ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನಗೆ ಕೃಷಿ ಮೇಲಿನ ಸೆಳೆತ ಇನ್ನೂ ಕಡಿಮೆಯಾಗಿಲ್ಲ: ಅಣ್ಣಾಮಲೈ

ವಿಶೇಷ ಸಂದರ್ಶನದಲ್ಲಿ ಖಡತ್ ಪೊಲೀಸ್ ಅಧಿಕಾರಿಯ ಮನದಾಳದ ಮಾತು
Last Updated 8 ಜೂನ್ 2019, 11:23 IST
ಅಕ್ಷರ ಗಾತ್ರ

ಖಡಕ್‌ ಪೊಲೀಸ್‌ ಅಧಿಕಾರಿ ಎಂದು ಹೆಸರಾದ ಕೆ.ಅಣ್ಣಾಮಲೈ ವೃತ್ತಿ ಜೀವನದ ಉತ್ತುಂಗದಲ್ಲಿದ್ದಾಗಲೇ ಖಾಕಿ ಕಳಚಿಟ್ಟು ಹೊರಟಿದ್ದಾರೆ. ಬೆಂಗಳೂರು ದಕ್ಷಿಣ ಡೆಪ್ಯೂಟಿ ಪೊಲೀಸ್‌ ಕಮೀಷನರ್‌ ಹುದ್ದೆಗೆ ಅವರು ಮೇ 28ರಂದು ರಾಜೀನಾಮೆ ನೀಡಿದ್ದಾರೆ. ಐಪಿಎಸ್‌ ಅಧಿಕಾರಿಯ ರಾಜೀನಾಮೆ ಹಲವು ಊಹಾಪೋಹಗಳಿಗೆ ಕಾರಣವಾಗಿದೆ. ಅವರ ಹಠಾತ್‌ ರಾಜೀನಾಮೆ ಕಾರಣ ಇನ್ನೂ ನಿಗೂಢವಾಗಿದೆ. ರಾಜಕೀಯ ಸೇರುತ್ತಾರೆ ಎಂಬ ವದಂತಿ ಹರಿದಾಡುತ್ತಿವೆ. ಕೆಲಸ ಮಾಡಿದ ಕಡೆಗಳಲ್ಲಿ ಜನಸಾಮಾನ್ಯರ ಅಭಿಮಾನ ಗಳಿಸಿದ್ದ ಅಣ್ಣಾಮಲೈ ಅವರ ನಿರ್ಧಾರ ಅನೇಕರಿಗೆ ದಿಗ್ಭ್ರಮೆ, ಆಶ್ಚರ್ಯ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಅವರು ‘ಮೆಟ್ರೊ’ ಜತೆ ಮನಬಿಚ್ಚಿ ಮಾತನಾಡಿದ್ದಾರೆ.

* ರಾಜ್ಯದಲ್ಲಿ ಜನರ ಮೆಚ್ಚುಗೆ, ಪ್ರೀತಿ ಗಳಿಸಿರುವಾಗ ಮತ್ತು ವೃತ್ತಿ ಜೀವನದ ಉತ್ತುಂಗದಲ್ಲಿರುವಾಗ ಏಕಾಏಕಿ ಖಾಕಿ ಕಳಚುವ ನಿರ್ಧಾರ ಏಕೆ? ರಾಜೀನಾಮೆ ನಿರ್ಧಾರದ ಹಿಂದಿರುವ ಕಾರಣ ಏನು?

ಎಲ್ಲರ ಜೀವನದಲ್ಲಿಯೂ ಇಂಥದೊಂದು ಘಟ್ಟ ಬರುತ್ತದೆ. ಜೀವನದ ಆದ್ಯತೆಗಳ ಬಗ್ಗೆ ಮರು ವಿಮರ್ಶೆ ಮಾಡಿಕೊಳ್ಳಬೇಕಾಗುತ್ತದೆ. ಜೀವನದಲ್ಲಿ ನಾವು ಮಾಡಬೇಕಾದದ್ದು ಏನು ಎಂಬ ಪ್ರಶ್ನೆಗಳು ನಮ್ಮೊಳಗೆ ಹುಟ್ಟಿಕೊಳ್ಳುತ್ತವೆ. ಇರುವುದನ್ನು ಬಿಟ್ಟು ಬೇರೆ ಏನನ್ನೋ ಮಾಡುತ್ತೇವೆ ಎಂಬುವುದು ಇದರ ಅರ್ಥವಲ್ಲ. ಪ್ರತಿ ಕ್ಷೇತ್ರವನ್ನು ಸ್ವಚ್ಛಗೊಳಿಸುವ ಕೆಲಸ ನಡೆಯಬೇಕಾಗಿದೆ. ಹಲವು ವರ್ಷಗಳಿಂದ ನಾನು ಈ ಬಗ್ಗೆ ಯೋಚಿಸುತ್ತಿದ್ದೆ. ಸರ್ಕಾರಿ ವ್ಯವಸ್ಥೆಯಲ್ಲಿ ಕೆಲಸ ಮಾಡುವಾಗ ಒಂದು ಪರಿಧಿ ಇರುತ್ತದೆ. ಅದಕ್ಕಿಂತ ಆಚೆಗೆ ನಾವು ಯೋಚಿಸಲು ಆಗುವುದಿಲ್ಲ.

* ನಿಮ್ಮ ಆಲೋಚನೆಗಳನ್ನು ಹೇಗೆ ಮುಂದಕ್ಕೆ ಕೊಂಡೊಯ್ಯುತ್ತೀರಿ?

ನನಗೆ ಇನ್ನೂ ಗೊತ್ತಿಲ್ಲ. ಆ ಬಗ್ಗೆ ಸ್ಪಷ್ಟತೆ ಬರಲು ಕೆಲವು ತಿಂಗಳು ಬೇಕಾಗಬಹುದು. ಎಲ್ಲ ಸಾಧಕ–ಬಾಧಕ, ಸಾಧ್ಯತೆ ಮತ್ತು ಅವಕಾಶಗಳ ಕುರಿತು ಚಿಂತನೆ ನಡೆಸಿದ್ದೇನೆ. ನನ್ನ ಆಲೋಚನೆಗಳಿಗೆ ಮೂರ್ತರೂಪ ನೀಡಲು ಕಾಲಾವಕಾಶ ಬೇಕಾಗಬಹುದು. ನಾನು ಏನೇ ಮಾಡಲಿ ನಂಬಿದ ತತ್ವ, ಸಿದ್ಧಾಂತ ಮತ್ತು ಮೌಲ್ಯಗಳ ಜತೆ ರಾಜಿ ಮಾಡಿಕೊಳ್ಳುವುದಿಲ್ಲ. ಶೀಘ್ರ ನಿರ್ಧಾರ ತೆಗೆದುಕೊಳ್ಳುತ್ತೇನೆ.

*ದೊಡ್ಡದೊಂದು ಕೆಲಸಕ್ಕೆ ಕೈಹಾಕುತ್ತಿದ್ದೀರಿ ಎಂಬ ಸುದ್ದಿ ಇದೆ. ಅದಕ್ಕೆ ನೀವು ಮಾನಸಿಕವಾಗಿ ಸಿದ್ಧರಾಗಿದ್ದೀರಾ?

ಆ ಬಗ್ಗೆ ಸುಳ್ಳು ಸುದ್ದಿಗಳು ಹರಿದಾಡುತ್ತಿವೆ. ಈ ಬಗ್ಗೆ ಕೆಲವು ನನ್ನ ಹಿತೈಷಿಗಳು ದೂರವಾಣಿ ಮಾಡಿ ವಿಚಾರಿಸಿದ್ದಾರೆ. ಕೆಲಸ ಬಿಡುವ ಬಗ್ಗೆ ವಿಚಾರಿಸಿದ್ದಾರೆ. ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂಬ ಉದ್ದೇಶದಿಂದ ಕೆಲಸ ಬಿಡುತ್ತಿರುವುದಾಗಿ ಅವರಿಗೆ ಸಮಜಾಯಿಷಿ ನೀಡಿದ್ದೇನೆ. ಹೌದು, ನಾನು ಮಾನಸಿಕವಾಗಿ ಸಿದ್ಧನಾಗಿದ್ದೇನೆ.

* ಯಾವ ನೀತಿಗಳು ಬದಲಾಗಬೇಕು ಎಂದು ಬಯಸುತ್ತೀರಿ?

ಈ ವಿಷಯದಲ್ಲಿ ನಾನೊಬ್ಬ ಸಣ್ಣ ಮನುಷ್ಯ. ಸಾಗುವ ದಾರಿ ತುಂಬಾ ದೊಡ್ಡದಿದೆ. ದೊಡ್ಡ ಮಟ್ಟದಲ್ಲಿ ಸುಧಾರಣೆಯಾಗಬೇಕಿರುವುದಂತೂ ಸತ್ಯ. ದೇಶವನ್ನು ಕಟ್ಟಬೇಕಾಗಿದೆ. ನೈಸರ್ಗಿಕ ಸಂಪನ್ಮೂಲ ಸದ್ಬಳಕೆ, ಉದ್ಯೋಗ ಸೃಷ್ಟಿ ಮುಂತಾದ ಗಂಭೀರ ಸಮಸ್ಯೆಗಳಿಗೆ ಪರಿಹಾರ ಹುಡುಕಬೇಕಿದೆ.

* ಪೊಲೀಸ್‌ ಕೆಲಸದಲ್ಲಿದ್ದಾಗ ನಿಮ್ಮ ಕೈಗಳನ್ನು ಕಟ್ಟಿ ಹಾಕಲಾಗಿತ್ತು ಎಂದು ಅನಿಸಿತ್ತೇ?

ನನ್ನ ಸೇವಾ ಅವಧಿಯಲ್ಲಿ ಎಂದಿಗೂ ಆ ರೀತಿ ಅನಿಸಲಿಲ್ಲ. ಆದರೆ, ಇದಕ್ಕಿಂತ ಹೆಚ್ಚಿನ ಸೇವೆ, ಒಳ್ಳೆಯ ಕೆಲಸ ಮಾಡಬಹುದಿತ್ತು ಎಂದು ಅನಿಸಿದ್ದು ಸುಳ್ಳಲ್ಲ. ವ್ಯವಸ್ಥೆಯಲ್ಲಿ ಕೆಲಸ ಮಾಡುವಾಗ ಇದೆಲ್ಲ ಸಹಜ. ನನ್ನ ಕೆಲಸದ ಪ್ರತಿ ಕ್ಷಣವನ್ನೂ ನಾನು ಆನಂದಿಸಿದ್ದೇನೆ. ಅನುಭವಿಸಿದ್ದೇನೆ.

* ಕರ್ನಾಟಕ ಮತ್ತು ತಮಿಳುನಾಡಿನ ನಡುವಿನ ಕಾವೇರಿ ಸಮಸ್ಯೆ ಬಗ್ಗೆ ನಿಮ್ಮ ಅಭಿಪ್ರಾಯವೇನು? ಮೂಲತಃ ನೀವು ತಮಿಳುನಾಡಿನವರು. ಕರ್ನಾಟಕದಲ್ಲಿ ಸೇವೆ ಸಲ್ಲಿಸಿದ್ದೀರಿ. ಈ ಸಮಸ್ಯೆಯನ್ನು ನೀವು ಹೇಗೆ ನೋಡುತ್ತೀರಿ?

ಎರಡೂ ರಾಜ್ಯಗಳಿಗೆ ಕಾವೇರಿ ಅತ್ಯಂತ ಭಾವನಾತ್ಮಕ ವಿಚಾರ. ಕಾಲವೇ ಎಲ್ಲದಕ್ಕೂ ಮದ್ದು ಕಂಡುಹಿಡಿಯುತ್ತದೆ. ಕನ್ನಡಿಗರು ಮತ್ತು ತಮಿಳರಲ್ಲಿ ಪರಸ್ಪರ ಸೈರಣಾಭಾವವಿದೆ. ಇಬ್ಬರ ಬಾಂಧ್ಯವ್ಯದಲ್ಲಿ ಒಡಕಿಗೆ ಈ ಸಮಸ್ಯೆ ಕಾರಣವಾಗಬಾರದು.

* ಪೊಲೀಸ್‌ ಅಧಿಕಾರಿಯಾಗಿ ದಶಕಗಳ ಅನುಭವ ನಿಮ್ಮ ವ್ಯಕ್ತಿತ್ವದ ಮೇಲೆ ಹೇಗೆ ಪ್ರಭಾವ ಬೀರಿದೆ?

ದಶಕಗಳ ಪೊಲೀಸ್‌ ವೃತ್ತಿ ನನ್ನಲ್ಲಿಯ ಅಹಂ ತೊಡೆದು ಹಾಕಿತು. ನನ್ನ ಜೀವನದ ದೃಷ್ಟಿಕೋನವನ್ನು ಸಂಪೂರ್ಣವಾಗಿ ಬದಲಿಸಿತು. ಜೀವನದಲ್ಲಿ ಯಾವುದೂ ಶಾಶ್ವತವಲ್ಲ ಎಂಬ ಸತ್ಯವನ್ನು ಕಲಿಸಿಕೊಟ್ಟಿದೆ. ಜನರನ್ನು ತಿಳಿಯುವ ಸದಾವಕಾಶ ಒದಗಿಸಿಕೊಟ್ಟಿದೆ.

* ಒತ್ತಡದ ವೃತ್ತಿ ಜೀವನದಲ್ಲಿ ಹೇಗೆ ಸಮಚಿತ್ತ ಕಾಪಾಡಿಕೊಳ್ಳುತ್ತೀರಿ?

ಬೆಳಗಿನ ಜಾವ ರನ್ನಿಂಗ್‌ ಮತ್ತು ಓದು ನನ್ನನ್ನು ಒತ್ತಡದ ವೃತ್ತಿ ಬದುಕಿಗೆ ಅಣಿಗೊಳಿಸುತ್ತವೆ. ಮೊದಲಿನಷ್ಟು ಪ್ರವಾಸ ಮಾಡಲಾಗುತ್ತಿಲ್ಲ ಎಂಬುವುದು ಬೇಸರದ ಸಂಗತಿ. ಪ್ರವಾಸ ಕಲಿಸುವ ಪಾಠವನ್ನು ಬೇರಾವುದೂ ಕಲಿಸಲಾರದು.

* ಪರ್ವತಾರೋಹಣ ಮತ್ತು ಸೈಕ್ಲಿಂಗ್‌ ನಿಮ್ಮ ಮೆಚ್ಚಿನ ಹವ್ಯಾಸಗಳೇ?

ಕಾಲೇಜು ದಿನಗಳಿಂದ ಪರ್ವತಾರೋಹಣ ಮತ್ತು ಸೈಕ್ಲಿಂಗ್‌ ನನ್ನ ಮೆಚ್ಚಿನ ಹವ್ಯಾಸಗಳು. ಬಿಡುವುದು ಸಿಕ್ಕಾಗಲೆಲ್ಲ ಬ್ಯಾಗ್‌ನಲ್ಲಿ ಬಟ್ಟೆ ತುಂಬಿಕೊಂಡು ಹಿಮಾಲಯ, ಲಡಾಖ್‌, ಉತ್ತರಾಖಂಡ ಮತ್ತು ಹಿಮಾಚಲಕ್ಕೆ ಟ್ರೆಕ್ಕಿಂಗ್‌ ಹೊರಡುತ್ತೇನೆ. ಕಾಂಚನಗಂಗಾಕ್ಕೆ ಟ್ರೆಕ್ಕಿಂಗ್‌ ಹೋಗುವ ಆಸೆ ಇದೆ. ಬೆಂಗಳೂರಿಗೆ ಬಂದ ನಂತರ ಸೈಕ್ಲಿಂಗ್‌ಗೆ ಹೋಗಲಾಗುತ್ತಿಲ್ಲ ಎಂಬ ಬೇಸರವಿದೆ.

* ನೀವು ಪುಸ್ತಕ ಬರೆಯುತ್ತಿದ್ದೀರಿ ಎಂಬ ಸುದ್ದಿ ನಿಜವೇ? ಹಾಗಾದರೆ ಅದರ ತಿರುಳು ಏನು ಎಂದು ಕೇಳಬಹುದೇ?

ಹೌದು, ನೀವು ಕೇಳಿರುವ ಸುದ್ದಿ ನಿಜ. ಪೊಲೀಸ್ ವರಿಷ್ಠಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾಗ ನನ್ನ ಮೇಲೆ ಪ್ರಭಾವ ಬೀರಿದ ತಳ ಹಂತದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಗಳ ಮಾನವೀಯ ಮುಖಗಳು ಈ ಪುಸ್ತಕದಲ್ಲಿ ಅನಾವರಣಗೊಳ್ಳಲಿವೆ. ಉಡುಪಿ, ಚಿಕ್ಕಮಗಳೂರು ಮತ್ತು ಬೆಂಗಳೂರಿನ 15 ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಜನಸಾಮಾನ್ಯರ ಬದುಕಿನಲ್ಲಿ ಭರವಸೆ ಬಿತ್ತುವುದು ಈ ಪುಸ್ತಕದ ಉದ್ದೇಶ.

* ನಿಮಗೆ ತಮಿಳಿನ ಯಶಸ್ವಿ ಸಿನಿಮಾ ‘ಸಿಂಗಂ’ ಹೆಸರಿನಿಂದ ಕರೆಯಲಾಗುತ್ತದೆ. ನೀವು ಸಿನಿಮಾ ನೋಡುತ್ತೀರಾ?

ಇಂಥವನ್ನು ಗಂಭೀರವಾಗಿ ತೆಗೆದುಕೊಳ್ಳುವ ಜಾಯಮಾನ ನನ್ನದಲ್ಲ. ಅದು ಜನರು ಪ್ರೀತಿಯಿಂದ ಕೊಟ್ಟ ಹೆಸರು. ಎಲ್ಲ ಸಿನಿಮಾಗಳನ್ನು ನೋಡುವುದಿಲ್ಲ. ಒಳ್ಳೆಯ ಸಿನಿಮಾ ಮಾತ್ರ ನೋಡುತ್ತೇನೆ. ಈ ವಿಷಯದಲ್ಲಿ ನಾನು ತುಂಬಾ ಚೂಸಿ. ‘ದ ಶಾಶಾಂಕ್‌ ರೆಡೆಪ್ಷನ್’ ನನ್ನನ್ನು ಅತಿಯಾಗಿ ಕಾಡಿದ ಸಿನಿಮಾ. ಇದನ್ನು ಪ್ರತಿ ಬಾರಿ ನೋಡಿದಾಗ ನನಗೆ ಜೀವನದಲ್ಲಿ ಹೊಸ ಆಶಾಕಿರಣವೊಂದು ಗೋಚರಿಸುತ್ತದೆ.

* ನಿಮ್ಮ ಅಪ್ಪ, ಅವ್ವ ಏನು ಮಾಡುತ್ತಾರೆ. ಕೌಂಟುಂಬಿಕ ಹಿನ್ನೆಲೆ ಏನು?

ನನ್ನದು ರೈತ ಕುಟುಂಬ. ಅಪ್ಪ, ಅವ್ವ ಇಬ್ಬರೂ ರೈತರು. ಕರೂರು ಜಿಲ್ಲೆಯಲ್ಲಿ ನಮ್ಮದೊಂದು ಹೊಲ ಇದೆ. ಅದು ಒಣ ಭೂಮಿ. ಕುರಿಗಳನ್ನು ಸಾಕಿದ್ದೇವೆ. ಬಾಲ್ಯದಲ್ಲಿ ಕೃಷಿ ಮಾಡಿದ ಮತ್ತು ಕುರಿ ಸಾಕಿದ ಅನುಭವ ಇದೆ. ರೈತರ ಕಷ್ಟ ಏನೆಂದು ಗೊತ್ತು. ಈಗಲೂ ಕೃಷಿಯತ್ತ ನನ್ನ ಒಲವು, ವ್ಯಾಮೋಹ ಇನ್ನೂ ಕಡಿಮೆಯಾಗಿಲ್ಲ.

* ಅಪ್ಪ–ಅವ್ವನಿಂದ ಕಲಿತ ಪಾಠ ಏನು?

ಅಪ್ಪ, ಅವ್ವ ನನಗೆ ಬದುಕಿನ ಮೌಲ್ಯ ಮತ್ತು ಮಾನವೀಯ ಮೌಲ್ಯಗಳನ್ನು ಕಲಿಸಿದ್ದಾರೆ. ಅನಿಸಿದ್ದನ್ನು ನೇರವಾಗಿ ಮತ್ತು ಪ್ರಾಮಾಣಿಕವಾಗಿ ಹೇಳುವ ಗುಣ ಹೇಳಿಕೊಟ್ಟಿದ್ದಾರೆ. ನನ್ನ ಹೆಂಡತಿಯಿಂದಲೂ ಬದುಕಿನ ಅನೇಕ ಪಾಠ ಕಲಿತಿದ್ದೇನೆ. ಆಕೆಯ ಸಮಚಿತ್ತ ಮತ್ತು ಶಾಂತ ಸ್ವಭಾವ ನನಗೆ ಇಷ್ಟ. ಎಂಥದ್ದೇ ಸನ್ನಿವೇಶ ಎದುರಾಗಲಿ ಸಮಚಿತ್ತದಿಂದಲೇ ಎದುರಿಸುತ್ತಾಳೆ. ಮಗನಿಂದಲೂ ದಿನಾ ಏನಾದರೂ ಹೊಸದನ್ನು ಕಲಿಯುತ್ತಿರುತ್ತೇನೆ. ಜೀವನದ ಜಂಜಾಟದಲ್ಲಿ ನಾವು ಮರೆತುಹೋದ ಸಣ್ಣ, ಪುಟ್ಟ ಸಂಗತಿ, ಜೀವನದ ಮೂಲ ಪಾಠಗಳನ್ನು ಆತ ನನಗೆ ಕಲಿಸುತ್ತಿದ್ದಾನೆ.

* ಬೆಂಗಳೂರು ನಿಮಗೆ ಹೇಗನಿಸಿತು?

ಇದೊಂದು ಕಾಸ್ಮೋಪಾಲಿಟನ್‌ ಸಿಟಿ. ಮುಂದೆಯೂ ಅದೇ ರೀತಿ ಇದ್ದರೆ ಚೆನ್ನ.

* ಯುವ ಪೊಲೀಸ್‌ ಅಧಿಕಾರಿಗಳಿಗೆ ಸಲಹೆ ಏನು?

ಏನೇ ಮಾಡಿ. ಅದನ್ನು ಅತ್ಯಂತ ಶ್ರದ್ಧೆ, ದಕ್ಷತೆ ಮತ್ತು ಪ್ರಾಮಾಣಿಕವಾಗಿ ಮಾಡಿ. ಕಾಣುವುದಿದ್ದರೆ ದೊಡ್ಡ ಕನಸು ಕಾಣಿ. ಕಂಡ ಕನಸನ್ನು ನನಸಾಗಿಸುವ ದಿಶೆಯಲ್ಲಿ ಕಾರ್ಯೋನ್ಮುಖರಾಗಿ. ಪೊಲೀಸ್‌ ಇಲಾಖೆಯಲ್ಲಿ ಕೆಲವು ಅದ್ಭುತ ಯುವ ಹಾಗೂ ಸಮರ್ಥ ಅಧಿಕಾರಿಗಳಿದ್ದಾರೆ. ಅವರಿಗೆ ಯಾವ ಕಿವಿಮಾತಿನ ಅಗತ್ಯವಿಲ್ಲ. ಅಷ್ಟು ಪ್ರಬುದ್ಧರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT