ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಸಿಗೆ ಕಿಮ್ಮತ್ತು ನೀಡದ ಬೆಂಗಳೂರು ವಿ.ವಿ

ಕಾಮಗಾರಿ ವಿಳಂಬಕ್ಕೆ ಕಾರಣವಾದ ಕಾರ್ಯಪಾಲಕ ಎಂಜಿನಿಯರ್‌ ಅಮಾನತಿಗೆ ಮೀನಮೇಷ
Last Updated 24 ಜನವರಿ 2019, 19:05 IST
ಅಕ್ಷರ ಗಾತ್ರ

ಬೆಂಗಳೂರು: ಕಾಮಗಾರಿ ವಿಳಂಬಕ್ಕೆ ಕಾರಣವಾಗಿರುವ ಕಾರ್ಯಪಾಲಕ ಎಂಜಿನಿಯರ್‌ ಒಬ್ಬರನ್ನು ಅಮಾನತು ಮಾಡಿ ಇಲಾಖೆ ವಿಚಾರಣೆಗೆ ಒಳಪಡಿಸುವಂತೆ ಕರ್ನಾಟಕ ವಿಧಾನಸಭೆಯ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ (ಪಿಎಸಿ) ಶಿಫಾರಸು ಮಾಡಿದ್ದರೂ ಬೆಂಗಳೂರು ವಿಶ್ವವಿದ್ಯಾಲಯ ಇದಕ್ಕೆ ಕಿಮ್ಮತ್ತು ನೀಡಿಲ್ಲ.

ಕೋಲಾರದಲ್ಲಿ ನಿರ್ಮಾಣವಾಗುತ್ತಿರುವ ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ ಕಾಮಗಾರಿ ಸುಮಾರು 10 ವರ್ಷಗಳಷ್ಟು ವಿಳಂಬವಾಗಿದ್ದಕ್ಕೆ ಪಿಎಸಿ ಅಸಮಾಧಾನ ವ್ಯಕ್ತಪಡಿಸಿತ್ತು. ಈ ಕಾಮಗಾರಿಯ ಉಸ್ತುವಾರಿ ವಹಿಸಿದ್ದ ಕಾರ್ಯ
ಪಾಲಕ ಎಂಜಿನಿಯರ್‌ ಎನ್‌.ಪುಟ್ಟಸ್ವಾಮಿ ಅವರನ್ನು ಅಮಾನತು ಮಾಡಿ ಅವರ ವಿರುದ್ಧ ಇಲಾಖಾ ವಿಚಾರಣೆ ನಡೆಸುವಂತೆ 2018ರ ಜ. 19ರಂದು ನಡೆದ ಸಭೆಯಲ್ಲಿ ನಿರ್ಣಯ ಕೈಗೊಂಡಿತ್ತು. ಇದಾಗಿ ವರ್ಷ ಕಳೆದರೂ ವಿಶ್ವವಿದ್ಯಾಲಯ ಎಂಜಿನಿಯರ್‌ ವಿರುದ್ಧ ವಿಶ್ವವಿದ್ಯಾಲಯವು ಯಾವುದೇ ಕ್ರಮ ಕೈಗೊಂಡಿಲ್ಲ.

ಕಾರ್ಯಪಾಲಕ ಎಂಜಿನಿಯರ್‌ ವಿರುದ್ಧ ಕ್ರಮ ಕೈಗೊಂಡ ಬಗ್ಗೆ 2018ರ ಡಿ 31ರ ಒಳಗೆ ಮಾಹಿತಿ ನೀಡುವಂತೆ ವಿಧಾನಸಭೆ ಸಚಿವಾಲಯದ ನಿರ್ದೇಶಕರು ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಇದೇ 09ರಂದು ನಡೆದ ಪಿಎಸಿ ಸಭೆಯಲ್ಲಿ ಈ ವಿಷಯ ಮತ್ತೆ ಚರ್ಚೆಗೆ ಬಂದಿತ್ತು. ಸಮಿತಿಯ ಸೂಚನೆ ಬಳಿಕವೂ ವಿಶ್ವವಿದ್ಯಾಲಯ ಯಾವುದೇ ಕ್ರಮ ವಹಿಸದ ಬಗ್ಗೆ ಸಭೆಯಲ್ಲಿ ತೀವ್ರ ಆಕ್ಷೇಪವೂ ವ್ಯಕ್ತವಾಗಿದೆ.

ಅಧಿಕಾರಿಯನ್ನು ಅಮಾನತುಗೊಳಿಸಿ ಸಮಿತಿಗೆ ವರದಿ ನೀಡುವಂತೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರು ಇದೇ 9ರಂದೇ ವಿಶ್ವವಿದ್ಯಾಲಯದ ಕುಲಸಚಿವ ಬಿ.ಕೆ.ರವಿ ಅವರಿಗೆ ಪತ್ರವನ್ನೂ ಬರೆದಿದ್ದರು. ಇದಾಗಿ ಎರಡು ವಾರ ಕಳೆದರೂ ಇನ್ನೂ ವಿಶ್ವವಿದ್ಯಾಲಯವು ಕ್ರಮ ಕೈಗೊಂಡಿಲ್ಲ ಎಂದು ಮೂಲಗಳು ತಿಳಿಸಿವೆ.

ವೆಚ್ಚ ಹೆಚ್ಚಳ: ಕೋಲಾರದಲ್ಲಿ 30 ಎಕರೆ ಜಾಗದಲ್ಲಿ ₹ 10.85 ಕೋಟಿ ವೆಚ್ಚದಲ್ಲಿ ಸ್ನಾತಕೋತ್ತರ ಕೇಂದ್ರ ಆರಂಭಿಸಲು ಉನ್ನತ ಶಿಕ್ಷಣ ಇಲಾಖೆ 2008ರಲ್ಲಿ ಮಂಜೂರಾತಿ ನೀಡಿತ್ತು. ವಿಶ್ವವಿದ್ಯಾಲಯವು ಈ ಪ್ರಸ್ತಾವಕ್ಕೆ 2008ರ ಮಾರ್ಚ್‌ನಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಿತ್ತು. 10 ವರ್ಷದ ಬಳಿಕವೂ ಕೆಲಸ ಪೂರ್ಣಗೊಳ್ಳದಿರುವುದು ಹಾಗೂ ಕಾಮಗಾರಿಗೆ ಹೆಚ್ಚುವರಿಯಾಗಿ ₹ 1.59 ಕೋಟಿ ವೆಚ್ಚವಾಗಿರುವುದಕ್ಕೆ ಪಿಎಸಿಯಲ್ಲಿ ಆಕ್ಷೇಪ ವ್ಯಕ್ತವಾಗಿತ್ತು.

ಸ್ನಾತಕೋತ್ತರ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಭೂಮಿ ಹಸ್ತಾಂತರ ಪ್ರಕ್ರಿಯೆ 2008ರ ಆಗಸ್ಟ್‌ನಲ್ಲಿ ಪೂರ್ಣಗೊಂಡಿತ್ತು. ಕಾರ್ಯಪಾಲಕ ಎಂಜಿನಿಯರ್‌ ಅವರು ಟೆಂಡರ್‌ ಆಹ್ವಾನಿಸಿ 2008ರ ಏಪ್ರಿಲ್‌ 11ರಂದೇ ಕಾರ್ಯಾದೇಶ ನೀಡಿದ್ದರು. ಗುತ್ತಿಗೆದಾರ ಶಿವರಾಜು ಅವರಿಗೆ (₹ 11.27 ಕೋಟಿ ಮೊತ್ತ) ಗುತ್ತಿಗೆ ನೀಡಲಾಗಿತ್ತು. ಆದರೆ, ಅವರಿಗೆ ಕಟ್ಟಡದ ವಿನ್ಯಾಸವನ್ನು ಹಸ್ತಾಂತರಿಸುವಾಗ ಕಾಮಗಾರಿ ಪೂರ್ಣಗೊಳಿಸಲು ವಿಧಿಸಿದ್ದ ಗಡುವು ಮುಗಿಯುತ್ತಾ ಬಂದಿತ್ತು. ಕೆಲಸವನ್ನು ಸಕಾಲದಲ್ಲಿ ಪೂರ್ಣಗೊಳಿಸಲು ಸಹಕರಿಸುವಂತೆ ಗುತ್ತಿಗೆದಾರರು ಬರೆದಿದ್ದ ಪತ್ರಗಳಿಗೂ ಎಂಜಿನಿಯರ್‌ ಉತ್ತರಿಸಿರಲಿಲ್ಲ ಎಂದು ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನಿಯರ್‌ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ್ದ ವರದಿಯಲ್ಲಿ ತಿಳಿಸಿದ್ದರು.

‘ಗುತ್ತಿಗೆದಾರರು 2010ರ ಜೂನ್‌ನಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕಿತ್ತು. ಆದರೆ, ಅದಾಗಲೇ ₹3.93 ಕೋಟಿ ಮೊತ್ತವನ್ನು ಪಡೆದಿದ್ದ ಗುತ್ತಿಗೆದಾರರು ಕಾಮಗಾರಿ ಸ್ಥಗಿತಗೊಳಿಸಿ, ದರ ಪರಿಷ್ಕರಿಸುವಂತೆ ಕೋರಿದ್ದರು. ವಿಶ್ವವಿದ್ಯಾಲಯವು ₹ 25 ಲಕ್ಷ ಮುಂಗಡ ‍ಪಾವತಿಸಬೇಕು ಎಂಬ ಷರತ್ತಿಗೆ ವಿಶ್ವವಿದ್ಯಾಲಯ ಸಮ್ಮತಿಸಿದ ಬಳಿಕವಷ್ಟೇ ಅವರು ಕಾಮಗಾರಿ ಮುಂದುವರಿಸಲು ಒಪ್ಪಿ
ದ್ದರು’ ಎಂಬ ಅಂಶವೂ ವರದಿಯಲ್ಲಿದೆ.

ವಿಶ್ವವಿದ್ಯಾಲಯವು 2012ರ ಆಗಸ್ಟ್‌ನಲ್ಲಿ ಹೊಸ ದರಪಟ್ಟಿ ಪ್ರಕಾರ ಕಾಮಗಾರಿ ವೆಚ್ಚವನ್ನು ಪರಿಷ್ಕರಿಸಿ, ಮುಂಗಡ ಪಾವತಿ ಮಾಡಿತು. ಆದರೂ, ಗುತ್ತಿಗೆದಾರರು ಕಾಮಗಾರಿ ಮುಂದುವರಿಸಲಿಲ್ಲ. ಹಾಗಾಗಿ ಮರುಟೆಂಡರ್‌ ಕರೆಯಬೇಕಾಯಿತು. ಆ ಬಳಿಕವೂ ಸಕಾಲದಲ್ಲಿ ಕಾಮಗಾರಿ ಪೂರ್ಣಗೊಂಡಿಲ್ಲ. ಕಾಮಗಾರಿಗೆ ವೆಚ್ಚ ಹೆಚ್ಚಳ ಆದ ಬಗ್ಗೆ ಮಹಾ ಲೇಖಪಾಲರೂ 2013–14ನೇ ಸಾಲಿನ ವರದಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT