ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ನಡೆಗೆ ಕಾಂಗ್ರೆಸ್‌ ಕಿಡಿ

ಸುರಿವ ಮಳೆಯಲ್ಲೇ ಪ್ರತಿಭಟನೆ; ಧಿಕ್ಕಾರಗಳ ಘೋಷಣೆ
Last Updated 9 ಜುಲೈ 2019, 9:58 IST
ಅಕ್ಷರ ಗಾತ್ರ

ಮೈಸೂರು: ರಾಜ್ಯದಲ್ಲಿನ ಸಮ್ಮಿಶ್ರ ಸರ್ಕಾರದ ಪತನಕ್ಕೆ ಯತ್ನ ನಡೆಸಿರುವ ಬಿಜೆಪಿ ನಡೆಯನ್ನು ಖಂಡಿಸಿ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ನಗರದ ಗಾಂಧಿ ವೃತ್ತದಲ್ಲಿ ಮಂಗಳವಾರ ಪ್ರತಿಭಟಿಸಿದರು.

ಆಗಾಗ್ಗೆ ಸುರಿವ ಮಳೆಯನ್ನೂ ಲೆಕ್ಕಿಸದೆ ಪ್ರತಿಭಟನೆ ನಡೆಸಿದ ಕಾಂಗ್ರೆಸ್ಸಿಗರು, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧ ಧಿಕ್ಕಾರದ ಘೋಷಣೆಗಳ ಸುರಿಮಳೆಗೈದರು.

ಮಾಜಿ ಸಚಿವ ಸಿ.ಎಚ್‌.ವಿಜಯಶಂಕರ್ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿ, ‘ಅಧಿಕಾರಕ್ಕಾಗಿ, ಅಧಿಕಾರ ಉಳಿಸಿಕೊಳ್ಳಲಿಕ್ಕಾಗಿ ಈ ಹೋರಾಟ ನಡೆಸುತ್ತಿಲ್ಲ. ಜನಾದೇಶ ಬುಡಮೇಲುಗೊಳಿಸಿ ವಾಮ ಮಾರ್ಗದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ನಡೆಸಿರುವ ಅನೀತಿಯ ರಾಜಕಾರಣದ ವಿರುದ್ಧ ಹೋರಾಟ ನಡೆಸಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ’ ಎಂದರು.

‘ವಾಮ ಮಾರ್ಗದಿಂದ ಅಧಿಕಾರದ ಚುಕ್ಕಾಣಿ ಹಿಡಿಯುವ ಬಿಜೆಪಿ ಯತ್ನ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ. ಮಧ್ಯಪ್ರದೇಶ, ರಾಜಸ್ತಾನಗಳಲ್ಲೂ ನಡೆಯಲಿದೆ. ಇದನ್ನು ತಡೆಗಟ್ಟಲಿಕ್ಕಾಗಿ ಕಾಂಗ್ರೆಸ್ ರಾಷ್ಟ್ರವ್ಯಾಪಿ ಹೋರಾಟ ಹಮ್ಮಿಕೊಂಡಿದೆ’ ಎಂದು ಹೇಳಿದರು.

‘ವಿಧಾನಸಭಾ ಅಧ್ಯಕ್ಷರ ನಿರ್ಧಾರವನ್ನು ಕಾದು ನೋಡುತ್ತಿದ್ದೇವೆ. ಜನಾದೇಶದ ವಿರೋಧಿ ನಡೆಗೆ ಅವಕಾಶ ಕೊಡಬಾರದು ಎಂದು ಪ್ರತಿಪಾದಿಸಿದ್ದೇವೆ. ಶಾಸಕರಿಗೆ ಆಮಿಷವೊಡ್ಡಿ ರಾಜೀನಾಮೆ ಕೊಡಿಸಿದ್ದು, ಮಾನ್ಯ ಮಾಡಬಾರದು ಎಂಬ ಆಗ್ರಹ ನಮ್ಮದಾಗಿದೆ. ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ’ ಎಂದು ವಿಜಯಶಂಕರ್ ತಿಳಿಸಿದರು.

ಮಾಜಿ ಶಾಸಕ ಸೋಮಶೇಖರ್ ಮಾತನಾಡಿ ‘ಮತದಾರರ ಮುಖಕ್ಕೆ ಮಸಿ ಬಳಿಯುವ ಕೆಲಸ ನಡೆಯುತ್ತಿದೆ. ಪ್ರಜಾತಂತ್ರ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಆಡಳಿತ ಈ ದೇಶಕ್ಕೆ ಬೇಕಿದೆಯಾ ? ಪ್ರಾಮಾಣಿಕರು ಎಂದು ಎಲ್ಲೆಡೆ ಬೀಗುವ ಬಿಜೆಪಿಗರಿಗೆ, ಇದೀಗ ತಲಾ ₹ 25 ಕೋಟಿ ಕೊಟ್ಟು, ಶಾಸಕರನ್ನು ಖರೀದಿಸಲು ₹ 300 ಕೋಟಿ ಎಲ್ಲಿಂದ ಬಂತು’ ಎಂದು ಕಿಡಿಕಾರಿದರು.

‘ಅಕ್ರಮ–ಅನ್ಯಾಯದಿಂದ ದೇಶದ ಚುಕ್ಕಾಣಿ ಹಿಡಿದವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ. ಇವಿಎಂ ಮತಯಂತ್ರಗಳ ದುರ್ಬಳಕೆ, ಜನರ ಕೋಮು ಭಾವನೆ ಕೆರಳಿಸಿ ಅಧಿಕಾರಕ್ಕೆ ಬಂದವರು ಇವರು. ಈ ಹಿಂದಿನ ಐದು ವರ್ಷದ ಆಡಳಿತದಲ್ಲಿ ಮೋದಿ ದೇಶಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ. ಬಡವರಿಗೆ ಎರಡೊತ್ತಿನ ಊಟ ಕೊಡಲಿಲ್ಲ. ನಿರುದ್ಯೋಗಿ ಯುವ ಸಮೂಹಕ್ಕೆ ಕೆಲಸ ಕೊಡಲಿಲ್ಲ’ ಎಂದು ಸೋಮಶೇಖರ್ ವಾಗ್ದಾಳಿ ನಡೆಸಿದರು.

ಮೇಯರ್ ಪುಷ್ಪಲತಾ ಜಗನ್ನಾಥ್‌, ಜಿಲ್ಲಾ ಕಾಂಗ್ರೆಸ್‌ ಘಟಕಗಳ ಅಧ್ಯಕ್ಷರಾದ ಆರ್.ಮೂರ್ತಿ, ಡಾ.ವಿಜಯ್ ಕುಮಾರ್, ಪ್ರಚಾರ ಸಮಿತಿ ಅಧ್ಯಕ್ಷ ಡಾ.ಎಂ.ಕೆ.ಅಶೋಕ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT