ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಅಭಿವೃದ್ಧಿ ಸಚಿವ ಪರಮೇಶ್ವರ ಬಳಿ ಬೆಳ್ಳಂದೂರು ಜನರ ಅಳಲು

ಮುಂದಿನ ವಾರ ಸ್ಥಳ ಪರಿಶೀಲನೆ: ಬೆಂಗಳೂರು ಅಭಿವೃದ್ಧಿ ಸಚಿವ ಪರಮೇಶ್ವರ ಭರವಸೆ
Last Updated 21 ಫೆಬ್ರುವರಿ 2019, 19:00 IST
ಅಕ್ಷರ ಗಾತ್ರ

ಬೆಂಗಳೂರು: ಹದಗೆಟ್ಟ ರಸ್ತೆಗಳು, ಬದುಕನ್ನು ಅಸಹನೀಯಗೊಳಿಸಿದ ಸಂಚಾರ ದಟ್ಟಣೆ ಸಮಸ್ಯೆ, ರಾಜಕಾಲುವೆಗಳಲ್ಲಿ ಹರಿಯುವ ಕೈಗಾರಿಕಾ ತ್ಯಾಜ್ಯ ನೀರು...

ಬೆಳ್ಳಂದೂರು ಪರಿಸರದ ನಿವಾಸಿಗಳನ್ನು ನಿತ್ಯ ಕಾಡುತ್ತಿರುವ ಸಮಸ್ಯೆಗಳಿವು. ಬೆಳ್ಳಂದೂರು ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಗುರುವಾರ ಬೆಂಗಳೂರು ಅಭಿವೃದ್ಧಿ ಸಚಿವ ಜಿ. ಪರಮೇಶ್ವರ ಅವರನ್ನು ಭೇಟಿ ಮಾಡಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು.

‘ಇಲ್ಲಿನ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಸಾಕಷ್ಟು ಕಂಪನಿಗಳು ಈ ಭಾಗದಲ್ಲೇ ಇದ್ದು, ನಿತ್ಯ ಟ್ರಾಫಿಕ್ ಸಮಸ್ಯೆ ಎದುರಾಗುತ್ತಿದೆ’ ಎಂದು ವಿವರಿಸಿದರು.

‘ಸಿಲ್ಕ್‌ ಬೋರ್ಡ್‌–ಕೆ.ಆರ್.ಪುರ ಮೆಟ್ರೊ ಮಾರ್ಗದಲ್ಲಿ ಮಾರ್ಪಾಡು ಮಾಡಬೇಕು. ಈ ಮಾರ್ಗವು ಇಬ್ಬಲೂರು, ಕಾರ್ಮೆಲರಾಮ್‌ ಮೂಲಕ ಹಾದುಹೋದರೆ ಬೆಳ್ಳಂದೂರು ಪರಿಸರದ ನಿವಾಸಿಗಳಿಗೂ ಅನುಕೂಲವಾಗಲಿದೆ’ ಎಂದು ಸಲಹೆ ನೀಡಿದರು.

‘ಇಲ್ಲಿನ ಪಾದಾಚಾರಿ ಮಾರ್ಗಗಳನ್ನು ಅಭಿವೃದ್ಧಿಪಡಿಸಬೇಕು. ರಸ್ತೆಗಳನ್ನು ಅಗಲಗೊಳಿಸಬೇಕು. ಒಳಚರಂಡಿ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸಬೇಕು. ಈ ಪ್ರದೇಶಕ್ಕೂ ಎಲಿವೇಟೆಡ್ ಕಾರಿಡಾರ್ ವಿಸ್ತರಣೆ ಮಾಡಬೇಕು’ ಎಂದು ಸಚಿವರನ್ನು ಒತ್ತಾಯಿಸಿದರು.

‘ಮೂಲಸೌಕರ್ಯ ಕೊರತೆ ವೀಕ್ಷಿಸಲು ಮುಂದಿನ ವಾರ ಬೆಳ್ಳಂದೂರಿಗೆ ಭೇಟಿ ನೀಡುತ್ತೇನೆ’ ಎಂದು ಪರಮೇಶ್ವರ ಭರವಸೆ ನೀಡಿದರು.

‘ಬೆಳ್ಳಂದೂರು ಕೆರೆ ಅಭಿವೃದ್ಧಿಗಾಗಿ ಸರ್ಕಾರ ₹ 50 ಕೋಟಿ ಮಂಜೂರು ಮಾಡಿದೆ. ಕೆರೆ ಅಭಿವೃದ್ಧಿ ಕಾರ್ಯ ಬಹುತೇಕ‌ ಪೂರ್ಣಗೊಂಡಿದೆ. ಈ ಕೆರೆಗೆ ಕೈಗಾರಿಕೆಗಳ ಕೊಳಚೆ ನೀರು ಹರಿಯುವುದನ್ನು ನಿಲ್ಲಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ಈ ಭಾಗದ ಎಲ್ಲಾ ಅಪಾರ್ಟ್‌ಮೆಂಟ್‌ ಸಮುಚ್ಚಯಗಳು ತ್ಯಾಜ್ಯ ನೀರು ಸಂಸ್ಕರಣಾ ಘಟಕವನ್ನು (ಎಸ್‌ಟಿಪಿ) ಅಳವಡಿಸಿಕೊಳ್ಳಬೇಕು‌ ಎಂದೂ ಸೂಚಿಸಿದ್ದೇನೆ’ ಎಂದು ಸಚಿವರು ಸುದ್ದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT