ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1,900 ಬಿಎಂಟಿಸಿ ಬಸ್‌ ಚುನಾವಣೆಗೆ ಬಳಕೆ

Last Updated 17 ಏಪ್ರಿಲ್ 2019, 19:16 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ(ಬಿಎಂಟಿಸಿ) ಚುನಾವಣಾ ಕಾರ್ಯಕ್ಕೆ 1900 ಬಸ್‌ಗಳನ್ನು ಒದಗಿಸಿದೆ. ಇದರಿಂದಾಗಿ ನಗರದಲ್ಲಿ ಬಸ್ ಸೇವೆಯಲ್ಲಿ ವ್ಯತ್ಯಯವಾಗಿದ್ದು ಪ್ರಯಾಣಿಕರು ಪಡಿಪಾಟಲು ಅನುಭವಿಸುವಂತಾಗಿದೆ.

ಬಿಎಂಟಿಸಿಯ 6,000 ಬಸ್‌ಗಳ ಪೈಕಿ 1,700 ಬಸ್‌ಗಳನ್ನು ಚುನಾವಣಾ ಕಾರ್ಯಕ್ಕೆ ನೀಡಿದೆ. 200 ಬಸ್‌ಗಳನ್ನು ಕೆಎಸ್‌ಆರ್‌ಟಿಸಿ ಪಡೆದುಕೊಂಡಿದೆ.

ಯಶವಂತಪುರ, ಶಾಂತಿನಗರ, ಕೆಂಗೇರಿ, ಮೈಸೂರು ರಸ್ತೆ ಸೇರಿದಂತೆ ಪ್ರಮುಖ ಡಿಪೊಗಳಿಂದ ತಲಾ 50 ಬಸ್‌ಗಳನ್ನು ಚುನಾವಣಾ ಕಾರ್ಯಕ್ಕೆ ಪಡೆಯಲಾಗಿದೆ. ಲಭ್ಯ ಇರುವ ಬಸ್‌ಗಳಲ್ಲೇ ಸೇವೆ ಒದಗಿಸಲು ಡಿಪೊ ವ್ಯವಸ್ಥಾಪಕರು ಹರಸಾಹಸಪಡುತ್ತಿದ್ದಾರೆ.

‘160 ಬಸ್‌ಗಳಿರುವ ಡಿಪೊನಲ್ಲಿ ಈಗ 50 ಬಸ್‌ಗಳು ಕಡಿಮೆಯಾಗಿವೆ. ಯಾವ ಮಾರ್ಗದಲ್ಲಿ ಬೇಡಿಕೆ ಹೆಚ್ಚಿದೆ ಎಂಬುದನ್ನು ಅಂದಾಜಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ’ ಎಂದು ಅಧಿಕಾರಿಗಳು ಹೇಳಿದರು.

ಚುನಾವಣೆ ಮತ್ತು ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಜನ ಸಂಚಾರ ಕಡಿಮೆ ಎಂದು ಹೇಳಲಾಗುತ್ತಿದೆ. ಆದರೂ, ಕೆಂಪೇಗೌಡ ಮೆಟ್ರೊ ನಿಲ್ದಾಣ ಹಾಗೂ ಬಿಎಂಟಿಸಿ ಬಸ್‌ ನಿಲ್ದಾಣದಲ್ಲಿ ಬುಧವಾರ ಸಾವಿರಾರು ಜನ ಕಾದು ನಿಂತಿದ್ದರು.

‘ಶಂಕರಮಠದಿಂದ ಶಿವಾಜಿನಗರದ ಕಡೆಗೆ ಹೋಗಲು ಕನಿಷ್ಠ ಪ್ರತಿ ಅರ್ಧಗಂಟೆಗೊಂದು ಬಸ್ ಬರುತ್ತದೆ. ಆದರೆ, 2 ಗಂಟೆಯಿಂದ ಕಾಯುತ್ತಿದ್ದೇನೆ. ಬಸ್‌ಗಳೇ ಇಲ್ಲ’ ಎಂದು ಹೂವಿನ ವ್ಯಾಪಾರಿ ದೇವರಾಜಮ್ಮ ಹೇಳಿದರು.

ಸಮಸ್ಯೆ ಕುರಿತು ಸಾಕಷ್ಟು ಮಂದಿ ಸಾಮಾಜಿಕ ಜಾಲತಾಣಗಳಲ್ಲೂ ಆಕ್ರೋಶ ವ್ಯಕ್ತಪಡಿಸಿದ್ದರೆ.

‘ಪ್ರತಿನಿತ್ಯ 38 ಲಕ್ಷ ಪ್ರಯಾಣಿಕರಿಗೆ ಸೇವೆ ಒದಗಿಸುತ್ತಿದ್ದೇವೆ. ಮತದಾನ ಮಾಡಲು ಸಾಕಷ್ಟು ಜನ ತಮ್ಮ ಊರುಗಳಿಗೆ ತೆರಳಿದ್ದಾರೆ. ಇದರ ನಡುವೆಯೂ ಚುನಾವಣೆ ಕಾರಣದಿಂದ ಅಲ್ಲಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಇವೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.

ಪಕ್ಷಗಳಿಂದ ಉಚಿತ ಬಸ್
ರಾಜ್ಯದ ಬೇರೆ ಬೇರೆ ಊರುಗಳಿಗೆ ಮತದಾನ ಮಾಡಲು ಹೊರಟಿದ್ದವರನ್ನು ರಾಜಕೀಯ ಪಕ್ಷಗಳ ಮುಖಂಡರೇ ಉಚಿತವಾಗಿ ಖಾಸಗಿ ಬಸ್‌ಗಳಲ್ಲಿ ತಂಡೋಪತಂಡವಾಗಿ ಕರೆದೊಯ್ದರು.

ಬಸ್‌ಗಳ ಸಂಖ್ಯೆ ಕಡಿಮೆ ಮತ್ತು ದುಬಾರಿ ದರ ಇರುವ ಹಿನ್ನೆಲೆಯಲ್ಲಿ ಮತದಾರರನ್ನು ಸೆಳೆಯಲು ಅಭ್ಯರ್ಥಿಗಳ ಬೆಂಬಲಿಗರು ಈ ತಂತ್ರ ಮಾಡಿದ್ದಾರೆ ಎಂದು ಪ್ರಯಾಣಿಕರೊಬ್ಬರು ಹೇಳಿದರು.

‘ಊರಿಗೆ ಹೋಗಲು ರಾಜಕೀಯ ಪಕ್ಷದವರು ಬಸ್‌ ವ್ಯವಸ್ಥೆ ಮಾಡಿದ್ದಾರೆ. ನಗರದ ಸ್ವಾತಂತ್ರ್ಯ ಉದ್ಯಾನಕ್ಕೆ ಬರುವಂತೆ ತಿಳಿಸಿದ್ದಾರೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಮತದಾರರೊಬ್ಬರು ತಿಳಿಸಿದರು.

‘ಎಲ್ಲ ಬಸ್‌ಗಳ ಪ್ರಯಾಣದ ದರ ಹೆಚ್ಚಳವಾಗಿದೆ. ಊರಿಗೆ ಹೋಗಲು ₹ 1,200ಕ್ಕೂ ಹೆಚ್ಚು ಹಣ ತೆರಬೇಕು. ವಾಪಾಸ್‌ ಬರಲೂ ಅಷ್ಟೇ ಹಣ ಬೇಕು. ಈಗ ಪಕ್ಷದವರೇ ಉಚಿತವಾಗಿ ಬಸ್‌ ವ್ಯವಸ್ಥೆ ಮಾಡಿದ್ದರಿಂದ ಮತ ಚಲಾಯಿಸಲು ಊರಿಗೆ ಹೋಗುತ್ತಿದ್ದೇನೆ. ಇಲ್ಲದಿದ್ದರೆ ಮತದಾನ ಮಾಡುತ್ತಿರಲಿಲ್ಲ. ಮತದಾನದ ಸಲುವಾಗಿ ₹ 2,400 ಖರ್ಚು ಮಾಡುವಷ್ಟು ಆರ್ಥಿಕ ಸಾಮರ್ಥ್ಯ ನಮಗಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT