ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸ್ತುಸ್ಥಿತಿ ಗುರುತಿಸಲು ಇಂದಿನಿಂದ ಸರ್ವೆ

ಶಿವರಾಮ ಕಾರಂತ ಬಡಾವಣೆ: ಕೋರ್ಟ್‌ ನಿರ್ದೇಶನದ ಬಳಿಕ ಎಚ್ಚೆತ್ತ ಬಿಡಿಎ
Last Updated 10 ಜನವರಿ 2019, 20:10 IST
ಅಕ್ಷರ ಗಾತ್ರ

ಬೆಂಗಳೂರು: ಡಾ.ಕೆ.ಶಿವರಾಮ ಕಾರಂತ ಬಡಾವಣೆಯಲ್ಲಿ ವಸ್ತುಸ್ಥಿತಿ ಅಧ್ಯಯನ ನಡೆಸುವ ಸಲುವಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಶುಕ್ರವಾರದಿಂದ ಸರ್ವೆ ಆರಂಭಿಸಲಿದೆ.

ಈ ಬಡಾವಣೆಯ ಭೂಸ್ವಾಧೀನಕ್ಕೆ ಬಿಡಿಎ 2008ರ ಡಿಸೆಂಬರ್‌ನಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. ಸುಪ್ರೀಂ ಕೋರ್ಟ್‌ ತರಾಟೆಗೆ ತೆಗೆದುಕೊಂಡ ಬಳಿಕ ಎಚ್ಚೆತ್ತಿದ್ದ ಬಿಡಿಎ 10 ವರ್ಷದ ಬಳಿಕ 3,546 ಎಕರೆ 12 ಗುಂಟೆ ಜಾಗವನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ. ಈ ಸಲುವಾಗಿ 2018ರ ನವೆಂಬರ್‌ 1ರಂದು ರಾಜ್ಯಪತ್ರದಲ್ಲಿ ಅಧಿಸೂಚನೆ ಪ್ರಕಟಿಸಲಾಗಿದೆ.

ಪ್ರಾಥಮಿಕ ಅಧಿಸೂಚನೆ ಹೊರಡಿಸುವಾಗ 1,853 ರೈತರ ಭೂಮಿಯನ್ನು ಬಳಸಲು ಬಿಡಿಎ ನಿರ್ಧರಿಸಿತ್ತು. ಆದರೆ, ಆ ಬಳಿಕ ಹತ್ತು ವರ್ಷಗಳಲ್ಲಿ ಹೈಕೋರ್ಟ್‌ ಆದೇಶದ ಆಧಾರದಲ್ಲಿ ಅನೇಕ ಖಾತಾದಾರರಿಗೆ ಅವರ ಜಮೀನನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವ ಬಗ್ಗೆ ಬಿಡಿಎ ಹಿಂಬರಹ ನೀಡಿತ್ತು. ಅಲ್ಲೆಲ್ಲ ಅವರು ಕಟ್ಟಡ ನಿರ್ಮಿಸಿಕೊಂಡಿದ್ದಾರೆ. ಬಹುತೇಕ ಕಡೆ ಶಾಲೆ, ಕಾಲೇಜು, ವಾಣಿಜ್ಯ ಕಟ್ಟಡಗಳು ತಲೆ ಎತ್ತಿವೆ.

‘ಈ ಬಡಾವಣೆಗೆ ಸ್ವಾಧೀನ ಪಡಿಸಿಕೊಳ್ಳುತ್ತಿರುವ ಜಾಗದಲ್ಲಿ ವಸ್ತುಸ್ಥಿತಿ ಹೇಗಿದೆ ಎಂಬುದನ್ನು ತಿಳಿದುಕೊಳ್ಳಬೇಕಾಗಿದೆ. ಈ ಸಲುವಾಗಿ ಶುಕ್ರವಾರ ದಿಂದ ಸರ್ವೆ ಆರಂಭಿಸಲಿದ್ದೇವೆ’ ಎಂದು ಪ್ರಾಧಿಕಾರದ ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮ್ಮ 10 ಮಂದಿ ಸರ್ವೇಯರ್‌ಗಳನ್ನು ಈ ಕಾರ್ಯಕ್ಕೆ ಬಳಸಿಕೊಳ್ಳುತ್ತೇವೆ. ಈ ಕಾರ್ಯವನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು ಎಂಬ ಉದ್ದೇಶದಿಂದ ಇನ್ನಷ್ಟು ಸರ್ವೇಯರ್‌ಗಳನ್ನು ಒದಗಿಸುವಂತೆ ಕೋರಿದ್ದೇವೆ’ ಎಂದು ಅವರು ತಿಳಿಸಿದರು.

‘ಪ್ರಾಥಮಿಕ ಅಧಿಸೂಚನೆ ಬಳಿಕ ಎಷ್ಟು ಕಟ್ಟಡಗಳು ನಿರ್ಮಾಣವಾಗಿವೆ, ಎಷ್ಟು ಕಟ್ಟಡಗಳನ್ನು ನಿರಾಕ್ಷೇಪಣಾ ಪತ್ರ ಪಡೆದು ನಿರ್ಮಿಸಲಾಗಿದೆ? ಅನಧಿಕೃತ ಕಟ್ಟಡಗಳೇನಾದರೂ ಇವೆಯೇ? ಖಾಲಿ ಜಾಗ ಎಷ್ಟಿವೆ ಎಂಬುದರ ಸ್ಪಷ್ಟ ಚಿತ್ರಣ ಸರ್ವ ಬಳಿಕವಷ್ಟೇ ಸಿಗಲಿದೆ’ ಎಂದು ಅವರು ವಿವರಿಸಿದರು.

‘ಈಗಾಗಲೇ ಈ ಪ್ರದೇಶಗಳಲ್ಲಿ ಭಾರಿ ಪ್ರಮಾಣದಲ್ಲಿ ಕಟ್ಟಡಗಳು ನಿರ್ಮಾಣ ಆಗಿರುವುದರಿಂದ ಅವುಗಳನ್ನು ನೆಲಸಮ ಮಾಡುವುದು ಕಷ್ಟಸಾಧ್ಯ. ಪ್ರಾಥಮಿಕ ಅಧಿಸೂಚನೆ ಹೊರಡಿಸಿದ ಬಳಿ ನಿರ್ಮಾಣವಾದ ಕಟ್ಟಡಗಳಿಗೆ ಈಗಿರುವ ನಿಯಮಗಳ ಪ್ರಕಾರ ಪರಿಹಾರ ಕೊಡುವುದಕ್ಕೂ ಅವಕಾಶ ಇಲ್ಲ. ಆದರೆ ಈ ಬಡಾವಣೆಯ ಪ್ರಕರಣವನ್ನು ವಿಶೇಷ ಎಂದು ಪರಿಗಣಿಸಿ, ನಿರಾಕ್ಷೇಪಣಾ ಪತ್ರ ಪಡೆದು ಕಟ್ಟಡ ನಿರ್ಮಿಸಿದವರಿಗೆ ಪರಿಹಾರ ನೀಡುವ ಬಗ್ಗೆ ಸರ್ಕಾರ ಮಟ್ಟದಲ್ಲೇ ತೀರ್ಮಾನ ಆಗಬೇಕು. ನಾವು ಸರ್ವೆಯಲ್ಲಿ ಕಂಡುಕೊಳ್ಳುವ ಅಂಶ ಸರ್ಕಾರವು ಸೂಕ್ತ ನಿಲುವು ತಳೆಯುವುದಕ್ಕೆ ನೆರವಾಗಲಿದೆ’ ಎಂದರು.

ಈ ಬಡಾವಣೆಯ ಭೂಸ್ವಾಧೀನ ಪ್ರಕ್ರಿಯೆಯನ್ನು ಹೈಕೋರ್ಟ್‌ ರದ್ದುಪಡಿಸಿತ್ತು. ಇದನ್ನು ಪ್ರಶ್ನಿಸಿ ಬಿಡಿಎ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ನ್ಯಾಯಮೂರ್ತಿಗಳಾದ ಅರುಣ್‌ ಮಿಶ್ರಾ ಹಾಗೂ ಅಬ್ದುಲ್‌ ನಜೀರ್‌ ಅವರಿದ್ದ ಪೀಠವು ಈ ಬಡಾವಣೆಯ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಹಾಗೂ ಬಿಡಿಎಗೆ 2018ರ ಆಗಸ್ಟ್‌ 3ರಂದು ನಿರ್ದೇಶನ ನೀಡಿತ್ತು. ಮೂರು ತಿಂಗಳ ಒಳಗೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಸೂಚಿಸಿತ್ತು.

ಈ ಬಡಾವಣೆಯ ಹೆಸರಿನಲ್ಲಿ ನಡೆದಿದೆ ಎನ್ನಲಾದ ಅಕ್ರಮದ ತನಿಖೆ ನಡೆಸಲು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕೆ.ಎನ್‌.ಕೇಶವನಾರಾಯಣ ಅವರನ್ನು ಸುಪ್ರೀಂ ಕೋರ್ಟ್‌ ನೇಮಿಸಿತ್ತು.

**

‘ಬಡಾವಣೆಗೆ ಬೇಕು ₹13,833 ಕೋಟಿ’

ಈ ಬಡಾವಣೆ ನಿರ್ಮಾಣಕ್ಕೆ ಅಂದಾಜು ₹ 13,833 ಕೋಟಿ ಬೇಕು ಎಂದು ಬಿಡಿಎ ಅಂದಾಜು ಮಾಡಿದೆ. ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಸಿದ ಪ್ರಸ್ತಾವ ದಲ್ಲಿ ಈ ಅಂಶ ಇದೆ. ಭೂಸ್ವಾಧೀನ ನಡೆಸುವುದಕ್ಕೇ ₹ 9,483 ಕೋಟಿ ಬೇಕಾಗುತ್ತದೆ ಎಂದು ಬಿಡಿಎ ಅಂದಾಜು ಮಾಡಿದೆ. ಇದರಲ್ಲಿ, ಪ್ರಾಥಮಿಕ ಅಧಿಸೂಚನೆ ಬಳಿಕ ನಿರ್ಮಿಸಲಾದ ಕಟ್ಟಡಗಳಿಗೆ ನೀಡುವ ಪರಿಹಾರದ ಮೊತ್ತ ಸೇರಿಲ್ಲ. ಒಂದು ವೇಳೆ ಇಂತಹ ಕಟ್ಟಡಗಳಿಗೂ ಪರಿಹಾರ ನೀಡಲುಸರ್ಕಾರ ನಿರ್ಣಯ ಕೈಗೊಂಡರೆ ಬಡಾವಣೆ ಅಭಿವೃದ್ಧಿ ಪಡಿಸಲು ತಗಲುವ ವೆಚ್ಚ ಮತ್ತಷ್ಟು ಹೆಚ್ಚಲಿದೆ.

‘ಈಗಾಗಲೇ ಸಾಕಷ್ಟು ಕಟ್ಟಡಗಳು ತಲೆ ಎತ್ತಿರುವ ಪ್ರದೇಶದಲ್ಲಿ ಬಡಾವಣೆ ನಿರ್ಮಿಸಲು ಬಿಡಿಎ ಮುಂದಾಗಿರುವುದು ಮೂರ್ಖತನದ ಪರಮಾವಧಿ. ಜಮೀನು ಕಳೆದುಕೊಳ್ಳುವವರಿಗೆ ಹೊಸ ಭೂಸ್ವಾಧೀನ ಕಾಯ್ದೆ ಪ್ರಕಾರ ಪರಿಹಾರ ನೀಡಿದರೆ, ಯಶವಂತಪುರ ಪ್ರದೇಶದಲ್ಲಿ ಜಮೀನಿಗೆ ಇರುವ ಬೆಲೆಗಿಂತಲೂ ಹೆಚ್ಚು ಮೊತ್ತ ನೀಡಬೇಕಾಗುತ್ತದೆ. ಅಷ್ಟೊಂದು ವೆಚ್ಚ ಮಾಡಿ ನಿವೇಶನ ನಿರ್ಮಿಸಿದರೆ ಅದನ್ನು ಖರೀದಿಸುವವರು ಯಾರು’ ಎಂದು ಶಿವರಾಮ ಕಾರಂತ ಬಡಾವಣೆ ಸಂತ್ರಸ್ತರ ಹಿತರಕ್ಷಣಾ ಸಮಿತಿ ಅಧ್ಯಕ್ಷ
ಬಿ.ಆರ್‌.ನಂಜುಂಡಪ್ಪ ಪ್ರಶ್ನಿಸಿದರು.

**

‘ಸರ್ವೆಗೆ ಸಹಕಾರ ನೀಡುತ್ತೇವೆ’

‘ಈ ಬಡಾವಣೆಗೆ ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಿರುವ ಜಾಗದ ವಸ್ತುಸ್ಥಿತಿ ಹೇಗಿದೆ ಎಂದು ಮಾಹಿತಿ ಪಡೆಯಲು ಬಿಡಿಎ ಸರ್ವೆ ನಡೆವುದಾದರೆ ಅದನ್ನು ನಾವು ಸ್ವಾಗತ ಮಾಡುತ್ತೇವೆ. ಸರ್ವೆ ಕಾರ್ಯಕ್ಕೂ ಸಹಕಾರ ನೀಡುತ್ತೇವೆ. ಆದರೆ, ಸರ್ಕಾರ ರೈತರ ಪರವಾಗಿ ನಿಲುವು ತಳೆಯಬೇಕು ಎಂಬುದು ನಮ್ಮ ಬೇಡಿಕೆ’ ಎಂದು ಬಿ.ಆರ್‌.ನಂಜುಂಡಪ್ಪ ತಿಳಿಸಿದರು.

‘ಈ ಬಡಾವಣೆ ನಿರ್ಮಿಸಿದರೆ ರೈತರಿಗೆ ಏನೆಲ್ಲ ಅನನುಕೂಲ ಆಗಲಿದೆ ಎಂಬುದನ್ನು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಗಮನಕ್ಕೆ ತಂದಿದ್ದೇವೆ. ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ ಅವರ ಜೊತೆ ಚರ್ಚಿಸಿ ಈ ಬಗ್ಗೆ ವಿಶೇಷ ಕರೆಯುತ್ತೇನೆ ಎಂದು ಭರವಸೆ ನೀಡಿದ್ದಾರೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT