ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮಿಷನ್ ದಂಧೆಗೆ ಅನುದಾನ ಬಳಕೆ: ಆರೋಪ

ವಿಜಯಪುರ: ಪುರಸಭೆಗೆ ಬಿ‌ಎಸ್ ಪಿ ಮುಖಂಡರಿಂದ ಮುತ್ತಿಗೆ, ಪ್ರತಿಭಟನೆ
Last Updated 21 ಜೂನ್ 2019, 13:39 IST
ಅಕ್ಷರ ಗಾತ್ರ

ವಿಜಯಪುರ: ಕುಡಿಯುವ ನೀರು, ವಸತಿ, ಚರಂಡಿ, ಬೀದಿದೀಪ ವ್ಯವಸ್ಥೆ, ಬೀದಿಬದಿ ವ್ಯಾಪಾರಿಗಳಿಗೆ ಸೌಲಭ್ಯ ಸೇರಿದಂತೆ ಇಲ್ಲಿನ ಜನರಿಗೆ ಸಿಗಬೇಕಾಗಿರುವ ಅಗತ್ಯ ಸೌಕರ್ಯ ಒದಗಿಸುವಲ್ಲಿ ಪುರಸಭೆ ಅಧಿಕಾರಿಗಳು ಹಾಗೂ ಚುನಾವಣೆಯಲ್ಲಿ ಆಯ್ಕೆಯಾಗಿರುವ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿ ಬಿಎಸ್ ಪಿ ಮುಖಂಡರು ಪುರಸಭೆ ಮುಂದೆ ಪ್ರತಿಭಟನೆ ನಡೆಸಿದರು.

ಇಲ್ಲಿನ ಪುರಸಭಾ ಕಾರ್ಯಾಲಯದ ಮುಂಭಾಗದಲ್ಲಿ ಪ್ರತಿಭಟನಾನಿರತರನ್ನು ಉದ್ದೇಶಿಸಿ ಬಿಎಸ್‌ಪಿ ಮುಖಂಡ ಡಿ.ಆರ್.ನಾರಾಯಣಸ್ವಾಮಿ ಮಾತನಾಡಿ, ‘ಇಲ್ಲಿ 23 ವಾರ್ಡ್‌ಗಳಿವೆ. ಸುಮಾರು 45 ಸಾವಿರ ಜನಸಂಖ್ಯೆ ಇದ್ದಾರೆ. ಹಿಂದುಳಿದವರು, ಅಲ್ಪಸಂಖ್ಯಾತರು, ದಲಿತರು ಎಲ್ಲ ವರ್ಗಗಳ ಜನರು ವಾಸವಾಗಿದ್ದಾರೆ. ಇಲ್ಲಿನ ಬಡಕೂಲಿ, ಕಾರ್ಮಿಕ, ಸಣ್ಣ ವ್ಯಾಪಾರಿಗಳು ವಾಸವಾಗಿದ್ದಾರೆ. ಇಲ್ಲಿನ ಜನರಿಗೆ ಯಾವುದೇ ಮೂಲ ಸೌಕರ್ಯ ಒದಗಿಸಿಲ್ಲ. ಅಧಿಕಾರಿಗಳೇ ದರ್ಬಾರ್ ಮಾಡುತ್ತಿದ್ದಾರೆ. ದಲಿತರ ಕಾಲೊನಿಗಳಲ್ಲಿ ಸ್ವಚ್ಛತೆ ಇಲ್ಲದ ಕಾರಣ ಜನರು ರೋಗ ರುಜಿನಗಳಿಗೆ ಒಳಗಾಗುತ್ತಿದ್ದಾರೆ’ ಎಂದು ತಿಳಿಸಿದರು.

ಮುಖಂಡ ನಂದಗುಂದ ವೆಂಕಟೇಶ್ ಮಾತನಾಡಿ, ‘ಪುರಸಭೆ ಇಲ್ಲಿನ ಜನರ ಕಷ್ಟ ಸುಖಗಳಲ್ಲಿ ಭಾಗಯಾಗಬೇಕು. ತಾರತಮ್ಯ ನೀತಿ ಬಿಟ್ಟು ಎಲ್ಲ ಜಾತಿ – ವರ್ಗದವರ ಹಿತಕ್ಕಾಗಿ ಚಿಂತನೆ ನಡೆಸಬೇಕು. ನಗರದಲ್ಲಿ ಎಲ್ಲೂ ಹೈಮಾಸ್ಟ್ ದೀಪಗಳು ಉರಿಯುತ್ತಿಲ್ಲ. ಎಲ್ಲೆಂದರಲ್ಲಿ ಕಸದ ರಾಶಿಗಳು ಗಬ್ಬುನಾರುತ್ತಿವೆ. ಇಲ್ಲಿನ ಜನರಿಗೆ ಇದುವರೆಗೂ ನಿವೇಶನ ಹಂಚಿಕೆ ಮಾಡದೆ ಇರುವ ಪರಿಣಾಮವಾಗಿ ಬಡ ಜನರು ಬಾಡಿಗೆ ಮನೆಗಳಲ್ಲಿ ವಾಸವಾಗಿದ್ದಾರೆ. ಅವರಿಗೆ ಇದುವರೆಗೂ ನ್ಯಾಯ ಸಿಕ್ಕಿಲ್ಲ. ತಾಲ್ಲೂಕಿನ ಆಡಳಿತ ವ್ಯವಸ್ಥೆ ದಿಕ್ಕು ತಪ್ಪುತ್ತಿದೆ. ಇದನ್ನು ಸರಿಪಡಿಸಬೇಕಾದರೆ ಜನರು ಸ್ವಯಂಪ್ರೇರಿತರಾಗಿ ಮುಂದೆ ಬರಬೇಕು’ ಎಂದರು.

ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಹೇಶ್‌ದಾಸ್ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಿಗಬೇಕಾಗಿರುವ ಹಕ್ಕು ಪಡೆಯಲು ಹೋರಾಟ ರೂಪಿಸಬೇಕು. ಅನ್ಯಾಯ ನಡೆಯುತ್ತಿದ್ದರೂ ಪ್ರಶ್ನೆ ಮಾಡುವಂತಹ ಧೈರ್ಯ ತೋರುತ್ತಿಲ್ಲ. ಇದರ ಪರಿಣಾಮವಾಗಿ ಸರ್ಕಾರದಿಂದ ಪುರಸಭೆಗೆ ಬರುತ್ತಿರುವ ಕೋಟ್ಯಂತರ ರೂಪಾಯಿ ಅನುದಾನ ಕಮಿಷನ್ ರೂಪದಲ್ಲಿ ಅಧಿಕಾರಿಗಳ ಕೈ ಸೇರುತ್ತಿದೆ. ಆದರೂ ಜನ ಪ್ರಶ್ನೆ ಮಾಡುತ್ತಿಲ್ಲ. ಎಲ್ಲಿಯ ತನಕ ಜನರು ಸಂಘಟಿತರಾಗುವುದಿಲ್ಲವೋ ಅಲ್ಲಿಯವರೆಗೂ ವ್ಯವಸ್ಥೆ ಸರಿಹೋಗುವುದಿಲ್ಲ ಎಂದರು.

ದೇವನಹಳ್ಳಿ ಪುರಸಭಾ ಸದಸ್ಯ ಬಾಲರಾಜು, ಎಂ.ನರಸಿಂಹರಾಜು, ರಮಾದೇವಿ, ಸಿ.ಮುನಿಯಪ್ಪ, ಕೋರಮಂಗಲ ಮೂರ್ತಿ, ತಾಲ್ಲೂಕು ಘಟಕದ ಅಧ್ಯಕ್ಷ ನಾರಾಯಣಸ್ವಾಮಿ(ಬಂಗಾರಪ್ಪ), ಎನ್.ಬಿ.ಮಂಜುನಾಥ್, ಕುರುಬರಹಳ್ಳಿ ನಾಗರಾಜ್, ಸೂಲಿಕುಂಟೆ ಮುನಿಕುಮಾರ್, ಜಯಲಕ್ಷ್ಮೀ, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT