ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದಾಯ ತೆರಿಗೆ ಅಧಿಕಾರಿ ವಿರುದ್ಧ ಪ್ರಕರಣ

₹ 1.54 ಕೋಟಿ ಮೌಲ್ಯದ ಅಕ್ರಮ ಆಸ್ತಿ ಆರೋಪ
Last Updated 23 ಮೇ 2019, 18:50 IST
ಅಕ್ಷರ ಗಾತ್ರ

ಬೆಂಗಳೂರು:‍‍ಪ್ರತಿಷ್ಠಿತ ಕಟ್ಟಡ ನಿರ್ಮಾಣ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಿಂದ ಲಂಚ ಪಡೆಯುತ್ತಿದ್ದಾಗ ಸಿಬಿಐ ಪೊಲೀಸರು ಬಂಧಿಸಿದ್ದ ಆದಾಯ ತೆರಿಗೆ ಇಲಾಖೆಯ ಐಟಿಒ ಎಚ್‌.ಆರ್‌. ನಾಗೇಶ್‌ ತಮ್ಮ ಆದಾಯ ಮೀರಿ ₹ 1.54 ಕೋಟಿ ಅಕ್ರಮ ಆಸ್ತಿ ಹೊಂದಿದ್ದಾರೆ ಎಂದು ಆರೋಪಿಸಿ ಪ್ರಕರಣ ದಾಖಲಿಸಲಾಗಿದೆ.

ನಾಗೇಶ್‌, ‘ವಿಂಡ್ಸರ್‌ ಎಡಿಫೈಸ್‌’ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ್‌ ಅವರಿಂದ ₹ 7.5 ಲಕ್ಷ ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದರು. ಅವರು ಏ 6ರಿಂದ ಅಮಾನತಿನಲ್ಲಿದ್ದಾರೆ.

1991ರಲ್ಲಿ ಆದಾಯ ತೆರಿಗೆ ಇಲಾಖೆಗೆ ಸೇರಿರುವ ನಾಗೇಶ್‌ ವಿವಿಧ ಹುದ್ದೆಗಳಿಗೆ ಬಡ್ತಿ ಪಡೆದ ಬಳಿಕ 2013ರಿಂದ ಐಟಿಒ ಆಗಿ ಕೆಲಸ ಮಾಡುತ್ತಿದ್ದಾರೆ. ಸದ್ಯ ಕೋರಮಂಗಲ ವಾರ್ಡ್‌ನಲ್ಲಿದ್ದಾರೆ. ಇವರ ಪತ್ನಿ ಎಂ.ವಿ ಡಿಂಪಲ್‌ ಖಾಸಗಿ ಕಂಪೆನಿಯ ಉದ್ಯೋಗಿ. ಪುತ್ರ ವಿದ್ಯಾರ್ಥಿಯಾಗಿದ್ದು 10ನೇ ತರಗತಿ ಓದುತ್ತಿದ್ದಾನೆ.

2017ರ ಜನವರಿ 1ಕ್ಕೆ ಮುನ್ನ ನಾಗೇಶ್‌ ಮತ್ತು ಅವರ ಪತ್ನಿಯ ಹೆಸರಿನಲ್ಲಿ ₹ 1.61 ಕೋಟಿ ಮೌಲ್ಯದ ಸ್ಥಿರ ಮತ್ತು ಚರಾಸ್ತಿ ಹೊಂದಿದ್ದರು. 2019ರ ಏಪ್ರಿಲ್‌ ಅಂತ್ಯಕ್ಕೆ ಅವರ ಆಸ್ತಿ ಮೌಲ್ಯ ₹ 3.67 ಕೋಟಿ ಆಗಿದೆ. ಈ ಅವಧಿಯಲ್ಲಿ ಆಸ್ತಿ ಮೌಲ್ಯ ₹ 1.61 ಕೋಟಿ ಇರಬೇಕಿತ್ತು. ಅಲ್ಲದೆ, ದಂಪತಿ ಇದೇ ವೇಳೆ ₹ 58.66 ಕೋಟಿ ಖರ್ಚು ಮಾಡಿದ್ದಾರೆ ಎಂದು ಸಿಬಿಐ ವಿವರಿಸಿದೆ.

ನಿಗದಿತ ಆದಾಯ ಮೀರಿ ಶೇ 95.41ರಷ್ಟು ಅಧಿಕ ಆಸ್ತಿ ಹೊಂದಿರುವ ಕುರಿತು ನಾಗೇಶ್‌ ಸರಿಯಾದ ಲೆಕ್ಕ ಕೊಡದಿರುವುದರಿಂದ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಎಫ್‌ಐಆರ್‌ನಲ್ಲಿ ನಾಗೇಶ್‌ಗೆ ಸೇರಿದ ಸ್ಥಿರ ಮತ್ತು ಚರಾಸ್ತಿ ವಿವರಗಳನ್ನು ಕೊಡಲಾಗಿದೆ.

ಪ್ರಕರಣವೇನು?:ನಾಗೇಶ್‌ ಮತ್ತು ಅವರ ತಂಡ ‘ವಿಂಡ್ಸರ್‌ ಎಡಿಫೈಸ್‌ ಕಂಪನಿ’ ಆದಾಯ ಕುರಿತು ಮಾರ್ಚ್‌ 6ರಂದು ಸಮೀಕ್ಷೆ ನಡೆಸಿತ್ತು. ಸಮೀಕ್ಷೆ ಸಮಯದಲ್ಲಿ ಸರ್ವೋತ್ತಮ ರಾಜು ಎಂಬುವರಿಗೆ ಶ್ರೀನಿವಾಸ್‌ ನೀಡಿದ್ದ ₹ 25 ಲಕ್ಷ ಮತ್ತು ₹ 15 ಲಕ್ಷದ ಎರಡು ರಶೀದಿಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಈ ಸಂಬಂಧ ಶ್ರೀನಿವಾಸ್‌ ಅವರಿಗೆ ಅದೇ ತಿಂಗಳ 11ರಂದು ವಿಚಾರಣೆಗೆ ಹಾಜರಾಗುವಂತೆ ನಾಗೇಶ್‌ ನೋಟಿಸ್‌ ನೀಡಿದ್ದರು. ಆನಂತರ ಮೇಲಿಂದ ಮೇಲೆ ಅವರನ್ನು ಬಿಎಂಟಿಸಿ ಕಟ್ಟಡದಲ್ಲಿರುವ ಐ.ಟಿ ಕಚೇರಿಗೆ ಕರೆಸಲಾಗಿತ್ತು.

ನಾಗೇಶ್‌ ಮಾರ್ಚ್‌ 19ರಂದು ಶ್ರೀನಿವಾಸ್‌ ಅವರನ್ನು ತಮ್ಮ ಸಹೋದ್ಯೋಗಿ ನರೇಂದ್ರ ಸಿಂಗ್‌ ಬಳಿಗೆ ಕಳುಹಿಸಿದರು. ಆಗ ಸಿಂಗ್‌ ₹ 20 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಚೌಕಾಸಿ ಬಳಿಕ ₹ 14 ಲಕ್ಷಕ್ಕೆ ಒಪ್ಪಿದ್ದರು. ಶ್ರೀನಿವಾಸ್‌ ಅವರಿಂದ ನಾಗೇಶ್‌ ಲಂಚ ಸ್ವೀಕರಿಸುವಾಗ ಸಿಬಿಐ ಅಧಿಕಾರಿಗಳು ಬಂಧಿಸಿದರು. ಆನಂತರ ನರೇಂದ್ರ ಸಿಂಗ್‌ ಅವರನ್ನು ಬಂಧಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT