ಸೋಮವಾರ, ನವೆಂಬರ್ 18, 2019
28 °C
ಉತ್ತರ ವಿಭಾಗ: 425 ಪ್ರಕರಣ; ₹ 5.28 ಕೋಟಿ ಮೌಲ್ಯದ ವಸ್ತು ವಶ

‘ಪುರಾವೆ ಆಧರಿಸಿ ತನಿಖೆ ಸವಾಲಿನ ಕೆಲಸ’

Published:
Updated:

ಬೆಂಗಳೂರು: ದರೋಡೆ, ಸುಲಿಗೆ, ಸರ ಕಳವು, ಮನೆಯಲ್ಲಿ ಕಳವು, ವಾಹನಗಳ ಕಳವು ಸೇರಿದಂತೆ  ಒಟ್ಟು 425 ಪ್ರಕರಣಗಳನ್ನು ಆರು ತಿಂಗಳ ಅವಧಿಯಲ್ಲಿ ಭೇದಿಸಿರುವ ಉತ್ತರ ವಿಭಾಗದ ಪೊಲೀಸರು, ಆರೋಪಿಗಳಿಂದ ₹ 5.28 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳಿಂದ ವಶಪಡಿಸಿಕೊಂಡಿದ್ದ ಚಿನ್ನಾಭರಣ, ವಾಹನಗಳು ಮತ್ತು ಇತರ ವಸ್ತುಗಳನ್ನು ಆರ್‌.ಟಿ. ನಗರದ ಎಚ್‌ಎಂಟಿ ಮೈದಾನದಲ್ಲಿ ಶನಿವಾರ ಪ್ರದರ್ಶಿಸಲಾಯಿತು. ಕೆಲವು ವಸ್ತುಗಳನ್ನು ವಾರಸುದಾರರಿಗೆ ವಿತರಿಸಲಾಯಿತು.

ನಂದಿನಿ ಲೇಔಟ್‌ ಪೊಲೀಸ್‌ ಠಾಣೆಯ ಸಿಬ್ಬಂದಿ ಅತೀ ಹೆಚ್ಚು ( 71 ) ಪ್ರಕರಣಗಳನ್ನು ಪತ್ತೆ ಹಚ್ಚಿದ್ದಾರೆ. ಯಶವಂತಪುರ ಠಾಣೆಯ ಪೊಲೀಸರು 17, ಆರ್‌ಎಂಸಿ ಯಾರ್ಡ್‌ 24, ಮಲ್ಲೇಶ್ವರ 9, ಆರ್‌.ಟಿ. ನಗರ 31, ಮಹಾಲಕ್ಷ್ಮಿ ಲೇಔಟ್‌ ಠಾಣೆ ಪೊಲೀಸರು 31 ಪ್ರಕರಣಗಳನ್ನು ಭೇದಿಸಿದ್ದಾರೆ.

ಪೊಲೀಸ್‌ ಕಮಿಷನರ್‌ ಭಾಸ್ಕರ್‌ ರಾವ್‌, ‘ಯಾವುದೇ ರೀತಿಯ ದೂರುಗಳು ಬಂದರೂ  ದಾಖಲಿಸಿಕೊಳ್ಳಬೇಕು. ಅಗತ್ಯಬಿದ್ದರೆ ಬಳಿಕ ಅವುಗಳನ್ನು ಸಂಬಂಧಿಸಿದ ಠಾಣೆಗಳಿಗೆ ವರ್ಗಾಯಿಸಬೇಕು’ ಎಂದು ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಿದರು.

‘ಅಪರಾಧ ಪ್ರಕರಣಗಳನ್ನು ಭೇದಿಸುವುದು ಅಷ್ಟು ಸುಲಭವಲ್ಲ. ಪುರಾವೆಗಳನ್ನು ಆಧರಿಸಿಯೇ ತನಿಖೆ ಮಾಡಬೇಕಾಗುತ್ತದೆ. ಕಳೆದುಕೊಂಡ ವಸ್ತುವನ್ನು ಮರಳಿ ವಶಪಡಿಸಿಕೊಳ್ಳುವುದು ಸವಾಲಿನ ಕೆಲಸ’ ಎಂದರು.

‘ಅಪರಾಧಿಗಳಿಗೆ ಒಳ್ಳೆಯ ಆರೋಗ್ಯ ಇರುವುದಿಲ್ಲ. ಡ್ರಗ್ಸ್‌, ಮದ್ಯಸೇವನೆಯಿಂದ ಅವರ ಆರೋಗ್ಯ ಕ್ಷೀಣಿಸಿರುತ್ತದೆ. ಹೀಗಾಗಿ, ವಿಚಾರಣೆ ನಡೆಸುವಾಗ ಎಚ್ಚರ ವಹಿಸಬೇಕಾಗುತ್ತದೆ. ವೈಜ್ಞಾನಿಕವಾಗಿ ತನಿಖೆ ಕೈಗೊಳ್ಳಬೇಕಾಗುತ್ತದೆ. ವಿಡಿಯೊ ಚಿತ್ರೀಕರಣ ಕೂಡಾ ಮಾಡಬೇಕಾಗುತ್ತದೆ. ಆರೋಪಿಗಳ ವಿಚಾರಣೆ, ಪ್ರಕರಣಗಳ ತನಿಖೆ ವೇಳೆ ಬಹಳ ತಾಳ್ಮೆ ಬೇಕಾಗುತ್ತದೆ. ವಿಚಾರಣೆ ವೇಳೆ ಏನಾದರೂ ಹೆಚ್ಚು ಕಡಿಮೆಯಾದರೆ ಪೊಲೀಸರೂ ಜೈಲಿಗೆ ಹೋಗಬೇಕಾದೀತು’ ಎಂದು ವಿವರಿಸಿದರು.

‘ನಗರದಲ್ಲಿ 1.40 ಕೋಟಿ ಜನರಿದ್ದಾರೆ. ಆದರೆ, ಪೊಲೀಸ್ ಸಿಬ್ಬಂದಿ ಬಲ 19 ಸಾವಿರ ಮಾತ್ರ. ರಜೆಯ ಸರಾಸರಿ ಪರಿಗಣಿಸಿದರೆ 15 ಸಾವಿರ ಸಿಬ್ಬಂದಿ ಮಾತ್ರ ಕರ್ತವ್ಯಕ್ಕೆ ಲಭ್ಯರಿರುತ್ತಾರೆ. ಕದ್ದ ಚಿನ್ನಾಭರಣಗಳನ್ನು ಕಳ್ಳರು ಜ್ಯುವೆಲ್ಲರಿಗಳಿಗೆ ಕಡಿಮೆ ಮೊತ್ತಕ್ಕೆ ಮಾರಾಟ ಮಾಡಿರುತ್ತಾರೆ. ಅವುಗಳನ್ನು ಚಿನ್ನದಂಗಡಿಯವರು ಕರಗಿಸಿರುತ್ತಾರೆ. ಅಂತಹ ಪ್ರಕರಣಗಳು ಇನ್ನೂ ಕ್ಲಿಷ್ಟ. ಕೆಲವರು ಪೊಲೀಸರ ಮೇಲೆಯೇ ಆರೋಪ ಮಾಡುತ್ತಾರೆ’ ಎಂದರು.

**

ಪೊಲೀಸರ ಬಗ್ಗೆ ನಕಾರಾತ್ಮಕ ಭಾವನೆ ಇರುವವರು ಠಾಣೆಗೆ ಬಂದು ನೋಡಿ. 15 ದಿನ ಹಗಲು, 15 ದಿನ ರಾತ್ರಿ ಕೆಲಸ ಮಾಡುವ ಅವರ ಬದುಕು ಹೇಗಿರುತ್ತದೆ ತಿಳಿದುಕೊಳ್ಳಿ
- ಭಾಸ್ಕರ್‌ ರಾವ್‌, ನಗರ ಪೊಲೀಸ್‌ ಕಮಿಷನರ್‌

ಪ್ರತಿಕ್ರಿಯಿಸಿ (+)