ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ತೆರೆಯಲಿವೆಯೇ ಡಾನ್ಸ್ ಬಾರ್‌?

Last Updated 18 ಜನವರಿ 2019, 19:23 IST
ಅಕ್ಷರ ಗಾತ್ರ

ಬೆಂಗಳೂರು: ಮಹಾರಾಷ್ಟ್ರದಲ್ಲಿ ಬಂದ್ ಮಾಡಲಾಗಿದ್ದ ಡಾನ್ಸ್ ಬಾರ್‌ಗಳ ಪುನರಾರಂಭಕ್ಕೆ ಸುಪ್ರೀಂಕೋರ್ಟ್‌ ಅನುಮತಿನೀಡಿದ ಬೆನ್ನಲ್ಲೇ, ರಾಜ್ಯದಲ್ಲೂ ಡಾನ್ಸ್ ಬಾರ್‌ಗಳು ಮತ್ತೆ ಆರಂಭವಾಗುವ ಲಕ್ಷಣಗಳು ಗೋಚರಿಸುತ್ತಿವೆ.

ಹೈಕೋರ್ಟ್‌ ತೀರ್ಪಿನಂತೆ ಪೊಲೀಸರು, ರಾಜ್ಯದಲ್ಲಿ ಡಾನ್ಸ್‌ ಬಾರ್‌ಗಳನ್ನು ಹಲವು ತಿಂಗಳ ಹಿಂದೆಯೇ ಬಂದ್‌ ಮಾಡಿಸಿದ್ದಾರೆ. ಬಾರ್‌ ಮಾಲೀಕರಿಗೆ ಎಚ್ಚರಿಕೆ ನೀಡಿ ಆದೇಶ ಹೊರಡಿಸಿದ್ದ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್‌ಕುಮಾರ್, ‘ಬಾರ್ ಬಾಗಿಲು ತೆರೆದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದ್ದರು.

ಅತ್ತ ಮಹಾರಾಷ್ಟ್ರ ಸರ್ಕಾರ, ‘ಯುವತಿಯರು ಬಾರ್‌ಗಳಲ್ಲಿ ನೃತ್ಯ ಮಾಡುವುದು ಅಶ್ಲೀಲ’ ಎಂದು ಹೇಳಿ ಡಾನ್ಸ್‌ ಬಾರ್‌ಗಳನ್ನು ನಿಷೇಧಿಸಿತ್ತು. ಅದನ್ನು ಪ್ರಶ್ನಿಸಿದ್ದ ಬಾರ್ ಮಾಲೀಕರು, ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದರು. ಈಗ ಮಾಲೀಕರ ಪರವಾಗಿ ತೀರ್ಪು ಹೊರಬಿದ್ದಿದೆ. ಅದೇ ತೀರ್ಪಿನಂತೆ ರಾಜ್ಯದಲ್ಲೂ ಬಾರ್‌ಗಳನ್ನು ತೆರೆಯಲು ಅನುಮತಿ ನೀಡುವಂತೆ ಕೋರಿ ಬಾರ್ ಮಾಲೀಕರು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸದ್ಯದಲ್ಲೇ ಮನವಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ.

‘ಸುಪ್ರೀಂಕೋರ್ಟ್ ಯಾವ ರೀತಿಯಲ್ಲಿ ತೀರ್ಪು ನೀಡಿದೆ ಎಂಬುದು ಗೊತ್ತಾಗಿಲ್ಲ. ಅದರ ಪ್ರತಿ ತರಿಸಿಕೊಂಡು ಕಾನೂನು ತಜ್ಞರ ಜೊತೆ ಚರ್ಚೆ ನಡೆಸಬೇಕಿದೆ. ಆ ನಂತರವೇ ಮನವಿ ನೀಡುವ ಬಗ್ಗೆ ಯೋಚಿಸಲಿದ್ದೇವೆ’ ಎಂದು ಕರ್ನಾಟಕ ಲೈವ್ ಬ್ಯಾಂಡ್ ಮಾಲೀಕರ ಒಕ್ಕೂಟದ ಅಧ್ಯಕ್ಷ ಸಂಜಯ್ ಹೇಳಿದರು.

ಪೊಲೀಸ್ ಕಮಿಷನರ್ ಟಿ.ಸುನೀಲ್‌ಕುಮಾರ್, ‘ಮಹಾರಾಷ್ಟ್ರ ಸರ್ಕಾರದ ಆದೇಶಕ್ಕೆ ಸಂಬಂಧಪಟ್ಟಂತೆ ಮಾತ್ರ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಅದರ ಪ್ರತಿಯಲ್ಲಿರುವ ಅಂಶಗಳನ್ನು ತಿಳಿದುಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದರು.

ಒಕ್ಕೂಟದ ಖಜಾಂಚಿ ರಮೇಶ್‌ಗೌಡ, ‘ರಾಜ್ಯದಲ್ಲಿ ಡಾನ್ಸ್‌ ಬಾರ್‌ಗಳನ್ನು ನಡೆಸಲು ಪರವಾನಗಿ ಪಡೆಯುವುದು ಕಡ್ಡಾಯವೆಂದು ಹೈಕೋರ್ಟ್‌ ಹೇಳಿದೆ. ಅದರಂತೆ ಬಹುಪಾಲು ಮಾಲೀಕರು ಪರವಾನಗಿ ಪಡೆಯುತ್ತಿದ್ದು, ಆ ಪ್ರಕ್ರಿಯೆ ಪ್ರಗತಿಯಲ್ಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT