಅವರಿಗೆ ಕೊಟ್ಟಿದ್ದರು. ಹೀಗಾಗಿ, ಇವೆರಡು ಸ್ಥಳಗಳಲ್ಲಿ ಮಹಜರು ಮಾಡಲಾಯಿತು ಎಂದು ಮಾಹಿತಿ ನೀಡಿದ್ದಾರೆ.

‘ಇ.ಡಿ ಹೆಸರನ್ನು ನಾವು ಹೇಳಿಲ್ಲ’

ಪೊಲೀಸರು ಪ‍ತ್ರಿಕಾ ಪ್ರಕಟಣೆಯಲ್ಲಿ ‘ಇ.ಡಿ ಡೀಲ್ ಪ್ರಕರಣ’ ಎಂಬ ಪದಬಳಕೆ ಮಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಜಾರಿ ನಿರ್ದೇಶನಾಲಯದ (ಇ.ಡಿ) ಜಂಟಿ ಆಯುಕ್ತರು, ಈ ಬಗ್ಗೆ ವಿವರಣೆ ನೀಡುವಂತೆ ಕಮಿಷನರ್ ಟಿ.ಸುನೀಲ್ ಕುಮಾರ್ ಅವರಿಗೆ ನ.9ರಂದು ಪತ್ರ ಬರೆದಿದ್ದರು.

ಪ‍ತ್ರದ ಬಗ್ಗೆ ಪ್ರತಿಕ್ರಿಯಿಸಿದ ಕಮಿಷನರ್, ‘ಇ.ಡಿ ವಿರುದ್ಧ ನಾವು ನೇರವಾಗಿ ಆರೋಪ ಮಾಡಿಲ್ಲ. ತನಿಖೆ ವೇಳೆ ಆರೋಪಿಗಳು ನೀಡಿದ್ದ ಹೇಳಿಕೆಯನ್ನಷ್ಟೇ ಪ್ರಕಟಣೆಯಲ್ಲಿ ತಿಳಿಸಿದ್ದೆವು. ಜಂಟಿ ಆಯುಕ್ತರ ಪತ್ರಕ್ಕೆ ಇನ್ನೂ ಪ್ರತಿಕ್ರಿಯಿಸಿಲ್ಲ. ಅಧಿಕಾರಿಗಳ ಜತೆ ಚರ್ಚಿಸಿ ಸದ್ಯದಲ್ಲೇ ಉತ್ತರ ಬರೆಯಲಾಗುವುದು’ ಎಂದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು