ಚಾಲಾಕಿ ಚೋರ ಸೆರೆ; 32 ಬೈಕ್ ಜಪ್ತಿ

7

ಚಾಲಾಕಿ ಚೋರ ಸೆರೆ; 32 ಬೈಕ್ ಜಪ್ತಿ

Published:
Updated:
Deccan Herald

ಬೆಂಗಳೂರು: ಯೂಟ್ಯೂಬ್ ನೋಡಿ ಐಷಾರಾಮಿ ಬೈಕ್‌ಗಳನ್ನು ಕಳ್ಳತನ ಮಾಡುತ್ತಿದ್ದ ಚಾಲಾಕಿಯೊಬ್ಬ ಚಂದ್ರಾಲೇಔಟ್ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಕೋರಮಂಗಲದ ರಾಜೇಂದ್ರನಗರ ನಿವಾಸಿ ಚಂದ್ರಕಾಂತ್ ಅಲಿಯಾಸ್ ಗುಂಡ ಎಂಬಾತನನ್ನು ಬಂಧಿಸಿ, ₹20 ಲಕ್ಷ ಮೌಲ್ಯದ 32 ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ. ಸೆ.11ರ ರಾತ್ರಿ ಬೈಕ್‌ನಲ್ಲಿ ಚಂದ್ರಾಲೇಔಟ್ 2ನೇ ಅಡ್ಡರಸ್ತೆಗೆ ಬಂದಿದ್ದ ಚಂದ್ರಕಾಂತ್‌, ಗಸ್ತು ಪೊಲೀಸರನ್ನು ಕಂಡು ಬೇರೆ ರಸ್ತೆಯಲ್ಲಿ ಸಾಗಿದ. ಇದರಿಂದ ಅನುಮಾನಗೊಂಡು ಸಿಬ್ಬಂದಿ, ಬೈಕ್‌ನಲ್ಲಿ ಹಿಂಬಾಲಿಸಿ ಆತನನ್ನು ಹಿಡಿದುಕೊಂಡರು. ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಆತ ಬೈಕ್ ಕಳ್ಳ ಎಂದು ಗೊತ್ತಾಯಿತು ಎಂದು ಪೊಲೀಸರು ಹೇಳಿದ್ದಾರೆ.

ಮಂಡ್ಯದ ಚಂದ್ರಕಾಂತ್, ಬಾಲ್ಯದಲ್ಲೇ ಪೋಷಕರೊಟ್ಟಿಗೆ ಬೆಂಗಳೂರಿಗೆ ಬಂದು ನೆಲೆಸಿದ್ದ. ಎಸ್ಸೆಸ್ಸೆಲ್ಸಿಗೇ ಶಿಕ್ಷಣ ತೊರೆದ. ಪೋಷಕರು ಖರ್ಚಿಗೆ ಹಣ ಕೊಡದಿದ್ದಾಗ ಸುಲಭವಾಗಿ ಹಣ ಗಳಿಸಲು ಸ್ನೇಹಿತ ವಿಶ್ವನ ಜತೆ ಸೇರಿ ಕಳ್ಳತನ ಶುರು ಮಾಡಿದ.

ಯೂಟ್ಯೂಬ್‌ನಲ್ಲಿ ‘ಹೌ ಟು ಸ್ಟೀಲ್ ರಾಯಲ್ ಬೈಕ್ಸ್‌’ ಎಂಬ ವಿಷಯದಲ್ಲಿ ಶೋಧ ನಡೆಸಿ, ಐಷಾರಾಮಿ ಬೈಕ್‌ ಕಳ್ಳತನ ಮಾಡುವುದನ್ನು ಕಲಿತಿದ್ದ. ರಾತ್ರಿ ವೇಳೆ ಪ್ರತಿಷ್ಠಿತ ರಸ್ತೆಗಳಲ್ಲಿ ಓಡಾಡಿ, ಹ್ಯಾಂಡಲ್ ಲಾಕ್ ಮುರಿದು ಬೈಕ್‌ಗಳೊಂದಿಗೆ ಪರಾರಿಯಾಗುತ್ತಿದ್ದ.

ಮೂರು ವರ್ಷಗಳಿಂದ ಇದೇ ಕಾಯಕದಲ್ಲಿ ತೊಡಗಿರುವ ಚಂದ್ರಕಾಂತ್ ವಿರುದ್ಧ ಬೆಂಗಳೂರು ಮಾತ್ರವಲ್ಲದೆ, ಮಂಡ್ಯ ಹಾಗೂ ರಾಮನಗರದಲ್ಲೂ ಪ್ರಕರಣಗಳು ದಾಖಲಾಗಿವೆ. ಆರು ತಿಂಗಳ ಹಿಂದೆ ರಾಮನಗರ ಪೊಲೀಸರು ಈತನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿ ನಗರದ ಎಂಟು ಠಾಣೆಗಳ ವ್ಯಾಪ್ತಿಯಲ್ಲಿ ತನ್ನ ಕೈಚಳಕ ತೋರಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.

ಚಂದ್ರಕಾಂತ್‌ನ ಸ್ನೇಹಿತ ವಿಶ್ವ, ಜ್ಞಾನಭಾರತಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ಆತನಿಂದಲೂ 7 ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ. ಸದ್ಯ ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 4

  Happy
 • 3

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !