ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಣ ಕಸ ಸಂಗ್ರಹ ಗುತ್ತಿಗೆ ನಮಗೇ ಕೊಡಿ: ಕಸ ಆಯುವವರ ಹಕ್ಕೊತ್ತಾಯ

Last Updated 5 ಫೆಬ್ರುವರಿ 2019, 19:16 IST
ಅಕ್ಷರ ಗಾತ್ರ

ಬೆಂಗಳೂರು: ‘ನಗರದ 198 ವಾರ್ಡ್‌ಗಳಲ್ಲೂ ಒಣ ಕಸ ಸಂಗ್ರಹಿಸುವ ಗುತ್ತಿಗೆಯನ್ನು ತಮಗೇ ನೀಡ ಬೇಕು’ ಎಂದು ಕಸ ಆಯುವವರು, ಹಕ್ಕೊತ್ತಾಯ ಮಂಡಿಸಿದ್ದಾರೆ.

ಮನೆ ಮನೆಯಿಂದ ಹಸಿ ಕಸ ಹಾಗೂ ಒಣ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಲು ಬಿಬಿಎಂಪಿಯು ಮುಂದಾಗಿದ್ದು, ಹಸಿ ಕಸ ಸಂಗ್ರಹದ ಗುತ್ತಿಗೆ ನೀಡಲು ಈಗಾಗಲೇ ಟೆಂಡರ್‌ ಆಹ್ವಾನಿಸಿದೆ. ಇದರ ಬೆನ್ನಲ್ಲೇ, ಕಸ ಆಯುವವರು ಹಸಿರು ದಳದ ನೇತೃತ್ವದಲ್ಲಿ ಮೇಯರ್‌ ಗಂಗಾಂಬಿಕೆ ಹಾಗೂ ಪಾಲಿಕೆಯ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಅವರನ್ನು ಮಂಗಳವಾರ ಭೇಟಿಯಾಗಿ ಒಣ ಕಸ ಸಂಗ್ರಹಿಸುವ ಗುತ್ತಿಗೆಯನ್ನು ಕಸ ಆಯುವ ಕಾಯಕದಲ್ಲಿ ತೊಡಗಿರುವವರಿಗೆ ಮಾತ್ರ ನೀಡುವಂತೆ ಒತ್ತಾಯಿಸಿದರು.

‘ಕಸ ಆಯುವುದು ನಮ್ಮ ಜೀವನೋಪಾಯ. ಇದು ನಮ್ಮ ಹಕ್ಕು. ಹೈಕೋರ್ಟ್‌ 2016ರಡಿಸೆಂಬರ್ 16 ನೀಡಿದ ಆದೇಶದಲ್ಲಿ, ಮರುಬಳಕೆಗೆ ಯೋಗ್ಯವಾದ ತ್ಯಾಜ್ಯ ಸಂಗ್ರಹಿಸುವುದಕ್ಕೆ ಕಸ ಆಯುವವರಿಗೆ ಅವಕಾಶ ನೀಡಬೇಕು ಎಂದು ಸ್ಪಷ್ಟಪಡಿಸಿದೆ. ಹಾಗಾಗಿ ಒಣ ಕಸ ಸಂಗ್ರಹದ ಗುತ್ತಿಗೆಯನ್ನು ಕಸ ಆಯುವವರು, ಸಂಚಾರಿ ಖರೀದಿದಾರರು ಮತ್ತು ಸಣ್ಣ ರದ್ದಿ ವ್ಯಾಪಾರಿಗಳಿಗೆ ನೀಡಬೇಕು’ ಎಂದು ಅವರು ಮನವಿ ಮಾಡಿದರು.

ಬಿಬಿಎಂಪಿಯ 33 ವಾರ್ಡ್‍ನಲ್ಲಿ ಒಣ ಕಸ ಸಂಗ್ರಹ ಕೇಂದ್ರಗಳನ್ನು ನಿರ್ವಹಿಸುವ ಗುತ್ತಿಗೆಯನ್ನು ಕಸ ಆಯುವವರಿಗೆ ನೀಡಲಾಗಿದೆ. ಅವರು 73 ವಾಹನಗಳನ್ನು ಬಳಸಿಕೊಂಡು 4.65 ಲಕ್ಷ ಮನೆಗಿಂದ ಒಣ ಕಸ ಸಂಗ್ರಹಿಸುತ್ತಿರುವುದಲ್ಲದೇ ,ಅವುಗಳನ್ನು ವಿಂಗಡನೆ ಮಾಡಿ ಮರುಬಳಕೆಗೂ ನೆರವಾಗುತ್ತಿದ್ದಾರೆ. ಇದರಿಂದಾಗಿ 350 ಕಸ ಆಯುವವರಿಗೆ ಉದ್ಯೋಗಾವಕಾಶ ಸಿಕ್ಕಿದೆ. 2017ರ ಮಾರ್ಚ್‌ನಿಂದ ಒಟ್ಟು13,460 ಟನ್‍ಗಳಷ್ಟು ಒಣ ಕಸ ಮರುಬಳಕೆ ಸಾಧ್ಯವಾಗಿದೆ.

‘ಬೆಂಗಳೂರಿನಲ್ಲಿ ಕಸದ ಮರುಬಳಕೆಯಲ್ಲಿ ಉದ್ಯಮವನ್ನು ರೂಪಿಸುವಲ್ಲಿ ಹಾಗೂ ನಗರವನ್ನು ಸ್ವಚ್ಛವಾಗಿಡುವಲ್ಲಿ ಕಸ ಆಯುವವರ ಕೊಡುಗೆ ಮಹತ್ತರವಾದುದು. ಮನೆಮನೆಯಿಂದ ಕಸ ಸಂಗ್ರಹಿಸುವವರು ಮುಷ್ಕರ ನಡೆಸಿದಾಗ ಕಸ ಆಯುವವರು ತ್ಯಾಜ್ಯ ರಾಶಿಗಳನ್ನು ಸ್ವಚ್ಛಗೊಳಿಸಿದ್ದರು. 2011ರಲ್ಲಿ ನಡೆಸಲಾದ ಅಧ್ಯಯನದ ಪ್ರಕಾರ ನಗರದಲ್ಲಿ ನಿತ್ಯ 1,050 ಟನ್‌ಗಳಷ್ಟು ಘನತ್ಯಾಜ್ಯವನ್ನು ಇವರೇ ಸಂಗ್ರಹಿಸುತ್ತಾರೆ. ಪಾಲಿಕೆ ಕಸ ನಿರ್ವಹಣೆಗೆ ಮಡುವ ವೆಚ್ಚದಲ್ಲಿ ವಾರ್ಷಿಕ ₹ 84 ಕೋಟಿ ರೂಪಾಯಿ ಇವರಿಂದಾಗಿ ಉಳಿತಾಯವಾಗುತ್ತಿದೆ’ ಎಂದು ಹಸಿರು ದಳದ ಸಹಸಂಸ್ಥಾಪಕಿ ನಳಿನಿ ಶೇಖರ್‌ ತಿಳಿಸಿದರು.

‘ಕಸ ನಿರ್ವಹಣೆಯಲ್ಲಿ ಚಿಂದಿ ಆಯುವವರನ್ನು ಸೇರಿಸಿಕೊಳ್ಳುವುದರಿಂದ ವ್ಯವಸ್ಥೆಯ ಕ್ಷಮತೆ ಹೆಚ್ಚುತ್ತದೆ. ಸಾಮಾಜಿಕ ನ್ಯಾಯ ಮತ್ತು ಬಡತನ ನಿರ್ಮೂಲನೆಯ ಗುರಿ ಸಾಧನೆಗೂ ಇದು ನೆರವಾಗುತ್ತದೆ’ ಎಂದರು.

ಪಾಲಿಕೆಗೆ ಸಾವಿರ ಪತ್ರ

‘ನನ್ನ ಹೆಸರು ಇಂದ್ರ. ನಮ್ಮ ಕುಟುಂಬವು ಹಿಂದಿನಿಂದಲೂ ಕಸ ಆಯುವ ಕಾಯಕದಲ್ಲಿ ತೊಡಗಿದೆ. ನಗರದ ಸ್ವಚ್ಛತೆ ಕಾಪಾಡುವುದರಲ್ಲಿ ನಮ್ಮವರ ಪಾತ್ರ ಮಹತ್ತರವಾದುದು. ಒಣ ತ್ಯಾಜ್ಯ ಸಂಗ್ರಹಿಸುವ ಗುತ್ತಿಗೆಯನ್ನು ನಮ್ಮಂಥವರಿಗೆ ನೀಡಿದರೆ ಅನುಕೂಲವಾಗಲಿದೆ’

ಕಸ ಆಯುವ ಬಾಲಕನೊಬ್ಬ ಮೇಯರ್‌ಗೆ ಬರೆದ ಪತ್ರದ ಒಕ್ಕಣೆ ಇದು. ಹಸಿರು ದಳ ಹಮ್ಮಿಕೊಂಡ ಈ ಪೋಸ್ಟ್‌ ಕಾರ್ಡ್‌ ಅಭಿಯಾನದಲ್ಲಿ ಇಂತಹ ನೂರಾರು ಮಕ್ಕಳು, ‘ಒಣ ತ್ಯಾಜ್ಯ ಸಂಗ್ರಹಣೆ ನಮ್ಮ ಹಕ್ಕು’ ಎಂದು ನೆನಪಿಸಲು ಪಾಲಿಕೆಗೆ ಇಂತಹ ಪತ್ರ ಬರೆದಿದ್ದಾರೆ. ಪಾಲಿಕೆಗೆ ಸಾವಿರಕ್ಕೂ ಅಧಿಕ ಪತ್ರವನ್ನು ತಲುಪಿಸುವ ಗುರಿಯನ್ನು ಹಸಿರುದಳ ಹೊಂದಿದೆ.

* ಒಣ ಕಸ ಸಂಗ್ರಹಿಸುವ ಗುತ್ತಿಗೆಯನ್ನು ಕಸ ಆಯುವವರಿಗೆ ನೀಡಬೇಕು. ಇದರಿಂದ ಪಾಲಿಕೆಗೆ ಆರ್ಥಿಕ ಹೊರೆಯೂ ಕಡಿಮೆ ಆಗುತ್ತದೆ. ನಗರವೂ ಸ್ವಚ್ಛವಾಗುತ್ತದೆ
-ನಳಿನಿ ಶೇಖರ್‌, ಹಸಿರುದಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT