ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರ್ಡ್‌ ಪುನರ್ವಿಂಗಡಣೆ ನೆನಪಿಸಿದ ಆಯೋಗ

ಮುಖ್ಯ ಕಾರ್ಯದರ್ಶಿಗೆ ರಾಜ್ಯ ಚುನಾವಣಾ ಆಯುಕ್ತರಿಂದ ಪತ್ರ
Last Updated 9 ನವೆಂಬರ್ 2018, 20:31 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ಚುನಾವಣೆಗೆ ಒಂದು ವರ್ಷ ಮುಂಚಿತವಾಗಿ ವಾರ್ಡ್‌ಗಳ ಪುನರ್ವಿಂಗಡಣೆಗೆ ಅಧಿಸೂಚನೆ ಹೊರಡಿಸಬೇಕು. ವಾರ್ಡ್‌ವಾರು ಮೀಸಲಾತಿ ಪಟ್ಟಿಯನ್ನು ಒದಗಿಸಬೇಕು ಎಂದು ರಾಜ್ಯ ಚುನಾವಣಾ ಆಯೋಗ ಸರ್ಕಾರಕ್ಕೆ ನೆನಪೋಲೆ ಕಳುಹಿಸಿದೆ.

ಬಿಬಿಎಂಪಿಯ ಈಗಿನ ಸದಸ್ಯರ ಅವಧಿ 2020ರ ಸೆಪ್ಟೆಂಬರ್‌ನಲ್ಲಿ ಕೊನೆಗೊಳ್ಳಲಿದೆ. 1976ರ ಕರ್ನಾಟಕ ಪೌರಾಡಳಿತ ಕಾಯ್ದೆ ಪ್ರಕಾರಮುಂದಿನ ಚುನಾವಣೆಗೆ ಮುನ್ನವೇ ವಾರ್ಡ್‌ವಾರು ಪುನರ್ವಿಂಗಡಣೆ ನಡೆಯಬೇಕಿದೆ. ಇದಕ್ಕೆ ಏನಿಲ್ಲವೆಂದರೂ ಒಂದು ವರ್ಷ ಕಾಲಾವಕಾಶ ಬೇಕಾಗುತ್ತದೆ.

‘ಬಿಬಿಎಂಪಿಯ ಈಗಿನ ಸದಸ್ಯರ ಅವಧಿ ಮುಗಿಯುವುದರೊಳಗೆ ಪುನರ್ವಿಂಗಡಣೆ ಹಾಗೂ ಮೀಸಲಾತಿ ನಿಗದಿ ಪ್ರಕ್ರಿಯೆ ಪೂರ್ಣಗೊಳಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ಈ ಕುರಿತ ಎಲ್ಲ ಪ್ರಕ್ರಿಯೆಗಳನ್ನು ಕಾಲಮಿತಿಯೊಳಗೆ ಕೈಗೊಂಡು ಆಯೋಗಕ್ಕೆ ಸಲ್ಲಿಸಬೇಕು’ ಎಂದು ರಾಜ್ಯ ಚುನಾವಣಾ ಆಯುಕ್ತ ಪಿ.ಎನ್‌.ಶ್ರೀನಿವಾಸಾಚಾರಿ ಅವರು ಅ.25ರಂದು ರಾಜ್ಯದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ ಅವರಿಗೆ ಪತ್ರ ಬರೆದಿದ್ದಾರೆ.

ಈ ಹಿಂದೆ ನಡೆದುಕೊಂಡ ರೀತಿಯನ್ನೂ ಆಯುಕ್ತರು ನೆನಪಿಸಿದ್ದಾರೆ.

‘ಬಿಬಿಎಂಪಿ ಚುನಾವಣೆಯ ಹಿನ್ನೆಲೆ ಗಮನಿಸಿದಾಗ, ಪ್ರತಿ ಬಾರಿಯೂ ಸರ್ಕಾರ ಮೀಸಲಾತಿ ಹಾಗೂ ವಾರ್ಡ್‌ವಾರು ಪುನರ್ವಿಂಗಡಣೆಯನ್ನು ನಿಗದಿತ ಅವಧಿಯೊಳಗೆ ಆಯೋಗಕ್ಕ ಸಲ್ಲಿಸಿಲ್ಲ. ಕಿಶನ್‌ ಸಿಂಗ್‌ ತೋಮರ್‌– ಅಹಮದಾಬಾದ್‌ ಮಹಾನಗರ ಪಾಲಿಕೆ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ 2005ರಲ್ಲಿ ನೀಡಿರುವ ನಿರ್ದೇಶನದ ಪ್ರಕಾರ ವಾರ್ಡ್‌ವಾರು ಮೀಸಲಾತಿ ಪಟ್ಟಿಯನ್ನು ನಿಗದಿತ ಸಮಯದೊಳಗೆ ನೀಡಬೇಕು. ಇಲ್ಲದಿದ್ದರೆ ಆಯೋಗವು ಹೈಕೋರ್ಟ್‌ ಮೊರೆ ಹೋಗಬೇಕಾಗುತ್ತದೆ. ಇದರಿಂದ ಸರ್ಕಾರಕ್ಕೂ ಹಾಗೂ ಆಯೋಗಕ್ಕೂ ಮುಜುಗರ’ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

2015ರ ಚುನಾವಣೆ 2011ರ ಮೀಸಲಾತಿ ಪಟ್ಟಿಯ ಆಧಾರದಲ್ಲಿ ನಡೆಯಬೇಕಿತ್ತು. ವಾರ್ಡ್‌ಗಳ ಪುನರ್ವಿಂಗಡಣೆ ಮಾಡಿ ಮೀಸಲಾತಿ ನಿಗದಿಪಡಿಸುವಂತೆ ಆಯೋಗವು 2013ರಲ್ಲೇ ಸರ್ಕಾರಕ್ಕೆ ಪತ್ರ ಬರೆದಿತ್ತು. ಆದರೆ ಸರ್ಕಾರ ಕೆಲವೇ ವಾರ್ಡ್‌ಗಳ ಮೀಸಲಾತಿಯನ್ನು ನಿಗದಿಪಡಿಸಿ ಅಧಿಸೂಚನೆ ಹೊರಡಿಸಿತ್ತು. ಬಳಿಕ ಪ್ರಕರಣ ಹೈಕೋರ್ಟ್‌ ಮೆಟ್ಟಿಲೇರಿತ್ತು. 2001ರ ಮೀಸಲಾತಿ ಆಧಾರದಲ್ಲೇ ಚುನಾವಣೆ ನಡೆಸುವಂತೆ ಹೈಕೋರ್ಟ್‌ ಸೂಚಿಸಿತ್ತು.

**

ತಜ್ಞರ ಸಮಿತಿ ವರದಿ– ಸರ್ಕಾರ ಮೌನ

ಬೆಂಗಳೂರು ಮಹಾನಗರಪಾಲಿಕೆ ಪುನರ್‌ರಚನೆ ಕುರಿತು ಅಧ್ಯಯನ ನಡೆಸಲು ರಚಿಸಲಾಗಿದ್ದ ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಎಸ್‌. ಪಾಟೀಲ ನೇತೃತ್ವದ ತಜ್ಞರ ಸಮಿತಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಜೂನ್‌ ತಿಂಗಳಲ್ಲಿ ಅಂತಿಮ ವರದಿ ಸಲ್ಲಿಸಿದೆ.

ಈ ವರದಿಯ ಬಗ್ಗೆ ಸಮ್ಮಿಶ್ರ ಸರ್ಕಾರ ಇನ್ನೂ ನಿಲುವು ಸ್ಪಷ್ಟಪಡಿಸಿಲ್ಲ. ವರದಿಯನ್ನು ತಿರಸ್ಕರಿಸಿಯೂ ಇಲ್ಲ. ಇನ್ನೊಂದೆಡೆ 2011ರ ಜನಗಣತಿ ಆಧಾರದಲ್ಲಿ ಬಿಬಿಎಂ‍ಪಿಯ ವಾರ್ಡ್‌ಗಳ ಪುನರ್ವಿಂಗಡಣೆ ಬಗ್ಗೆಯೂ ಸರ್ಕಾರ ಯಾವುದೇ ಸಿದ್ಧತೆ ನಡೆಸಿಲ್ಲ.

ಬೆಂಗಳೂರಿಗೆ ಮೂರು ಹಂತದ ಆಡಳಿತ ವ್ಯವಸ್ಥೆ ಇರಬೇಕು. ಮೊದಲ ಹಂತದಲ್ಲಿ ‘ಗ್ರೇಟರ್‌ ಬೆಂಗಳೂರು ಮುನಿಸಿಪಲ್‌ ಅಥಾರಿಟಿ’ ರಚಿಸಬೇಕು. ಮೇಯರ್‌ ಜನರಿಂದ ನೇರವಾಗಿ ಆಯ್ಕೆಯಾಗಬೇಕು. ಅವರಿಗೆ ಐದು ವರ್ಷದ ಅಧಿಕಾರಾವಧಿ ಇರಬೇಕು ಎಂದು ಸಮಿತಿ ಸಲಹೆ ನೀಡಿದೆ.

ಈ ಸಮಿತಿ ಸಲ್ಲಿಸಿದ್ದ ಮಧ್ಯಂತರ ವರದಿಯನ್ನು ಆಧರಿಸಿ ಈ ಹಿಂದಿನ ಸರ್ಕಾರ ವಿಧಾನ ಮಂಡಲದ ವಿಶೇಷ ಅಧಿವೇಶನ ಕರೆದು ಬಿಬಿಎಂ‍ಪಿ ವಿಭಜನೆ ಮಸೂದೆಯನ್ನು ಮಂಡಿಸಿತ್ತು. ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳ ಸದಸ್ಯರು ಈ ಮಸೂದೆಯನ್ನು ವಿರೋಧಿಸಿ ಸಭಾತ್ಯಾಗ ಮಾಡಿದ್ದರು. ವಿರೋಧದ ನಡುವೆಯೇ ಸರ್ಕಾರ ಎರಡೂ ಸದನಗಳಲ್ಲಿ ಈ ಮಸೂದೆಯನ್ನು ಅಂಗೀಕರಿಸಿತ್ತು. ಈ ಮಸೂದೆಯನ್ನು ರಾಜ್ಯಪಾಲರು ರಾಷ್ಟ್ರಪತಿ ಅಂಕಿತಕ್ಕೆ ಕಳುಹಿಸಿದ್ದರು. ಅದಕ್ಕಿನ್ನೂ ಅಂಕಿತ ಬಿದ್ದಿಲ್ಲ.

**

ಬಿಬಿಎಂಪಿ ಚುನಾವಣೆಗೆ ಇನ್ನೂ ಎರಡು ವರ್ಷ ಇದೆ. ಆದರೆ, ಚುನಾವಣೆ ಘೋಷಣೆ ಸಂದರ್ಭದಲ್ಲಿ ಗೊಂದಲ ಬೇಡ ಎಂಬ ಕಾರಣಕ್ಕೆ ಸರ್ಕಾರಕ್ಕೆ ಈ ವಿಚಾರವನ್ನು ಮುಂಚಿತವಾಗಿ ನೆನಪಿಸಿದ್ದೇವೆ.

-ಪಿ.ಎನ್‌.ಶ್ರೀನಿವಾಸಾಚಾರಿ, ರಾಜ್ಯ ಚುನಾವಣಾ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT