ಬೆಳಕಿನ ಹಬ್ಬದಲ್ಲಿ ಹೊಗೆ ಮೋಡ ಸೃಷ್ಟಿ!

7
ಕಳೆದ ವರ್ಷಕ್ಕಿಂತ ಕಡಿಮೆಯಾದ ವಾಯು ಮಾಲಿನ್ಯ; ಶಬ್ದ ಮಾಲಿನ್ಯಕ್ಕೂ ಲಗಾಮು

ಬೆಳಕಿನ ಹಬ್ಬದಲ್ಲಿ ಹೊಗೆ ಮೋಡ ಸೃಷ್ಟಿ!

Published:
Updated:

ಬೆಂಗಳೂರು: ಹೋದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶಬ್ದ ಹಾಗೂ ವಾಯು ಮಾಲಿನ್ಯದಲ್ಲಿ ಸ್ವಲ್ಪ ಇಳಿಕೆಯಾಗಿದೆ. ಆದರೆ, ಈ ವರ್ಷದ ಉಳಿದ ದಿನಗಳಿಗಿಂತ ದೀಪಾವಳಿ ಸಂದರ್ಭದಲ್ಲೇ ಮಾಲಿನ್ಯ ಹೆಚ್ಚಾಗಿದೆ. ಬೆಳಕಿನ ಹಬ್ಬದಲ್ಲಿ ‘ಹೊಗೆ ಮೋಡ’ ಸೃಷ್ಟಿಯಾಗಿದ್ದು ಎದ್ದು ಕಂಡಿದೆ.

2017ರಲ್ಲಿ ಅಕ್ಟೋಬರ್‌ನಲ್ಲಿ ಹಬ್ಬದ ದಿನಗಳಲ್ಲಿ ರೈಲ್ವೆ ನಿಲ್ದಾಣದಲ್ಲಿ 181 ಮೈಕ್ರೊ ಗ್ರಾಂನಷ್ಟು ಮಾಲಿನ್ಯ ಹೆಚ್ಚಿತ್ತು. ಈ ಬಾರಿ 128 ಮೈಕ್ರೊ ಗ್ರಾಂನಷ್ಟು ಮಾಲಿನ್ಯ ಕಂಡುಬಂದಿದೆ.

‘ಪಟಾಕಿಗಳಿಗೆ ಹೇರಿದ ನಿಯಂತ್ರಣ ಹಾಗೂ ಸತತವಾಗಿ ರಜೆ ಇದ್ದಿದ್ದರಿಂದ ವಾಹನಗಳ ಓಡಾಟ ಕೂಡ ನಗರದಲ್ಲಿ ಕಡಿಮೆಯಾಗಿದೆ. ಮಾಲಿನ್ಯವನ್ನು ನಿಯಂತ್ರಿಸುವಲ್ಲಿ ತೆಗೆದುಕೊಂಡ ಕೆಲವು ಕ್ರಮಗಳು ಕೆಲಸ ಮಾಡಿವೆ’ ಎಂದು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಲಕ್ಷ್ಮಣ್‌ ಹೇಳಿದರು.

ಮುಂದುವರಿದ ಪಟಾಕಿ ಅಬ್ಬರ: ನಗರದಲ್ಲಿ ಗುರುವಾರ ಪಟಾಕಿ ಅಬ್ಬರ ಮುಂದುವರಿದಿತ್ತು. ಶುಕ್ರವಾರ, ನಗರವಾಸಿಗಳು ರಜೆ ಮುಗಿಸಿ ಕೆಲಸಗಳಲ್ಲಿ ತೊಡಗಿಕೊಂಡ ಕಾರಣ ಅಬ್ಬರ ಸ್ವಲ್ಪಮಟ್ಟಿಗೆ ಕಡಿಮೆಯಾಗಿತ್ತು. ಗುರುವಾರ ರಾತ್ರಿ 12 ಗಂಟೆವರೆಗೆ ಮಾಲಿನ್ಯ ಪ್ರಮಾಣ ಕೂಡ ಹೆಚ್ಚಿತ್ತು. ಬೆಳಿಗ್ಗೆ 6 ಗಂಟೆವರೆಗೆ ಕೆಲವು ಕಡೆ ಪಟಾಕಿ ಸಿಡಿಸಲಾಗಿದೆ.

**

‘ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗಿಲ್ಲ’

‘ಪರಿಸರಸ್ನೇಹಿ ದೀಪಾವಳಿ ಆಚರಣೆಗಾಗಿ ಸುಪ್ರೀಂಕೋರ್ಟ್ ನೀಡಿದ್ದ ನಿರ್ದೇಶನ ಉಲ್ಲಂಘಿಸಿ ಪಟಾಕಿ ಹೊಡೆದ ಬಗ್ಗೆ ನಗರದಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ’ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ ಸೀಮಂತ್‌ಕುಮಾರ್ ಸಿಂಗ್ ತಿಳಿಸಿದರು.

‘ಹಬ್ಬದ ದಿನದಂದು ರಾತ್ರಿ 8 ಗಂಟೆಯಿಂದ 10 ಗಂಟೆಯೊಳಗೆ ಮಾತ್ರ ಪಟಾಕಿ ಹೊಡೆಯುವಂತೆ ನಿಯಮವಿತ್ತು. ಅಂಥ ನಿಯಮ ಉಲ್ಲಂಘಿಸಿ ಪಟಾಕಿ ಹೊಡೆಯುತ್ತಿದ್ದ ಬಗ್ಗೆ ಹಲವರು, ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ತಿಳಿಸಿದ್ದರು. ಹೊಯ್ಸಳ ಗಸ್ತು ವಾಹನದ ಸಿಬ್ಬಂದಿ ಸ್ಥಳಕ್ಕೆ ಹೋದಾಗ ಅಂಥ ಉಲ್ಲಂಘನೆಗಳು ಕಂಡುಬಂದಿಲ್ಲ. ಜೊತೆಗೆ ಯಾರೊಬ್ಬರ ಸಾರ್ವಜನಿಕರು, ಲಿಖಿತವಾಗಿ ದೂರು ನೀಡಿಲ್ಲ’ ಎಂದು ಹೇಳಿದರು. 

ಬರಹ ಇಷ್ಟವಾಯಿತೆ?

 • 1

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !