ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಂಟ್ರಲ್‌ ಕಾಲೇಜಿನ ಮಗಳಿಗೀಗ ನೂರರ ಹರೆಯ!

ಈ ಕಾಲೇಜಿನ ಕರ್ನಾಟಕ ಸಂಘ ಏರ್ಪಡಿಸಿದ್ದ ಯುವ ಕವಿಗೋಷ್ಠಿಗೆ ವಿದ್ಯಾರ್ಥಿಯಾಗಿದ್ದ ಕುವೆಂಪು ಅಧ್ಯಕ್ಷರಾಗಿದ್ದರು
Last Updated 3 ನವೆಂಬರ್ 2018, 19:50 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ತಾಯಿಗೆ ನೂರು ವರ್ಷ’ –ಇದು ಸೆಂಟ್ರಲ್‌ ಕಾಲೇಜಿನ ಶತಮಾನೋತ್ಸವದ ಸಂದರ್ಭದಲ್ಲಿ (1958) ಕಾಲೇಜಿನ ಕರ್ನಾಟಕ ಸಂಘ ಹೊರತಂದಿದ್ದ ಸ್ಮರಣ ಸಂಚಿಕೆಯ ಶಿರೋನಾಮೆ. ‘ಆ’ ತಾಯಿಯ ಮಡಿಲಲ್ಲಿ ಆಡಿ ಬೆಳೆದ ‘ಈ’ ಮಗಳಿಗೂ ಇದೀಗ ಭರ್ತಿ ನೂರು ವಸಂತಗಳು!

ಕುವೆಂಪು, ಜಿ.ಪಿ.ರಾಜರತ್ನಂ ಅವರಂತಹ ಸಾಹಿತ್ಯ ದಿಗ್ಗಜರ ಗುರುಗಳಾಗಿದ್ದ ಎ.ಆರ್‌. ಕೃಷ್ಣಶಾಸ್ತ್ರಿಯವರು ವಿದ್ಯಾರ್ಥಿಗಳಲ್ಲಿ ಕನ್ನಡದ ಅಸ್ಮಿತೆಯನ್ನು ತುಂಬುವ ಆಶೋತ್ತರದಿಂದ 1918ರಲ್ಲಿ ಸೆಂಟ್ರಲ್‌ ಕಾಲೇಜಿನಲ್ಲಿ ಕರ್ನಾಟಕ ಸಂಘವನ್ನು ಸ್ಥಾಪಿಸಿದರು.

ಸಂಘ ಸ್ಥಾಪನೆಯಾಗಿ ನಾಲ್ಕು ದಶಕಗಳ ಬಳಿಕ ರಾಜಕೀಯ ಕರ್ನಾಟಕ ರೂಪುಗೊಂಡರೂ ಸಾಂಸ್ಕೃತಿಕ ಕರ್ನಾಟಕವನ್ನು ಸ್ವಾತಂತ್ರ್ಯ ಪೂರ್ವದಲ್ಲೇ ಕಟ್ಟಿದವರು ಈ ಸಂಘದ ನಿರ್ಮಾತೃಗಳು.

ಕನ್ನಡ ಕಟ್ಟುವ ಕಾಯಕವನ್ನು ವ್ರತದಂತೆ ಪಾಲಿಸಿಕೊಂಡು ಬಂದ ಈ ಸಂಘ ಸಾಹಿತಿಗಳ ದೊಡ್ಡ ಪಡೆಯನ್ನೇ ಹುಟ್ಟುಹಾಕಿದೆ. ರಾಜ್ಯಮಟ್ಟದ ಯುವ ಕವಿಗೋಷ್ಠಿಯನ್ನು ನಡೆಸಿದಾಗ ಅದರ ಅಧ್ಯಕ್ಷತೆ ವಹಿಸಿದ್ದವರು ಯಾರು ಗೊತ್ತೆ? ಆಗ ಪದವಿ ವಿದ್ಯಾರ್ಥಿಯಾಗಿದ್ದ ಕುವೆಂಪು!

ಚಾರಿತ್ರಿಕವಾಗಿ ಮಹತ್ವದ ಸ್ಥಾನವನ್ನು ಗಳಿಸಿರುವ ಈ ಸಂಘ, ವಿಜ್ಞಾನವನ್ನು ಆಧುನಿಕ ಕನ್ನಡಕ್ಕೆ ಒಗ್ಗಿಸುವ ದೀಕ್ಷೆಯನ್ನೂ ತೊಟ್ಟಿತ್ತು. ಅದರ ಫಲವಾಗಿಯೇ ಆರ್‌.ಎಲ್‌. ನರಸಿಂಹಯ್ಯ ಅವರಂತಹ ಪ್ರಾಧ್ಯಾಪಕರಿಂದ ಕನ್ನಡದಲ್ಲಿ ವಿಜ್ಞಾನದ ಕೃತಿಗಳನ್ನು (ಶಕ್ತಿ, ಬೆಳಕು ಇತ್ಯಾದಿ) ಬರೆಸಿ, ಪ್ರಕಟಿಸಿತು. ‘ಪ್ರಬುದ್ಧ ಕರ್ನಾಟಕ’ ಸಾಹಿತ್ಯ ಪತ್ರಿಕೆಯನ್ನು ಆರಂಭಿಸಿದ ಶ್ರೇಯ ಕೂಡ ಈ ಸಂಘಕ್ಕೆ ಸಲ್ಲುತ್ತದೆ.

ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಅಭಿರುಚಿ ಮೂಡಿಸುತ್ತಿದ್ದ ಸಂಘ, ಸಾಂಸ್ಕೃತಿಕ ಲೋಕದ ಸಮಕಾಲೀನ ನಾಯಕರನ್ನು ಕಾಲೇಜಿನ ಅಂಗಳಕ್ಕೆ ಬರಮಾಡಿಕೊಂಡು ಉಪನ್ಯಾಸಗಳನ್ನು ಮಾಡಿಸುತ್ತಿತ್ತು. ನೂರಾರು ಮೌಲಿಕ ಕೃತಿಗಳನ್ನು ಪ್ರಕಟಿಸಿತು. ಸಂಘದ ಅಧ್ಯಕ್ಷ–ಉಪಾಧ್ಯಕ್ಷರು ಪ್ರಾಧ್ಯಾಪಕರೇ ಆಗಿದ್ದರೂ ಕಾರ್ಯದರ್ಶಿ ಮಾತ್ರ ವಿದ್ಯಾರ್ಥಿ ಪ್ರತಿನಿಧಿಯೇ ಆಗಿರುತ್ತಿದ್ದರು.

ಕವಿ ಕೆ.ಎಸ್‌. ನಿಸಾರ್‌ ಅಹಮದ್‌ ತಾವು 1954–55ರ ಅವಧಿಯಲ್ಲಿ ಸಂಘದ ಕಾರ್ಯದರ್ಶಿಯಾದ ಘಟನೆಯನ್ನು ರಸವತ್ತಾಗಿ ಬಣ್ಣಿಸುತ್ತಾರೆ. ‘ಗುರುಗಳಾಗಿದ್ದ ರಾಜರತ್ನಂ ಅವರು ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿದ್ದರು. ‘ಬಾಯಿ ಇದ್ದವ ಬದುಕಿದ’ ಎನ್ನುವ ವಿಷಯವನ್ನು ನೀಡಿದ್ದರು. ನಾನೂ ಲಾಲ್‌ಬಾಗ್‌ನಲ್ಲಿ ಕುಳಿತು ಪ್ರಬಂಧ ಬರೆದಿದ್ದೆ. ಪ್ರಬಂಧದ ಫಲಿತಾಂಶ ಪ್ರಕಟಣೆ ಸಂದರ್ಭದಲ್ಲಿ ಏನಾಯ್ತು ಗೊತ್ತಾ...’ ಎನ್ನುತ್ತಾ ಮುಂದಿನ ಸನ್ನಿವೇಶದ ಕುರಿತು ಕುತೂಹಲವನ್ನು ಹೆಚ್ಚಿಸುತ್ತಾರೆ.

‘ನಾನು ಬರೆದಿದ್ದ ಪ್ರಬಂಧದ ಸಾಲುಗಳನ್ನು ಓದಿದ ಗುರುಗಳು, ನನ್ನನ್ನು ವೇದಿಕೆಗೆ ಕರೆದು, ನೀನೇ ಸಂಘದ ಕಾರ್ಯದರ್ಶಿ ಕಣಯ್ಯ ಎಂದು ಬೆನ್ನು ತಟ್ಟಿದರು (ಅಧ್ಯಕ್ಷರಾಗಿದ್ದವರು ವಿ.ಸೀತಾರಾಮಯ್ಯ). ರಾಜ್ಯದ ಗಣ್ಯರೆಲ್ಲ ಸಂಘದ ಕಾರ್ಯಕ್ರಮಕ್ಕೆ ಬರುತ್ತಿರುತ್ತಾರೆ. ಅವರನ್ನೆಲ್ಲ ಸ್ವಾಗತಿಸುವ, ಅವರ ಮುಂದೆ ಚೆನ್ನಾಗಿ ಮಾತನಾಡುವ ಜವಾಬ್ದಾರಿ ನಿನ್ನ ಮೇಲಿದೆ ಎಂದೂ ಹೇಳಿದರು’ ಎಂದು ನೆನೆಯುತ್ತಾರೆ.

‘ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಸಂಘ ಹಾಗೂ ಗಾಂಧಿ ಸಾಹಿತ್ಯ ಸಂಘ – ಈ ಮೂರೂ ಸಂಘಟನೆಗಳಿಗೆ ಸಾಹಿತ್ಯಿಕವಾಗಿ ಚಾರಿತ್ರಿಕ ಮಹತ್ವವಿದೆ. ಇವುಗಳ ಅಂಗಳದಲ್ಲಿಯೇ ಬೆಳೆದ ಹೂವುಗಳು ನಾವು’ ಎಂದು ವಿನೀತರಾಗಿ ಹೇಳುತ್ತಾರೆ ನಿಸಾರ್‌.

ಭಾಷಾತಜ್ಞ ಕೆ.ವಿ. ನಾರಾಯಣ ಸಹ ಸೆಂಟ್ರಲ್‌ ಕಾಲೇಜಿನ ವಿದ್ಯಾರ್ಥಿಯಾದವರು. ‘ಕರ್ನಾಟಕ ಸಂಘದ ಯಾವುದೇ ಕಾರ್ಯಕ್ರಮಕ್ಕೆ ಮುಂಚೆ ಡಿವಿಜಿಯವರ ‘ವನಸುಮದೊಳೆನ್ನ ಜೀವನವು’ ಗೀತೆಯನ್ನು ಪ್ರಾರ್ಥನೆಯಾಗಿ ಹಾಡಲಾಗುತ್ತಿತ್ತು’ ಎಂದು ಸ್ಮರಿಸುತ್ತಾರೆ.

ಸಂಘಕ್ಕೆ 50 ವರ್ಷಗಳು ತುಂಬಿದಾಗ (1968) ಅದರ ಕಾರ್ಯದರ್ಶಿಯಾಗಿದ್ದವರು ವಿಮರ್ಶಕ ಎಚ್‌.ಎಸ್‌. ರಾಘವೇಂದ್ರ ರಾವ್‌. ಆಗಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ, ಸಾಹಿತಿಗಳಾದ ದ.ರಾ.ಬೇಂದ್ರೆ, ವಿ.ಕೃ.ಗೋಕಾಕ ಮುಖ್ಯ ಅತಿಥಿಗಳಾಗಿ ಬಂದಿದ್ದರು.

ಬಾನೆತ್ತರಕ್ಕೆ ಬೆಳೆದಿದ್ದ ಸಂಘ, ಸುವರ್ಣ ಮಹೋತ್ಸವ ಆಚರಿಸಿಕೊಂಡ ನಂತರದ ದಿನಗಳಲ್ಲಿ ತನ್ನ ಹೊಳಪನ್ನು ಕಳೆದುಕೊಳ್ಳುತ್ತಾ ಬಂತು. ಬೆಂಗಳೂರು ವಿಶ್ವವಿದ್ಯಾಲಯ ಸ್ಥಾಪನೆಯಾಗಿ ಕನ್ನಡ ಅಧ್ಯಯನ ಪೀಠ ಬಂದಮೇಲೆ, ಜ್ಞಾನಭಾರತಿ ಅಂಗಳಕ್ಕೆ ವಿ.ವಿ ಸ್ಥಳಾಂತರಗೊಂಡ ಬಳಿಕ ಸಂಘದ ಅಸ್ತಿತ್ವವೇ ಇಲ್ಲವಾಯಿತು ಎಂದು ಬೆಂಗಳೂರು ಸೆಂಟ್ರಲ್‌ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ವ್ಯಥೆಯಿಂದ ಹೇಳುತ್ತಾರೆ.

‘ಮರಳಲಿದೆ ಸಂಘದ ಗತವೈಭವ'

‘ಕರ್ನಾಟಕ ಸಂಘದ ಗತವೈಭವವನ್ನು ಮರುಕಳಿಸುವಂತೆ ಮಾಡುತ್ತೇವೆ. ನಮ್ಮ 244 ಕಾಲೇಜುಗಳಲ್ಲೂ ಈ ಸಂಘದ ಶಾಖೆಗಳನ್ನು ತೆರೆದು ಆಗಿನ ಸಾಂಸ್ಕೃತಿಕ ವಾತಾವರಣವನ್ನು ಮರುಸ್ಥಾಪನೆ ಮಾಡುತ್ತೇವೆ’ ಎಂದು ಹೇಳುತ್ತಾರೆ ಬೆಂಗಳೂರು ಸೆಂಟ್ರಲ್‌ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್‌.ಜಾಫೆಟ್‌.

ನಮ್ಮ ವಿ.ವಿ ಅಂಗಳದಲ್ಲಿ ಎಂತಹ ಮೇಧಾವಿಗಳೆಲ್ಲ ಓಡಾಡಿದ್ದಾರೆ ಎಂಬುದನ್ನು ನೆನಪಿಸಿಕೊಂಡಾಗ ರೋಮಾಂಚನವಾಗುತ್ತದೆ. ಅವರೆಲ್ಲ ಈಗಲೂ ಇಲ್ಲಿ ಓಡಾಡುತ್ತಿದ್ದಾರೆ ಎನಿಸುತ್ತದೆ. ಕರ್ನಾಟಕ ಸಂಘದ ಶತಮಾನೋತ್ಸವ ಆಚರಣೆಗೆನಿಸಾರ್‌ ಅಹಮದ್‌, ರಾಘವೇಂದ್ರ ರಾವ್‌, ಬರಗೂರು, ಸಿದ್ದಲಿಂಗಯ್ಯಅವರನ್ನೊಳಗೊಂಡ ಸಮಿತಿ ರಚಿಸುತ್ತಿದ್ದೇವೆ’ ಎಂದು ಹೇಳುತ್ತಾರೆ.

‘ಕನ್ನಡದ ಜ್ಞಾನವನ್ನು ಪ್ರಪಂಚಕ್ಕೆ ಪಸರಿಸುವುದು, ಜಗತ್ತಿನ ಶ್ರೇಷ್ಠ ಜ್ಞಾನವನ್ನು ಕನ್ನಡಕ್ಕೆ ತರುವುದು, ಬೆಂಗಳೂರನ್ನು ಕನ್ನಡೀಕರಣಗೊಳಿಸುವ ಎಲ್ಲ ಯತ್ನಗಳಿಗೆ ಬೆಂಬಲವಾಗಿ ನಿಲ್ಲುವುದು –ಈ ಸಂದರ್ಭದಲ್ಲಿ ವಿ.ವಿ ಮುಂದಿರುವ ಗುರಿಗಳಾಗಿವೆ’ ಎಂದು ವಿವರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT