ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳ್ಳಂದೂರು ಕೆರೆಯ ಹೂಳೆತ್ತಲು ಮುಂದಾದ ಬಿಡಿಎ

ಮೇ 2021ರೊಳಗೆ ಕಾಮಗಾರಿ ಪೂರ್ಣಗೊಳಿಸಲು ನಿರ್ಧಾರ
Last Updated 30 ಜನವರಿ 2019, 19:44 IST
ಅಕ್ಷರ ಗಾತ್ರ

ಬೆಂಗಳೂರು: ಬೆಳ್ಳಂದೂರು ಕೆರೆಗಳ ಹೂಳೆತ್ತಲು ಬಿಡಿಎ ಮುಂದಾಗಿದ್ದು, ಮೇ 2021ರೊಳಗೆ ಈ ಕಾಮಗಾರಿ ಪೂರ್ಣಗೊಳಿಸಲು ನಿರ್ಧರಿಸಿದೆ.

ಬಿಡಿಎ ಅಧಿಕಾರಿಗಳು ಈ ಕೆರೆಯ ಹೂಳೆತ್ತಲು ₹ 1 ಸಾವಿರ ಕೋಟಿ ಅಂದಾಜು ವೆಚ್ಚ ಸಿದ್ಧಪಡಿಸಿದ್ದರು. ಆದರೆ, ಈ ಕಾಮಗಾರಿ ನಡೆಸಲು ಮುಂದಾದ ಕಂಪನಿ ಬೆಳ್ಳಂದೂರು ಮತ್ತು ವರ್ತೂರು ಎರಡೂ ಕೆರೆಗಳ ಪುನರುಜ್ಜೀವನಕ್ಕೆ ₹ 665 ಕೋಟಿಯ ಅಂದಾಜುಪಟ್ಟಿ ಸಿದ್ಧಪಡಿಸಿ ಪ್ರಸ್ತಾವ ಸಲ್ಲಿಸಿದೆ. ಈ ಪ್ರಸ್ತಾವಕ್ಕೆ ಒಪ್ಪಿಗೆ ನೀಡಿದರೆ ಮೊದಲಿನ ಅಂದಾಜು ವೆಚ್ಚಕ್ಕಿಂತ ಶೇ 80ರಷ್ಟು ಮಾತ್ರ ವ್ಯಯವಾಗಲಿದೆ.

ಕೆರೆಗಳ ಸುತ್ತ ತಡೆಬೇಲಿ, ಸ್ಪ್ರಿಂಕ್ಲರ್‌ ಅಳವಡಿಕೆ ಹಾಗೂ ಬೆಳ್ಳಂದೂರು ಕೆರೆಯ ಕಳೆ ಕಿತ್ತು, ಪ್ರವಾಹ ನಿಯಂತ್ರಣಕ್ಕಾಗಿ ಇದುವರೆಗೆ ₹ 42.3 ಕೋಟಿ ಖರ್ಚು ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

‘2020ರ ಜುಲೈ ಒಳಗೆ ಇಲ್ಲಿ ಚರಂಡಿ ನೀರು ಸಂಸ್ಕರಣೆ ಘಟಕವನ್ನು ಜಲಮಂಡಳಿ ನಿರ್ಮಿಸಿಕೊಡಲಿದೆ. 2020ರ ನವೆಂಬರ್‌ನಿಂದ 2021ರ ಏಪ್ರಿಲ್‌ವರೆಗೆ ಕಳೆ ಕೀಳುವ ಮತ್ತು ಹೂಳೆತ್ತುವ ಕಾರ್ಯ ನಡೆಯಲಿದೆ’ ಎಂದು ಬಿಡಿಎ ಆಯುಕ್ತ ರಾಕೇಶ್‌ ಸಿಂಗ್‌ ‌ಮಾಹಿತಿ ನೀಡಿದರು.

‘ಕಳೆ ಗಿಡಗಳನ್ನು ಕಾಂಪೋಸ್ಟ್‌ ಮಾಡಲು ಮತ್ತು ಕೆರೆಯೊಳಗೆ ಬಿದ್ದ ಕಟ್ಟಡ ತ್ಯಾಜ್ಯಗಳನ್ನು ತೆರವು ಮಾಡಲು ₹ 38.4 ಕೋಟಿ ಬೇಕಾಗುತ್ತದೆ. ಇದಕ್ಕೆ ಈಗಾಗಲೇ ವಿವರವಾದ ಯೋಜನಾ ವರದಿ ಸಿದ್ಧಪಡಿಸಿ ಬಿಬಿಎಂಪಿಗೆ ಕಳುಹಿಸಲಾಗಿದೆ. ಕಾಂಪೋಸ್ಟ್‌ ತಯಾರಿಸಲು ಸರಿಯಾದ ಸ್ಥಳ ಸೂಚಿಸುವಂತೆ ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆಯಲಾಗಿದೆ. ₹ 36 ಕೋಟಿ ವೆಚ್ಚದಲ್ಲಿ ವಾಯುಪೂರಣ ಯಂತ್ರಗಳು ಮತ್ತು ಕಾರಂಜಿಗಳನ್ನು ನಿರ್ಮಿಸಲಾಗುತ್ತದೆ. 2021ರ ಮೇ ಒಳಗೆ ಎಲ್ಲ ಕಾಮಗಾರಿಗಳು ಪೂರ್ಣಗೊಳ್ಳಲಿವೆ’ ಎಂದು ಅಧಿಕಾರಿಗಳು ತಿಳಿಸಿದರು.

490 ಎಕರೆ ವಿಸ್ತಾರವಿರುವ ವರ್ತೂರು ಕೆರೆಯ ಹೂಳೆತ್ತುವ ಬಗ್ಗೆ ಬಿಡಿಎ ಇನ್ನೂ ಅಂದಾಜುಪಟ್ಟಿ ಸಿದ್ಧಪಡಿಸಿಲ್ಲ. ಈ ಕೆರೆಯ ಒಂದು ಪಾರ್ಶ್ವದ ಹೂಳೆತ್ತಲು ಕಾರ್ಪೊರೇಟ್‌ ಸಾಮಾಜಿಕ ಜವಾಬ್ದಾರಿ ಅಡಿ (ಸಿಎಸ್‌ಆರ್‌) ಮಿನರಲ್‌ ಎಂಟರ್‌ಪ್ರೈಸಸ್ ಲಿಮಿಟೆಡ್‌ ₹ 24.9 ಕೋಟಿ ನೀಡಿದೆ. ಕೆರೆಯ ಉದ್ದಕ್ಕೂ ಹೂಳು ತೆಗೆದು ಸೌಂದರ್ಯೀಕರಣ ಮಾಡಬೇಕು ಎಂದು ಬಿಡಿಎ ಅಧಿಕಾರಿಗಳು ಕಂಪನಿಯನ್ನು ಕೋರಿದ್ದಾರೆ. ಆದರೆ, ಕಂಪನಿಯ ಆಡಳಿತ ಮಂಡಳಿ ಆಳ ಕಡಿಮೆ ಇರುವ ಭಾಗದಲ್ಲಿ ಹೂಳೆತ್ತಲು ಮಾತ್ರ ನೆರವು ನೀಡುವುದಾಗಿ ಸ್ಪಷ್ಟಪಡಿಸಿದೆ.

ಸಿಎಸ್‌ಆರ್‌ ನಿಧಿ ಹೊರತುಪಡಿಸಿ ₹ 640 ಕೋಟಿ ರಾಜ್ಯ ಸರ್ಕಾರದ ಬಜೆಟ್‌ನಿಂದ ಬರಲಿದೆ. ನಾವು ಬೆಳ್ಳಂದೂರು ಸೇರಿ ಇತರ ಕೆರೆಗಳ ಪುನರುಜ್ಜೀವನಕ್ಕೆ ₹ 3 ಸಾವಿರ ಕೋಟಿ ವೆಚ್ಚದ ಕ್ರಿಯಾ ಯೋಜನೆ ಸಿದ್ಧಪಡಿಸುತ್ತಿದ್ದೇವೆ. ಇದನ್ನು ಕೇಂದ್ರ ಜಲಸಂಪನ್ಮೂಲ ಸಚಿವಾಲಯಕ್ಕೂ ಕಳುಹಿಸುತ್ತೇವೆ. ಅಲ್ಲಿ ಜಲಮೂಲಗಳ ಪುನಶ್ಚೇತನ ಯೋಜನೆ ಇದೆ. ಈ ಯೋಜನೆಗೆ ಅಲ್ಲಿಯೂ ಅನುಮತಿ ಸಿಕ್ಕರೆ ಆ ನಿಧಿಯನ್ನು ಕೆರೆಗಳ ಸ್ವಚ್ಛತೆಗಾಗಿ ಬಳಸಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT