ಬಾಂಬ್ ಸ್ಫೋಟ ಪ್ರಕರಣ: ಅಪರಾಧಿಯ ಅಕ್ರಮ ಬಂಧನ ಆರೋಪ

ಶನಿವಾರ, ಮಾರ್ಚ್ 23, 2019
24 °C
ಚಿನ್ನಸ್ವಾಮಿ ಸ್ಟೇಡಿಯಂ

ಬಾಂಬ್ ಸ್ಫೋಟ ಪ್ರಕರಣ: ಅಪರಾಧಿಯ ಅಕ್ರಮ ಬಂಧನ ಆರೋಪ

Published:
Updated:

ಬೆಂಗಳೂರು: ‘ಚಿನ್ನಸ್ವಾಮಿ ಸ್ಟೇಡಿಯಂ ಬಳಿ 2010ರಲ್ಲಿ ನಡೆದಿದ್ದ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ತಪ್ಪೊಪ್ಪಿಕೊಂಡ ಅಪರಾಧಿ ಗೌಹರ್‌ ಅಜೀಜ್‌ ಖುಮಾನಿಯನ್ನು ಅಕ್ರಮ ಬಂಧನದಲ್ಲಿಡಲಾಗಿದ್ದು ತಕ್ಷಣ ಬಿಡುಗಡೆಗೆ ಆದೇಶಿಸಬೇಕು’ ಎಂದು ಕೋರಿ ಗೌಹರ್‌ ಅಜೀಜ್‌ ಖುಮಾನಿಯ ಅಣ್ಣ ಹಸನ್ ಅಜೀಜ್‌ ಅಮೀರ್ ಹೈಕೋರ್ಟ್‌ಗೆ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿದ್ದಾರೆ.

ಈ ಅರ್ಜಿಯನ್ನು ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಹಾಗೂ ನ್ಯಾಯಮೂರ್ತಿ ಎಚ್‌.ಬಿ.ಪ್ರಭಾಕರ ಶಾಸ್ತ್ರಿ ಅವರಿದ್ದ ವಿಭಾಗೀಯ ನ್ಯಾಯಪೀಠ, ಪ್ರತಿವಾದಿಗಳಾದ ಕಬ್ಬನ್‌ ಪಾರ್ಕ್‌ ಪೋಲಿಸ್‌ ಠಾಣಾಧಿಕಾರಿ ಮತ್ತು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಖ್ಯ ಸೂಪರಿಂಟೆಂಡೆಂಟ್‌ ಅವರಿಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿದೆ.

ಪ್ರತಿವಾದಿಗಳು ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿರುವ ನ್ಯಾಯಪೀಠ, ವಿಚಾರಣೆಯನ್ನು ಇದೇ 18ಕ್ಕೆ ಮುಂದೂಡಿದೆ.

ಕೋರಿಕೆ ಏನು?: ‘ಹೈಕೋರ್ಟ್‌ ಆದೇಶದ ಅನುಸಾರ ನಾನು ದಂಡವನ್ನು ಪಾವತಿಸಿದ್ದೇನೆ ಹಾಗೂ ಇಳಿಕೆಯಾಗಿರುವ ಶಿಕ್ಷಾ ಅವಧಿಯ ಆದೇಶ ಸ್ಪಷ್ಟವಾಗಿಲ್ಲ ಎಂದು ಜೈಲು ಅಧಿಕಾರಿಗಳು ನನ್ನ ಸಹೋದರನ್ನು ಬಿಡುಗಡೆ ಮಾಡುತ್ತಿಲ್ಲ. ಇದು ಅಕ್ರಮ ಬಂಧನ’ ಎಂದು ಅರ್ಜಿದಾರರು ದೂರಿದ್ದಾರೆ.

ಪ್ರಕರಣವೇನು?: 2010ರ ಏಪ್ರಿಲ್‌ 17ರಂದು ಮಧ್ಯಾಹ್ನ 3.05 ನಿಮಿಷಕ್ಕೆ ಚಿನ್ನಸ್ವಾಮಿ ಸ್ಟೇಡಿಯಂ ಗೇಟ್‌ ಸಂಖ್ಯೆ 12ರಲ್ಲಿ ಬಾಂಬ್‌ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ 15ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿದ್ದರು. ಇಂಡಿಯನ್‌ ಮುಜಾಹಿದ್ದೀನ್‌ ಉಗ್ರ ಸಂಘಟನೆಯ ಯಾಸೀನ್‌ ಭಟ್ಕಳ್‌ ಸೇರಿದಂತೆ 14 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು.

ಪ್ರಕರಣದಲ್ಲಿ ಐದನೇ ಆರೋಪಿಯಾಗಿದ್ದ ಗೌಹರ್‌ ಅಜೀಜ್‌ ಖುಮಾನಿ ಅವರನ್ನು ಪೊಲೀಸರು 2012ರ ಫೆಬ್ರುವರಿ 23ರಂದು ಬಂಧಿಸಿದ್ದರು. ಅಂತೆಯೇ ಈ ಪ್ರಕರಣದಲ್ಲಿ ಖುಮಾನಿ ತಪ್ಪೊಪ್ಪಿಕೊಂಡಿದ್ದರು.

ವಿಚಾರಣೆ ನಡೆಸಿ ತೀರ್ಪು ನೀಡಿದ್ದ ಎನ್‌ಐಎ ವಿಶೇಷ ನ್ಯಾಯಾಲಯ ₹ 7 ಲಕ್ಷಕ್ಕೂ ಹೆಚ್ಚಿನ ಮೊತ್ತದ ದಂಡ ಮತ್ತು ಶಿಕ್ಷೆ ವಿಧಿಸಿತ್ತು. 

ಶಿಕ್ಷಾ ಅವಧಿ ಮತ್ತು ಭಾರಿ ಮೊತ್ತದ ದಂಡವನ್ನು ಪ್ರಶ್ನಿಸಿ ಖುಮಾನಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಮನವಿಯನ್ನು ಭಾಗಶಃ ಮಾನ್ಯ ಮಾಡಿದ್ದ ಹೈಕೋರ್ಟ್ ದಂಡದ ಮೊತ್ತವನ್ನು ₹ 2.70 ಲಕ್ಷಕ್ಕೆ ಇಳಿಕೆ ಮಾಡಿ ಆದೇಶಿಸಿತ್ತು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !