ಕಲಾವಿದರ ಟೀಕೆಗೆ ರಾಜದ್ರೋಹದ ಲೇಬಲ್‌: ಆತಂಕ

ಶುಕ್ರವಾರ, ಏಪ್ರಿಲ್ 26, 2019
24 °C

ಕಲಾವಿದರ ಟೀಕೆಗೆ ರಾಜದ್ರೋಹದ ಲೇಬಲ್‌: ಆತಂಕ

Published:
Updated:

ಬೆಂಗಳೂರು: ‘ನಾಟಕ ಸೇರಿದಂತೆ ವಿವಿಧ ಕ್ಷೇತ್ರಗಳ ಕಲಾವಿದರು, ಬರಹಗಾರರು ಮತ್ತು ಸಾಮಾಜಿಕ ಕಾರ್ಯಕರ್ತರು ತಮ್ಮ ಮತ್ತು ಬಿಜೆಪಿ ವಿರುದ್ಧ ಮಾಡಿರುವ ಟೀಕೆ–ಟಿಪ್ಪಣಿ, ವಿಶ್ಲೇಷಣೆಗಳನ್ನು ಪ್ರಧಾನಿ ನರೇಂದ್ರ ಮೋದಿ ರಾಜದ್ರೋಹವೆಂದು ಪರಿಗಣಿಸುತ್ತಿರುವುದು ಆತಂಕಕಾರಿ ಬೆಳವಣಿಗೆ’ ಎಂದು ಕಾಂಗ್ರೆಸ್‌ ಹಿರಿಯ ಮುಖಂಡರಾದ ಪ್ರೊ. ಬಿ.ಕೆ. ಚಂದ್ರಶೇಖರ್ ಮತ್ತು ಎಂ.ಸಿ. ನಾಣಯ್ಯ ಅಭಿಪ್ರಾಯಪಟ್ಟಿದ್ದಾರೆ.

ಭಾರತೀಯ ದಂಡಸಂಹಿತೆ 1860, ಸೆಕ್ಷೆನ್ 124ಎ ಪ್ರಕಾರ ಯಾವುದೇ ವ್ಯಕ್ತಿ ತನ್ನ ಮಾತು, ಬರವಣಿಗೆ, ಸಂಜ್ಞೆ ಅಥವಾ ದೃಶ್ಯ ನಿರೂಪಣೆ ರೂಪದಲ್ಲಿ ಸರ್ಕಾರದ ವಿರುದ್ಧ ದ್ವೇಷ ತೋರಿಸಿದರೆ ಅಥವಾ ಅವಿಶ್ವಾಸಕ್ಕೆ ಪ್ರಚೋದನೆ ನೀಡಿದರೆ ಅಂಥವರಿಗೆ ಜೀವನ ಪರ್ಯಂತ ಜೈಲು ಶಿಕ್ಷೆ ನೀಡಬಹುದು. ಆದರೆ, ಸರ್ಕಾರದ ಕ್ರಮಗಳ ವಿರುದ್ಧ ದ್ವೇಷ, ತಿರಸ್ಕಾರ ಅಥವಾ ಅವಿಶ್ವಾಸ, ಕಾನೂನು ಚೌಕಟ್ಟಿನಲ್ಲಿ ಅಸಮ್ಮತಿ ವ್ಯಕ್ತಪಡಿಸಿದರೆ ಅಂತಹ ಟೀಕೆ–ಟಿಪ್ಪಣಿಗಳು ಅಪರಾಧ ಎಂದೆನಿಸುವುದಿಲ್ಲ.

‘ಆದರೂ, ಭಿನ್ನಾಭಿಪ್ರಾಯವನ್ನು ಅಣಕು ಹಾಸ್ಯ ಮಾಡುವ, ಬೃಹತ್ ಗಾತ್ರದ ಅಣು ವಿದ್ಯುತ್‌ ಯೋಜನೆಯ ವಿರುದ್ಧ ಶಾಂತಿಯುತವಾಗಿ ಪ್ರತಿಭಟಿಸಿದ್ದ ಗ್ರಾಮೀಣ ಜನರ ವಿರುದ್ಧ (ಅರುಂಧತಿ ರಾಯ್, ಡಾ. ಬಿನಾಯಕ್ ಸೆನ್, ವ್ಯಂಗ್ಯ ಚಿತ್ರಕಾರ ಅಸೀಂ ತ್ರಿವೇದಿ, ಕೇರಳದ ಗ್ರಾಮೀಣ ಭಾಗದ ಪ್ರತಿಭಟನೆ) ಹಿಂದಿನ ಸರ್ಕಾರಗಳೂ ಸೇರಿದಂತೆ ಎನ್‌ಡಿಎ ಸರ್ಕಾರ ಹೊಸ ರೀತಿಯ ಆಕ್ರಮಣಕಾರಿ ಪೊಲೀಸ್ ಕ್ರಮಕ್ಕೆ ಮುಂದಾಗಿದೆ’ ಎಂದು ಅವರು ಆರೋಪಿಸಿದ್ದಾರೆ.

‘ಈ ರೀತಿಯ ಕ್ರಮಗಳ ಮೂಲಕ ಸಂವಿಧಾನ ಹಾಗೂ ಸಂಸದೀಯ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಸರ್ಕಾರ ಹಗುರವಾಗಿ ಕಡೆಗಣಿಸಿದಂತಾಗಿದೆ. ಸತ್ಯ, ಪ್ರಾಮಾಣಿಕ ಅಭಿಪ್ರಾಯಗಳಿಗೆ ಅವಕಾಶ ಸಲ್ಲದು ಎಂದರೆ ಹೇಗೆ. ಸತ್ಯ ಕಠಿಣವಾದಷ್ಟೂ ಸರ್ಕಾರಕ್ಕೆ ಕಂಟಕ. ಬಿಜೆಪಿಗೆ ಸರ್ಕಾರ ಉಳಿಯುವುದೊಂದೇ ಪ್ರಸ್ತುತ ಆಗಿದೆ’ ಎಂದೂ ಪ್ರಕಟಣೆಯಲ್ಲಿ ಟೀಕಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !