10 ರೂಪಾಯಿಗಾಗಿ ₹ 18 ಸಾವಿರ ಕಳೆದುಕೊಂಡರು!

7
ಉಬರ್ ಸಹಾಯವಾಣಿಗೆ ಬಂದ ಕರೆ ಸ್ವೀಕರಿಸಿದ ಸೈಬರ್ ವಂಚಕ

10 ರೂಪಾಯಿಗಾಗಿ ₹ 18 ಸಾವಿರ ಕಳೆದುಕೊಂಡರು!

Published:
Updated:

ಬೆಂಗಳೂರು: ಹಿರಿಯ ನಾಗರಿಕರೊಬ್ಬರು 10 ರೂಪಾಯಿ ಉಳಿಸಿಕೊಳ್ಳುವ ಧಾವಂತದಲ್ಲಿ ಸೈಬರ್ ವಂಚಕನಿಗೆ ಎರಡು ಬಾರಿ ಒಟಿಪಿ (ಒನ್‌ ಟೈಮ್ ಪಾಸ್‌ವರ್ಡ್) ಕೊಟ್ಟು ₹ 18 ಸಾವಿರ ಕಳೆದುಕೊಂಡಿದ್ದಾರೆ!

ಸಾದರಮಂಗಲ ನಿವಾಸಿ ಸಂತೋಷ್ ಕುಮಾರ್ ಸಿಂಗ್ (65) ಹಣ ಕಳೆದುಕೊಂಡವರು. ಈ ಸಂಬಂಧ ಅವರು ಅ.6ರಂದು ಕಾಡುಗೋಡಿ ಠಾಣೆಗೆ ದೂರು ಕೊಟ್ಟಿದ್ದಾರೆ. ಪೊಲೀಸರು ಹಣ ವರ್ಗಾವಣೆಯಾದ ಬ್ಯಾಂಕ್ ಖಾತೆಯ ವಿವರಗಳನ್ನು ಸಂಗ್ರಹಿಸಿಕೊಂಡು ವಂಚಕನ ಬಂಧನಕ್ಕೆ ಬಲೆ ಬೀಸಿದ್ದಾರೆ.‌

ಉಬರ್ ಹೆಲ್ಪ್‌ಲೈನ್‌: ‘ಖಾಸಗಿ ಕಂಪನಿಯೊಂದರಲ್ಲಿ ಮುಖ್ಯ ಎಂಜಿನಿಯರ್ ಆಗಿ ನಿವೃತ್ತಿ ಹೊಂದಿರುವ ನಾನು, ಹೊರಗಡೆ ಹೋಗಬೇಕೆಂದರೆ ಕ್ಯಾಬ್‌ಗಳನ್ನು ಬಳಸುತ್ತೇನೆ. ಅ.2ರಂದು ನನ್ನ ಮೊಬೈಲ್‌ನಲ್ಲಿ ಉಬರ್ ಆ್ಯಪ್ ಲಾಕ್ ಆಗಿತ್ತು. ಕಂಪನಿಯ ವೆಬ್‌ಸೈಟ್‌ ಪರಿಶೀಲಿಸಿದಾಗ ಸಹಾಯವಾಣಿ ಸಂಖ್ಯೆ (6206269352) ಸಿಕ್ಕಿತು. ಆ ಸಂಖ್ಯೆಗೆ ಸಂಪರ್ಕಿಸಿದಾಗ ಕರೆ ಸ್ವೀಕರಿಸಿದ ವ್ಯಕ್ತಿ ತನ್ನನ್ನು ರಾಹುಲ್ ಕುಮಾರ್ ತ್ರಿಪಾಠಿ ಎಂಬ ಹೆಸರಿನಿಂದ ಪರಿಚಯಿಸಿಕೊಂಡ’ ಎಂದು ಸಿಂಗ್ ದೂರಿನಲ್ಲಿ ವಿವರಿಸಿದ್ದಾರೆ.

‘ಸಹಾಯವಾಣಿ ಸಿಬ್ಬಂದಿಯ ಧಾಟಿಯಲ್ಲೇ ಮಾತು ಪ್ರಾರಂಭಿಸಿದ ಆತ, ‘ನಮಸ್ಕಾರ. ನಮ್ಮಿಂದ ಏನು ಸಹಾಯ ಆಗಬೇಕಿತ್ತು’ ಎಂ‌ದು ಕೇಳಿದ. ಸಮಸ್ಯೆ ಹೇಳಿದಾಗ, ‘ನಿಮ್ ಆ್ಯಪ್ ಅನ್‌ಲಾಕ್ ಮಾಡುತ್ತೇನೆ. ಅದಕ್ಕೆ ₹ 10 ದಂಡ ಕಟ್ಟಬೇಕಾಗುತ್ತದೆ. ನಾನು ಒಂದು ಲಿಂಕ್ ಕಳುಹಿಸುತ್ತೇನೆ. ಅದರಲ್ಲಿ ಕೇಳಲಾಗಿರುವ ಎಲ್ಲ ಮಾಹಿತಿಗಳನ್ನೂ ಭರ್ತಿ ಮಾಡಿ’ ಎಂದು ಹೇಳಿದ. ಕರೆ ಸ್ಥಗಿತಗೊಳಿಸುತ್ತಿದ್ದಂತೆಯೇ ಆ ಲಿಂಕ್‌ ಬಂತು.’ ‘ಹೆಸರು, ವಿಳಾಸ ಹಾಗೂ ಕ್ರೆಡಿಟ್ ಕಾರ್ಡ್‌ನ ವಿವರಗಳನ್ನು ಅದರಲ್ಲಿ ತುಂಬಿದೆ. ಮರುಕ್ಷಣವೇ ಕರೆ ಮಾಡಿದ ಆತ, ‘ನಿಮ್ಮ ಮೊಬೈಲ್‌ಗೆ ಬಂದಿರುವ ಒಟಿಪಿ ಹೇಳಿ’ ಎಂದ. ನಾನು ಆ ಸಂಖ್ಯೆಯನ್ನು ಕೊಟ್ಟೆ. ಸ್ವಲ್ಪ ಸಮಯದ ಬಳಿಕ ಪುನಃ ಕರೆ ಮಾಡಿ, ‘20 ಸೆಕೆಂಡ್‌ನೊಳಗೆ ಒಟಿಪಿ ಹಾಕಬೇಕು. ಇಲ್ಲವಾದರೆ ನೀವು ಕಟ್ಟಿರುವ ₹ 10 ದಂಡ ಪಾವತಿಯಾಗುವುದಿಲ್ಲ’ ಎಂದು ಹೇಳಿದ. ಹೀಗಾಗಿ, ಎರಡನೇ ಸಲ ಒಟಿಪಿ ಸಂದೇಶ ಬರುತ್ತಿದ್ದಂತೆಯೇ ಆತನಿಗೆ ತಿಳಿಸಿದೆ. ಮರುನಿಮಿಷವೇ, ನನ್ನ ಬ್ಯಾಂಕ್‌ ಖಾತೆಯಿಂದ ₹18 ಸಾವಿರ ಖಾಲಿಯಾಯಿತು.’

‘ಇದರಿಂದ ಗಾಬರಿಯಾಗಿ, ಪುನಃ ಸಂಖ್ಯೆಗೆ ಕರೆ ಮಾಡಿದೆ. ಆದರೆ, ‘ಸಂಖ್ಯೆ ದುರಸ್ತಿಯಲ್ಲಿದೆ’ ಎಂದು ಬರುತ್ತಿತ್ತು. ಬೆಳಿಗ್ಗೆ ಬ್ಯಾಂಕ್‌ ಅಧಿಕಾರಿಗಳನ್ನು ಸಂಪರ್ಕಿಸಿ ಖಾತೆಯನ್ನು ಬ್ಲಾಕ್ ಮಾಡಿಸಿದೆ. ನೆರವಾಗುವ ನೆಪದಲ್ಲಿ ವಂಚನೆ ಮಾಡಿರುವ ಆರೋಪಿಯನ್ನು ಪತ್ತೆಮಾಡಿ ನನ್ನ ಹಣ ವಾಪಸ್ ಕೊಡಿಸಿ’ ಎಂದು ಸಿಂಗ್ ಮನವಿ ಮಾಡಿದ್ದಾರೆ.

ಸೈಬರ್ ಪೊಲೀಸರ ನೆರವು

‘ಉಬರ್ ವೆಬ್‌ಸೈಟ್‌ನಲ್ಲಿದ್ದ ಸಂಖ್ಯೆಗೆ ಬಂದ ಕರೆಯನ್ನು ಇನ್ಯಾರೋ ಸ್ವೀಕರಿಸಿ ಮಾತನಾಡಲು ಹೇಗೆ ಸಾಧ್ಯ? ಇದೊಂದು ಹೊಸ ಶೈಲಿಯ ಸೈಬರ್ ಅಪರಾಧದಂತೆ ಕಾಣಿಸುತ್ತಿದೆ. ಆ ಸಂಖ್ಯೆ ಹಾಗೂ ಅದನ್ನು ನಿರ್ವಹಣೆ ಮಾಡುತ್ತಿರುವವರ ಬಗ್ಗೆ ವಿವರಣೆ ನೀಡುವಂತೆ ಉಬರ್‌ಗೆ ಪತ್ರ ಬರೆಯಲಾಗಿದೆ. ಜತೆಗೆ ತನಿಖೆಗೆ ಸೈಬರ್ ವಿಭಾಗದ ನೆರವು ಕೋರಿದ್ದೇವೆ’ ಎಂದು ಕಾಡುಗೋಡಿ ಪೊಲೀಸರು ಹೇಳಿದರು.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !