ಒಡವೆ ದೋಚಲು ‘ದೇವರ’ ಜತೆಗೇ ಮಾತುಕತೆ !

7
ಪೂಜೆ ನೆಪದಲ್ಲಿ ಒಂದೂಕಾಲು ಕೆ.ಜಿ ಚಿನ್ನ ಪಡೆದು ವಂಚಿಸಿದ ಆರೋಪ

ಒಡವೆ ದೋಚಲು ‘ದೇವರ’ ಜತೆಗೇ ಮಾತುಕತೆ !

Published:
Updated:

ಬೆಂಗಳೂರು:‌ ‘ದೇವರುಗಳು ಹಾಗೂ ದೇವರ ಹಾವುಗಳು ನನ್ನೊಂದಿಗೆ ಮಾತನಾಡುತ್ತವೆ. ನಿಮ್ಮ ಸಮಸ್ಯೆಗಳನ್ನು ಅವುಗಳ ಮುಂದೆ ಹೇಳಿದರೆ, ಶಾಶ್ವತ ಪರಿಹಾರವನ್ನೂ ಸೂಚಿಸುತ್ತವೆ’ ಎಂದು ಪರಿಚಿತ ಮಹಿಳೆಯೊಬ್ಬರು ಹೇಳಿದ ಮಾತುಗಳನ್ನು ನಂಬಿ ನಯಾಬ್ ಫಾತಿಮಾ ಎಂಬುವರು ಒಂದೂಕಾಲು ಕೆ.ಜಿ ಚಿನ್ನ ಕಳೆದುಕೊಂಡಿದ್ದಾರೆ!

ಈ ಸಂಬಂಧ ಅವರು ಜ.5ರಂದು ಭಾರತೀನಗರ ಠಾಣೆಗೆ ದೂರು ಕೊಟ್ಟಿದ್ದಾರೆ. ಶಬನಮ್ ಹಾಜೀರಾ, ಮುಕ್ತಿಯಾರ್ ಅಹಮದ್, ಅದ್ನಾನ್ ಅಹಮದ್, ನವೀದ್ ಹಾಗೂ ಸಾನಿಯಾ ಎಂಬುವರ ವಿರುದ್ಧ ವಂಚನೆ (ಐಪಿಸಿ 420) ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಐದೂ ಮಂದಿಯನ್ನು ವಿಚಾರಣೆ ನಡೆಸುತ್ತಿದ್ದಾರೆ.

ಉಸಿರಾಟದ ಸಮಸ್ಯೆಯಿತ್ತು: ‘ನಾನು ಹತ್ತು ವರ್ಷಗಳಿಂದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದೆ. ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೂ ಸರಿ ಹೋಗಿರಲಿಲ್ಲ. ಆಗ ಸಂಬಂಧಿ ಪರಹತ್ ಅವರು, ‘ಎಚ್‌ಆರ್‌ಬಿಆರ್ ಲೇಔಟ್‌ನಲ್ಲಿ ಶಬನಮ್ ಹಾಜೀರಾ ಎಂಬುವರನ್ನು ಭೇಟಿಯಾಗು. ಏನೇ ಸಮಸ್ಯೆ ಇದ್ದರೂ ಅವರೇ ಬಗೆಹರಿಸುತ್ತಾರೆ’ ಎಂದು ಹೇಳಿದ್ದರು. ಅಂತೆಯೇ ಅವರನ್ನು ಭೇಟಿಯಾಗಿ ಉಸಿರಾಟದ ಸಮಸ್ಯೆ ಇರುವುದಾಗಿ ಹೇಳಿಕೊಂಡಿದ್ದೆ’ ಎಂದು ಫಾತಿಮಾ ದೂರಿನಲ್ಲಿ ಹೇಳಿದ್ದಾರೆ.

‘ಮೊದಲ ಸಲ ಹೋದಾಗ ಒಂದು ಬಟ್ಟಲಿನಲ್ಲಿ ನೀರನ್ನು ಕೊಟ್ಟ ಅವರು, ಪ್ರತಿದಿನ ಸ್ವಲ್ಪ ಸ್ವಲ್ಪವೇ ಕುಡಿಯುವಂತೆ ಸೂಚಿಸಿದ್ದರು. ಅದರಿಂದ ಯಾವುದೇ ಪ್ರಯೋಜನವಾಗಲಿಲ್ಲ. ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ನವೀದ್ ಹಾಗೂ ಸಾನಿಯಾ, ‘ಶಬನಮ್ ಅವರ ಮೇಲೆ ನಂಬಿಕೆ ಇಡಿ. ಬೇಗ ಗುಣವಾಗುತ್ತದೆ’ ಎಂದಿದ್ದರು. ಅವರ ಮಾತಿನಂತೆಯೇ ನಡೆದುಕೊಂಡಿದ್ದೆ’ ಎಂದು ವಿವರಿಸಿದ್ದಾರೆ.

ದೇವರ ಜತೆ ಮಾತುಕತೆ!: ‘ಆರೋಗ್ಯ ತೀರಾ ಹದಗೆಟ್ಟಿದ್ದರಿಂದ ಶಬನಮ್ ಅವರನ್ನು ಪುನಃ ಭೇಟಿಯಾದೆ. ‘ನಾನು ದೇವರು ಜತೆ ಮಾತನಾಡಿ ನಿಮ್ಮ ಸಮಸ್ಯೆಯನ್ನು ತಿಳಿಸುತ್ತೇನೆ. ನೀವು ನಾಳೆ ಬನ್ನಿ’ ಎಂದಿದ್ದರು. ಅವರ ಮಾತನ್ನು ನಂಬಿ ಹೊರ ನಡೆದಿದ್ದ ನಾನು, ಮರುದಿನ ಮತ್ತೆ ಹೋಗಿದ್ದೆ. ‘ನಿಮಗೆ ಗಂಡಾಂತರವಿರುವುದಾಗಿ ಹಜರತ್ (ದೇವರು) ಹೇಳುತ್ತಿದ್ದಾರೆ. ನಿಮ್ಮ ಬಳಿ ಇರುವ ಎಲ್ಲ ಚಿನ್ನವನ್ನೂ ಇಟ್ಟು ವಿಶೇಷ ಪೂಜೆ ಮಾಡಬೇಕು’ ಎಂದರು. ಅಂತೆಯೇ 1 ಕೆ.ಜಿ 242 ಗ್ರಾಂ ಚಿನ್ನವನ್ನು ಅವರಿಗೆ ಕೊಟ್ಟಿದ್ದೆ’ ಎಂದೂ ಫಾತಿಮಾ ಹೇಳಿದ್ದಾರೆ.

‘ನಾಲ್ಕು ತಿಂಗಳ ಬಳಿಕ ಚಿನ್ನವನ್ನು ವಾಪಸ್ ತೆಗೆದುಕೊಂಡು ಹೋಗುವಂತೆ ಹೇಳಿದ್ದ ಶಬನಮ್, ತಾವು ರಿಯಲ್ ಎಸ್ಟೇಟ್ ವ್ಯವಹಾರ ಪ್ರಾರಂಭಿಸುತ್ತಿರುವುದಾಗಿ ₹ 6 ಲಕ್ಷವನ್ನು ಸಾಲದ ರೂಪದಲ್ಲಿ ಪಡೆದುಕೊಂಡರು. ಈಗ ಸಾಲವನ್ನು ಮರಳಿಸದೆ, ಚಿನ್ನವನ್ನೂ ವಾಪಸ್ ಕೊಡದೆ ಸತಾಯಿಸುತ್ತಿದ್ದಾರೆ. ಕೇಳಲು ಹೋದರೆ, ಶಬನಮ್ ಅವರ ಪತಿ ಮುಕ್ತಿಯಾರ್ ಹಾಗೂ ಅದ್ನಾನ್ ಬೆದರಿಕೆ ಹಾಕುತ್ತಾರೆ. ದಯವಿಟ್ಟು ನಮ್ಮ ಹಣ, ಚಿನ್ನವನ್ನು ವಾಪಸ್ ಕೊಡಿಸಿ’ ಎಂದು ಮನವಿ ಮಾಡಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !