ಅಕ್ರಮ ಕಟ್ಟಡಗಳ ಹೊಣೆಗಾರರಿಗೆ ಶಿಕ್ಷೆ: ವಿವರಣೆ ಕೇಳಿದ ಹೈಕೋರ್ಟ್‌

7

ಅಕ್ರಮ ಕಟ್ಟಡಗಳ ಹೊಣೆಗಾರರಿಗೆ ಶಿಕ್ಷೆ: ವಿವರಣೆ ಕೇಳಿದ ಹೈಕೋರ್ಟ್‌

Published:
Updated:

ಬೆಂಗಳೂರು: ‘ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿನ ಅಕ್ರಮ ಹಾಗೂ ಅನಧಿಕೃತ ಕಟ್ಟಡ ನಿರ್ಮಾಣಗಳಿಗೆ ಹೊಣೆಗಾರರಾಗುವ ಅಧಿಕಾರಿಗಳಿಗೆ ಶಿಕ್ಷೆ ವಿಧಿಸುವ ಕುರಿತಂತೆ ಈಗಾಗಲೇ ಕರಡು ಮಾರ್ಗಸೂಚಿ ರೂಪಿಸಲಾಗಿದ್ದು, ಅದನ್ನು ಸರ್ಕಾರದ ಅನುಮೋದನೆಗಾಗಿ ಸಲ್ಲಿಸಲಾಗಿದೆ’ ಎಂದು ಬಿಬಿಂಎಪಿ ಹೈಕೋರ್ಟ್‌ಗೆ ತಿಳಿಸಿದೆ.

‘ಅನಧಿಕೃತ ಕಟ್ಟಡ ನಿರ್ಮಾಣಗಳಿಗೆ ಹೊಣೆಗಾರರಾಗುವ ಅಧಿಕಾರಿಗಳಿಗೆ ಕರ್ನಾಟಕ ಪೌರಾಡಳಿತ ಕಾಯ್ದೆ ಪ್ರಕಾರ ಶಿಕ್ಷೆಯ ಸ್ವರೂಪ ಮತ್ತು ಪ್ರಮಾಣ ನಿಗದಿಪಡಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಎಸ್. ಸುಜಾತ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲ ವಿ.ಶ್ರೀನಿಧಿ, ‘ಈಗಾಗಲೇ ಶಿಕ್ಷೆಯ ಸ್ವರೂಪ ಹಾಗೂ ಪ್ರಮಾಣ ನಿಗದಿಪಡಿಸುವ ಪ್ರಕ್ರಿಯೆ ಸರ್ಕಾರದ ಮಟ್ಟದಲ್ಲಿ ಚಾಲ್ತಿಯಲ್ಲಿದೆ’ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದರು.

ಆದರೆ, ಈ ಉತ್ತರಕ್ಕೆ ತೃಪ್ತವಾಗದ ನ್ಯಾಯಪೀಠ, ‘ಈ ಬಗ್ಗೆ ಹೆಚ್ಚಿನ ವಿವರಣೆ ನೀಡಿ’ ಎಂದು ನಿರ್ದೇಶಿಸಿ ವಿಚಾರಣೆಯನ್ನು ಇದೇ 28ಕ್ಕೆ ಮುಂದೂಡಿತು. 

ಆಕ್ಷೇಪಣೆ ಏನು?: ‘ಬಿಬಿಎಂಪಿ ವ್ಯಾಪ್ತಿಯಲ್ಲಿನ ಅಕ್ರಮ ಹಾಗೂ ಅನಧಿಕೃತ ಕಟ್ಟಡಗಳ ನಿರ್ಮಾಣಕ್ಕೆ ಹೊಣೆಗಾರರಾಗುವ ಎಂಜಿನಿಯರುಗಳಿಗೆ ಏನು ಶಿಕ್ಷೆ ವಿಧಿಸಬೇಕು ಎಂಬುದರ ಬಗ್ಗೆ ಸರ್ಕಾರ ಇನ್ನೂ ಯಾವುದೇ ಮಾರ್ಗಸೂಚಿ ಅಥವಾ ಅಧಿಸೂಚನೆ ಹೊರಡಿಸಿಲ್ಲ’ ಎಂಬುದು ಅರ್ಜಿದಾರರೂ ಆದ ವಕೀಲ ಎಸ್. ಉಮಾಪತಿ ಅವರ ಆಕ್ಷೇಪ.

‘ತಪ್ಪಿತಸ್ಥ ಎಂಜಿನಿಯರುಗಳ ವಿರುದ್ಧ ಕಾನೂನು ಕ್ರಮ ಕೈಗೊಂಡು ಶಿಕ್ಷೆ ವಿಧಿಸಲು ಕರ್ನಾಟಕ ಪೌರಾಡಳಿತ ಕಾಯ್ದೆ-1976ಕ್ಕೆ ತಿದ್ದುಪಡಿ ತರಲಾಗಿದೆ. ಆದರೆ, ಶಿಕ್ಷೆ ಏನಿರಬೇಕು, ಹೇಗಿರಬೇಕು ಎಂಬ ಬಗ್ಗೆ ಈವರೆಗೆ ಮಾರ್ಗಸೂಚಿ ರಚನೆ ಮಾಡಿಲ್ಲ. ಕಳೆದ 11 ವರ್ಷಗಳಿಂದ ಯಾವೊಬ್ಬ ಅಧಿಕಾರಿಗೂ ಶಿಕ್ಷೆ ಆಗಿಲ್ಲ’ ಎಂದು ಅರ್ಜಿದಾರರು ದೂರಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !