ಅಟಲ್ ಟಿಂಕರಿಂಗ್ ಲ್ಯಾಬ್ ಉದ್ಘಾಟನೆ

7
ಗೋಕುಲ ಎಸ್‌.ಆರ್. ಬೊಮ್ಮಾಯಿ ಸರ್ಕಾರಿ ಪ್ರೌಢಶಾಲೆ

ಅಟಲ್ ಟಿಂಕರಿಂಗ್ ಲ್ಯಾಬ್ ಉದ್ಘಾಟನೆ

Published:
Updated:
Deccan Herald

ಹುಬ್ಬಳ್ಳಿ: ಮಕ್ಕಳ ಕುತೂಹಲ ತಣಿಸಲು ಹಾಗೂ ಅವರಲ್ಲಿ ಆವಿಷ್ಕಾರದ ಪ್ರವೃತ್ತಿ ಬೆಳೆಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಶಾಲೆಗಳಿಗೆ ಅಟಲ್ ಟಿಂಕರಿಂಗ್ ಲ್ಯಾಬ್ ನೀಡಿದೆ. ಈ ಪ್ರಯೋಗಾಲಯದ ಎಲ್ಲ ಸಾಧನಗಳು ಸಮಪರ್ಕವಾಗಿ ಬಳಕೆಯಾಗಬೇಕು ಎಂದು ಸಂಸದ ಪ್ರಹ್ಲಾದ ಜೋಶಿ ಹೇಳಿದರು.

ಗೋಕುಲದ ಎಸ್.ಆರ್. ಬೊಮ್ಮಾಯಿ ಸರ್ಕಾರಿ ಪ್ರೌಢಶಾಲೆಯ ಅಟಲ್ ಟಿಂಕರಿಂಗ್ ಲ್ಯಾಬ್ ಅನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು. ಈ ಯೋಜನೆ ಪ್ರಯೋಜನಾ ಪಡೆಯಲು ದೇಶದ 16 ಸಾವಿರ ಶಾಲೆಗಳು ಅರ್ಜಿ ಹಾಕಿದ್ದವು. ಆದರೆ ಕೇವಲ 700 ಉತ್ತಮ ಶಾಲೆಗಳನ್ನು ಆಯ್ಕೆ ಮಾಡಲಾಗಿದೆ. ಅದರಲ್ಲಿ ಈ ಸರ್ಕಾರಿ ಶಾಲೆಯೂ ಸೇರಿರುವುದು ಹೆಮ್ಮೆ ವಿಷಯ. ಈ ಶಾಲೆಯ ಅಭಿವೃದ್ಧಿಗೆ ಆದ್ಯತೆ ನೀಡಿ ಜಿಲ್ಲೆಯಲ್ಲಿಯೇ ಆದರ್ಶ ಶಾಲೆಯನ್ನಾಗಿ ರೂಪಿಸಲಾಗುವುದು ಎಂದು ಅವರು ಹೇಳಿದರು.

ಕೇಂದ್ರ ಸರ್ಕಾರ ಒಟ್ಟು ₹20 ಲಕ್ಷದ ಸಾಧನಗಳನ್ನು ನೀಡಿದೆ, ಅಲ್ಲದೆ ವರ್ಷಕ್ಕೆ ₹2 ಲಕ್ಷದಂತೆ ಐದು ವರ್ಷಕ್ಕೆ ₹10 ಲಕ್ಷ ಅನುದಾನವನ್ನು ನಿರ್ವಹಣೆಗೆ ನೀಡುತ್ತದೆ ಎಂದು ಅವರು ಮಾಹಿತಿ ನೀಡಿದರು.

ಮಕ್ಕಳಿಗೆ ಇದನ್ನೇ ಮಾಡಿ ಎಂದು ಸೂಚನೆ ನೀಡದೆ, ಅವರನ್ನು ಸ್ವತಂತ್ರವಾಗಿ ಬಿಟ್ಟು ಹೊಸ ಪ್ರಯೋಗ ಮಾಡಲು ಅವಕಾಶ ನೀಡಿ. ಸರ್ಕಾರಿ ಶಾಲೆಯೊಂದು ಇಷ್ಟೊಂದು ಅಭಿವೃದ್ಧಿಯಾಗಿದ್ದರೆ ಅದಕ್ಕೆ ಕಾರಣ ಎಸ್‌ಡಿಎಂಸಿ ಸದಸ್ಯರ ಶ್ರಮ ಹಾಗೂ ಶಿಕ್ಷಕರ ಕಾಳಜಿ ಕಾರಣ. ಇನ್ನೂ ನಾಲ್ಕು ಕೊಠಡಿ ಹಾಗೂ ಜೂನಿಯರ್ ಕಾಲೇಜು ಬೇಕು ಎಂಬ ಬೇಡಿಕೆ ಸಲ್ಲಿಸಲಾಗಿದೆ. ಅದನ್ನು ಮಂಜೂರು ಮಾಡಿಸಲು ಪ್ರಯತ್ನಿಸುತ್ತೇನೆ. ಈ ಶಾಲೆಯಲ್ಲಿ ಪ್ರವೇಶ ಪಡೆಯಲು ವಿದ್ಯಾರ್ಥಿಗಳು ಮುಗಿಬೀಳಬೇಕು ಆ ರೀತಿ ಅಭಿವೃದ್ಧಿಪಡಿಸಿ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.

ಶಾಸಕ ಬಸವರಾಜ ಬೊಮ್ಮಾಯಿ ಮಾತನಾಡಿ, ಉತ್ತಮ ಶಾಲೆ ಊರೊಂದರ ಪ್ರಗತಿಯ ಸಂಕೇತ. ಸ್ಥಳೀಯವಾಗಿ ಉತ್ತಮ ಶಿಕ್ಷಣ ಸಿಗದಿದ್ದರೆ ಆ ಪ್ರದೇಶ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ಮಕ್ಕಳಲ್ಲಿ ಇರುವ ಮುಗ್ಧತೆಯನ್ನು ಉಳಿಸಿಕೊಂಡು, ಅವರ ಕುತೂಹಲ ತಣಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕು. ಈ ಪ್ರಯೋಗಾಲಯ ಸಂಪೂರ್ಣವಾಗಿ ಸದ್ಬಳಕೆ ಮಾಡಿಕೊಳ್ಳಿ ಎಂದರು. ಶಾಲೆಯ ಕಾಂಪೌಂಡ್ ಹಾಗೂ ಕಾರಿಡಾರ್‌ ನಿರ್ಮಾಣ ಮಾಡಲು ದಾನಿಗಳಿಂದ ಹಣ ಕೊಡಿಸಲಾಗುವುದು. ಈ ಶಾಲೆ ಪದವಿ ಕಾಲೇಜು ಆಗುವವರೆಗೂ ವಿರಮಿಸುವುದಿಲ್ಲ ಎಂದು ಅವರು ಭರವಸೆ ನೀಡಿದರು.

ಪಾಲಿಕೆಯ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ರಾಮಪ್ಪ ಕೃಷ್ಣಪ್ಪ ಬಡಿಗೇರ, ಕ್ಷೇತ್ರ ಶಿಕ್ಷಣಾಧಿಕಾರಿ, ಎಸ್.ಎಂ. ಹುಡೇದಮನಿ, ಶಾಲೆ ಮುಖ್ಯೋಪಾಧ್ಯಾಯಿನಿ ಸುಷ್ಮಾ ಭಟ್, ಎಸ್‌ಡಿಎಂಸಿ ಅಧ್ಯಕ್ಷ ಯಲ್ಲಪ್ಪ ಡೋಣಿ, ಬಿ.ಎಫ್‌. ಅರವಟಗಿ, ಬಸಣ್ಣಪ್ಪ ಉಣಕಲ್, ಮಡಿವಾಳಪ್ಪ ರಾಯ್ಕರ್, ರಾಮಣ್ಣ ಉಣಕಲ್, ಮಲ್ಲೇಶಪ್ಪ ದೊಡ್ಡಮನಿ, ಎಸ್‌.ಸಿ. ಗುಂಡಾರ ಕಾರ್ಯಕ್ರಮ ನಿರೂಪಿಸಿದರು.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !